More

    ಧರ್ಮದರ್ಶನ ಅಂಕಣ| ಮಕ್ಕಳು ಕೃಷ್ಣನ ಹಾಗೆ ತುಂಟಾಟ ಮಾಡಲಿ ಬಿಡಿ…

    ಧರ್ಮದರ್ಶನ ಅಂಕಣ| ಮಕ್ಕಳು ಕೃಷ್ಣನ ಹಾಗೆ ತುಂಟಾಟ ಮಾಡಲಿ ಬಿಡಿ…ನಾನು ಹೈಸ್ಕೂಲು ಓದುತ್ತಿರುವಾಗ ಮನೆಗೆ ‘ದಿ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಎಂಬ ಇಂಗ್ಲಿಷ್ ವಾರಪತ್ರಿಕೆ ಬರುತ್ತಿತ್ತು. ಭಾರತದ ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಸುದ್ದಿಗಳು ಮಾತ್ರವಲ್ಲದೆ, ಗುಣಮಟ್ಟದ ಲೇಖನಗಳು, ವಿಮರ್ಶೆಗಳ ಜತೆಗೆ ಮೌಲ್ಯಾತ್ಮಕ ಸಂದೇಶ ಬರಹಗಳು ಕೂಡ ಪ್ರಕಟವಾಗುತ್ತಿದ್ದವು. ನಮ್ಮ ಮನೆಯಲ್ಲೂ ಎಲ್ಲರೂ ಅದನ್ನು ಓದುತ್ತಿದ್ದರು. ಪತ್ರಿಕೆಯಲ್ಲಿ ಕೊನೆಯ ಭಾಗದಲ್ಲಿ ಹಾಸ್ಯ, ಚಿತ್ರಕಲೆ, ಕಾರ್ಟೂನ್ ಮುಂತಾದವು ಇರುತ್ತಿತ್ತು. ನನಗಂತೂ ಅದರಲ್ಲಿ ಬರುತ್ತಿದ್ದ ಡೆನಿಸ್ ದ ಮೆನಸ್ (Dennis the Menace) ಎಂಬ ಕಾರ್ಟೂನ್ ರೀತಿಯ ಚಿತ್ರಕತೆ ಓದುವ ಉತ್ಸಾಹ. ಆ ಹುಡುಗನ ಬಗ್ಗೆ ಪ್ರತಿವಾರ ಒಂದೊಂದು ಚಿತ್ರಕತೆ ಪ್ರಕಟವಾಗುತ್ತಿತ್ತು. ‘ಡೆನಿಸ್ ಎಂಬ ತುಂಟ’ ಎಂದು ಅರ್ಥ ಬರುವಂತಿದ್ದರೂ ಆತ ಬರೇ ತುಂಟನೆಂದು ಅಲ್ಲ, ಬೌದ್ಧಿಕವಾಗಿ ಜಾಣತನ-ಮಾತಿನಿಂದ ತುಂಟನೆನಿಸಿಕೊಂಡಿದ್ದ. ಅವನಿಗೆ ತಂದೆ ತಾಯಿ ಇದ್ದರು. ಅಜ್ಜಿ ಮಾರ್ಥ, ಅಜ್ಜ ಜಾರ್ಜ್ ಎಂಬುವವರಿದ್ದರು. ಈ ಹುಡುಗ ಅಜ್ಜನಿಗೆ ಯಾವಾಗಲೂ ಕೀಟಲೆ ಮಾಡುತ್ತಿದ್ದ. ಅದಕ್ಕೆ ಅಜ್ಜ ಈತನನ್ನು ಕಂಡಾಗ ಗಂಟುಮುಖ ಮಾಡಿಕೊಂಡು ಇರುತ್ತಿದ್ದ. ಅಜ್ಜಿ ಮಾರ್ಥ ಮಾತ್ರ ಡೆನಿಸ್ ಎಷ್ಟು ತುಂಟಾಟ ಮಾಡಿದರೂ ಪ್ರೀತಿಯಿಂದ ಕಾಣುತ್ತಿದ್ದಳು ಮತ್ತು ಸದಾ ಬೆಂಬಲವಾಗಿ ನಿಲ್ಲುತ್ತಿದ್ದಳು.

    ಆತನಿಗೆ ಮಿಚೆಲ್ ಎಂಬ ಹುಡುಗಿ ಮತ್ತಿಬ್ಬರು ಸ್ನೇಹಿತರಿದ್ದರು. ಅವರೊಂದಿಗೆ ಆಟವಾಡುತ್ತಿದ್ದ. ಆಗೆಲ್ಲ ಅಕಸ್ಮಾತ್ ಆಗಿ ಕೆಲವೊಂದು ಅನಾಹುತ ಆಗುತ್ತಿತ್ತು. ಮನಸ್ಸಿಗೆ ಹತ್ತಿರವಾಗುವ, ಉಲ್ಲಾಸ ನೀಡುವಂತಹ ಹಲವು ಪ್ರಸಂಗಗಳಿಂದ ಡೆನಿಸ್ ಅಮೆರಿಕ ಮಾತ್ರವಲ್ಲದೆ, ವಿಶ್ವದ ಎಲ್ಲ ರಾಷ್ಟ್ರಗಳಲ್ಲಿನ ಪತ್ರಿಕಾ ಓದುಗರಿಗೆ ಇಷ್ಟವಾಗಿದ್ದ. ಡೆನಿಸ್​ನ ಚಲನಚಿತ್ರವೂ ಬಂದಿದೆ.

    ಡೆನಿಸ್ ಮನೆ-ನೆರೆಮನೆಗೆಲ್ಲ ಓಡಾಡುತ್ತಿದ್ದ. ತನ್ನ ನಾಯಿಯನ್ನು ಪ್ರೀತಿಸುತ್ತಿದ್ದ. ಅಜ್ಜನ ಬಳಿ ‘ಅಜ್ಜ ನಿನ್ನ ಕೂದಲು ಬೆಳೆಯೋದಕ್ಕೆ ನಾನು ಏನು ಮಾಡಬೇಕು’ ಎನ್ನುತ್ತಿದ್ದ. ಹಾಗೆಯೇ ತಾಯಿಯ ಬಳಿ, ‘ಅಮ್ಮಾ ಇವತ್ತು ಮದರ್ಸ್ ಡೇ. ನಾನು ನಿನ್ನ ಹೊಟ್ಟೆಯಲ್ಲಿ ಹುಟ್ಟದೇ ಇದ್ದಿದ್ದರೆ ನಿನಗೆ ಮದರ್ಸ್ ಡೇ’ ಗೌರವ ದೊರೆಯುತ್ತಿತ್ತೇ?’ ಎಂದು ಕೇಳಿದ್ದ. ಅವನ ಚೇಷ್ಟೆ ತಂಟಾಟ ಒಂದಲ್ಲ ಎರಡಲ್ಲ.

    ಸುಮಾರು 1960ರ ದಶಕದಲ್ಲಿ ಅಮೆರಿಕದ ಕೆಲವು ಮಂದಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ನಾನು ಬೆಂಗಳೂರಿನಿಂದ ತಂದ ಡೆನಿಸ್​ನ ಫೋಟೋ ಸ್ಟಿಕ್ಕರ್​ವೊಂದನ್ನು ಅನ್ನಪೂರ್ಣ ಛತ್ರಕ್ಕೆ ಹೋಗುವ ದಾರಿಯಲ್ಲಿ ಗೋಡೆಗೆ ಅಂಟಿಸಿದ್ದೆ. ಈ ಫೋಟೋ ಕಂಡ ಅಮೆರಿಕದ ಓರ್ವ ಮಹಿಳೆ ಗಕ್ಕನೆ ನಿಂತು ‘ಓ ಅವರ್ ಡೆನಿಸ್’ ಎಂದು ಉದ್ಗರಿಸಿದರು. ಅಂದರೆ ನಮ್ಮ ಅಮೆರಿಕದ ಡೆನಿಸ್ ಇಲ್ಲಿಯೂ ಇದ್ದಾನೆ ಎಂಬ ಅಭಿಪ್ರಾಯ ಅವರಾದಗಿತ್ತು. ಆಗ ನಾನು, ‘ಹೌದು ನಿಮ್ಮದೇ ಡೆನಿಸ್. ನಮ್ಮೆಲ್ಲರಿಗೂ ಪ್ರೀತಿ-ಪಾತ್ರವಾಗಿರುವ ಡೆನಿಸ್’ ಎಂದೆ.

    ಡೆನಿಸ್ ಕಾರ್ಟೂನಿನ ಒಂದು ಚಿತ್ರದಲ್ಲಿ ‘ಆಉಐಘ’ ಎಣಈ ಐಖ ಘಣಖ ಉಅಖ್ಗ. ಏಣಗ ಈಐಈ ್ಗಖಿ Mಅಘಅಎಉ ಐಖ ಅಔಔ ಖಏಉಖಉ ್ಗಅಖ? ‘ಅಂದರೆ ದೇವರಾಗಿರುವುದು ಸುಲಭ ಸಾಧ್ಯವಲ್ಲ. ಅಂತಹುದರಲ್ಲಿ ಇಷ್ಟು ವರ್ಷ ಹೇಗೆ ಸುಧಾರಿಸಿಕೊಂಡೆ? ಎಂದು ರಾತ್ರಿ ಪ್ರಾರ್ಥನೆ ಮಾಡುವಾಗ ಆತ ಚಿಂತಿಸಿ ಹೇಳುತ್ತಾನೆ. ಕಾಲ್ಪನಿಕ ವ್ಯಕ್ತಿ ಅಥವಾ ಪಾತ್ರವಾಗಿದ್ದರೂ ಜನರು ಅದನ್ನು ನಮ್ಮೊಡನೆ ಇರುವ ಹುಡುಗ ಎಂಬಂತೆ ಭಾವಿಸುತ್ತಿದ್ದರು.

    ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ ಡೆನಿಸ್​ನ ಕಾರ್ಟೂನ್ ಚಿತ್ರ ಮಾಡುತ್ತಿದ್ದ ವ್ಯಕ್ತಿ 2023ರ ಜನವರಿ 19ರಂದು ಮೃತರಾದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದು ಬಂತು. ವಿಶ್ವದ ಎಲ್ಲಾ ಅಭಿಮಾನಿಗಳಂತೆ ನಾನೂ ಕೂಡ ಗೌರವ ಶ್ರದ್ಧಾಂಜಲಿಯನ್ನು ಅರ್ಪಿಸಿದೆ. ಆತನ ಹೆಸರು ಡೇವಿಡ್ ಸುದರ್ ಲ್ಯಾಂಡ್. ತಾಯಿಯ ಹೆಸರು ಅಲಿಸ್, ತಂದೆ ಹೆನ್ರಿ.

    ಡೆನಿಸ್​ನಂತೆ ಮಕ್ಕಳು ಕೂಡ ಚೂಟಿಯಾಗಿ, ತುಂಟರು ಇರುತ್ತಾರೆ. ನಮ್ಮ ಕ್ಷೇತ್ರಕ್ಕೆ ಬರುವ ಅನೇಕ ತಂದೆ-ತಾಯಿಯರು ‘ಸ್ವಾಮೀ ನನ್ನ ಮಗ/ಮಗಳು ಬಹಳ ತುಂಟ-ತುಂಟಿ. ಕುಂತಲ್ಲಿ ಕೂರೋದಿಲ್ಲ, ನಿಂತಲ್ಲಿ ನಿಲ್ಲೋದಿಲ್ಲ. ಸದಾ ಏನಾದರೊಂದು ಕಿತಾಪತಿ ಮಾಡುತ್ತಲೇ ಇರುತ್ತಾರೆ, ಏನು ಮಾಡೋದು. ಏನಾದರೂ ಪರಿಹಾರ ಸಿಕ್ಕಿದ್ದರೆ ಒಳ್ಳೆಯದಿತ್ತು’ ಎಂದು ಅಲವತ್ತುಕೊಳ್ಳುತ್ತಾರೆ.

    ಆಗ ನಾನು, ‘ಮಕ್ಕಳು ತುಂಟಾಟ ಮಾಡಲೇಬೇಕು. ಅವರಲ್ಲದೆ ದೊಡ್ಡವರು ತುಂಟಾಟ ಮಾಡಲಿಕ್ಕಾಗುತ್ತದೆಯೇ’ ಎನ್ನುತ್ತಾ ಶ್ರೀ ಕೃಷ್ಣನ ಉದಾಹರಣೆಯನ್ನು ನೀಡುತ್ತೇನೆ. ಮಕ್ಕಳು ಕೃಷ್ಣನ ಪ್ರತೀಕವಾಗಬೇಕು ಎನ್ನುವುದೇ ಅದರ ಉದ್ದೇಶ ಮತ್ತು ಆಶಯ.

    ಕೃಷ್ಣ ಎಷ್ಟು ತುಂಟಾಟ ಮಾಡುತ್ತಾನೋ ಅಷ್ಟೇ ಆಪ್ಯಾಯ ಮಾನವಾಗುತ್ತಾನೆ. ಅಷ್ಟು ನಾವು ಅವನನ್ನು ಪ್ರೀತಿಸುತ್ತೇವೆ. ಅವನ ತುಂಟತನದಲ್ಲಿ ನಾವು ಕಾಣುವಂತಹದು ಮಕ್ಕಳ ಲೀಲೆಯನ್ನು. ಈ ಮಕ್ಕಳ ಲೀಲೆ ಎಂದರೆ ಅವರ ಆಟ-ತುಂಟಾಟಗಳು. ಕೃಷ್ಣ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಅನೇಕ ತುಂಟತನ ಮಾಡುತ್ತಾನೆ. ಮಾತ್ರವಲ್ಲದೆ, ಭಾಗವತದಲ್ಲಿ ಬರುವ ಕಥೆಗಳ ಪ್ರಕಾರ ಅಲ್ಲಿ ಅವನು ರಾಕ್ಷಸರನ್ನು ನಾಶ ಮಾಡುವುದರಿಂದ ಅವನಿಗೆ ದೈವೀಕತೆ ಬಂದು ಅನೇಕರು ಕೃಷ್ಣನನ್ನು ತಮ್ಮ ಮನೆಮಗನಂತೆ ಕಂಡರಲ್ಲದೆ ಗೌರವಿಸಿ ಪೂಜಿಸುವಂತಹ ಭಾವವನ್ನೂ ಕಾಣುತ್ತೇವೆ. ಕೃಷ್ಣ ಎಲ್ಲ ಬಾಲಕರ ಪ್ರತೀಕ. ಜೀವನವನ್ನು ಪ್ರೀತಿಸುವಂತೆ ಮಾಡುತ್ತಾನೆ. ಬದುಕಿನಲ್ಲಿ ಅನೇಕ ಆಸೆ ಹುಟ್ಟಿಸುವಂತೆ ಮಾಡುತ್ತಾನೆ. ಮಕ್ಕಳಿರಲವ್ವ ಮನೆತುಂಬ ಎನ್ನಿಸುವಂತೆ ಮಾಡಿಬಿಡುತ್ತಾನೆ.

    ಕೆಲವರು ಕೇಳುವುದಿದೆ, ‘ಈ ಮಕ್ಕಳ ತುಂಟಾಟ ಹೇಗೆ ತಡೆಯುವುದು’ ಎಂದು. ಆಗ ನಾನು ಹೇಳುತ್ತೇನೆ, ‘ತುಂಟಾಟವನ್ನು ತಡೆಯುವುದಕ್ಕೆ ಹೋಗಬೇಡಿ, ಬದಲಾಗಿ ಆನಂದಿಸಿ. ಆದರೆ, ಮಕ್ಕಳಲ್ಲಿ ನಾಶ ಮಾಡುವ ಪ್ರವೃತ್ತಿ ಬರಬಾರದು. ಅಂದರೆ ಕೈಗೆ ಸಿಗುವ ವಸ್ತುಗಳನ್ನು ಒಡೆಯುವಂತಹದ್ದು, ಬಿಸಾಡುವುದು, ಎಸೆಯುವುದು ಈ ಪ್ರವೃತ್ತಿ ಬೆಳೆಯದಂತೆ ನೋಡಿಕೊಳ್ಳಬೇಕು. ಎಲ್ಲಾ ಮಕ್ಕಳು ಹಾಗೆ ಇರುವುದಿಲ್ಲ. ಅವರಿಗೆ ಸ್ವಲ್ಪ ಬುದ್ಧಿ ಹೇಳಿ, ತಿದ್ದಿದರೆ ಅರ್ಥವಾಗುತ್ತದೆ’.

    ನಾನು ಒಮ್ಮೆ ಇಂಗ್ಲೆಂಡಿಗೆ ಹೋದಾಗ ಪರಿಚಿತರನ್ನು ಭೇಟಿಯಾದೆ. ಆಗ ಅವರ ಮಗು ಅಂದಾಜು 5-6 ವರ್ಷದದ್ದಿರಬಹುದು. ತುಂಟಾಟ ಮಾಡಿತು. ‘ಏ ಸುಮ್ಮನಿರು’ ಎಂದು ಗದರಿದರು. ನಾನು ತಮಾಷೆಗೆ, ‘ಇಂಗ್ಲೆಂಡಿನಲ್ಲಿ ಮಕ್ಕಳಿಗೆ ಗದರಿಸಬಾರದು, ಹೊಡೆಯಬಾರದು ಎಂಬ ಕಾನೂನು ಇದೆಯಲ್ಲ. ನೀವು ಮಗುವಿಗೆ ಗದರಿಸುತ್ತಿದ್ದೀರಿ ಅಲ್ವಾ’ ಎಂದೆ. ಅದಕ್ಕೆ ಅವರು, ‘ನೋಡಿ ಇವರನ್ನೆಲ್ಲ ಹೀಗೆ ಬಿಟ್ಟರೆ ತಲೆ ಮೇಲೆ ಹತ್ತುತ್ತಾರೆ’ ಎಂದು ಶುದ್ಧ ಮಂಗಳೂರು ಭಾಷೆಯಲ್ಲಿ ಹೇಳಿದರು. ‘ಮಕ್ಕಳಿಗೆ ಹೊಡೆಯಬಾರದು ಎಂದು ಕಾನೂನು ಇದೆ. ಮಕ್ಕಳು ಏನಾದರೂ ನೋವಿಗೆ ಒಳಗಾಗಿ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಬಂದು ನಮ್ಮನ್ನು ತನಿಖೆ ಮಾಡುತ್ತಾರೆ. ತಂದೆ-ತಾಯಿ ಮಕ್ಕಳಿಗೆ ಹಿಂಸೆ ಮಾಡಿದ್ದಾರೆ, ಅಥವಾ ಅವರ ಅವಕಾಶವನ್ನು ತಪ್ಪಿಸಿದ್ದಾರೆ ಎನ್ನುವುದು ಗೊತ್ತಾದರೆ ಶಿಕ್ಷೆ ಕೊಡುವ ವ್ಯವಸ್ಥೆಯೂ ಇದೆ’ ಎಂದೂ ಅವರು ಹೇಳಿದರು.

    ಮತ್ತೆ ಈಗ ಗದರಿಸಿದ್ದೀರಲ್ಲ? ಎಂದೆ. ಆಗ ಅವರು, ‘ನನಗೆ ನನ್ನ ಅಪ್ಪ ಕೊಟ್ಟ ಏಟಿನ ನೆನಪಾಗುತ್ತದೆ. ಅವರು ನೀಡುತ್ತಿದ್ದ ಶಿಕ್ಷೆಯನ್ನು ನೆನಪಿಸಿಕೊಂಡು ಇವರಿಗೆ ಕೇವಲ ಗದರಿಸುತ್ತಿದ್ದೇನಷ್ಟೇ. ಭಾರತಕ್ಕೆ ಹಿಂದಿರುಗಿದ ಮೇಲೆ ನಿಮಗೆ ಬುದ್ಧಿ ಕಲಿಸುತ್ತೇನೆ ಎಂದು ಕೆಲವು ಸಲ ಮನಸ್ಸಿನಲ್ಲಿ ಅಂದುಕೊಳ್ಳುವುದಿದೆ’ ಎಂದರು. ‘ಕೆಲವು ಬಾರಿ ಮಂಗಳೂರಿಗೆ ಹೋದ ಮೇಲೆ ಅವರು ಅಲ್ಲಿ ಮಾಡಿದ ತಪ್ಪಿಗೆ ಒಂದೆರಡು ಏಟು ಹೊಡೆದದ್ದೂ ಇದೆ’ ಎಂದು ಹೇಳಿದರು. ಮಕ್ಕಳ ಕೆಟ್ಟ ಬುದ್ಧಿಯನ್ನು, ಹಾನಿ, ನಾಶ ಮಾಡುವ ಪ್ರವೃತ್ತಿಯನ್ನು ಬದಲಾಯಿಸುವುದಾದರೆ ಶಿಕ್ಷೆ ಅನಿವಾರ್ಯವಾಗಬಹುದು. ಮಕ್ಕಳ ತುಂಟಾಟದ ಲೀಲೆಗಳನ್ನು ಕೃಷ್ಣನ ಭಾವನೆಯಲ್ಲಿ ಕಾಣಬೇಕು.

    ಮಕ್ಕಳ ಮುಗ್ಧ ಪ್ರಶ್ನೆಗಳು ಆಕರ್ಷಣೀಯವಾಗಿರುತ್ತದೆ ಮತ್ತು ನಮಗೂ ಚಿಂತನೆಗೆ ಒಳಪಡುವಂತೆ ಮಾಡುತ್ತದೆ. ಒಮ್ಮೆ ಡೆನಿಸ್​ನ ತಾಯಿ ವ್ಯಾಯಾಮಕ್ಕಾಗಿ ಜಿಮ್ೆ ಸೇರಿಕೊಳ್ಳುತ್ತಾಳೆ. ಡೆನಿಸ್ ಕೇಳುತ್ತಾನೆ, ‘ಅಮ್ಮಾ ನನ್ನ ಹಿಂದೆ ಓಡುವ ವ್ಯಾಯಾಮ ಸಾಕಾಗುವುದಿಲ್ಲವೇ’ ಎಂದು. ಹಾಗಾಗಿ ಮಕ್ಕಳು ಏನಾದರೂ ಪ್ರಶ್ನೆ ಕೇಳಿದರೆ ಏ ಮಾತನಾಡಬೇಡ, ಸುಮ್ಮನಿರು, ಪ್ರಶ್ನೆ ಕೇಳಬೇಡ ಎಂದು ಹೇಳಬಾರದು. ಪ್ರಶ್ನೆಗಳಿಗೆ ಉತ್ತರ ತಿಳಿದಿರದಿದ್ದರೆ ತಿಳ್ಕೊಂಡು ಉತ್ತರಿಸುವ ಮನಸ್ಸು ಬೆಳೆಸಿಕೊಳ್ಳಬೇಕು. ಕೆಲವು ಅಪ್ರಬುದ್ಧ ಪ್ರಶ್ನೆಗಳನ್ನು ಕೇಳಿದರೆ ಪ್ರಬುದ್ಧವಾಗಿ ಉತ್ತರಿಸಬಹುದು. ಅವರಿಗೆ ಉತ್ತರಿಸುವುದು ಸುಮ್ಮನೆ, ಅವರು ಅರ್ಥ ಮಾಡಿಕೊಳ್ಳುವುದಿಲ್ಲ, ತಿಳಿದುಕೊಳ್ಳುವುದಿಲ್ಲ ಎನ್ನುವ ಭಾವನೆಯನ್ನು ಎಂದಿಗೂ ತಾಳಬಾರದು.

    ನಾವು ಸುಮಾರು 1980ನೇ ಇಸವಿಯಲ್ಲಿ ಉಜಿರೆಯಲ್ಲಿ ಮಕ್ಕಳ ಮೇಳ ಮಾಡಿದೆವು. ಇದರ ಉದ್ದೇಶವಿದ್ದದ್ದು ಮಕ್ಕಳಲ್ಲಿ ಸುಪ್ತವಾಗಿದ್ದ ಪ್ರತಿಭೆಗಳನ್ನು ಅರಳಿಸುವ ಪ್ರಯತ್ನ. ಮಕ್ಕಳಲ್ಲಿ ಕುತೂಹಲ, ಆಸಕ್ತಿಯನ್ನು ಮೂಡಿಸಿದರೆ ಬೇಕಾದ ಹವ್ಯಾಸ ಬೆಳೆಸಿಕೊಳ್ಳುತ್ತಾರೆ ಎಂಬುದಕ್ಕಾಗಿ. ಈಗ ನಮ್ಮ ಮಕ್ಕಳಿಗೆ ಆಸಕ್ತಿ ಮೂಡಿಸುವಂತಹ ವಿಷಯಗಳು ಟಿ.ವಿ., ಮೊಬೈಲ್, ಅಂತರ್ಜಾಲದಲ್ಲಿ ದೊರೆಯುತ್ತವೆ. ಆದರೆ, 30 ವರ್ಷಗಳ ಹಿಂದೆ ಈ ಎಲ್ಲ ಸೌಲಭ್ಯ ಇರಲಿಲ್ಲ. ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿದೆ. ಈಗ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಅನೇಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡುತ್ತಾರೆ. ನಮ್ಮ ಹಳ್ಳಿ ಪ್ರದೇಶವಾದ ಉಜಿರೆಯ ಎಸ್.ಡಿ.ಎಂ. ಹೈಸ್ಕೂಲ್ ವಿದ್ಯಾರ್ಥಿಗಳು ಸಂಶೋಧನಾ ಪ್ರತಿಭೆಯಿಂದ ರಾಷ್ಟ್ರ ರಾಜಧಾನಿ ದೆಹಲಿವರೆಗೆ ಹೋಗಿದ್ದರು.

    ಹೆಲ್ಮೆಟ್ ಧರಿಸಿದರೆ ಮಾತ್ರ ಸ್ಕೂಟರ್ ಸ್ಟಾರ್ಟ್ ಆಗುತ್ತೆ ಎಂಬ ರೀತಿಯಲ್ಲಿ ಧರ್ಮಸ್ಥಳ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಸಂಶೋಧಿಸಿದ್ದ. ಅದಕ್ಕೆ ಬಹುಮಾನ ಬಂದಿತ್ತು. ಇಂತಹ ಕಲ್ಪನೆಗಳು ನಿಜಕ್ಕೂ ಸೋಜಿಗ. ಹೆಲ್ಮೆಟ್ ಧರಿಸಬೇಕು; ಧರಿಸದಿದ್ದರೆ ಶಿಕ್ಷೆ ಕೊಡುವ ಕೆಲಸ ಪೊಲೀಸರದು. ಶಿಕ್ಷೆಯ ಬದಲಾಗಿ ಅದನ್ನು ಅನಿವಾರ್ಯ ಮಾಡುವುದು ಹೇಗೆ ಎನ್ನುವ ಅದ್ಭುತ ಕಲ್ಪನೆ ಮಕ್ಕಳಿಂದ ಹೀಗೆ ವ್ಯಕ್ತವಾಗುವ ಬಗೆ ಅನನ್ಯ.

    ಮಕ್ಕಳಿಗೆ ಸೂಕ್ತ ಅವಕಾಶ ನೀಡಿದರೆ ಅವರು ತಮ್ಮದೇ ಕಲ್ಪನೆಯಲ್ಲಿ ಸಂಶೋಧನೆಗಳನ್ನು ಮಾಡುತ್ತಾರೆ. ಅವರ ಕಲ್ಪನೆಗೆ ಪುಷ್ಟಿ ಕೊಡಬೇಕಾದ ಜವಾಬ್ದಾರಿ ನಮ್ಮದಾಗಿದೆ. ತಂದೆ-ತಾಯಂದಿರೂ ಪೋ›ತ್ಸಾಹಿಸಬೇಕು. ಅಂತೆಯೇ ಶಾಲೆಗಳಲ್ಲಿ ಪಠ್ಯೇತರ ಮತ್ತು ಸಂಶೋಧನೆ ಚಟುವಟಿಕೆಗಳಿಗೂ ಪೋ›ತ್ಸಾಹ ನೀಡುವುದು ಅಗತ್ಯ. ಇದರಿಂದ ಮಕ್ಕಳ ಪ್ರತಿಭೆಯ ಅನಾವರಣ ಜೊತೆ ಪ್ರಗತಿಗೂ ದಾರಿಯಾಗುತ್ತದೆ. ಹೊಸ ಚಿಂತನೆ, ಹೊಸ ವಿಚಾರಗಳಿಗೆ ವೇದಿಕೆಯಾಗುತ್ತದೆ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts