More

    ಧರ್ಮದರ್ಶನ ಅಂಕಣ; ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಖುಷಿ…

    ಧರ್ಮದರ್ಶನ ಅಂಕಣ; ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಖುಷಿ…ಹೊಸ ವರ್ಷದ ಈ ಸಂದರ್ಭದಲ್ಲಿ ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕು. ಪೂರ್ವಜರು ಹಾಕಿಕೊಟ್ಟ ಪಥದಲ್ಲಿ ಮುನ್ನಡೆದು, ಹಿಂದಿನ ದಾರಿಯನ್ನು ಮರೆಯದೆ ಲೋಕದ ಹಿತಕ್ಕಾಗಿ ಜೊತೆಯಾಗಿ ಸಾಗಬೇಕು. ತಪ್ಪುಗಳಿಂದ ಅನುಭವ ಪಡೆದು, ಉತ್ಸಾಹ, ಧ್ಯೇಯದೊಂದಿಗೆ ಜೀವನದಲ್ಲಿ ಹೊಸ ಹೆಜ್ಜೆ ಇಡಬೇಕು. ಈ ದಿನ, ಈ ಕ್ಷಣವನ್ನು ಪ್ರೀತಿಸುವುದನ್ನು ಕಲಿಯಬೇಕು. ಅದನ್ನು ಜೀವಿಸಬೇಕು.

    ಖುಷಿ ಎಂದರೆ ನಮ್ಮ ನಮ್ಮ ಮನಃಸ್ಥಿತಿಗೆ ಸಂಬಂಧಪಟ್ಟಿದ್ದು ಎಂದು ವ್ಯಾಖ್ಯಾನಿಸಬಹುದು. ಆದರೆ ನಮ್ಮ ಜೀವನಶೈಲಿಗೂ ಖುಷಿಗೂ ಸಂಬಂಧವಿದೆ. ಮಕ್ಕಳಿಗೆ ಹೊಸ ಬಟ್ಟೆ, ಚಾಕಲೇಟ್, ಬಣ್ಣದ ಪೆನ್ಸಿಲ್ ಹೀಗೆೆ ಏನಾದರೊಂದು ಉಡುಗೊರೆ ಕೊಡುತ್ತಿದ್ದರೆ ಅವರಿಗೆ ತುಂಬಾ ಖುಷಿಯಾಗುತ್ತದೆ. ಅವನ್ನು ಪಡೆದ ಮಕ್ಕಳು ಖುಷಿಪಡುವ ರೀತಿಯಲ್ಲೇ ಅದನ್ನು ಕೊಡುವವರು ಮಕ್ಕಳಿಗಿಂತ ಹೆಚ್ಚು ಖುಷಿಪಡುತ್ತಾರೆ; ಉಡುಗೊರೆ ಕೊಡಿಸಿದ ಸಂತೃಪ್ತ ಭಾವ ಅವರಲ್ಲಿ ಮೂಡುತ್ತದೆ.

    ಹೀಗೊಮ್ಮೆ ಬೀಡಿಗೆ ಬಂದ ದಂಪತಿಯ ಜೊತೆ ಅವರ ಪುಟ್ಟ ಮಗು ಇತ್ತು. ಮಗುವಿಗೆ ಆ ಜಾಗ ಹೊಸತಾಗಿ ಕಂಡದ್ದರಿಂದಲೋ ಅಥವಾ ಹಸಿವು, ನಿದ್ರೆಯೋ ಏನೆಂದು ತಿಳಿಯದೆ ಅದು ರಚ್ಚೆ ಹಿಡಿದು ಅಳುತ್ತಿತ್ತು. ತಾಯಿ ಸಾಕಷ್ಟು ಪ್ರಯತ್ನಿಸಿದರೂ ಅಳು ಇನ್ನೂ ಜೋರಾಗುತ್ತಿತ್ತು. ಸರದಿಯಲ್ಲಿ ನನ್ನ ಬಳಿಗೆ ಬಂದರು. ಆಗ ನನ್ನ ಬಳಿ ಇದ್ದ ಚಾಕಲೇಟೊಂದನ್ನು ಮಗುವಿನತ್ತ ಚಾಚಿದೆ. ಅದನ್ನು ತೆಗೆದುಕೊಂಡ ಮಗು ಅಳು ನಿಲ್ಲಿಸಿ ಮಂದಹಾಸ ಬೀರಿತು. ಮಗುವಿನ ಆ ಮಂದಹಾಸ ನನಗೂ ಸಂತೋಷವನ್ನು ಉಂಟುಮಾಡಿ ಅದುವರೆಗೂ ಇದ್ದ ನನ್ನ ಆಯಾಸ, ಒತ್ತಡಗಳೆಲ್ಲ ಮಾಯವಾಯಿತು. ತಾಯಿಗೂ ಮಗು ಅಳು ನಿಲ್ಲಿಸಿತಲ್ಲ ಎಂದು ನಿಟ್ಟುಸಿರ ಭಾವ ಮೂಡಿತು.

    ಹೊಸ ಕ್ಯಾಲೆಂಡರ್ ವರುಷ ಆಗಮನವಾಗಿದೆ. ಬಹುತೇಕರು ವರ್ಷಾರಂಭದೊಂದಿಗೆ ಅನೇಕ ಯೋಜನೆ-ನಿರ್ಣಯಗಳನ್ನು ಕೈಗೊಳ್ಳುತ್ತಾರಾದರೂ ಅವನ್ನು ಪೂರ್ಣಗೊಳಿಸುವ ಸಂಕಲ್ಪ ಶಕ್ತಿ ಹೊಂದಿರುವುದಿಲ್ಲ. ಕೆಲವೇ ಮಂದಿ ದೃಢವಾಗಿ ಮುನ್ನಡೆದು ಗುರಿ ತಲುಪುತ್ತಾರೆ. ಜೀವನವನ್ನು ಹೇಗೆ ರೂಪಿಸಬೇಕು ಎಂಬ ಆಯ್ಕೆ ನಮ್ಮದೇ ಕೈಯಲ್ಲಿರುತ್ತದೆ. ಪ್ರತಿದಿನವೂ ಪ್ರತಿ ಕ್ಷಣವೂ ಒಂದೊಂದು ಅವಕಾಶವೇ ಆಗಿರುತ್ತದೆ. ಆ ಅವಕಾಶವನ್ನು ಬಳಸಿಕೊಳ್ಳುವ ಜಾಣ್ಮೆಯಿರಬೇಕು.

    ಅವಕಾಶಗಳನ್ನು ಉಪಯೋಗಿಸುವ ಮೌಲ್ಯದ ಬಗ್ಗೆ ಮಹಾಭಾರತದಲ್ಲಿನ ಈ ದೃಷ್ಟಾಂತದ ಮೂಲಕ ಅರಿಯಬಹುದು. ಕೌರವರಿಗೂ, ಪಾಂಡವರಿಗೂ ದ್ರೋಣಾಚಾರ್ಯರೇ ಗುರುಗಳು. ಅವರು ಇಬ್ಬರಿಗೂ ಸಮಾನ ಅವಕಾಶ ಮತ್ತು ತರಬೇತಿ ನೀಡಿದ್ದರು. ವಿದ್ಯೆ ಕಲಿಸಿದ್ದರು. ಕೌರವರು ಗುರುಗಳ ವಿದ್ಯೆಯನ್ನು ಲೆಕ್ಕಿಸದೆ ತಾವೇ ಶ್ರೇಷ್ಠ, ಮೇಲು ಎಂಬ ರೀತಿಯಲ್ಲಿ ಅಹಂಕಾರ ಪ್ರದರ್ಶಿಸಿದರು. ಆದರೆ ಪಾಂಡವರು ಎಲ್ಲರೊಂದಿಗೆ ವಿಧೇಯರಾಗಿದ್ದರು. ಮಹಾಭಾರತ ಯುದ್ಧ ಸಂದರ್ಭದಲ್ಲಿ ದ್ರೋಣಾಚಾರ್ಯರು ಕೌರವರ ಪರವಿದ್ದರೂ ಪಾಂಡವರ ಹಿತ ಬಯಸಿದರು. ಕೌರವರಿಗೆ ಸದ್ಧರ್ಮದ ಮಾರ್ಗದಲ್ಲಿ ನಡೆಯಲು ಕೃಷ್ಣ ಅನೇಕ ಅವಕಾಶಗಳನ್ನು ಒದಗಿಸಿದ. ಕೊನೆಗೆ ಪಾಂಡವರಿಗೆ ಒಂದು ಗ್ರಾಮವನ್ನಾದರೂ ಬಿಟ್ಟು ಕೊಡು ಎಂದು ಕೇಳಿದ. ಆಗ ಕೊಡುವುದಕ್ಕಿಂತ ಪಡೆಯುವದರಲ್ಲಿಯೇ ಹೆಚ್ಚು ಲಾಲಸೆ ಹೊಂದಿದ್ದ ಕೌರವ ತುಂಡು ಭೂಮಿಯನ್ನೂ ಕೊಡುವುದಿಲ್ಲ ಎಂದು ಹೇಳಿದನು. ಬಹುಶಃ ಕೊಟ್ಟಿದ್ದರೆ ಪಾಂಡವರು-ಕೌರವರು ಇಬ್ಬರೂ ಸುಖವಾಗಿ ಇರುತ್ತಿದ್ದರೋ ಏನೋ ಎಂಬ ಅನಿಸಿಕೆ ನಮಗೆ ಬರುತ್ತದೆ. ಆದರೆ ಕೌರವರು ಇನ್ನೂ ಪಡೆಯಬೇಕೆಂಬ ಹಠದಿಂದ ಇದ್ದುದನ್ನೂ ಕಳೆದುಕೊಂಡರಲ್ಲದೆ ಗತಿಸಿಹೋದರು. ಆದರೆ ದಾನ ಗುಣ ಹೊಂದಿದ್ದ ಪಾಂಡವರು ಎಷ್ಟೇ ಕಷ್ಟನಷ್ಟಗಳಾದರೂ ಸದ್ಧರ್ಮದ ಹಾದಿಯಲ್ಲಿ ನಡೆದು ಅವಕಾಶಗಳನ್ನು ಸದ್ಬಳಕೆ ಮಾಡಿ ಧರ್ಮಯುದ್ಧದಲ್ಲಿ ವಿಜಯಿಯಾದರು.

    ಗಡಿಯಾರದ ಮುಳ್ಳು ತಿರುಗುತ್ತಿರುವಂತೆ ನಮ್ಮ ಜೀವನಚಕ್ರ ಸಾಗುತ್ತಿರುತ್ತದೆ. ಈ ಪಥದಲ್ಲಿ, ಸೋಲು-ಗೆಲುವು, ನೋವು-ನಲಿವು, ಕಷ್ಟ-ನಷ್ಟ ಸರ್ವೆ ಸಾಮಾನ್ಯ. ಬೆಳಕು ಕಾಣಬೇಕು ಎಂದರೆ ಇರುಳು ಆಗಲೇಬೇಕು. ಅಂತೆಯೇ ಜೀವನದಲ್ಲಿ ಸಾಧಿಸಬೇಕು ಎಂದರೆ ಸೋಲಿನ ರುಚಿ ಕಾಣಬೇಕಾದ ಸಂದರ್ಭವೂ ಒದಗಿಬರುತ್ತದೆ. ರಾತ್ರಿ ಬೆಳಗಾಗುವುದರೊಳಗೆ ಯಾರೂ ಯಶಸ್ಸಿನ ತುತ್ತತುದಿಗೆ ಏರಲಾರರು. ಪರಿಶ್ರಮದ ಹಾದಿಯೇ ಗೆಲುವಿನ ಗುಟ್ಟು. ಕತಾರ್​ನಲ್ಲಿ ನಡೆದ ಫುಟ್​ಬಾಲ್ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಗೆಲುವು ಎನ್ನುವುದು ಪರಿಶ್ರಮದ ಫಲ. ಅದಕ್ಕೆ ನಮ್ಮ ಹಿರಿಯರು ‘ಬರೀ ಅದೃಷ್ಟವನ್ನು ನಂಬಿ ಕೂರಬೇಡಿ, ಪರಿಶ್ರಮಪಟ್ಟು ದುಡಿಯಿರಿ’ ಎಂದಿರುವುದು.

    ದೇಶವನ್ನು ಸದೃಢವಾಗಿ ಕಟ್ಟಲು, ಮುನ್ನಡೆಸಲು ಅನೇಕರ ಪರಿಶ್ರಮ, ತ್ಯಾಗ, ಬಲಿದಾನಗಳಿರುತ್ತವೆ. ಕಳೆದೊಂದು ವರ್ಷದಿಂದ ಯೂಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಲೇ ಇದ್ದು ಅದೆಷ್ಟೋ ಸಾವು-ನೋವುಗಳಾಗಿವೆ. ಸಂಪತ್ತಿನ ನಾಶವಾಗಿದೆ. ಈ ಯುದ್ಧವನ್ನು ಕೊನೆಗೊಳಿಸಲು ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಪ್ರಯತ್ನಿಸಿವೆಯಾದರೂ ಸಫಲತೆ ಕಾಣಲಿಲ್ಲ ಎಂಬುದು ಬೇಸರದ ಸಂಗತಿ. ಈಗ ಆ ಕದನ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಹಾಗೂ ವಿಶ್ವದ ಅನೇಕ ರಾಷ್ಟ್ರಗಳಿಗೆ ಸಂಕಷ್ಟಕ್ಕೆ ಕಾರಣವಾಗಿದೆ. ಎರಡೂ ರಾಷ್ಟ್ರಗಳು ಸಂಯಮ ಕಾಪಾಡಿಕೊಂಡು ಕೊಡುವುದರ ಮತ್ತು ಬಿಡುವುದರ ಬಗ್ಗೆ ರ್ಚಚಿಸಿದ್ದರೆ ಈ ಅನಾಹುತ, ಸಾವು-ನೋವು ಸಂಭವಿಸುತ್ತಿರಲಿಲ್ಲವೇನೋ.

    ಯುದ್ಧ, ಕರೊನಾದಂತಹ ಸಾಂಕ್ರಾಮಿಕ ರೋಗ, ಅಫ್ಘಾನಿಸ್ತಾನ-ತಾಲಿಬಾನ್ ಸಂಘರ್ಷ, ನೆರೆಯ ಶ್ರೀಲಂಕಾದಲ್ಲಿನ ರಾಜಕೀಯ ಪಲ್ಲಟ, ಆರ್ಥಿಕ ಅಧಃಪತನ, ಅತಿವೃಷ್ಟಿ-ಅನಾವೃಷ್ಟಿ, ಪ್ರಾಕೃತಿಕ ವಿಕೋಪಗಳು, ಭಯೋತ್ಪಾದನೆ, ಅಪಘಾತಗಳು ಮುಂತಾದ ದುರ್ಘಟನೆಗಳು ಘಟಿಸಿವೆ. ಕಾಮನ್​ವೆಲ್ತ್ ಗೇಮ್್ಸ, ಸ್ವದೇಶಿ ನಿರ್ವಿುತ ಐಎನ್​ಎಸ್ ವಿಕ್ರಾಂತ್ ಲೋಕಾರ್ಪಣೆ, ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು, ಗ್ರಾಮೀಣ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗಿನ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಣ, ಮುಂದಿನ ಒಂದು ವರ್ಷದವರೆಗೆ ಜಿ-20 ರಾಷ್ಟ್ರಗಳ ಅಧ್ಯಕ್ಷೀಯ ಪಟ್ಟ ಹೀಗೆ ಹಲವು ಸಕಾರಾತ್ಮಕ ಬೆಳವಣಿಗೆಗಳನ್ನು ಸಹ ನಮ್ಮ ರಾಷ್ಟ್ರ ಕಂಡಿದೆ. ಅನೇಕ ರಾಷ್ಟ್ರಗಳು ಸಂಕಷ್ಟ ಎದುರಿಸುತ್ತಿದ್ದಾಗ ಭಾರತ ಅವುಗಳಿಗೆ ಸಹಾಯಹಸ್ತ ಚಾಚಿದೆ. ಇದು ಅಭಿಮಾನದ ಸಂಗತಿ. ಬೇವು -ಬೆಲ್ಲದಂತೆ ಕೆಡುಕೂ ಆಗಿದೆ, ಒಳಿತೂ ಆಗಿದೆ. ಇವೆಲ್ಲದರ ನಡುವೆ ಪ್ರಕೃತಿಯನ್ನು ಸಂರಕ್ಷಿಸಬೇಕೆಂಬ ಕೂಗು ವಿಶ್ವದೆಲ್ಲೆಡೆ ಕೇಳಿಬರುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡ ‘ನಾವು ಪ್ರಕೃತಿಯಿಂದ ಪಡೆಯುವುದಷ್ಟೇ ಆಗಬಾರದು. ಪ್ರಕೃತಿಗೆ ನಾವು ಏನನ್ನು ಕೊಡುತ್ತೇವೆ ಎಂಬುದರ ಬಗ್ಗೆಯೂ ಆಲೋಚಿಸಬೇಕು’ ಎಂಬುದನ್ನು ಒತ್ತಿ ಹೇಳಿದ್ದಾರೆ.

    ಜೀವನದುದ್ದಕ್ಕೂ ನಾವು ಪ್ರಕೃತಿಯಿಂದ ಪಡೆದುಕೊಳ್ಳುತ್ತೇವೆ. ಆದರೆ ಪ್ರಕೃತಿಗೆ ಏನನ್ನು ಹಿಂದಿರುಗಿಸಿದ್ದೇವೆ; ಅದರ ಉಳಿವಿಗೆ, ಬೆಳವಣಿಗೆಗೆ ನಾವೆಷ್ಟು ಕೆಲಸ ಮಾಡಿದ್ದೇವೆ ಎಂಬ ಬಗ್ಗೆಯೂ ಪರಾಮಶಿಸಬೇಕಾಗುತ್ತದೆ. ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ವಾಯುಮಾಲಿನ್ಯ ಮಿತಿಮೀರಿದ್ದು, ಜನಜೀವನ ನಡೆಸುವುದೇ ಕಷ್ಟವಾಗಿದೆ. ಪ್ರಕೃತಿಯನ್ನು ಶುಚಿಯಾಗಿಟ್ಟುಕೊಳ್ಳುವ ಹೊಣೆ, ಜವಾಬ್ದಾರಿ ನಮ್ಮದು ಎನ್ನುವ ಚಿಂತನೆ ಎಲ್ಲರಲ್ಲೂ ಬರಬೇಕು. ಇತ್ತೀಚೆಗೆ ನಡೆದ ಫುಟ್​ಬಾಲ್ ವಿಶ್ವಕಪ್​ನಲ್ಲಿ ಜಪಾನಿಯರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅನೇಕರು ಈ ಕಾರ್ಯವನ್ನು ಶ್ಲಾಘಿಸಿದರು. ಹಲವು ದೇಶದವರು ಪಂದ್ಯಾಟದಲ್ಲಿ ಭಾಗವಹಿಸಿದ್ದರೂ ಜಪಾನಿಯರು ಮಾತ್ರ ಕೀಡಾಂಗಣವನ್ನು ಶುಚಿಗೊಳಿಸುವುದರ ಮೂಲಕ ಸ್ವಚ್ಛತೆಯ ಪ್ರಾಮುಖ್ಯ ಸಾರಿದರು. ಅವರ ಸ್ವಚ್ಛತೆಯ ಕಾಳಜಿ ವಿಶ್ವಕ್ಕೆ ಮಾದರಿಯಾಗಿದೆ.

    ಹೊಸ ವರ್ಷದ ಈ ಸಂದರ್ಭದಲ್ಲಿ ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕು. ಪೂರ್ವಜರು ಹಾಕಿಕೊಟ್ಟ ಪಥದಲ್ಲಿ ಮುನ್ನಡೆಯುತ್ತಿರುವ ನಾವು ಹಿಂದಿನ ದಾರಿಯನ್ನು ಮರೆಯದೆ ಲೋಕದ ಹಿತಕ್ಕಾಗಿ ಜೊತೆಯಾಗಿ ಸಾಗಬೇಕು. ತಪ್ಪುಗಳಿಂದ ಅನುಭವ ಪಡೆದು, ಉತ್ಸಾಹ, ಧ್ಯೇಯದೊಂದಿಗೆ ಜೀವನದಲ್ಲಿ ಹೊಸ ಹೆಜ್ಜೆ ಇಡಬೇಕು. ಈ ದಿನ, ಈ ಕ್ಷಣವನ್ನು ಪ್ರೀತಿಸುವುದನ್ನು ಕಲಿಯಬೇಕು. ಅದನ್ನು ಜೀವಿಸಬೇಕು. ‘ಪರೋಪಕಾರಂ ಇದಂ ಶರೀರಂ’ ಎನ್ನುವಂತೆ ಇತರರಿಗೆ ಕಿಂಚಿತ್ತಾದರೂ ಒಳ್ಳೆಯದು ಬಯಸುವ ಗುಣ ಬೆಳೆಸಿಕೊಳ್ಳಬೇಕು. ಉಪಕಾರ ಮಾಡಬೇಕು. ‘ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ’ ಎಂಬ ನುಡಿ ಜನಜನಿತ. ಕೊಡುವುದು ಎಂದರೆ ತನ್ನಲ್ಲಿದ್ದದ್ದನೆಲ್ಲ ದಾನ ಮಾಡಿ ಕೈ ಖಾಲಿ ಮಾಡಿಕೊಳ್ಳುವುದು ಎಂದರ್ಥವಲ್ಲ. ದುಡಿಮೆಯ ಒಂದಷ್ಟು ಭಾಗವನ್ನು ಅರ್ಹರಿಗೆ ದಾನ ಮಾಡುವುದು ಪುಣ್ಯದಾಯಕ ಎಂಬುದು ಹಿರಿಯರ ನಂಬಿಕೆ. ಏನು ಕೊಡುತ್ತೇವೆಯೋ ಅದರ ದುಪ್ಪಟ್ಟು ಒದಗಿ ಬರುತ್ತದೆ ಎಂಬ ಮಾತೂ ಇದೆ. ಹಾಗಾಗಿ ‘ಒಳ್ಳೆಯದನ್ನು ಮಾಡು ಒಳ್ಳೆಯದನ್ನು ಬಯಸು’ ಎಂದು ಹೇಳುವುದು. ಪಡೆಯುವುದಕ್ಕಿಂತ ಕೊಡುವ ಮನಸ್ಸುಳ್ಳವರು ಶ್ರೇಷ್ಠರೆನಿಸಿಕೊಳ್ಳುತ್ತಾರೆ.

    ದೇವರು ದಯಾಮಯ. ಅನುಕಂಪ ಉಳ್ಳವ. ಸಿರಿವಂತನೂ ಹೌದು. ತಿರುಪತಿ ತಿಮ್ಮಪ್ಪ ಬಹಳ ಶ್ರೀಮಂತ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಅನುಗ್ರಹದಲ್ಲಿ ಬಹಳ ಶ್ರೀಮಂತ. ‘ದೇವರು ನನಗೇನು ಕೊಟ್ಟ’ ಅಂತ ಕೇಳಿದರೆ ಪ್ರತ್ಯಕ್ಷವಾಗಿ ದೇವರು ಏನನ್ನೂ ಕೊಡಲು ಆಗುವುದಿಲ್ಲ. ಆದರೆ ಪರೋಕ್ಷವಾಗಿ ನಮಗೆ ದಯಪಾಲಿಸಬಹುದು. ಅದನ್ನೇ ನಾವು ‘ಅನುಗ್ರಹ’ ಎಂದು ಹೇಳುತ್ತೇವೆ. ಆದರೆ ಸಾಧನೆ ಮಾಡದ ಮನುಷ್ಯನಿಗೆ ಅನುಗ್ರಹ ಕೊಡಲು ಆಗುವುದಿಲ್ಲ. ಯಾರಾದರೂ ಸಾಧನೆ ಮಾಡುತ್ತಾ ಹೋದರೆ ಅಂತಹವರಿಗೆ ದೇವರು ಹೇಳಬಹುದು, ‘ನೀನು ಅದೇ ದಾರಿಯಲ್ಲಿ ಮುನ್ನಡೆ, ನಿನ್ನನ್ನು ಗುರಿ ಮುಟ್ಟಿಸುತ್ತೇನೆ.’ ಗುರಿ ಮುಟ್ಟಿಸುವ ಕೆಲಸ ದೇವರದ್ದಾದರೆ, ಗುರಿ ಇಟ್ಟುಕೊಳ್ಳುವ ಕೆಲಸ ನಮ್ಮದಾಗಿರುತ್ತದೆ. ಗುರಿ ಇಲ್ಲದವರನ್ನು ನಾನು ಗುರಿ ಮುಟ್ಟಿಸುತ್ತೇನೆ ಎಂದು ಯಾರಾದರೂ ಹೇಳಿದರೆ ಆತನನ್ನು ಹೊತ್ತುಕೊಂಡು ಹೋಗಬೇಕಾಗುತ್ತದೆ. ಅಂದರೆ ಮುನ್ನಡೆಸಿಕೊಂಡು ಹೋಗಬೇಕಾದರೆ ಅವನಲ್ಲಿ ಸ್ಪಷ್ಟವಾದ ಗುರಿ ಬೇಕು. ಅಂದಾಗ ದೇವರು ಖಂಡಿತಾ ಅನುಗ್ರಹ ಕೊಡುತ್ತಾನೆ. ದೇವರಿಗೂ ಸದ್ಧರ್ಮದಲ್ಲಿ ನಡೆಯುವ ಭಕ್ತರನ್ನು ಅನುಗ್ರಹಿಸುವುದು ಹಾಗೂ ಕೊಡುವುದು ಎಂದರೆ ಅತ್ಯಂತ ಪ್ರಿಯವಾದ ಕಾರ್ಯ. ಭಕ್ತರಿಂದ ಕಿಂಚಿತ್ತು ಭಕ್ತಿಯನ್ನು ಪಡೆದರೂ ಯಥೇಚ್ಛವಾದ ಅನುಗ್ರಹವನ್ನು ದೇವರು ಒದಗಿಸುತ್ತಾನೆ.

    ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತಾ್ಯ ಪ್ರಯಚ್ಛತಿ|
    ತದಹಂ ಭಕ್ತು್ಯ ಪಹೃತಂ ಆಶ್ನಾಮಿ ಪ್ರಿಯತಾತ್ಮನಃ||

    ‘ಎಲೆಯನ್ನಾಗಲಿ, ಹೂವನ್ನಾಗಲಿ, ಹಣ್ಣನ್ನಾಗಲಿ, ನೀರನ್ನಾಗಲಿ ಭಕ್ತಿಯಿಂದ ಸಮರ್ಪಿಸಿದ್ದನ್ನು ನಾನು ಸ್ವೀಕರಿಸುತ್ತೇನೆ’ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ ಚಿತ್ತಶುದ್ಧಿ, ಶ್ರದ್ಧೆ, ಸಮರ್ಪಣಾ ಭಾವನೆಯೇ ಭಕ್ತಿ ಎನಿಸುತ್ತದೆ.

    ಜೀವನದಲ್ಲಿ ಚಿಕ್ಕಪುಟ್ಟ ವಿಷಯಗಳು ಸಹ ಹೆಚ್ಚು ಖುಷಿ, ಜೀವನೋತ್ಸಾಹ ತುಂಬುತ್ತವೆ. ಗೌರವ, ಉಡುಗೊರೆ, ಪ್ರೀತಿ, ವಿಶ್ವಾಸ, ನಂಬಿಕೆ ಅಥವಾ ಸಮಯವೇ ಆಗಿರಬಹುದು, ಅದನ್ನು ನಮ್ಮವರಿಗಾಗಿ ಮೀಸಲಿಟ್ಟಾಗ ಉಂಟಾಗುವ ಆನಂದಕ್ಕೆ ಪಾರವೇ ಇರುವುದಿಲ್ಲ. ನಿತ್ಯ ಜೀವನದ ಜಂಜಡದಲ್ಲಿ ಒತ್ತಡಕ್ಕೆ ಒಳಗಾಗದೆ, ದೈಹಿಕ-ಮಾನಸಿಕ ಆರೋಗ್ಯ ಕಾಪಾಡಿಕೊಂಡು ದೇವರಲ್ಲಿ ನಿಸ್ವಾರ್ಥ ಭಕ್ತಿ ಇಟ್ಟು ಸಮಾಜಕ್ಕೆ ಕೊಡುಗೆ ನೀಡುತ್ತಾ ಸಂತೃಪ್ತ ಜೀವನ ನಡೆಸೋಣ.

    ನೂತನ ವರ್ಷ 2023ನ್ನು ಸ್ವಾಗತಿಸುತ್ತಾ, ಸ್ಪಷ್ಟ ಹಾಗೂ ನಿರ್ದಿಷ್ಟ ಗುರಿಯನ್ನು ಹೊಂದೋಣ. ವರ್ಷಾಚರಣೆ ಮೋಜಿಗೆ ಮೀಸಲಾಗಿರದೆ ಬದುಕಿನ ಸಾರ್ಥಕತೆ ಕಡೆಗೂ ಗಮನವಿರಲಿ. ಸರ್ವರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts