More

    ನಿಜಶರಣೆ ಹೇಮರಡ್ಡಿ ಮಲ್ಲಮ್ಮನ ಬದುಕು ಮಾದರಿ

    ಚಿಕ್ಕಮಗಳೂರು: ಗುರುಲಿಂಗ ಜಂಗಮರಲ್ಲಿ ಅನನ್ಯ ಭಕ್ತಿ ಹೊಂದಿದ್ದ ನಿಜಶರಣೆ ಹೇಮರಡ್ಡಿ ಮಲ್ಲಮ್ಮ ಮಾನವೀಯ ಮೌಲ್ಯಗಳನ್ನು ಬೆಳಗಿಸಿದ ಮಾತೆ ಎಂದು ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
    ಬಡಗನಾಡು ಶ್ರೀ ಹೇಮರಡ್ಡಿ ವೀರಶೈವ ಸಂಘವು ಗಿರಿಯಾಪುರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ದೇವಾಲಯದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಲ್ಲಿಕಾಂಬ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
    12ನೇ ಶತಮಾನದ ನಿಜಶರಣೆ ಹೇಮರಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನನ್ನು ಸಾಕ್ಷಾತ್ಕರಿಸಿಕೊಂಡ ಧೀಮಂತೆ. ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಬಲವಾಗಿ ನಂಬಿ ನಂಬಿದಂತೆ ನಡೆದವರು. ದುಶ್ಚಟಗಳ ದಾಸನಾಗಿದ್ದ ಮೈದುನ ವೇಮನನನ್ನು ಪರಿವರ್ತಿಸಿದ ಸಾಧ್ವಿಮಣಿ. ಮನುಕುಲದ ಆದರ್ಶವನ್ನು ಬದುಕಿನಲ್ಲಿ ಸಾರಿದಾಕೆ ಎಂದು ಬಣ್ಣಿಸಿದರು.
    ಮಲ್ಲಮ್ಮನ ಮಾನವೀಯ ಮೌಲ್ಯಗಳ ಪ್ರತಿಪಾದನೆ ಆದರ್ಶ ಸಮಾಜಕ್ಕೆ ದಾರಿದೀಪ. ಶ್ರೇಷ್ಠ ವಚನಗಾರ್ತಿಯಾಗಿ ಅಕ್ಕಮಹಾದೇವಿ ಕಾಲಘಟ್ಟದಲ್ಲಿ ಸಮಾಜ ಪರಿವರ್ತನೆಗೆ ಶ್ರಮಿಸಿದಾಕೆ. ಮಲ್ಲಮ್ಮನ ಹಾದಿಯಲ್ಲಿ ಮುನ್ನಡೆಯುವುದು ರಡ್ಡಿ ಜನಾಂಗದ ಆಶಯ. ಬರೀ ಜಾತ್ರೆ-ಜಯಂತಿ ಮಾಡಿದರಷ್ಟೇ ಸಾಲದು, ಆಕೆಯ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಗೋಣಿಬೀಡು ಶೀಲಸಂಪಾದನಾ ಮಠದ ಡಾ. ಶ್ರೀ ಸಿದ್ದಲಿಂಗ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯರ ಸಮ್ಮುಖದಲ್ಲಿ ನೂತನ ವಿಗ್ರಹದ ಪ್ರತಿಷ್ಠಾಪನೆ ನೆರವೇರಿತು. ಗಿರಿಯಾಪುರ ಶ್ರೀ ವೃಷಭೇಂದ್ರ ಗ್ರಾಮ ಸಮಿತಿ ಅಧ್ಯಕ್ಷ ಪ್ರಭುಕುಮಾರ, ಪುರೋಹಿತರಾದ ಲಿಂಗಮೂರ್ತಿ, ಜಯಮೂರ್ತಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts