More

    ಧರ್ಮದ ಹಾದಿಯಿಂದ ಮಾತ್ರ ಸರ್ವರ ಏಳಿಗೆ

    ಧರ್ಮದ ಹಾದಿಯಿಂದ ಮಾತ್ರ ಸರ್ವರ ಏಳಿಗೆಧರ್ಮದ ವ್ಯಾಖ್ಯಾನ ಮಾಡುವುದು ಬಹಳ ಕಷ್ಟ. ಧರ್ಮದ ಬಗ್ಗೆ ದೇಶ, ಕಾಲಗಳನ್ನು ಮೀರಿ ಅನೇಕರು ಅಭಿಪ್ರಾಯ, ವಿವರಣೆ, ಹೇಳಿಕೆಗಳನ್ನು ನೀಡಿದ್ದಾರೆ. ಅವೆಲ್ಲವೂ ಅವರವರ ಅನುಭವ, ತಿಳಿವಳಿಕೆ ಇತ್ಯಾದಿ ಜ್ಞಾನಗಳಿಂದ ಬಂದಂತಹ ವಿಚಾರಗಳು. ಧರ್ಮ ಎಂದರೆ ದೇವರನ್ನು ಹುಡುಕುವ ಮಾರ್ಗ. ಧರ್ಮ ಎಂದರೆ ಪರೋಪಕಾರ. ಕೆಲವರಿಗೆ ಜಾತಿ ಸಮುದಾಯದ ಕಟ್ಟಳೆ. ಇನ್ನೂ ಅನೇಕರಿಗೆ ಧರ್ಮ ಎಂದರೆ ಮೋಕ್ಷಪ್ರಾಪ್ತಿಗಾಗಿರುವ ಸಾಧನ. ಬಸವಣ್ಣನವರ ಪಾಲಿಗೆ ಧರ್ಮ ಎನ್ನುವುದು ಕಾಯಕ. ಹೀಗೆ ಧರ್ಮವು ಸಾಗರದಷ್ಟು ಹಿರಿದಾದ ಅರ್ಥವನ್ನು ಹೊಂದಿದೆ. ಇಂದಿನ ದಿನಗಳಲ್ಲಿ ಧರ್ಮವು ತನ್ನ ಅರ್ಥವ್ಯಾಪ್ತಿಯನ್ನು ಕಿರಿದಾಗಿಸಿಕೊಂಡಿದೆ. ಹೀಗೆ ಸೀಮಿತಗೊಳಿಸಿರುವ ಧರ್ಮವನ್ನು ಅಪಾರ್ಥ ಮಾಡಿಕೊಂಡು ಸಮಾಜದಲ್ಲಿ ನಿರಂತರವಾಗಿ ಗಲಭೆ, ದೊಂಬಿ, ಹತ್ಯೆಗಳು ನಡೆಯುತ್ತಿವೆ. ಧರ್ಮವನ್ನು ಯಾವುದೇ ಜಾತಿ, ಸಮುದಾಯ, ಪರಿವಾರಗಳಿಗೆ ಸೀಮಿತಗೊಳಿಸದೆ ಅದರ ನೈಜಾರ್ಥವನ್ನು ವಿಶ್ವವ್ಯಾಪಿಯನ್ನಾಗಿಸಬೇಕಾಗಿದೆ.

    ನಮ್ಮ ಸನಾತನ ಪರಂಪರೆಯಲ್ಲಿ ಸತ್ಯ, ನ್ಯಾಯ, ನೀತಿಯಿಂದ ನಡೆಯುವುದನ್ನು ಧರ್ಮವೆಂದು ಕರೆದಿದ್ದಾರೆ. ಅನ್ಯಾಯ, ಅಕ್ರಮ, ಅಹಿಂಸೆಯನ್ನು ಅಧರ್ಮವೆಂದು ಕರೆದಿದ್ದಾರೆ. ಮಹಾಭಾರತ ಮತ್ತು ರಾಮಾಯಣದ ಕತೆಗಳನ್ನು ಸಮೀಕರಿಸಿ ಅದು ಧರ್ಮ ಮತ್ತು ಅಧರ್ಮಗಳ ನಡುವಿನ ಯುದ್ಧ; ಗೆಲುವು ಧರ್ಮದ್ದೇ ಎಂದಿದ್ದಾರೆ ಹಿರಿಯರು. ಪ್ರಸಿದ್ಧ ಪುಣ್ಯಕೋಟಿ ಕತೆಯಲ್ಲಿ ಗೋಮಾತೆಯು ಹುಲಿಯನ್ನು ಉದ್ದೇಶಿಸಿ ‘ಕೊಟ್ಟ ಭಾಷೆಗೆ ತಪ್ಪಲಾರೆ, ಕೆಟ್ಟ ಯೋಚನೆ ಮಾಡಲಾರೆ, ಸತ್ಯವೇ ನನ್ನ ತಾಯಿ-ತಂದೆ, ಸತ್ಯವೇ ನನ್ನ ಬಂಧು ಬಳಗ ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂದು ಹೇಳುತ್ತದೆ ಮತ್ತು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ. ಅಂದರೆ ಸತ್ಯ ಮತ್ತು ಕೊಟ್ಟ ವಚನದ ಪರಿಪಾಲನೆಯೇ ತನ್ನ ಧರ್ಮವೆಂದು ಭಾವಿಸುತ್ತದೆ.

    ಸನಾತನ ಗ್ರಂಥ, ಪುರಾಣಗಳಲ್ಲಿ ಎಲ್ಲಿಯೂ ಧರ್ಮವನ್ನು ಜಾತಿ, ಮತ, ಸಮುದಾಯ, ಪಂಗಡಗಳಿಗೆ ಸೀಮಿತಗೊಳಿಸಿಲ್ಲ. ದೇಶ, ಕಾಲಗಳು ಬದಲಾದಂತೆಲ್ಲ ಧರ್ಮದ ಅರ್ಥವ್ಯಾಪ್ತಿಯೂ ಬದಲಾಯಿತೆನ್ನಬಹುದು. ಈ ಭೂಮಿಯಲ್ಲಿ ಪ್ರತಿಯೊಂದು ಜೀವ ವೈವಿಧ್ಯಕ್ಕೂ ತನ್ನದೇ ಆದ ಧರ್ಮವಿದೆ. ಪ್ರಕೃತಿಯು ಸಕಲ ಜೀವಿಗಳನ್ನು ಪೊರೆಯುತ್ತದೆ. ಗಾಳಿಯು ಸಕಲ ಜೀವಿಗಳ ಉಸಿರಾಗಿದೆ. ಅಂತೆಯೇ ರಾಜ್ಯದಲ್ಲಿ ರಾಜನು ರಾಜಧರ್ಮ ಪಾಲಿಸಬೇಕು. ಕುಟುಂಬದಲ್ಲಿ ತಂದೆಗೆ ಪಿತೃಧರ್ಮ, ತಾಯಿ ಮಾತೃಧರ್ಮ, ಸತಿ-ಪತಿಧರ್ಮ ಹೀಗೆ ಅವರವರಿಗೆ ಅವರವರದೇ ಆದ ಧರ್ಮಗಳಿವೆ. ಅವೆಲ್ಲವನ್ನು ಪಾಲಿಸಿದಾಗ ಜೀವನಧರ್ಮ ಈಡೇರುತ್ತದೆ.

    ಒಮ್ಮೆ ದಂಪತಿ ನನ್ನ ಬಳಿ ಬಂದಿದ್ದರು. ಆಕೆ, ‘ಸ್ವಾಮಿ ನಾನು ತಿಂಗಳ ಪಗಾರಕ್ಕಾಗಿ ಕಚೇರಿಯಲ್ಲಿ ದುಡಿಯುತ್ತೇನೆ. ಗಂಡನೂ ಕೆಲಸಕ್ಕೆ ಹೋಗುತ್ತಾರೆ. ಆದರೆ, ಅವರು ದುಡಿದ ದುಡ್ಡನ್ನು ಸ್ವಲ್ಪವೂ ಉಳಿಸುವುದಿಲ್ಲ. ಗೆಳೆಯರ ಸಂಗ ಮಾಡಿ ಕುಡಿದು ಹಣ ಪೋಲು ಮಾಡುತ್ತಾರೆ. ಕುಟುಂಬದ ಖರ್ಚನ್ನೂ, ಮಕ್ಕಳ ಬೇಕು-ಬೇಡಗಳನ್ನೂ ನಾನೇ ನೋಡಿಕೊಳ್ಳಬೇಕಿದೆ. ಮನೆಗೆ ಏನೂ ತರುವುದಿಲ್ಲ. ನೀವಾದರೂ ಬುದ್ಧಿ ಹೇಳಿ’ ಎಂದು ಕಣ್ಣೀರು ಹಾಕಿದಳು.

    ಆತನನ್ನು ಉದ್ದೇಶಿಸಿ, ‘ಆಕೆಯ ಗಂಡನಾಗಿ, ಮನೆಯ ಯಜಮಾನನಾಗಿ ನಿಭಾಯಿಸಬೇಕಾದ ನಿನ್ನ ಧರ್ಮ, ಕರ್ತವ್ಯದ ಅರಿವಿದೆಯೇ’ ಎಂದು ಪ್ರಶ್ನಿಸಿದೆ. ಆತ ತಲೆ ಕೆಳಗೆ ಮಾಡಿ ಸುಮ್ಮನೆ ನಿಂತಿದ್ದ. ‘ಇಂತಹ ಹೆಂಡತಿ ದೊರಕಿರುವುದು ನಿನ್ನ ಪುಣ್ಯ. ಇಂದಲ್ಲ ನಾಳೆ ಸುಧಾರಿಸುತ್ತಿ ಎಂಬ ಭಾವನೆಯಿಂದ ಅವಳಿದ್ದಾಳೆ. ಜೊತೆಗೆ ತಾನೇ ದುಡಿದು ಮನೆವಾರ್ತೆ ನೋಡಿಕೊಳ್ಳುತ್ತಿದ್ದಾಳೆ. ನೀನು ಗಂಡನಾಗಿ ನಿಭಾಯಿಸಬೇಕಾದ ಜವಾಬ್ದಾರಿ ಮರೆತಿರುವಿ. ಈಗ ಮಹಿಳೆಯರೂ ಸ್ವಾವಲಂಬಿಗಳಾಗುತ್ತಿದ್ದು, ಕುಟುಂಬದ ಜವಾಬ್ದಾರಿಗಳನ್ನು ಗಂಡಸರಂತೆಯೇ ಹೊರುತ್ತಿದ್ದಾರೆ, ಮನೆಯನ್ನು ಮುನ್ನಡೆಸುತ್ತಿದ್ದಾರೆ. ನೀನು ನಿನ್ನ ಪತಿಧರ್ಮವನ್ನು ಪಾಲಿಸಿದಾಗ ಅವಳೂ ತನ್ನ ಸತಿಧರ್ಮ ಪಾಲಿಸುತ್ತಾಳೆ. ಆಗ ಸಂಸಾರ ಸರಾಗವಾಗುವುದು. ಇಲ್ಲದಿದ್ದಲ್ಲಿ ಎತ್ತು ಏರಿಗೆ, ಕೋಣ ನೀರಿಗೆ ಎಂಬಂತಾಗುವುದು. ಕೌಟುಂಬಿಕ ಸಮಸ್ಯೆಗಳನ್ನು ಲೆಕ್ಕಿಸದೆ ಜೀವನ ಸಾಗಿಸುವುದು ಶೋಭೆಯಲ್ಲ. ನಿನ್ನ ಪತಿಧರ್ಮಕ್ಕೆ ದ್ರೋಹ ಬಗೆದಂತೆ’ ಎಂದು ತಿಳಿಸಿದೆ. ನನ್ನ ಮಾತು ಆತನಿಗೆ ಎಷ್ಟು ತಲೆಗೆ ಹತ್ತಿತೋ ಗೊತ್ತಿಲ್ಲ. ‘ತಪ್ಪಾಯಿತು ಬುದ್ಯೋರೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಮುಂದೆ ಆಕೆಯ ಮನಸ್ಸನ್ನು ನೋಯಿಸೊಲ್ಲ’ ಎಂದ. ಸಾಮರಸ್ಯದಲ್ಲಿ ಅಡಗಿದೆ ದಾಂಪತ್ಯದ ಧರ್ಮ.

    ಹೆಂಡತಿಯಾದವಳು ಕೆಲವೊಮ್ಮೆ ಗಂಡನಿಂದ ಕೇಳಿ ಪಡೆಯಲು ಬಯಸುವುದಿಲ್ಲ. ಆತನೇ ತಂದು ಕೊಡಲಿ ಎಂದು ಅಪೇಕ್ಷಿಸುತ್ತಾಳೆ. ಆಗ ಅವಳು ಖುಷಿಪಡುತ್ತಾಳೆ. ಹೆಂಡತಿ ತನ್ನಲ್ಲಿ ಏನೂ ಕೇಳುವುದಿಲ್ಲ, ಕೇಳಿದರೆ ಮಾತ್ರ ತಂದು ಕೊಡುತ್ತೇನೆ ಎಂದು ಭಾವಿಸುವುದು ಸಂಬಂಧದ ಮೌಲ್ಯಕ್ಕೆ ಚ್ಯುತಿ ತಂದಂತೆ. ಒಟ್ಟಿನಲ್ಲಿ ತಂದೆ-ತಾಯಿ-ಮಕ್ಕಳು ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸಿದರೆ ಧರ್ಮ ಪರಿಪಾಲನೆಯಾದಂತೆಯೇ ಸರಿ. ಈ ಧರ್ಮದ ಮರ್ಮವನ್ನು ಅರಿತ ಜೀವನಕ್ಕೆ ಎಂದೂ ಸೋಲಿಲ್ಲ. ಧರ್ಮವೆಂದರೆ ಕೇವಲ ಧಾರ್ವಿುಕತೆಯಲ್ಲ. ಧರ್ಮವಿದ್ದಾಗ ದೇವರನ್ನು ಕಂಡುಕೊಳ್ಳಬಹುದು; ಅದೇ ಅಧರ್ಮವಿದ್ದಾಗ ಸಾಧ್ಯವಾಗದು. ಅದನ್ನೇ ಭಗವಾನ್ ಶ್ರೀಕೃಷ್ಣನು ‘ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ |’ ಎನ್ನುತ್ತ ಮನುಷ್ಯನ ವ್ಯಕ್ತಿತ್ವದಲ್ಲಿ ಸದ್ಗುಣಗಳು ಮಾಯವಾಗಿ ಯಾವಾಗ ಅಧರ್ಮ, ರಾಕ್ಷಸೀ ಗುಣಗಳು ವಿಜೃಂಭಿಸುತ್ತದೋ ಆಗ ಪರಮಾತ್ಮನು ಅವತರಿಸಿ ಧರ್ಮವನ್ನು ಕಾಪಾಡುತ್ತಾನೆ ಎಂದಿರುವುದು. ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ಅಥವಾ ಶಿಕ್ಷಕರು ತಿದ್ದಲು ಸಾಮ, ದಾನ, ಭೇದ, ದಂಡ ತಂತ್ರಗಳನ್ನು ಪ್ರಯೋಗಿಸುತ್ತಾರೆ. ನಮ್ಮ ಬದುಕಿನಲ್ಲಿಯೂ ಅಷ್ಟೇ. ಧರ್ಮ ಅಥವಾ ಅಧರ್ಮದಿಂದ ನಡೆದಾಗ ಮಾಡಿದ ಕರ್ಮಕ್ಕೆ ತಕ್ಕ ಪ್ರತಿಫಲಗಳು ದೊರೆಯುತ್ತವೆ. ಪರೋಪಕಾರಿ, ಒಳ್ಳೆಯ ಗುಣ ನಡತೆ ಇರುವ ವ್ಯಕ್ತಿ ಸದಾ ಮಾನನೀಯನಾಗಿರುತ್ತಾನೆ. ಅದೇ ದುರಂಹಕಾರಿ, ದುಷ್ಟಬುದ್ಧಿಯವ ಅಧಿಕಾರ, ಸಂಪತ್ತು ಹೊಂದಿದ್ದರೂ ದೂಷಿಸಲ್ಪಡುತ್ತಾನೆ.

    ಪ್ರತಿಯೊಂದು ಮತ-ಸಂಪ್ರದಾಯಗಳ ಸಾರ ಒಂದೇ, ಅದೇನೆಂದರೆ ಬದುಕು ಮತ್ತು ಬದುಕಲು ಬಿಡು ಎಂದು. ಎಲ್ಲರೂ ಬಯಸುವುದು ಸುಖ, ಶಾಂತಿ, ನೆಮ್ಮದಿಯ ಬದುಕನ್ನೇ. ಅಲ್ಲದೆ, ವಿಶ್ವದ ಧಾರ್ವಿುಕ ಗ್ರಂಥಗಳ ಔಚಿತ್ಯವೂ ಸರ್ವರ ಒಳಿತನ್ನೇ ಬಯಸುವುದೇ ಆಗಿದೆ.

    ಧಾರಣಾತ್ ಧರ್ಮ ಇತ್ಯಾಹುಃ ಧರ್ವೇ ಧಾರಯತಿ ಪ್ರಜಾಃ

    ಯಃ ಸ್ಯಾತ್ ಧಾರಣಾಸಂಯುಕ್ತಃ ಸ ಧರ್ಮ ಇತಿ ನಿಶ್ಚಯಃ

    ಎಂದರೆ ಧಾರಣ ಮಾಡುವಂಥದು, ಒಂದುಗೂಡಿಸುವಂಥದು, ಅಂತರವನ್ನು ಹೋಗಲಾಡಿಸುವಂಥದು ಧರ್ಮ. ಇಂಥ ಧರ್ಮವು ಪ್ರಜೆಗಳನ್ನು ಒಂದು ಸೂತ್ರದಲ್ಲಿ ಬಂಧಿಸುವಂಥ ಶಕ್ತಿ ಹೊಂದಿರುತ್ತದೆ. ಪ್ರತಿಯೊಬ್ಬರೂ ಧರ್ಮದಿಂದ ನಡೆದುಕೊಂಡರೆ ಪ್ರಕೃತಿ ಕೂಡ ನಮ್ಮೆಲ್ಲರ ಸುಖಕ್ಕೆ ಅನುಕೂಲಕರವಾಗಿ ಪ್ರತಿಸ್ಪಂದಿಸುತ್ತದೆ. ಆದರೆ, ದುರಾಸೆ, ಲೋಭಗಳಿಂದ, ಅಧರ್ಮದಿಂದ ನಡೆದುಕೊಂಡರೆ ಅದಕ್ಕೆ ತಕ್ಕ ಪಾಠವನ್ನು ಕಲಿಯಬೇಕಾಗುತ್ತದೆ. ನಮ್ಮಲ್ಲಿರುವ ಪ್ರಕೃತಿ ಸಂಪತ್ತಿನಿಂದ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಂಡು ಇದ್ದರೆ ಕಾಲಕಾಲಕ್ಕೆ ಮಳೆ, ಬೆಳೆ ಆಗುವುದು. ಆದರೆ, ದುರಾಸೆ ಹೆಚ್ಚಾಗಿ ಪ್ರಕೃತಿ ಸಂಪತ್ತನ್ನೆಲ್ಲ ಬರಿದು ಮಾಡಿದರೆ ಅಕಾಲಿಕ ಮಳೆಯುಂಟಾಗಿ ಬೆಳೆ ಬೆಳೆಯಲು ಅಸಾಧ್ಯವಾಗುವುದು ಅಲ್ಲದೆ, ಪ್ರಾಕೃತಿಕ ವಿಕೋಪಗಳು ಉಂಟಾಗುವುದು. ಈಗೀಗ ನಡೆಯುತ್ತಿರುವುದು ಅದೇ. ಪರಿಣಾಮವಾಗಿ ಅಲ್ಲಲ್ಲಿ ಭೂಕುಸಿತ, ಭೂಕಂಪನ, ಮೇಘಸ್ಪೋಟಗಳು ನಡೆಯುತ್ತಲಿವೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

    ನಿತ್ಯವೂ ನಾವೆಲ್ಲ ಧರ್ಮವನ್ನು ಪಾಲಿಸುತ್ತಿದ್ದೇವೆಯೇ ಎಂದು ನಮ್ಮ-ನಮ್ಮನ್ನು ಕೇಳಿಕೊಳ್ಳಬೇಕು. ನಿತ್ಯದ ಕೆಲಸ ಕಾರ್ಯಗಳಲ್ಲಿ ಇಂದು ನಾನೆಷ್ಟು ಒಳ್ಳೆಯ ಕೆಲಸವನ್ನು ಮಾಡಿದೆ? ಎಷ್ಟು ಜನರಿಗೆ ಕೈಲಾದ ಸಹಾಯ ಮಾಡಿದೆ? ಎಷ್ಟು ಜನರಿಗೆ ನನ್ನಿಂದ ತೊಂದರೆಯಾಯಿತು? ಎಂದು ವಿಮಶಿಸಿಕೊಳ್ಳಬೇಕು. ಹೀಗೆ ಪ್ರತಿಯೊಬ್ಬರೂ ಯೋಚಿಸಿ ಸನ್ನಡತೆಯಿಂದ ಮುನ್ನಡೆದಾಗ ಸಮಾಜದಲ್ಲಿನ ಅಧರ್ಮವು ಕಳೆಯುವುದು. ಹಿರಿಯರು ಬೆಳಗ್ಗೆ ಎದ್ದು ಭೂಮಿ ತಾಯಿಯನ್ನು ಪ್ರಾರ್ಥಿಸಿ ನಮಸ್ಕರಿಸಿ ಬಳಿಕ ನೆಲಕ್ಕೆ ಪಾದಸ್ಪರ್ಶ ಮಾಡುತ್ತಿದ್ದರು. ಮರ-ಗಿಡ ಪ್ರಾಣಿ-ಪಕ್ಷಿ ಹೀಗೆ ಸಕಲ ಜೀವರಾಶಿ ಅಲ್ಲದೆ ಸೂರ್ಯ ಚಂದ್ರರಿಗೆಲ್ಲ ಕೃತಜ್ಞತೆ ಅರ್ಪಿಸುತ್ತಿದ್ದರು. ಈಗ ಹೇಗಿದೆ ಎಂದರೆ ಕೆಲವು ಕಡೆಗಳಲ್ಲಿ ಮಕ್ಕಳು ಹೆತ್ತವರನ್ನು ಒದ್ದು ಹೊರಗೆ ಹಾಕುವ ಘಟನೆಗಳು ನಡೆಯುತ್ತಿದ್ದು, ಮಕ್ಕಳು ಮಾತಾ-ಪಿತರನ್ನು ಸಲಹಬೇಕಾದ ಧರ್ಮವನ್ನೇ ಮರೆಯುತ್ತಿದ್ದಾರೆ.

    ಸಮಾಜದಲ್ಲಿ ಅಧರ್ಮವೇ ಮೇಳೈಸತೊಡಗಿದಾಗ ಏನೆಲ್ಲಾ ಅನಾಹುತ, ಗಂಡಾಂತರಗಳಾಗುತ್ತವೆ ಎಂಬುದನ್ನು ಪುರಾಣಗಳಲ್ಲಿ ಕಂಡಿದ್ದೇವೆ. ಪಾಂಡವರು, ಕೌರವರ ನಡುವೆ ಕೌರವರದೇ ಅಧಿಕ ಸೇನಾಬಲ. ಅಂತೆಯೇ ಅಧರ್ಮದಲ್ಲಿಯೂ ಅವರದು ಎತ್ತಿದ ಕೈ. ಭೀಷ್ಮ, ದ್ರೋಣಾಚಾರ್ಯ ಮುಂತಾದ ಘಟಾನುಘಟಿಗಳು ಧರ್ಮ ಮಾರ್ಗದಲ್ಲಿದ್ದರೂ ಕೈ ಕಟ್ಟಿ ಕುಳಿತುಕೊಳ್ಳುವಂತೆ ಆಯಿತು. ಕುರುಕ್ಷೇತ್ರ ಯುದ್ಧಾರಂಭದ ವೇಳೆ ತಾನು ಗುರು ಹಿರಿಯರನ್ನು ಎದುರಿಸಬೇಕಲ್ಲ ಎಂದು ಹತಾಶೆಯಿಂದ ಯುದ್ಧ ಮಾಡುವುದಿಲ್ಲವೆಂದ ಅರ್ಜುನನಿಗೆ ಶ್ರೀಕೃಷ್ಣನು ಕ್ಷಾತ್ರಧರ್ಮವನ್ನು ನೆನಪು ಮಾಡಿಕೊಡಬೇಕಾಯಿತು. ಜೊತೆಗೆ ಯಾವುದು ಧರ್ಮ ಯಾವುದು ಅಧರ್ಮ ಎಂಬುದನ್ನು ಸವಿವರವಾಗಿ ಹೇಳಿದ. ಹಾಗೆಯೇ ನಾವು ಕೂಡ ಯಾವುದು ಧರ್ಮ ಯಾವುದು ಅಧರ್ಮ ಎಂದು ತಿಳಿದು ಮುಂದುವರಿದಾಗ ಅಧರ್ಮವು ತನ್ನಿಂದ ತಾನೇ ತೊಲಗುವುದು.

    ಧರ್ಮವು ಆಚಾರಗಳ ಮೂಲಕ ಅಭಿವ್ಯಕ್ತವಾಗುತ್ತದೆ. ‘ಸರ್ವೆ ಜನಾಃ ಸುಖಿನೋ ಭವಂತು’ ಎನ್ನುವ ಆಚಾರವೇ ಧರ್ಮದ ವ್ಯಾಖ್ಯಾನ. ಎಲ್ಲರ ಹಿತದೊಳಡಗಿದೆ ಧರ್ಮ. ‘ಅಹಿಂಸಾ ಪರಮೋ ಧರ್ಮಃ’ ಎಂಬುದನ್ನು ಭಗವಾನ್ ಮಹಾವೀರರು ಪ್ರತಿಪಾದಿಸಿದ್ದಾರೆ. ತ್ಯಾಗಿಗಳು, ಸಂತರು, ಮಹರ್ಷಿಗಳು, ತಪಸ್ವಿಗಳು ತಮಗಾಗಿ ಬದುಕದೆ ಪರರಿಗಾಗಿಯೇ ಜೀವನ ಸವೆಸಿದ ಉದಾಹರಣೆ ಸಾಕಷ್ಟಿವೆ. ಅವರ ಜೀವನದ ಧ್ಯೇಯವೇ ಒಂದು ಶ್ರೇಷ್ಠ ಧರ್ಮವಾಗಿದೆ.

    ‘Religion is the idea which is raising the brute into man and man in to god'(ಕ್ರೂರಿ, ಮೃಗೀಯ ಸ್ವಭಾವವಿರುವ ಮನುಷ್ಯನನ್ನು ಸನ್ನಡತೆಯವನನ್ನಾಗಿಸಲು ಮತ್ತು ಮನುಷ್ಯನನ್ನು ಅಧ್ಯಾತ್ಮ ಪಥದಲ್ಲಿ ನಡೆಸಿ ದೈವತ್ವಕ್ಕೇರಿಸಲು ಇರುವ ಸಾಧನ ಧರ್ಮ) ಎಂದು ಸ್ವಾಮಿ ವಿವೇಕಾನಂದರು ವ್ಯಾಖ್ಯಾನಿಸಿದ್ದಾರೆ. ಆದರೆ, ಇಂದು ಮನುಷ್ಯನು ಧರ್ಮಕ್ಕಾಗಿ ಮೃಗೀಯತ್ವವನ್ನು ಪ್ರತಿಪಾದಿಸುವುದು ವಿಷಾದನೀಯ. ಮನುಷ್ಯನು ತನ್ನ ಚಿಂತನೆಯಲ್ಲಿರುವ ಅಧರ್ಮದ ನಾಶವನ್ನು ಮೊದಲು ಮಾಡಬೇಕು. ಕೃಷ್ಣನು ಮಹಾಭಾರತ ಯುದ್ಧವಾಗಬಾರದು ಎಂಬ ನಿಟ್ಟಿನಲ್ಲಿ ಸಂಧಾನ ಮಾಡಿದ್ದನು. ಕೌರವರ ದುರ್ಗಣಗಳನ್ನು ಅವರಿಗೆ ತಿಳಿಹೇಳಿ ಬದಲಾಯಿಸಿಕೊಳ್ಳಿ ಎಂದು ಅವಕಾಶವನ್ನೂ ನೀಡಿದ್ದನು. ಪುರಾಣಗಳಲ್ಲಿ ಪ್ರತಿಯೊಬ್ಬ ರಾಕ್ಷಸರನ್ನು ಸಂಹರಿಸುವ ಮೊದಲು ಅವರಿಗೆ ಬದಲಾಗಲು ಅವಕಾಶವನ್ನು ದೇವರು ಕೊಡುತ್ತಿದ್ದರು. ಆದರೆ, ದೊರೆತ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳದೆ ಮತ್ತೆ ದುಮಾರ್ಗ ಹಿಡಿದರೆ ಅವನತಿಯೇ ಪ್ರಾಪ್ತಿಯಾಗುತ್ತದೆ.

    ಧರ್ಮ ಎನ್ನುವುದು ನಮಗೆ ಪ್ರೇರಕವಾಗಬೇಕೇ ಹೊರತು ಮಾರಕವಾಗಬಾರದು. ಇಂದಿನ ಯುವ ಜನತೆ ಈ ಧರ್ಮ ಸೂಕ್ಷ್ಮತೆಗಳನ್ನು ಅರಿತುಕೊಳ್ಳಬೇಕಿದೆ. ಯುದ್ಧ, ಒಳಬೇಗುದಿಗಳಿಂದ ರೋಸಿರುವ ಜಗತ್ತು ಸುಂದರ ಹೂದೋಟವಾಗಿರಬೇಕಾದರೆ ಸರ್ವಜನಾಂಗದ ಶಾಂತಿಯ ತೋಟವಾದರೆ ಮಾತ್ರ ಸಾಧ್ಯ. ಅದಕ್ಕಾಗಿ ಮಾನವಧರ್ಮ ಮೇಳೈಸಬೇಕು. ಮಾನವೀಯತೆ ವಿಜೃಂಭಿಸಬೇಕು.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ

    ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೇ ಸಿಗಲಿದೆ 2ಎ ಮೀಸಲಾತಿ: ಸಚಿವ ಮುರುಗೇಶ್ ನಿರಾಣಿ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts