More

    ಪ್ರಯಾಣದ ವೇಳೆ ವಾಂತಿಯಾಗುತ್ತೆ ಎಂದು ಹೆದರಬೇಕಿಲ್ಲ; ಇಲ್ಲಿವೆ ಸರಳ ಮನೆಮದ್ದು

    ಸಾಮಾನ್ಯವಾಗಿ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಹೆಚ್ಚಿನ ಜನರಿಗೆ ವಾಂತಿ ಬರುವುದು ಸಹಜ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ವಾಂತಿಯಾಗುವ ಕಾರಣದಿಂದ ಬಸ್ಸು, ಕಾರಿನ ಪ್ರಯಾಣವನ್ನು ಹೆಚ್ಚಾಗಿ ಇಷ್ಟ ಪಡುವುದಿಲ್ಲ. ಕೆಲವರಿಗೆ ವಿಮಾನದಲ್ಲೂ ಇದೇ ಅನುಭವವಾಗುತ್ತದೆ. ಈ ಕಾರಣದಿಂದ ಎಷ್ಟೋ ಜನರು ಪ್ರಯಾಣ ಮಾಡುವ ಆಸೆಯಿದ್ದರೂ ವಾಕರಿಕೆ, ವಾಂತಿಯಾಗುವಿಕೆ, ಆಯಾಸದ ಕಾರಣ ಎಲ್ಲಿಯೂ ಹೋಗಲು ಬಯಸುವುದಿಲ್ಲ. ಇನ್ನೂ ಕೆಲವರು ವಾಂತಿಯಾಗದಿರಲು ಮಾತ್ರೆ ತೆಗೆದುಕೊಳ್ಳದೆ ಪ್ರಯಾಣ ಬೆಳೆಸುವುದೇ ಇಲ್ಲ. ಅಂತಹವರಿಗೆ ವಾಂತಿ ತಡೆಗಟ್ಟುವ ಸುಲಭ ಮನೆ ಮದ್ದುಗಳು ಇಲ್ಲಿವೆ.

    ವಾಂತಿಯಾಗುವುದನ್ನು ತಡೆಗಟ್ಟುವ ಮನೆಮದ್ದು:

    ತಾಜಾ ಗಾಳಿ
    ವಾಂತಿ ಆಗುವ ಭೀತಿವುಳ್ಳವರು ಯಾವಾಗಲೂ ತಮ್ಮ ಪ್ರಯಾಣದ ವೇಳೆ ಕಿಟಕಿ ಬದಿಯ ಸೀಟಿನಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ತಾಜಾ ಗಾಳಿಯನ್ನು ಪಡೆಯುವುದರಿಂದ ವಾಂತಿಯಾಗುವಿಕೆಯನ್ನು ಹಿಡಿತಕ್ಕೆ ತರಬಹುದು.

    ನಿಂಬೆಯ ವಾಸನೆ
    ಪ್ರಯಾಣದ ವೇಳೆ ಕಿತ್ತಳೆ ಹಣ್ಣು ಅಥವಾ ನಿಂಬೆಹಣ್ಣನ್ನು ಜತೆಗೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಆಗಾಗ ನಿಂಬೆ ಹಣ್ಣನ್ನು ಆಘ್ರಾಣಿಸುವುದರಿಂದ ವಾಂತಿಯಾಗುವ ಪ್ರಮಾಣ ಕಡಿಮೆಯಾಗುತ್ತದೆ.

    ರುಚಿ ಲಿಂಬೆ
    ರುಚಿ ಲಿಂಬೆಯಂತಹ ಪದಾರ್ಥಗಳನ್ನು ಪ್ರಯಾಣದ ವೇಳೆ ತೆಗೆದುಕೊಂಡು ಹೋಗುವುದು ಉತ್ತಮ. ರುಚಿಲಿಂಬೆ ಎಂದರೆ ಉಪ್ಪು ಹಾಕಿ ಒಣಗಿಸಿದ ಲಿಂಬೆಯ ತುಂಡು. ಇದನ್ನು ಬಹಳ ದಿನಗಳ ಕಾಲ ಶೇಖರಿಸಿ ಇಟ್ಟುಕೊಳ್ಳಬಹುದು. ಪ್ರಯಾಣದ ವೇಳೆ ಒಂದು ತುಂಡನ್ನು ಬಾಯಿಗೆ ಹಾಕಿಕೊಂಡು ಜಗಿದರೆ ವಾಂತಿ ನಿಲ್ಲುತ್ತದೆ. ಅಷ್ಟೆ ಅಲ್ಲ ಇದರಿಂದ ಜೀರ್ಣ ಕ್ರಿಯೆಯೂ ಹೆಚ್ಚಾಗುತ್ತದೆ.

    ನಿಂಬೆ ಪುಡಿ
    ನಿಂಬೆ ಪುಡಿಯ ರಸ ಕುಡಿಯುವದರಿಂದ ವಾಂತಿಯನ್ನು ತಡೆಗಟ್ಟಬಹುದು. ಇದಕ್ಕೆ ಮೊದಲಿಗೆ ನಿಂಬೆ ಹಣ್ಣಿನ ತುಂಡೊಂದನ್ನು ಕಡಿಮೆ ಉರಿಯಲ್ಲಿ ಒಲೆಯಲ್ಲಿ ಸುಟ್ಟು ನಂತರ ಬಿಸಿಲಿನಲ್ಲಿ ಒಣಗಿಸಿಡಬೇಕು. ನಂತರ ಒಣಗಿದ ಲಿಂಬೆ ತುಂಡುಗಳನ್ನು ಪುಡಿಮಾಡಿಟ್ಟುಕೊಳ್ಳಬೇಕು. ವಾಂತಿ ಬರುವಂತೆ ಭಾಸವಾದ ಕೂಡಲೇ ಈ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿಯುವುದರಿಂದ ವಾಂತಿಯನ್ನು ತಡೆಗಟ್ಟಬಹುದು.

    ಒಣ ಶುಂಠಿ
    ಚಿಕ್ಕ ತುಂಡು ಶುಂಠಿಯನ್ನು ವಾಂತಿ ಬರುವ ಮುನ್ನ ಬಾಯಿಗೆ ಹಾಕಿಕೊಂಡರೆ ವಾಂತಿಯಾಗುವ ಪ್ರಮಾಣ ಕಡಿಮೆ. ಜತೆಗೆ ಉಪ್ಪು ಹಾಕಿ ಒಣಗಿಸಿದ ಶುಂಠಿಯ ತುಂಡುಗಳನ್ನು ತಿನ್ನುವುದೂ ಉತ್ತಮ.

    ಏಲಕ್ಕಿ
    ಪ್ರಯಾಣದ ವೇಳೆ ಬಾಯಿಯಲ್ಲಿ ಏಲಕ್ಕಿ ಚೂರನ್ನು ಹಾಕಿಕೊಂಡು ಬಹುಕಾಲ ಬಾಯಿಯಲ್ಲೇ ಇಟ್ಟುಕೊಂಡರೂ ವಾಂತಿಯಾಗುವುದನ್ನು ತಡೆಯಬಹುದಾಗಿದೆ.

    ಬಹುತೇಕರಿಗೆ ಪ್ರಯಾಣದ ವೇಳೆ ವಾಂತಿಯಾಗುವ ಅನುಭವವಾಗುತ್ತದೆ. ಆದರೆ ವಾಂತಿಯಾಗುವುದಿಲ್ಲ. ಅಂತಹವರು ತಮ್ಮ ಗಮನವನ್ನು ಬೇರೆಡೆ ಸೆಳೆಯಲು ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು ಅಥವಾ ಸಹ ಪ್ರಯಾಣಿಕರ ಜತೆ ಮಾತನಾಡುವುದನ್ನು ಮಾಡಿದರೆ ವಾಂತಿಯಾಗುವ ಅನುಭವದಿಂದ ಹೊರಬರಬಹುದು. ಇನ್ನೂ ಬಸ್ಸು, ಕಾರು, ವಿಮಾನದಲ್ಲಿ ಹೋಗುವಾಗ ವಾಂತಿ ಮಾಡುವವರು ಪ್ರಯಾಣಕ್ಕೂ ಮುನ್ನ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು. ಆಲ್ಕೋಹಾಲ್​ ಸೇವೆನೆ ಮಾಡಬಾರದು.

    ಇದನ್ನೂ ಓದಿ: ದಿನಕ್ಕೆ 11 ನಿಮಿಷ ವಾಕ್​ ಮಾಡಿ… ಆರೋಗ್ಯವಾಗಿ ಬಾಳಿ!

    ಕೂದಲು ಉದುರುವಿಕೆ, ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿವೆ 5 ಆಯುರ್ವೇದ ಪರಿಹಾರಗಳು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts