More

    ಕ್ರಿಸ್​ಮಸ್​-ಹೊಸವರ್ಷ ಸಮೀಪಿಸುತ್ತಿದ್ದಂತೆ ಹೆಚ್ಚಾದ ಡ್ರಗ್ಸ್​ ದಂಧೆ; ಪೆಡ್ಲರ್​ಗಳನ್ನು ಸೆರೆ ಹಿಡಿದ ಪೊಲೀಸರು…

    ಬೆಂಗಳೂರು: ಹೊಸವರ್ಷ ಹಾಗೂ ಕ್ರಿಸ್‌ಮಸ್ ಸಂದರ್ಭದಲ್ಲಿ ನಡೆಯಲಿರುವ ಪಾರ್ಟಿಗಳಿಗೆ ಪೂರೈಸಲು ಭಾರೀ ಪ್ರಮಾಣದ ಮಾದಕವಸ್ತು ಸಂಗ್ರಹಿಸಿದ್ದ ಹೊರರಾಜ್ಯದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಒಡಿಶಾದ ಬಿಜಯನಗರಗಡ ನಿವಾಸಿಗಳಾದ ಜಾಗಿಲ್ ಸೇಥಿ (೪೪) ಮತ್ತು ಮರುಳಿ ಬೆಹ್ರ (೨೬) ಬಂಧಿತರು. ಆರೋಪಿಗಳಿಂದ ೩೫ ಲಕ್ಷ ರೂ. ಮೌಲ್ಯದ ೨೬೩ ಕೆ.ಜಿ.೭೦೦ ಗ್ರಾಂ ತೂಕದ ಗಾಂಜಾ ಜಪ್ತಿ ಮಾಡಲಾಗಿದೆ. ಕೋಣನಕುಂಟೆ ಠಾಣಾ ವ್ಯಾಪ್ತಿಯ ಪಾಳು ಮನೆಯೊಂದರಲ್ಲಿ ಇಬ್ಬರು ಅಪರಿಚಿತರು ಭಾರೀ ಪ್ರಮಾಣದ ಮಾದಕವಸ್ತು ಸಂಗ್ರಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಇಬರನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಒಡಿಶಾದಿಂದ ಕಡಿಮೆ ಬೆಲೆಗೆ ಖರೀದಿ:
    ಆರೋಪಿಗಳು ಹೊಸವರ್ಷ ಹಾಗೂ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾದಕವಸ್ತು ಮಾರಾಟ ಅಕ್ರಮ ಹಣ ಗಳಿಸುವ ಉದ್ದೇಶ ಹೊಂದಿದ್ದರು. ಈ ನಿಟ್ಟಿನಲ್ಲಿ ಒಡಿಶಾದ ಆದಿವಾಸಿಗಳು ಹಾಗೂ ಆಂಧ್ರಪ್ರದೇಶದ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿದ್ದರು. ಬಳಿಕ ಖಾಸಗಿ ಬಸ್ ಹಾಗೂ ರೈಲುಗಳ ಮುಖಾಂತರ ಲಗೇಜ್ ಸೋಗಿನಲ್ಲಿ ಅಕ್ರಮವಾಗಿ ಗಾಂಜಾವನ್ನು ನಗರಕ್ಕೆ ಸಾಗಿಸಿ ಪಿಳ್ಳಗಾನಹಳ್ಳಿಯ ಬಯಲು ಪ್ರದೇಶದ ಪಾಳು ಮನೆಯಲ್ಲಿ ಸಂಗ್ರಹಿಸಿದ್ದರು. ಈ ಬಗ್ಗೆ ಬಾತ್ಮೀದಾರರಿಂದ ಸಿಕ್ಕ ಮಾಹಿತಿ ಮೇರೆಗೆ ಪಾಳು ಮನೆಯ ಮೇಲೆ ದಾಳಿ ಮಾಡಿದಾಗ ಇಬ್ಬರು ಆರೋಪಿಗಳು ಮಾಲು ಸಹಿತ ಸಿಕ್ಕಿಬಿದ್ದಿದ್ದಾರೆ.

    ಪಾರ್ಟಿಗಳಿಗೆ ಪೂರೈಕೆ ಮಾಡಲು ಸಂಗ್ರಹ:
    ಬಂಧಿತ ಆರೋಪಿಗಳಿಂದ ನಗರದಲ್ಲಿರುವ ಡ್ರಗ್ಸ್ ಪೆಡ್ಲರ್‌ಗಳು ಮಾದಕವಸ್ತು ಖರೀದಿಸಿ, ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪಾರ್ಟಿಗಳಿಗೆ ಪೂರೈಕೆ ಮಾಡುವ ಸಾಧ್ಯತೆಯಿತ್ತು. ಈ ನಿಟ್ಟಿನಲ್ಲಿ ಆರೋಪಿಗಳು ನಗರದಲ್ಲಿ ಯಾವ ವ್ಯಕ್ತಿಗಳ ಜತೆ ಸಂಪರ್ಕ ಸಾಧಿಸಿದ್ದರು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ‘ಮಾದಕವಸ್ತು ಮಾರಾಟಕ್ಕೆ ಮಟ್ಟ ಹಾಕುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಹೊರರಾಜ್ಯದ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ, ಭಾರೀ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತನಿಖೆ ಮುಂದುವರೆದಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ, ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts