More

    ಚೀನಾದಲ್ಲಿ ಬಪ್ಪಿ ಲಾಹಿರಿಯ ಜಿಮ್ಮಿ ಜಿಮ್ಮಿ ಹಾಡು ಫುಲ್​ ವೈರಲ್​; ಇದರ ಹಿಂದಿದೆ ಕರಾಳ ಸತ್ಯ!

    ನವದೆಹಲಿ: ಭಾರತ ಮತ್ತು ಚೀನಾ ನಡುವೆ ತಣ್ಣಗೆ ನಡೆಯುತ್ತಿರುವ ಜಟಾಪಟಿ ಎಲ್ಲರಿಗೂ ಗೊತ್ತೇ ಇದೆ. ಆದರೂ ಭಾರತೀಯ ಸಂಗೀತಕ್ಕೆ ಫಿದಾ ಆಗಿ ಚೀನಿ ಜನರು ಬಪ್ಪಿ ಲಾಹಿರಿಯ ‘ಜಿಮ್ಮಿ ಜಿಮ್ಮಿ’ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಖಾಲಿ ಪಾತ್ರೆ ಹಿಡಿದು ಸಕತ್​ ಸ್ಟೆಪ್​ ಹಾಕುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಕಾಣುವ ಸಂಗತಿ. ಇದರ ಅಸಲಿಯತ್ತು ಬೇರೆಯೇ ಇದೆ!

    ಭಾರತದಲ್ಲಿ ಇಂದು ಜನರು ಕರೊನಾಗೆ ಕ್ಯಾರೇ ಅನ್ನದೇ ಓಡಾಡುತ್ತಿರುವುದು ಎಷ್ಟು ಸತ್ಯವೋ, ಚೀನಾದಲ್ಲಿ ಜನರು ಇನ್ನೂ ಸಂಪೂರ್ಣವಾಗಿ ಲಾಕ್​ಡೌನ್​ನಿಂದ ಹೊರಗೆ ಬಂದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಹೌದು, ಚೀನಾದಲ್ಲಿ ಕರೊನಾ ಇನ್ನೂ ತಾಂಡವ ಆಡುತ್ತಿದೆ. ಅಲ್ಲಿ ಕರೊನಾ ಪೀಡಿತ ಪ್ರದೇಶಗಳಲ್ಲಿ ನಿರ್ದಾಕ್ಷಿಣ್ಯವಾಗಿ ಲಾಕ್​ಡೌನ್​ ಹೇರಲಾಗುತ್ತಿದೆ. ಈಗ ಅಲ್ಲಿರುವ ಜನರು ಊಟ ತಿಂಡಿಗೂ ಪರದಾಡುತ್ತಿದ್ದಾರೆ.

    ಜಿಮ್ಮಿ ಜಿಮ್ಮಿ ಹಾಡಿಗೂ ಚೀನಾದಲ್ಲಿ ಜನರು ಹಸಿವಿನಿಂದ ಪರದಾಡುವುದಕ್ಕೂ ಏನು ಸಂಬಂಧ ಎಂದು ಕೇಳುತ್ತೀರಾ? ಮ್ಯಾಂಡರಿನ್ (ಚೀನಿ) ಭಾಷೆಯಲ್ಲಿ ‘ಜಿ-ಮಿ’ ಅಂದರೆ ‘ಅನ್ನ ಕೊಡು’ ಎಂದರ್ಥ. ಈಗ ಜನರು ಖಾಲಿ ಪಾತ್ರೆಯನ್ನು ಹಿಡಿದು ನೃತ್ಯ ಮಾಡುತ್ತಿದ್ದಾರೆ. ಸರ್ಕಾರ ‘ಇದೇನು’ ಎಂದು ಕೇಳಿದರೆ ಸೋಷಿಯಲ್ ಮೀಡಿಯಾ ಟ್ರೆಂಡ್​. ಆದರೆ ಇದು ಪ್ರತಿಭಟನೆಯ ಒಂದು ರೂಪ.

    ಚೀನಾದಲ್ಲಿ ಇರುವ ಕಮ್ಯುನಿಷ್ಟ್​ ಪಕ್ಷವನ್ನು ವಿರೋಧಿಸಿದವರಿಗೆ ಉಳಿಗಾಲವಿಲ್ಲ. ಇರುವ ಏಕೈಕ ಪಕ್ಷವನ್ನು ಪ್ರಶ್ನಿಸಿದ ವ್ಯಕ್ತಿಯೇ ನಾಪತ್ತೆ ಆಗಿಬಿಡುತ್ತಾರೆ. ಈ ಪರಿಸ್ಥಿತಿಯಲ್ಲಿ ಇರುವ ಚೀನಾ ಜನರು ತಮ್ಮ ಅಸಮಾಧಾನವನ್ನು ಹೊರಹಾಕಲು ‘ಜಿಮ್ಮಿ’ ದಾರಿಯನ್ನು ಹಿಡಿದಿದ್ದಾರೆ. ಇದು ಚೀನಾ ದೇಶದ ಕರಾಳ ಮುಖವನ್ನು ತೋರಿಸುತ್ತಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts