More

    ಚೀನಾದಲ್ಲಿ ಒಂದೇ ದಿನಕ್ಕೆ ದಾಖಲಾಯ್ತು 3.7 ಕೋಟಿ ಕರೋನಾ ಕೇಸ್..!

    ಚೀನಾ: ಕಳೆದ ಒಂದು ವಾರದಲ್ಲಿ ಚೀನಾದಲ್ಲಿ ಸೋಂಕು ಹಠಾತ್ ಆಗಿ ಹರಡಿದ್ದು, ಈ ವಾರ ಒಂದೇ ದಿನದಲ್ಲಿ ಸುಮಾರು 3.7 ಕೋಟಿ ಜನ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸರ್ಕಾರದ ವರದಿ ತಿಳಿಸಿದೆ. ಈ ಮೂಲಕ ಚೀನಾ ಜಾಗತಿಕ ರೆಕಾರ್ಡ್​ ಕೂಡ ಮಾಡಿದೆ. ದಿನಕ್ಕೆ 3.7 ಕೋಟಿ ಪ್ರಕರಣಗಳು ಎಂದರೆ ಇದು ವಿಶ್ವದಲ್ಲೇ ಪ್ರಥಮ ಬಾರಿಗೆ ಆಗಿದ್ದು ಈ ಹಿಂದೆ ಇಷ್ಟು ಪ್ರಮಾಣದಲ್ಲಿ ಜನರು ಸೋಂಕಿಗೆ ಒಳಗಾಗಿಲ್ಲ.

    ಪ್ರಸ್ತುತ ಅಂದಾಜಿನ ಪ್ರಕಾರ, ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ 2.5 ಕೋಟಿ ಜನರು ಅಥವಾ ಚೀನಾದ ಜನಸಂಖ್ಯೆಯ ಶೇಕಡ 18ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ. ಬುಧವಾರ ನಡೆದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.

    ಜೀರೋ ಕೋವಿಡ್ ನೀತಿಯನ್ನು ಅಳವಡಿಸಿಕೊಂಡ ನಂತರ ಈ ತಿಂಗಳ ಆರಂಭದಲ್ಲಿ ಚೀನಾ ತನ್ನ ಪಿಸಿಆರ್ ಪರೀಕ್ಷಾ ಕೇಂದ್ರಗಳನ್ನು ಮುಚ್ಚಿತ್ತು. ಹೀಗಾಗಿ ಈ ಲೆಕ್ಕ ಚೀನಾ ಸರ್ಕಾರಕ್ಕೆ ಹೇಗೆ ಸಿಕ್ಕಿದೆ ಎನ್ನುವ ಅನುಮಾನ ಕೂಡ ಎದ್ದಿದೆ.

    ಒಂದು ವಾರದಲ್ಲಿ ಗರಿಷ್ಠ ಸೋಂಕು:
    ಚೀನಾದ ಆರೋಗ್ಯ ಅಧಿಕಾರಿಗಳು ಒಂದು ವಾರದೊಳಗೆ ಗರಿಷ್ಠ ತಲುಪುವ ನಿರೀಕ್ಷೆಯಿದೆ ಎಂದು ಗುರುವಾರ ಹೇಳಿದರು. ಒಂದು ಅಥವಾ ಎರಡು ತಿಂಗಳ ಕಾಲ ಸೋಂಕಿನ ಪ್ರಮಾಣ ಗರಿಷ್ಠವಾಗಿ ಹೆಚ್ಚಲಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಡಿಸೆಂಬರ್ 19 ರಂದು, ಸರ್ಕಾರವು ತನ್ನ ಶೂನ್ಯ-ಕೋವಿಡ್ ನೀತಿ ನಿಲ್ಲಿಸಿದ ನಂತರ ಚೀನಾ ಮೊದಲ ಬಾರಿಗೆ ಅಧಿಕೃತವಾಗಿ ಸಾವುನೋವುಗಳನ್ನು ವರದಿ ಮಾಡಿದೆ. ಈ ಸಂದರ್ಭದಲ್ಲೇ ಜನರನ್ನು ಅವರ ಅಪಾರ್ಟ್​ಮೆಂಟ್​ನಲ್ಲಿ ಕೂಡಿ ಹಾಕಿದ್ದ ಪ್ರಕರಣ ನಡೆದಿತ್ತು. ಈ ಸಂದರ್ಭದಲ್ಲೇ ಚೀನಾದ ಟಿಕ್​ಟಾಕ್​ನಲ್ಲಿ ಭಾರತದ ಜಿಮ್ಮಿ ಜಿಮ್ಮಿ ಹಾಡು ಫುಲ್​ ವೈರಲ್​ ಆಗಿದ್ದು.

    ಇದನ್ನೂ ಓದಿ: ಚೀನಾದಲ್ಲಿ ಬಪ್ಪಿ ಲಾಹಿರಿಯ ಜಿಮ್ಮಿ ಜಿಮ್ಮಿ ಹಾಡು ಫುಲ್​ ವೈರಲ್​; ಇದರ ಹಿಂದಿದೆ ಕರಾಳ ಸತ್ಯ!

    ಚೀನಾ ಸರ್ಕಾರದ ಹೊಸ ನಿಯಮದ ಪ್ರಕಾರ, ನಡೆಯುತ್ತಿರುವ ಕರೋನಾ ಪ್ರಕರಣಗಳ ಎಣಿಕೆ ವಿಧಾನ ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗದರ್ಶನಕ್ಕೆ ವಿರುದ್ಧವಾಗಿದೆ. ಈ ನಿಯಮದಿಂದಾಗಿ ವರದಿಯಾಗಿರುವ ಸಾವಿನ ಸಂಖ್ಯೆ ನಿಜವಾದ ಸಾವಿನ ಸಂಖ್ಯೆಗಿಂತ ಕಡಿಮೆಯಾಗಿದೆ. ಅಂದರೆ ಸರಳ ಭಾಷೆಯಲ್ಲಿ ನಿಜ ಅಂಕಿ ಅಂಶಗಳನ್ನು ಮುಚ್ಚಿಡುತ್ತಿದೆ.

    ಬೀಜಿಂಗ್, ಚಾಂಗ್‌ಕಿಂಗ್ ಮತ್ತು ಗುವಾಂಗ್‌ಝೌ ನಗರಗಳಲ್ಲಿನ ಆಸ್ಪತ್ರೆಗಳು ಮತ್ತು ಸ್ಮಶಾನಗಳು ವಾಸ್ತವತೆಯನ್ನು ವರದಿ ಮಾಡುತ್ತಿದ್ದು ಸರ್ಕಾರ ಹೇಳಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಯುತ್ತಿರುವುದನ್ನು ಖಚಿತಪಡಿಸಿವೆ.

    ಬೀಜಿಂಗ್‌ನ ಶವಸಂಸ್ಕಾರದ ಘಟಕಗಳ ಕಾರ್ಮಿಕರು ಸತ್ತ ಸಂಬಂಧಿಕರನ್ನು ಶವಸಂಸ್ಕಾರ ಮಾಡಲು ಬರುವವರು ಸರತಿ ಸಾಲಿನಲ್ಲಿ ನಿಂತು ಬರುತ್ತಿದ್ದಾರೆ ಎಂದು ಹೇಳಿದರು. ಬೀಜಿಂಗ್‌ನ ಸ್ಮಶಾನದ ಹೊರಗೆ ಭದ್ರತಾ ಸಿಬ್ಬಂದಿ ನಿಂತಿದ್ದು, ಅಲ್ಲಿ ಹಾಜ್ಮಾತ್​ ಸೂಟ್​ಗಳಲ್ಲಿ ಕಾರ್ಮಿಕರು ಸತ್ತವರನ್ನು ಒಳಗೆ ಒಯ್ಯುವುದನ್ನು ಕಾಣಬಹುದು. ಸ್ಮಶಾನಗಳು ಈಗ ದಿನಕ್ಕೆ 22-30 ಶವಸಂಸ್ಕಾರಗಳನ್ನು ನಿರ್ವಹಿಸುತ್ತಿವೆ ಎಂದು ಅನೇಕ ವರದಿಗಳು ಹೇಳಿವೆ. ಡಿಸೆಂಬರ್ ಮೊದಲು, ಈ ಸಂಖ್ಯೆ ಕೇವಲ 5 ಅಥವಾ 6 ಆಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts