More

    ಬ್ಯಾಂಕ್​ನಿಂದ 12 ಕೋಟಿ ರೂ. ಸಾಲ ಪಡೆದರು, ಬ್ಯಾಂಕ್​ ಖಾತೆಯಲ್ಲಿ 69 ರೂ. ಬಿಟ್ಟು ಕೈಎತ್ತಿದರು!

    ನವದೆಹಲಿ: ಖಾಸಗಿ ಕಂಪನಿಗಳ ಹೆಸರಿನಲ್ಲಿ ಇಬ್ಬರು ವ್ಯಕ್ತಿಗಳು ಆಂಧ್ರ ಬ್ಯಾಂಕ್​ನಿಂದ 12.92 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಇದಕ್ಕಾಗಿ ಅವರು 11.83 ಕೋಟಿ ರೂ. ಸ್ಥಿರಾಸ್ತಿಯನ್ನು ಅಡಮಾನ ಮಾಡಿದ್ದರು. ಆದರೆ, ಖಾತೆಯಲ್ಲಿ ಕೇವಲ 69 ರೂ. ಬಿಟ್ಟು ಅಷ್ಟೂ ಹಣವನ್ನು ತಮ್ಮ ಹಾಗೂ ತಮ್ಮ ಬಂಧುಬಾಂಧವರ ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸಿಕೊಂಡರು. ಸಾಲವನ್ನು ತೀರುವಳಿ ಮಾಡದೆ ಕೈ ಎತ್ತಿದ್ದಾರೆ. ಇದೀಗ ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲದ ಕಾರಣ ಸಾಲ ವಸೂಲಿ ಮಾಡಲಾಗದೆ ಬ್ಯಾಂಕ್​ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.

    ಇದು ಸರ್ವಪ್ರೀತ್​ ಚಾವ್ಲಾ ಮತ್ತು ಅಮನ್​ದೀಪ್​ ಸಿಂಗ್​ ಗೋದಾನ್​ ಎಂಬುವರ ಕರಾಮತ್ತು. ಇವರಿಬ್ಬರೂ ಒಟ್ಟಾಗಿ ಇದೇ ಬ್ಯಾಂಕ್​ನಿಂದ ಸಾಲ ಪಡೆದು ವಂಚಿಸುತ್ತಿರುವುದು ಇದೇ ಮೊದಲನೇಲ್ಲ. ಕೆಲವೇ ವರ್ಷಗಳ ಹಿಂದೆ 15.45 ಕೋಟಿ ರೂ. ಸಾಲ ಎತ್ತುವಳಿ ಮಾಡಿ ಬ್ಯಾಂಕ್​ ಖಾತೆಯಲ್ಲಿ 1,785 ರೂ. ಬಿಟ್ಟು ಉಳಿದ ಮೊತ್ತವನ್ನೆಲ್ಲಾ ಲಪಟಾಯಿಸಿದ್ದರು ಎಂದು ಹೇಳಲಾಗಿದೆ.

    ಅಮನ್​ದೀಪ್​ ಮತ್ತು ಸರ್ವಪ್ರೀತ್​ ಅವರು ಬ್ರಿಲಿಯಂಟ್​ ಎಲೆಕ್ಟ್ರೋ-ಏರ್​ ಸಂಸ್ಥೆಯನ್ನು ಆರಂಭಿಸಲು ಆಂಧ್ರ ಬ್ಯಾಂಕ್​ನಿಂದ ಮೊದಲು 15.45 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಆ ಖಾತೆಯಲ್ಲಿ 1,785 ರೂ. ಬಿಟ್ಟು ಉಳಿದೆಲ್ಲ ಮೊತ್ತವನ್ನು ತಮ್ಮ ಹಾಗೂ ತಮ್ಮ ಬಂಧುಬಾಂಧವರ ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ನಂತರದಲ್ಲಿ ಸಮಾನ ಮಾಸಿಕ ಕಂತನ್ನೂ ಪಾವತಿಸಿರಲಿಲ್ಲ. ಇತ್ತ ಸಾಲ ತೀರುವಳಿ ಮಾಡುವ ಪ್ರಯತ್ನವನ್ನೂ ಮಾಡಿರಲಿಲ್ಲ.
    2018ರ ಏಪ್ರಿಲ್​ನಲ್ಲಿ ಅವರ ಸಾಲದ ಖಾತೆಯನ್ನು ಅನುತ್ಪಾದಕ ಸಾಲದ ಖಾತೆಗಳ ಬಾಬ್ತಿಗೆ ಸೇರಿಸಲಾಗಿತ್ತು. ಸಾಲ ಎತ್ತುವಳಿ ಮಾಡಲು ಸ್ಥಿರಾಸ್ತಿಯನ್ನು ವಶಪಡಿಸಿಕೊಳ್ಳಲು ಬ್ರಿಲಿಯಂಟ್​ ಎಲೆಕ್ಟ್ರೋ-ಏರ್​ ಸಂಸ್ಥೆಗೆ ಹೋದಾಗ ಅದಕ್ಕೆ ಬೀಗ ಜಡಿಯಲಾಗಿತ್ತು.

    ಇದನ್ನೂ ಓದಿ: ಪಾಂಪಿಯೋ ಇರುವೆ ಇದ್ದಂತೆ… ಆಳವಾಗಿ ಬೇರೂರಿರುವ ಮರವನ್ನು ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ…

    ಅಲ್ಲದೆ ಈ ಸಾಲವನ್ನು ಎತ್ತುವಾಗ ಅವರು ಅಡಮಾನ ಮಾಡಿದ್ದ 13.17 ಕೋಟಿ ರೂ. ಮೌಲ್ಯದ ಈ ಸ್ಥಿರಾಸ್ತಿ ಮೌಲ್ಯ ಸವಕಳಿಯಾಗಿ ಕೇವಲ 3.10 ಕೋಟಿ ರೂ.ಗೆ ಇಳಿಕೆಯಾಗಿತ್ತು. ಅಂದರೆ, ಸಾಲ ಪಡೆಯುವಾಗ ಅಡಮಾನ ಮಾಡಿದ್ದ ಸ್ಥಿರಾಸ್ತಿ ಮೌಲ್ಯವನ್ನು 10 ಪಟ್ಟು ಹೆಚ್ಚಳ ಮಾಡಿದ್ದರು ಎನ್ನಲಾಗಿದೆ.
    ತಮ್ಮ ಈ ವಂಚನೆಯ ವಿರುದ್ಧ ಬ್ಯಾಂಕ್​ ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದರಿಂದ ಹಾಗೂ ಬ್ಯಾಂಕ್​ನ ಅಧಿಕಾರಿಗಳು ಬದಲಾಗಿದ್ದರಿಂದ ಉತ್ತೇಜಿತರಾದ ಅಮನ್​ದೀಪ್​ ಮತ್ತು ಸರ್ವಪ್ರೀತ್​ ಮತ್ತೊಮ್ಮೆ ಅದೇ ಬ್ಯಾಂಕ್​ ಅನ್ನು ಸಂಪರ್ಕಿಸಿ ಈ ಬಾರಿ 12.92 ಕೋಟಿ ರೂ. ಸಾಲವನ್ನು ಸೊಲಾನ್​ ಬಯೀದ್​ ಬ್ರೈಟ್​ ಪ್ಲಾಸ್ಟಿಕ್​ ಹೆಸರಿನಲ್ಲಿ ಪಡೆದುಕೊಂಡಿದ್ದರು. ಇದಕ್ಕಾಗಿ ಕಂಪನಿಯು ಸೇರಿ ಒಟ್ಟ 11.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಅಡಮಾನ ಮಾಡಿದ್ದರು.

    ಹಿಂದಿನಂತೆ ಈ ಬಾರಿ ಕೂಡ ಸಾಲದ ಮೊತ್ತವನ್ನು ತಮ್ಮ ಹಾಗೂ ತಮ್ಮ ಬಂಧುಬಾಂಧವರ ಖಾತೆಗಳಿಗೆ ವರ್ಗಾಯಿಸಿಕೊಂಡು ಸಾಲದ ಖಾತೆಯಲ್ಲಿ ಕೇವಲ 69 ರೂ. ಬಿಟ್ಟಿದ್ದರು. ಸಾಲದ್ದಕ್ಕೆ, ಸಾಲವನ್ನೂ ತೀರುವಳಿ ಮಾಡಿರಲಿಲ್ಲ.

    ಇದನ್ನೂ ಓದಿ: 9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!

    ಸಾಲ ವಸೂಲಿ ಮಾಡಲೆಂದು ಬ್ಯಾಂಕ್​ ಅಧಿಕಾರಿಗಳು ಇವರಿಬ್ಬರೂ ಅಡಮಾನ ಮಾಡಿದ್ದ ಸ್ಥಿರಾಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲು ಹೋದಾಗ ಅದರ ಮೌಲ್ಯ ಕೇವಲ 2.23 ಕೋಟಿ ರೂ. ಎಂಬುದು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಬ್ಯಾಂಕ್​ ಅಧಿಕಾರಿಗಳು ಅಮನದೀಪ್​ ಸಿಂಗ್​ ಗೋದಾನ್​ ಮತ್ತು ಸರ್ವಪ್ರೀತ್​ ಚಾವ್ಲಾ ವಿರುದ್ಧ ಭಾರತೀಯ ರಿಸರ್ವ್​ ಬ್ಯಾಂಕ್​ಗೆ (ಆರ್​ಬಿಐ) ಮಾಹಿತಿ ನೀಡಲಾಯಿತು. ಆರ್​ಬಿಐ ಎಸ್​ಎಆರ್​ಎಫ್​ಎಇಎಸ್​ಐ ಕಾಯ್ದೆಯನ್ವಯ ಸಾಲ ವಸೂಲಾತಿ ಮಾಡುವಂತೆ ಸೂಚಿಸಿತು. ಮೌಲ್ಯ ಕಡಿತಗೊಂಡಿದ್ದರೂ ಅಡಮಾನ ಮಾಡಿರುವ ಎಲ್ಲ ಸ್ಥಿರಾಸ್ತಿಗಳನ್ನು ಬ್ಯಾಂಕ್​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಇದೀಗ ಈ ಬಗ್ಗೆ ಬ್ಯಾಂಕ್​ ಅಧಿಕಾರಿಗಳು ಸಿಬಿಐಗೆ ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದು, ಸಿಬಿಐ ಅಧಿಕಾರಿಗಳು ಕೂಡ ಆ ಎರಡು ವಂಚಕ ಸಂಸ್ಥೆಗಳ ಪ್ರಮೋಟರ್​ಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಈ ವಂಚನೆಯಲ್ಲಿ ಬ್ಯಾಂಕ್​ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಕೂಡ ತನಿಖೆಗೆ ಒಳಪಡಿಸಲು ಸಿಬಿಐ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ರಾತ್ರೋರಾತ್ರಿ ದೇವರನ್ನೇ ಕದ್ದ ಖದೀಮರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts