More

    ಸರ್ವತ್ರ ಇರುವ ದೇವರ ಕಾಣುವ ಬಗೆ…

    ಸರ್ವತ್ರ ಇರುವ ದೇವರ ಕಾಣುವ ಬಗೆ…ಕತ್ತಲನ್ನು ಓಡಿಸಬೇಕಾದರೆ ಬೆಳಕು ಬೇಕು. ಬೆಳಕನ್ನು ಪ್ರಜ್ವಲಿಸುವುದಕ್ಕಾಗಿ, ಅಥವಾ ಬೆಳಕನ್ನು ವಿಶೇಷವಾಗಿ ಗೌರವಿಸುವುದಕ್ಕಾಗಿ ಕತ್ತಲು ಬೇಕಿಲ್ಲ. ನಮ್ಮ ದೀಪಾವಳಿ ಹಬ್ಬ ಅಥವಾ ಕಾರ್ತಿಕಮಾಸದ ಅಮಾವಾಸ್ಯೆ ಎಲ್ಲಾ ಉತ್ತಮ ದಿನಗಳು ಕೂಡ ಹೇಗೆ ಪರಿಗಣಿಸಲ್ಪಡುತ್ತದೆ ಎಂದರೆ ಕಾರ್ಗತ್ತಲ ಅಮಾವಾಸ್ಯೆಯಿಂದ ಪ್ರಾರಂಭವಾಗಿ ಬೆಳದಿಂಗಳು ಚೆಲ್ಲುವ ಹುಣ್ಣಿಮೆಯ ಪೂರ್ಣಚಂದ್ರ ಕಾಣಿಸಿಕೊಳ್ಳುವತನಕ.

    ದೇವರ ಕುರಿತಾಗಿ ಎಷ್ಟು ಹೇಳಿದರೂ ಮುಗಿಯದು. ಶಾಸ್ತ್ರ, ಪುರಾಣ, ಆಧಾರ ಗ್ರಂಥ ಹೀಗೆ ನಮ್ಮಲ್ಲಿ ದೇವರ ಕುರಿತಾಗಿ ನಾನಾ ವಿಷಯಗಳನ್ನು ತಿಳಿಸಲಾಗಿದೆ. ಈಗಲೂ ದೇವರು ಇದ್ದಾನೆಯೇ? ಇಲ್ಲವೇ ಎಂಬ ಚರ್ಚೆಗಳು ಚಾಲ್ತಿಯಲ್ಲಿದ್ದು, ವಿದೇಶಗಳಲ್ಲಿ ವೈಜ್ಞಾನಿಕವಾಗಿಯೂ ದೇವರನ್ನು ಹುಡುಕುವ ಕಾರ್ಯಗಳು ನಡೆದಿರುವ ಬಗ್ಗೆ ಓದಿದ್ದೇನೆ. ಸರಳವಾಗಿ ಹೇಳುವುದಾದರೆ- ಆಸ್ತಿಕರಿಗೆ ದೇವರಿದ್ದಾನೆ. ನಾಸ್ತಿಕರಿಗೆ ದೇವರು ಇಲ್ಲ. ಅದು ನಂಬಿಕೆಗೆ ಅನ್ವಯಿಸಿರುವುದು. ಆದ್ದರಿಂದ ನಂಬಿಕೆಯೇ ದೇವರು ಎನ್ನಬಹುದು.

    ನಮ್ಮ ಸನಾತನ ಧರ್ಮವು ದೇವರನ್ನು ಕಾಣುವ ಬಗೆಯನ್ನು ಪ್ರಚುರಪಡಿಸಿದೆ. ಭಗವಂತನು ಅಣು, ರೇಣು, ತೃಣ, ಕಾಷ್ಠಗಳಲ್ಲಿ ತುಂಬಿದ್ದು ಸರ್ವಾಂತರ್ಯಾಮಿಯಾಗಿರುವವನು ಎಂಬ ಮಾತಿನಂತೆ ಎಲ್ಲೆಲ್ಲಿಯೂ ದೇವರನ್ನೇ ಕಾಣಬಹುದಾಗಿದೆ. ಗಿಡ, ಮರ, ಬಳ್ಳಿ, ಮಣ್ಣು, ಆಕಾಶ, ನೀರು, ಬೆಂಕಿ ಇವುಗಳಲ್ಲಿ ನಾವು ದೇವರನ್ನು ಕಾಣುತ್ತೇವೆ. ಪ್ರಕೃತಿಯಲ್ಲಿ, ಅದರಲ್ಲಿರುವ ಸಕಲ ಜೀವರಾಶಿಗಳಲ್ಲಿ ದೇವರನ್ನು ಕಾಣುತ್ತೇವೆ. ಆದರೆ, ಇವುಗಳಲ್ಲಿ ದೇವರ ಇರುವಿಕೆ ಕಾಣಲು ಎಲ್ಲರಿಗೂ ಸಾಧ್ಯವಾಗಲಾರದು. ಯಾಕೆಂದರೆ ದೇವರನ್ನು ಕಾಣಲು ಶ್ರದ್ಧೆ, ಭಕ್ತಿಯ ಜೊತೆಗೆ ದೃಢ ನಂಬಿಕೆಯಿರಬೇಕು.

    ‘ನಂಬಿ ಕರೆದರೆ ಓ ಎನ್ನನೇ ಶಿವನು’ ಎಂಬ ಮಾತು ಜನಜನಿತ. ಕೋಳೂರಿನ ಕೊಡಗೂಸು, ಭಕ್ತ ಪ್ರಹ್ಲಾದ, ಮಾರ್ಕಂಡೇಯ, ನಚಿಕೇತ, ಹೀಗೆ ಅನೇಕರು ಭಕ್ತಿಯಿಂದ ಭಗವಂತನ ಸಾಕ್ಷಾತ್ಕಾರ ಪಡೆದಿರುವ ಬಗ್ಗೆ ಓದಿದ್ದೇವೆ. ನಂಬಿ ಕರೆದ ಕೂಡಲೇ ದೇವರು ಬರುತ್ತಾನೆಯೇ ಎಂದು ಕೇಳಬಹುದು. ಉದಾಹರಣೆಗೆ ರಸ್ತೆ ದಾಟಲು ಪ್ರಯತ್ನಪಡುತ್ತಿದ್ದ ವ್ಯಕ್ತಿ ಹೇಳುತ್ತಾನೆ-‘ಆತ ಯಾರೋ ಏನೋ ಪುಣ್ಯಾತ್ಮ, ದೇವರ ಹಾಗೆ ಬಂದು ನನ್ನನ್ನು ರಸ್ತೆ ಬದಿಗೆ ಎಳೆದ. ಇಲ್ಲದಿದ್ದಲ್ಲಿ ಆ ಲಾರಿ ನನಗೆ ಗುದ್ದಿ, ಈ ಹೊತ್ತಿಗೆ ನಾನು ಹೆಣವಾಗಿದ್ದಿರಬೇಕಾಗುತ್ತಿತ್ತು’ ಎಂದು. ಇಂತಹ ಅನುಭವಗಳು ಬಹುತೇಕರಿಗೆ ಆಗಿರಬಹುದು. ಕಷ್ಟ, ಆಪತ್ಕಾಲದ ಸಂದರ್ಭಗಳಲ್ಲಿ ಸ್ವತಃ ದೇವರು ಬರುತ್ತಾನೋ ಇಲ್ಲವೋ. ಆದರೆ, ಯಾರು ನಿಜವಾಗಿ ದೇವರ ಮೇಲೆ ನಂಬಿಕೆ ಶ್ರದ್ಧೆಯನ್ನಿಸಿಕೊಳ್ಳುತ್ತಾರೋ ಅವರ ಕಷ್ಟವು ಒಂದಲ್ಲ ಒಂದು ರೀತಿಯಲ್ಲಿ ಪರಿಹಾರವಾಗುವುದು, ಆಪತ್ತಿನಿಂದ ಪಾರಾಗುವುದಂತೂ ಸತ್ಯ.

    ಕುರುಡನೊಬ್ಬ ನಿತ್ಯವೂ ದೇವಾಲಯಕ್ಕೆ ಹೋಗುತ್ತಿದ್ದ. ದೇವರಿಗೆ ಪ್ರದಕ್ಷಿಣೆ ಹಾಕಿ ದೇವರ ಮುಂದೆ ಸ್ವಲ್ಪ ಹೊತ್ತು ನಿಂತು ಆತ್ಮತೃಪ್ತನಾಗಿ ತೆರಳುತ್ತಿದ್ದ. ಇದನ್ನು ಪ್ರತಿ ದಿನ ಗಮನಿಸುತ್ತಿದ್ದ ಒಬ್ಬರು, ‘ನೋಡಪ್ಪಾ ದೃಷ್ಟಿ ಇಲ್ಲದ ನೀನು ದೇವರನ್ನು ಕಾಣಲಾರೆ, ಯಾವ ಕಾರಣಕ್ಕಾಗಿ ಬರುತ್ತಿದ್ದೀಯ’ ಎಂದು ಕೇಳಿದರು. ಆಗ ಆ ಅಂಧ, ‘ನಾನು ದೇವರನ್ನು ಕಾಣುವುದು ಮುಖ್ಯವಲ್ಲ, ನನ್ನನ್ನು ದೇವರು ನೋಡುವುದು ಮುಖ್ಯ. ದೇವರ ದೃಷ್ಟಿ ನನ್ನ ಮೇಲೆ ಬಿದ್ದು ಮುಂದಿನ ಜನ್ಮದಲ್ಲಾದರೂ ದೃಷ್ಟಿ ಬರಲಿ. ಮತ್ತು ಈ ಜನ್ಮದಲ್ಲಿ ನಾನು ಮಾಡಿದ ಯಾವುದೇ ಪಾಪವಿದ್ದರೂ ಪರಿಹಾರವಾಗಲಿ ಎಂದು ಬರುತ್ತೇನೆ’ ಎಂದು ಹೇಳುತ್ತಾನೆ.

    ನಾವು ದೇವರನ್ನು ನೋಡುವುದಕ್ಕೂ, ದೇವರು ನಮ್ಮನ್ನು ನೋಡುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಅನೇಕ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಹೋದಾಗ, ಗರ್ಭಗುಡಿ ಸಮೀಪ ಹೋಗುವವರೆಗೂ ಚಂಚಲ, ವಿಚಲಿತರಾಗಿರುತ್ತೇವೆ. ಕೆಲವರು ಮಾತನಾಡುತ್ತಿರುತ್ತಾರೆ, ಹಾಸ್ಯ ಮಾಡುತ್ತಿರುತ್ತಾರೆ. ಧರ್ಮಸ್ಥಳದಲ್ಲಿ ದೇವರ ಬಳಿ ಹೋಗಿ ನಿಂತಾಗ ಎಷ್ಟೋ ಮಂದಿ ಅವಸರವಸರವಾಗಿ ಓಡುವುದನ್ನು ನೋಡಿದ್ದೇನೆ. ಕೆಲವರು ಕೈ ಮುಗಿಯದೆ ನೇರ ಹೋಗುತ್ತಾರೆ. ಕೆಲವರು ಎದೆಗೆ ಕೈಯಿಂದ ಮುಟ್ಟಿ ದೇವರನ್ನು ನೋಡದೆ ಹೋಗುತ್ತಾರೆ. ಸರತಿ ಸಾಲಿನಲ್ಲಿ ಐದು-ಆರು ತಾಸು ನಿಂತರೂ ಒಂದು ಕ್ಷಣ ಭಗವಂತನನ್ನು ಕಣ್ತುಂಬಿಕೊಳ್ಳುವ ಸಹನೆ ಇರುವುದಿಲ್ಲ. ಆದರೆ ಕೆಲವರು, ಸರಿಯಾಗಿ ದೇವರ ದರ್ಶನ ಮಾಡಲಿಲ್ಲ ಎಂಬ ಕಾರಣಕ್ಕೆ ಮತ್ತೆ ಹಿಂದೆ ಬರುವುದಿದೆ.

    ಒಂದು ಬಾರಿ ಕೃಷ್ಣ ಕನ್ನಡಿ ಮುಂದೆ ನಿಂತು ಅಲಂಕರಿಸಿಕೊಳ್ಳುತ್ತಿದ್ದನಂತೆ. ಸೇವಕ, ‘ಯಾಕೆ ಸ್ವಾಮಿ? ಎಷ್ಟೊಂದು ಸಮಯದಿಂದ ಅಲಂಕಾರ ಮಾಡಿಕೊಳ್ಳುತ್ತಿದ್ದೀರಿ. ಏಕಾಗ್ರತೆಯಿಂದ ನಿಮ್ಮನ್ನು ನೀವು ಅಲಂಕಾರ ಮಾಡುವುದನ್ನು ನೋಡಿಲ್ಲ. ಇಂದು ಏನು ವಿಶೇಷ?’ ಎಂದು ಕೇಳಿದನಂತೆ. ಸ್ತ್ರೀಲೋಲನಾದ ಕೃಷ್ಣ ಹೊಸ ಗೋಪಿಯನ್ನು ನೋಡಲು ಹೋಗುವ ತಯಾರಿಯಾಗಿರಬಹುದು ಎಂಬ ಅನಿಸಿಕೆಯಿಂದ ಸೇವಕ ಕೇಳಿರುತ್ತಾನೆ. ಕೃಷ್ಣ, ‘ದುರ್ಯೋಧನನನ್ನು ಮಾತನಾಡಿಸುವ ಸಂದರ್ಭ ಇದೆ. ಅದಕ್ಕಾಗಿ ಅಲಂಕಾರ ಮಾಡುತ್ತಿದ್ದೇನೆ’ ಎಂದನಂತೆ. ಸೇವಕ ಆಶ್ಚರ್ಯದಿಂದ, ‘ದುರ್ಯೋಧನನ ಭೇಟಿಗೂ ತಮ್ಮ ಅಲಂಕಾರಕ್ಕೂ ಏನು ಸಂಬಂಧ’ ಎಂದು ಕೇಳುತ್ತಾನೆ. ಆಗ ಶ್ರೀ ಕೃಷ್ಣ, ‘ನೋಡು ಎಲ್ಲಾ ಭಕ್ತರು, ಆತ್ಮೀಯರು ನನ್ನ ಅಂತರಂಗವನ್ನು ದರ್ಶನ ಮಾಡುತ್ತಾರೆ. ಹಾಗಾಗಿ ಅಲಂಕಾರ ಬೇಡ. ಆದರೆ, ದುರ್ಯೋಧನನಿಗೆ ನನ್ನ ಮೇಲೆ ನಂಬಿಕೆ, ವಿಶ್ವಾಸ ಇಲ್ಲ. ಹಾಗಾಗಿ ವಿಶೇಷವಾಗಿ ಅಲಂಕಾರದ ಬಗ್ಗೆ ಗಮನ ಕೊಡುತ್ತಿದ್ದೇನೆ. ಇಲ್ಲದಿದ್ದರೆ ನನ್ನನ್ನು ಅವನು ತಾತ್ಸಾರ ಮಾಡಬಹುದು. ಅವಮಾನಿಸಬಹುದು’ ಎಂದ. ಆಗ ಸೇವಕ, ‘ನಿಮ್ಮಂತಹ ಧೀಮಂತ ವ್ಯಕ್ತಿ ದುರ್ಯೋಧನನ ಬಳಿ ಯಾಕಾಗಿ ಹೋಗುತ್ತೀರಿ? ದುರ್ಯೋಧನನೇ ನಿಮ್ಮ ಬಳಿ ಬಂದು ದರ್ಶನ ಮಾಡಬೇಕಲ್ಲವೆ‘ ಎಂದ. ಶ್ರೀ ಕೃಷ್ಣ, ‘ಕತ್ತಲೆ ಇದ್ದಲ್ಲಿ ಬೆಳಕು ಹೋದಾಗ ಕತ್ತಲೆ ಓಡಿ ಹೋಗುತ್ತದೆ. ಕತ್ತಲೆ ಬೆಳಕಿದ್ದೆಡೆ ಬಂದು ಪ್ರಜ್ವಲಿಸಿಕೊಳ್ಳುವುದಿಲ್ಲ. ನಾನು ದುರ್ಯೋಧನನ ಬಳಿ ಹೋಗುತ್ತಿರುವುದು ಆತನಲ್ಲಿರುವ ಅಧರ್ಮ, ಅಹಂಕಾರವನ್ನು ದೂರಮಾಡಲು’ ಎಂದು ಹೇಳುತ್ತಾನೆ.

    ಕತ್ತಲನ್ನು ಓಡಿಸಬೇಕಾದರೆ ಬೆಳಕು ಬೇಕು. ಬೆಳಕನ್ನು ಪ್ರಜ್ವಲಿಸುವುದಕ್ಕಾಗಿ, ಅಥವಾ ಬೆಳಕನ್ನು ವಿಶೇಷವಾಗಿ ಗೌರವಿಸುವುದಕ್ಕಾಗಿ ಕತ್ತಲು ಬೇಕಿಲ್ಲ. ನಮ್ಮ ದೀಪಾವಳಿ ಹಬ್ಬ ಅಥವಾ ಕಾರ್ತಿಕಮಾಸದ ಅಮಾವಾಸ್ಯೆ ಎಲ್ಲಾ ಉತ್ತಮ ದಿನಗಳು ಕೂಡ ಹೇಗೆ ಪರಿಗಣಿಸಲ್ಪಡುತ್ತದೆ ಎಂದರೆ ಕಾರ್ಗತ್ತಲ ಅಮಾವಾಸ್ಯೆಯಿಂದ ಪ್ರಾರಂಭವಾಗಿ ಬೆಳದಿಂಗಳು ಚೆಲ್ಲುವ ಹುಣ್ಣಿಮೆಯ ಪೂರ್ಣಚಂದ್ರ ಕಾಣಿಸಿಕೊಳ್ಳುವ ತನಕ. ಅಂದರೆ, ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವುದು ಶಾಸ್ತ್ರದ ವಿಚಾರವಾಗಿದೆ.

    ಭಗವಂತನ ಅಸ್ತಿತ್ವ ಹೇಗೆ ತಿಳಿಯಬೇಕು ಎನ್ನುವುದಕ್ಕೆ ಮತ್ತೊಂದು ಕಥೆ ನೆಪಾಗುತ್ತದೆ. ಒಬ್ಬ ವ್ಯಾಪಾರಿ ನಿತ್ಯವೂ ಮನೆಯಲ್ಲಿ ದೇವರ ಪೂಜೆ ಮಾಡುತ್ತಿದ್ದ. ತಲೆತಲಾಂತರದಿಂದ ವಿಷ್ಣುವಿನ ಆರಾಧನೆ ನಡೆದುಬಂದಿತ್ತು. ಒಂದು ಬಾರಿ ಆತನಿಗೆ, ‘ಇಷ್ಟು ವರ್ಷದಿಂದ ದೇವರ ಆರಾಧನೆ ಮಾಡುತ್ತಿದ್ದೇನೆ. ಆದರೆ, ವಿಷ್ಣು ನನಗೆ ಏನನ್ನು ನೀಡಿದ್ದಾನೆ, ನನಗೆ ಅವನಿಂದ ಏನು ಲಾಭ ಆಗಿದೆ? ಬೇರೆ ದೇವರನ್ನು ಪೂಜಿಸಿದರೆ ಲಾಭ ಆಗುತ್ತದೋ ಅಥವಾ ಪರಿವರ್ತನೆ ಆಗುತ್ತದೆಯೋ ನೋಡೋಣ’ಎಂದುಕೊಂಡು ಶಿವನ ಮೂರ್ತಿ ತಂದು ಇಟ್ಟನಂತೆ.

    ಅನೇಕ ವರ್ಷ ಶಿವಾರಾಧನೆ ಮಾಡಿದ ನಂತರ, ವಿಷ್ಣುವಿನಿಂದ ಏನೂ ಪರಿವರ್ತನೆ ಆಗಲಿಲ್ಲ. ಶಿವನಿಂದಲೂ ಆಗಲಿಲ್ಲ. ಇವರನ್ನು ಆರಾಧಿಸಿ ಪ್ರಯೋಜನವಿಲ್ಲ ಎಂದುಕೊಂಡು ದೇವಿಯನ್ನು ಆರಾಧಿಸತೊಡಗಿದ. ಕೆಲವು ವರ್ಷಗಳು ಹೋದ ಮೇಲೆ ಮತ್ತೆ ಚಿಂತಿತನಾಗುತ್ತಾನೆ. ಅವನ ಉದ್ಧಾರ ಮತ್ತು ಪ್ರಗತಿಯ ಕಲ್ಪನೆ ದಾರಿ ಬೇರೆಯಾಗಿತ್ತು. ದೇವಿಯ ಪೂಜೆ ಮುಂದುವರಿಸುತ್ತಿರುತ್ತಾನೆ. ಒಂದು ದಿನ ಪೂಜೆಯಲ್ಲಿ ಧೂಪದ ಹೊಗೆ ವಿಷ್ಣು ಹಾಗೂ ಶಿವನ ಮೂರ್ತಿಯ ಬಳಿ ಹೋಯಿತು. ಇವನು ಇದ್ದಕ್ಕಿದ್ದಂತೆ ‘ಇಷ್ಟು ದಿವಸ ಪೂಜೆ ಮಾಡಿದರೂ ನೀವು ನನಗೆ ಏನನ್ನೂ ಕೊಡಲಿಲ್ಲ. ಇಂದು ದೇವಿಗೆ ಪೂಜೆ ಸಲ್ಲಿಸುವಾಗ ಅವಳಿಗೆ ನೀಡಿದ ಧೂಪದಲ್ಲಿ ನಿಮಗೂ ಪಾಲು ತೆಗೆದುಕೊಳ್ಳುತ್ತಿದ್ದೀರಿ, ಅದರ ಫಲವನ್ನು ಅನುಭವಿಸುತ್ತಿದ್ದೀರಿ’ ಎಂದು ಹತ್ತಿಯನ್ನು ತಂದು ಶಿವ ಹಾಗೂ ವಿಷ್ಣುವಿನ ಮೂರ್ತಿಯ ಮೂಗಿಗೆ ಇಟ್ಟನಂತೆ.

    ತಕ್ಷಣ ದೇವರು ಪ್ರತ್ಯಕ್ಷನಾಗಿ, ‘ಏನು ಬೇಕು ನಿನಗೆ ಕೇಳು’ ಎಂದು ಪ್ರಶ್ನಿಸಿದ. ಇವನಿಗೆ ಆಶ್ಚರ್ಯವೋ ಆಶ್ಚರ್ಯ. ‘ಸ್ವಾಮಿ ನಾನು ನಿಮ್ಮನ್ನು ಕರೆಯಲಿಲ್ಲ, ನಿಮ್ಮನ್ನು ಪೂಜಿಸುತ್ತಿದ್ದ ಕಾಲಕ್ಕೆ ಪ್ರತ್ಯಕ್ಷರಾಗಲಿಲ್ಲ. ಆದರೆ ಇಂದು ನಾನು ದೇವಿಯ ಪೂಜೆ ಮಾಡುವಾಗ ಪ್ರತ್ಯಕ್ಷರಾದಿರಿ’ ಎಂದ. ಆಗ ದೇವರು, ‘ನೀನು ನಮ್ಮನ್ನು ಕೇವಲ ಮೂರ್ತಿ ಎಂದು ಭಾವಿಸಿ ಅಸ್ತಿತ್ವವನ್ನು ಗುರುತಿಸದೆ ಪೂಜಿಸಿದ್ದಿ. ಆದರೆ, ಇಂದು ಈ ಮೂರ್ತಿಯಲ್ಲಿ ನಮ್ಮ ಅಸ್ತಿತ್ವವನ್ನು ಗುರುತಿಸಿದೆ. ಸಾಕ್ಷಾತ್ ದೇವರು ಇಲ್ಲಿದ್ದಾನೆ ಎಂದು ಗುರುತಿಸಿದಂತಾಯಿತು. ಹಾಗಾಗಿ ನಾವು ಪ್ರತ್ಯಕ್ಷರಾಗಿದ್ದೇವೆ. ಏನು ವರಬೇಕು?’ ಎಂದು ಕೇಳಿದರು.

    ಏಕಾಗ್ರತೆ, ಭಕ್ತಿ, ಶ್ರದ್ಧೆ, ಪೂಜೆಗಳ ಆರಾಧನೆಗೆ ಸೂಚ್ಯವಾಗಿ ಮೂರ್ತಿ ಅಥವಾ ಫೋಟೋಗಳನ್ನು ಇಟ್ಟುಕೊಳ್ಳುತ್ತೇವೆ. ಹಳ್ಳಿಗಳಲ್ಲಿ ದೈವಾರಾಧನೆ ಮತ್ತು ಅನೇಕ ದೇವತೆಗಳ ಪೂಜೆ ಮಾಡುವಾಗ ಕೇವಲ ಒಂದು ಗುಂಡುಕಲ್ಲನ್ನು ಇಟ್ಟು ಆರಾಧನೆ ಮಾಡುತ್ತಾರೆ. ಈ ಕಲ್ಲು ನದಿಯ ಬಳಿ ಅಥವಾ ಅದು ಕಾಡಿನಲ್ಲಿ ದೊರೆತ ಕಲ್ಲಾಗಿರಬಹುದು. ತುಂಡಾದ ಕಲ್ಲಾಗಿರಬಾರದು ಅಷ್ಟೆ.

    ಲಾರಿಯೊಂದು ರಸ್ತೆಯಲ್ಲಿ ಸಾಗುತ್ತಿದ್ದಾಗ ಟಯರ್ ಪಂಕ್ಚರ್ ಆಗುತ್ತದೆ. ಚಾಲಕ ಟಯರ್ ಬದಲಿಸಲು ನಿರ್ಧರಿಸುತ್ತಾನೆ. ಲಾರಿಯ ಅಡಿಗೆ ಕಲ್ಲು ನೀಡಬೇಕಾದ ಕಾರಣ ಆ ಕಡೆ-ಈ ಕಡೆ ನೋಡಿದಾಗ ಒರಗಿಸಿದ್ದ ಚೆನ್ನಾಗಿದ್ದ ಕಲ್ಲು ಕಾಣುತ್ತದೆ. ಅದನ್ನು ಲಾರಿಗೆ ಆಧಾರವಾಗಿ ನೀಡಿ, ಚಕ್ರ ಬದಲಾಯಿಸಿದ ಮೇಲೆ ಮತ್ತೆ ಯಥಾಜಾಗದಲ್ಲಿ ಇಡುತ್ತಾನೆ. ಅದೇ ಕಲ್ಲನ್ನು ಊರಿನವರು ದೇವರೆಂದು ನಂಬಿಕೊಂಡು ಪೂಜಿಸಿಕೊಂಡು ಬರುತ್ತಿದ್ದರು. ಈ ವಿಷಯ ಆ ಚಾಲಕನಿಗೆ ತಿಳಿದಿರಲಿಲ್ಲವಷ್ಟೇ. ಲಾರಿಯ ಚಾಲಕನಿಗೆ ಅದೊಂದು ಆಧಾರ ನೀಡಲು ಸಹಕರಿಸಿದ ರಕ್ಷಕ ಕಲ್ಲಾಗಿತ್ತು. ಈ ಕಥೆ ನಾನು ಬಾಲ್ಯದಲ್ಲಿ ಓದಿದ್ದು. ಒಬ್ಬ ದಾರಿಹೋಕನಿಗೆ ದಾರಿಯಲ್ಲಿ ಸಣ್ಣ ತೊರೆ ಎದುರಾಗುತ್ತದೆ. ಅದನ್ನು ದಾಟಲು ನೀರಿಗಿಳಿಯಬೇಕಿತ್ತು. ಇಲ್ಲವೇ ಅದರ ಎರಡೂ ದಡಕ್ಕೆ ಅಡ್ಡವಾಗಿ ಏನಾದರು ಕಲ್ಲೋ, ಮರದ ತುಂಡನ್ನೋ ಹಾಸಬೇಕಿತ್ತು. ಈತ ಯಾವುದೋ ಶುಭ ಕಾರ್ಯಕ್ಕೆ ಹೋಗುವವನು. ಹಾಗಾಗಿ ನೀರಿಗಿಳಿದು ಮೈ-ಕೈ ಕೆಸರು ಮಾಡಿಕೊಂಡರೆ ಕಷ್ಟವಾಗುತ್ತದೆ ಎಂದು ಭಾವಿಸಿ ಸುತ್ತಮುತ್ತ ನೋಡಿದಾಗ ಒಂದು ಹಳೇ ದೇವರ ಮೂರ್ತಿ ಕಾಣುತ್ತದೆ. ಅದನ್ನೇ ತೊರೆಗೆ ಸೇತುವಂತೆ ಹಾಸಿ ಅದರ ಮೇಲೆ ನಡೆದು ಪ್ರಯಾಣ ಬೆಳೆಸುತ್ತಾನೆ. ಆ ದಾರಿಯಾಗಿ ಬಂದ ವ್ಯಕ್ತಿಯೊಬ್ಬ, ಅಯ್ಯೋ ಎಂಥಾ ಅಪಚಾರ. ದೇವರ ಮೂರ್ತಿಯನ್ನು ತೊರೆ ದಾಟಲು ಬಳಸುವುದುಂಟೇ? ಇಂತಹ ಪಾಪಕೃತ್ಯ ಮಾಡಿದಾತ ನರಕಕ್ಕೆ ಹೋಗುವುದಂತೂ ಖಂಡಿತಾ ಎಂದು ಭಾವಿಸಿ ದೇವರ ಮೂರ್ತಿಯನ್ನು ಎತ್ತಿ ಮರದ ಬುಡದಲ್ಲಿಟ್ಟ. ‘ನನ್ನಲ್ಲಿ ದೇವರನ್ನು ಕಾಣದವ, ಭಕ್ತಿ ಇಲ್ಲದವ ನನ್ನನ್ನು ಬಳಸಿಕೊಂಡು ತೊರೆ ದಾಟಿ ಪ್ರಯೋಜನ ಪಡೆದ. ಆದರೆ, ನನ್ನಲ್ಲಿ ದೇವರನ್ನು ಕಂಡವನು ಮಾತ್ರ ನನ್ನನ್ನು ಮೂರ್ತಿಯೆಂದು ಗುರುತಿಸಿದನೇ ಹೊರತು ಪೂಜೆ, ಹಣ್ಣುಕಾಯಿಯಿರಲಿ ಕನಿಷ್ಠ ಭಕ್ತಿಯಿಂದ ಕೈ ಮುಗಿಯದೆಯೂ ಹೋದನಲ್ಲ’ಎಂದು ದೇವರಿಗೆ ಸಿಟ್ಟು ಬಂತಂತೆ.

    ಕಾಟಾಚಾರಕ್ಕಾಗಿ ಅಥವಾ ತೋರ್ಪಡಿಕೆಗಾಗಿ ಭಕ್ತಿ ಮಾಡಬಾರದು. ಮಾತ್ರವಲ್ಲದೆ ಸಂಶಯವನ್ನೂ ಹೊಂದಿರಬಾರದು. ಕೆಲವರು, ಇದು ಹಳೆಯ ಮೂರ್ತಿ. ಇದರಲ್ಲಿ ದೇವರು ಇರಬಹುದೇ? ಪೂಜೆ ಮಾಡಿದರೆ ಫಲ ದೊರೆಯಬಹುದೇ? ಎಂಬೆಲ್ಲ ಸಂಶಯದಿಂದ ಕಾಣುತ್ತಾರೆ. ಇಂತಹವರಿಗೆ ದೇವರು ಒಲಿಯಲಾರ. ದೃಢ ಭಕ್ತಿ, ಶ್ರದ್ಧೆ, ವಿಶ್ವಾಸಗಳಿಂದ ನಂಬಿದವರನ್ನು ದೇವರು ಕಾಪಾಡುತ್ತಾನೆ. ತಾನು ಬೀಳದಂತೆ ನೋಡಿಕೊಳ್ಳಲು ಅಮ್ಮ ಇದ್ದಾಳೆ ಎಂದು ನಂಬಿ ಮಗುವು ತಾಯಿಯ ತೆಕ್ಕೆಯಲ್ಲಿ ನಿದ್ರಿಸುವಂತೆ ನಾವು ಕೂಡ ಬದುಕಿನ ಹಾದಿಯಲ್ಲಿ ನಡೆಯುವಾಗ ಬೀಳದಂತೆ ನೋಡಿಕೊಳ್ಳಲು ಭಗವಂತನಿದ್ದಾನೆಂಬ ದೃಢ ನಂಬಿಕೆಯಿಂದ ಮುನ್ನಡೆಯಬೇಕು. ನಾವು ಬದುಕಿ ಇತರರಿಗೂ ಬದುಕಲು ಅವಕಾಶ ಮಾಡಿಕೊಡುತ್ತಾ ಸಾರ್ಥಕವಾಗಿಸಿಕೊಳ್ಳಬೇಕು.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts