More

    ಕಾಂಗ್ರೆಸ್ ಸರ್ಕಾರದ ದಿನಗಣನೆ ಎಂದ ಆರ್.ಅಶೋಕ್

    ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿ ಸೇರಿ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿರುವ ಕಾರಣ ಕಾಂಗ್ರೆಸ್ ಪಕ್ಷದ ಶಾಸಕರೇ ರೋಸಿಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರದ ದಿನಗಣನೆ ಆರಂಭವಾಗಿದ್ದು, ಪತನವಾಗುವುದು ನಿಶ್ಚಿತವೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.

    ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಅಕ್ಷಯ ತೃತೀಯ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ವಿಶೇಷ
    ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ಅಭಿವೃದ್ಧಿ ಕಾರ್ಯಗಳು ನಡೆಯದಿದ್ದರೆ ಈ ಸರ್ಕಾರ ಬಹಳ ದಿನ ಇರುವುದಿಲ್ಲವೆಂದು ಕಾಂಗ್ರೆಸ್ ಪಕ್ಷದ ಶಾಸಕರು ಹೇಳುತ್ತಿದ್ದಾರೆ. ಅಭಿವೃದ್ಧಿ ನಿಲ್ಲಿಸಿದ, ಪಾಪಿ ಸರ್ಕಾರ ತೊಲಗಬೇಕು ಎಂದು ಜನರು ಬಯಸುತ್ತಿದ್ದಾರೆ ಎಂದರು.

    ಕಾಂಗ್ರೆಸ್ ಪಕ್ಷದ ಬಹಳಷ್ಟು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಇಲ್ಲವೆಂದು ಅಲ್ಲಗಳೆಯುವುದಿಲ್ಲ. ಮಹಾರಾಷ್ಟ್ರದಲ್ಲಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಸರ್ಕಾರ ಬೀಳುವ ಹಂತಕ್ಕೆ ತಲುಪಿದೆ. ಮುಂದಿನ ಪಿಕ್ಚರ್ ಬಾಕಿಯಿದೆ ಎಂದು ಆರ್.ಅಶೋಕ್ ನಿಗೂಢವಾಗಿ ಹೇಳಿದರು.

    ಬಿಜೆಪಿ ಮಧ್ಯೆ ಪ್ರವೇಶಿಸದು

    ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತಿನ ಜಟಾಪಟಿ ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ಇಬ್ಬರದೂ ಕೌಟುಂಬಿಕ ಜಗಳವಾಗಿದ್ದು, ಇದರಲ್ಲಿ ಬಿಜೆಪಿ ಮಧ್ಯೆ ಪ್ರವೇಶಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂಬುದು ಪಕ್ಷದ ದೃಢ ನಿಲುವು. ವೈಯಕ್ತಿಕ ಗಲಾಟೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಗಲಾಟೆಯನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಆರ್.ಅಶೋಕ್ ಟೀಕಿಸಿದರು.

    ಅಭಿವೃದ್ಧಿ ಕೆಲಸಗಳೆಲ್ಲ ನಿಂತಿರುವುದನ್ನು ಮರೆಮಾಚಲು ಡಿಕೆ-ಎಚ್‌ಡಿಕೆ ನಡುವೆ ವಾಕ್ಸಮರ ಮುಂದುವರಿಯಬೇಕು ಎಂಬುದು ಕೈ ನಾಯಕರ ಬಯಕೆಯಾಗಿದೆ. ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲವಾದ್ದರಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.

    ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣವು ಬಿಜೆಪಿ-ಜೆಡಿಎಸ್ ಮೈತ್ರಿ ಮೇಲೆ ಯಾವುದೇ ಪರಿಣಾಮಬೀರದು. ಉಭಯ ಪಕ್ಷಗಳ ಸ್ನೇಹ ಮುಂದುವರಿಯಲಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಾನಗಳ ಹಂಚಿಕೆ, ಕ್ಷೇತ್ರಗಳ ಹೊಂದಾಣಿಕೆ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಆರ್.ಅಶೋಕ್ ಹೇಳಿದರು.

    ದುರಹಂಕಾರದ ವರ್ತನೆ

    ಬಿಜೆಪಿ ಸೋಷಿಯಲ್ ಮೀಡಿಯಾ ರಾಜ್ಯ ಸಂಚಾಲಕ ಪ್ರಶಾಂತ್ ಮಾಕನೂರುಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿ ಬಂಧಿಸಿರುವುದು ತಪ್ಪು. ಕಾಂಗ್ರೆಸ್ ನವರು ಅಧಿಕಾರದ ದುರಂಹಕಾರದಿಂದ ಮರೆಯುತ್ತಿದ್ದಾರೆ. ಇಂತಹ ವರ್ತನೆ ಬಹಳ ದಿನ ನಡೆಯುವುದಿಲ್ಲವೆಂದು ಕಿಡಿಕಾರಿದರು.

    ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ನವರು 40 ಪರ್ಸೆಂಟ್ ಸರ್ಕಾರವೆಂದು ಸುಳ್ಳು ಆರೋಪ ಮಾಡಿದರು. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಸರಣಿ ಸಂದೇಶಗಳನ್ನು ಹಂಚಿಕೊಂಡರು. ಕಾಂಗ್ರೆಸ್‌ನ ಸುಳ್ಳಿಗೆ ರಾಜಕೀಯವಾಗಿ ಬಿಜೆಪಿ ಪ್ರತ್ಯುತ್ತರಿಸಿತೇ ಹೊರತು ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಿಲ್ಲವೆಂದು ಆರ್.ಅಶೋಕ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts