More

    ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ ; ನೆಲಮಂಗಲದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಮ್ ಅಭಿಮತ

    ನೆಲಮಂಗಲ : ಡಾ.ಬಿ.ಆರ್ ಅಂಬೇಡ್ಕರ್ ಅವರು ಭಾರತದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಟ್ಟು ದೇಶವನ್ನು ಮುನ್ನೆಡೆಸಿದ ಮಹನೀಯ ಎಂದು ಗ್ರಾಮಾಂತರ ಜಿಲ್ಲಾ ಭಾಜಪ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್.ರಾಮ್ ಅಭಿಪ್ರಾಯಪಟ್ಟರು.

    ನಗರದ ಅಡೇಪೇಟೆಯ ಚನ್ನಪ್ಪಕಲ್ಯಾಣಿಬಳಿ ಬಿಜೆಪಿ ಎಸ್‌ಸಿ ಮೋರ್ಚಾ ಗ್ರಾಮಾಂತರ ಜಿಲ್ಲಾ ಸಮಿತಿ ಆಯೋಜಿಸಿದ್ದ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಅಂಬೇಡ್ಕರ್ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೀಮಿತವಾಗದೆ ಸಮಾಜದ ಎಲ್ಲ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದವರು. ವಿದ್ಯೆ, ನೌಕರಿ ಮತ್ತು ಆಸ್ತಿಯಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದರ್ಶಿತ್ವ ಪ್ರತಿಯೊಬ್ಬರಿಗೆ ಆದರ್ಶವಾಗಬೇಕು ಎಂದರು.

    ಪಂಚತೀರ್ಥ ಯೋಜನೆಯಡಿ ಅಂಬೇಡ್ಕರ್ ಅವರ ಮನೆ, ಸಮಾಧಿ, ಮುಂಬೈನ ಮನೆ ಸೇರಿ ಇಂಗ್ಲೇಡಿನ ವಿದ್ಯಾರ್ಥಿಭವನವನ್ನು ಕೇಂದ್ರ ಸರ್ಕಾರ ಸ್ಮಾರಕವಾಗಿ ಪರಿವರ್ತನೆ ಮಾಡಿರುವುದು ಸಂತಸದ ಸಂಗತಿ ಎಂದರು. ಅಂಬೇಡ್ಕರ್ ಅವರ ತತ್ವಾದರ್ಶವನ್ನು ಗ್ರಾಮೀಣ ಭಾಗದ ಜನರಿಗೆ ತಿಳಿಸುವ ಉದ್ದೇಶದಿಂದ 130ನೇ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲೆಯ 520 ಕಡೆ ಹಾಗೂ ಪ್ರತಿತಾಲೂಕಿನಲ್ಲಿ 130 ಕಡೆ ಆಚರಣೆ ಮಾಡಲಾಗುತ್ತಿದೆ ಎಂದರು.

    ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಸೈಯದ್ ಅಹ್ಮದ್ ಮಾತನಾಡಿ, ಅಂಬೇಡ್ಕರ್ ಅವರು ದೇಶದ ಸಂವಿಧಾನದ ಜತೆಗೆ ಸಾಮಾಜಿಕ ವ್ಯವಸ್ಥೆಯೂ ಎಲ್ಲ ವರ್ಗದವರಿಗೂ ಸಮಾನ ಅವಕಾಶ ಕೊಟ್ಟಿದ್ದಾರೆ. ಶಿಕ್ಷಣವೆಂಬ ಅಸ್ತ್ರ ಬಳಸಿಕೊಂಡು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು. ಅತ್ಯುನ್ನತ ಮಹನೀಯರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡದೇ ಅವರ ಬದುಕು ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದರು. ಬಡಾವಣೆಯ ಹಿರಿಯ ನಾಗರಿಕರಾದ ಅಂಕಪ್ಪ, ಸುನಂದಮ್ಮ, ಕಮಲಮ್ಮ, ಗಂಗಮ್ಮ ಅವರನ್ನು ಗೌರವಿಸಲಾಯಿತು.

    ಭಾಜಪ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ತಾಲೂಕು ಮಾಧ್ಯಮ ಸಂಚಾಲಕ ಡಿ.ಸಿದ್ದರಾಜು, ಯುವಮೋರ್ಚಾ ತಾಲೂಕು ಅಧ್ಯಕ್ಷ ವಿಜಯ್‌ಕುಮಾರ್, ನಗರಸಭೆ ನಾಮನಿರ್ದೇಶಿತ ಸದಸ್ಯ ರವಿಕುಮಾರ್, ರಾಜಮ್ಮಪ್ರಕಾಶ್, ರಾಜ್ಯ ಪೌರಸೇವಾ ನೌಕರರ ಸಂಘ ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಅಂಕಯ್ಯ, ಮುಖಂಡ ಮುನಿರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts