More

    ಧರ್ಮದರ್ಶನ ಅಂಕಣ; ಅಪಘಾತಗಳಾಗದಂತೆ ಎಚ್ಚರ ವಹಿಸೋಣ

    ಧರ್ಮದರ್ಶನ ಅಂಕಣ; ಅಪಘಾತಗಳಾಗದಂತೆ ಎಚ್ಚರ ವಹಿಸೋಣಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗೆ ನನಗೊಂದು ಪತ್ರ ಬರೆದಿದ್ದರು. ದೇಶದಾದ್ಯಂತ ರಸ್ತೆ ಅಪಘಾತದಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಜನ ಮರಣವನ್ನಪ್ಪುತ್ತಾರೆ. ಸುಮಾರು ನಾಲ್ಕೂವರೆ ಲಕ್ಷ ಜನ ಗಂಭೀರ ಗಾಯಗೊಳ್ಳುತ್ತಾರೆ. ಅವರಲ್ಲಿ ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರು ಶಾಶ್ವತ ಅಂಗವಿಕಲರಾಗಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಾರದಂತಹ ಸ್ಥಿತಿ ಹೊಂದುತ್ತಾರೆ. ಹೀಗೆ ಅಪಘಾತಕ್ಕೊಳಗಾಗುವವರಲ್ಲಿ ಬಹುತೇಕ ಮಂದಿ ಮಧ್ಯಮ ಹಾಗೂ ಬಡ ವರ್ಗದವರೇ ಆಗಿರುತ್ತಾರೆ. ಹಾಗಾಗಿ ಅಪಘಾತಗಳಿಂದ ವ್ಯಕ್ತಿ ಮರಣಿಸಿದಾಗ ಆ ಕುಟುಂಬ ಸಂಕಷ್ಟಕ್ಕೊಳಗಾಗುತ್ತದೆ ಹಾಗೂ ಅಂಗವಿಕಲರಾದಲ್ಲಿ ವ್ಯಕ್ತಿ ಮಾತ್ರವಲ್ಲದೆ ಅವರ ಮನೆಯವರೂ ಆರ್ಥಿಕವಾಗಿ, ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ. ಆದ್ದರಿಂದ ಅಪಘಾತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಿ ಮತ್ತು ರಸ್ತೆ ಸಾರಿಗೆ ಸುರಕ್ಷತೆಯನ್ನು ಕಾಪಾಡಲು ಮತ್ತು ಅರಿವು ಮೂಡಿಸುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳುವ ಬಗ್ಗೆ ಕಾಳಜಿ ವಹಿಸಿ ಎಂದು ಪತ್ರದಲ್ಲಿ ತಿಳಿಸಿದ್ದರು.

    ನಮ್ಮ ದೇಶದಲ್ಲಿ ವಿವಿಧ ರೀತಿಯ ಅಪಘಾತಗಳನ್ನು ಕಾಣುತ್ತೇವೆ. ಆದರೆ, ರಸ್ತೆ ಅಪಘಾತದಲ್ಲಿ ಆಗುವ ಹಾನಿ ಊಹೆಗೂ ಮೀರಿದ್ದು. ಪ್ರಾಣಹಾನಿಯಾಗಬಹುದು. ಬದುಕುಳಿದರು ಕೂಡ ಅಂಗವಿಕಲರಾಗಬಹುದು. ಹಾಗಾಗಿ ರಸ್ತೆ ಸಾರಿಗೆ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ. ಕೋವಿಡ್ ನಂತರದಲ್ಲಿ ಕಳೆದ ಒಂದು ವರ್ಷದಲ್ಲಿ ವಾಹನಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ. ಸಾಮಾನ್ಯವಾಗಿ ದ್ವಿಚಕ್ರ ವಾಹನ ಬಳಸುತ್ತಿದ್ದವರೆಲ್ಲ ಚತುಷ್ಚಕ್ರ ವಾಹನ ಬಳಸುತ್ತಿದ್ದಾರೆ. ಈಗ ಕಡಿಮೆ ಬೆಲೆ ಜತೆಗೆ ಚತುಷ್ಚಕ್ರ ವಾಹನ ಖರೀದಿಗೆ ರಿಯಾಯಿತಿ ಸೌಲಭ್ಯಗಳೂ ದೊರೆಯುತ್ತಿವೆ. ಜತೆಗೆ ಸಣ್ಣ ಕುಟುಂಬಗಳು ದ್ವಿಚಕ್ರದ ವಾಹನದ ಬದಲಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಮುಂದಾಗುತ್ತಾರೆ. ವಾಹನ ಸಂಖ್ಯೆ ಹೆಚ್ಚಳದಿಂದಾಗಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಮುಖ್ಯವಾಗಿ ನಿಲುಗಡೆಗೆ ಸ್ಥಳಾವಕಾಶ ಬೇಕಾಗುತ್ತದೆ. ನಮ್ಮ ಧರ್ಮಸ್ಥಳದಲ್ಲೇ ಯಾತ್ರಾರ್ಥಿಗಳ ವಾಹನ ನಿಲುಗಡೆಗೆ ಸಾಕಷ್ಟು ಜಾಗ ಬೇಕಾಗುತ್ತದೆ. ಹಿಂದೆಲ್ಲ ಹೆಚ್ಚಾಗಿ ಸಾರಿಗೆ ಬಸ್​ಗಳನ್ನು ಬಳಸುತ್ತಿದ್ದರು. ಈಗ ಒಬ್ಬರು, ಇಬ್ಬರಿದ್ದರೂ ಚತುಷ್ಚಕ್ರ ವಾಹನ ಉಪಯೋಗಿಸುವುದರಿಂದ ಎಲ್ಲೆಡೆಯೂ ರ್ಪಾಂಗ್ ಸಮಸ್ಯೆ ಹೆಚ್ಚಾಗಿದೆ.

    ವಾಹನ ಹೆಚ್ಚಳವು ದೇಶದ ಆರ್ಥಿಕತೆ ಅಭಿವೃದ್ಧಿಯ ಸೂಚನೆಯೆನ್ನಬಹುದು. ಬಡತನದಿಂದ ಮುಕ್ತವಾಗಿ, ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ತಿಳಿಯಬಹುದಾಗಿದೆ. ಮನೆಯಲ್ಲಿ ಹೆಂಗಸರು ಚಿನ್ನ ಖರೀದಿಗೆ ಮುಂದಾದರೆ ಯಜಮಾನನು ಅಷ್ಟೊಂದು ಹಣ ಬೇಕಲ್ಲ ಎಂದು ಚಿಂತಿಸುತ್ತಾನಂತೆ. ಆದರೆ, ವಾಹನ ಖರೀದಿಗೆ ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ಸಿದ್ಧರಿರುತ್ತಾರೆ ಎಂದು ಶ್ರೀಮತಿ ಹೇಮಾವತಿಯವರು ಪುರುಷರ ವಾಹನಪ್ರೀತಿಯ ಬಗ್ಗೆ ಹೇಳುತ್ತಿರುತ್ತಾರೆ.

    ವಾಹನ ಶೋರೂಂನಿಂದ ಹೊರಗಡೆ ಬಂದ ಕೂಡಲೇ ಶೇ. 10ರಷ್ಟು ಮೌಲ್ಯ ಕುಸಿಯುತ್ತದೆ. ಒಂದು ವರ್ಷವಾಗುತ್ತಲೇ ಶೇ. 25ರಷ್ಟು ಮೌಲ್ಯ ಕುಸಿಯುತ್ತದೆ. ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ಕ್ಷೇತ್ರದ ಭಕ್ತರೊಬ್ಬರು ತಮ್ಮ ಹೊಸ ವಾಹನವನ್ನು ನನಗೆ ತೋರಿಸಲು ತಂದಿದ್ದರು. ಮೂರುವರೆ ಕೋಟಿ ರೂ. ಬೆಲೆಯ ಕಾರನ್ನು ನನಗೆ ತೋರಿಸಿ ಅದರಲ್ಲಿನ ವೈಶಿಷ್ಟ್ಯಗಳನ್ನು ವಿವರಿಸಿದರು. ಬಹುತೇಕ ಎಲ್ಲವೂ ಸ್ವಯಂ ಚಾಲಿತ ವ್ಯವಸ್ಥೆ ಹೊಂದಿತ್ತು. ಈ ವಾಹನದಲ್ಲಿ ಬಾಗಿಲನ್ನು ತೆರೆಯಲು, ಮುಚ್ಚಲು ಇತ್ಯಾದಿಗಳಿಗೆ ಬಲದಿಂದ ಎಡಕ್ಕೆ ಕೈ ಆಡಿಸಿದರೆ ಸಾಕಾಗಿತ್ತು. ಬಾಗಿಲು ತನ್ನಿಂದ ತಾನೆ ತೆರೆಯುತ್ತಿತ್ತು. ಮುಚ್ಚಿಕೊಳ್ಳುತ್ತಿತ್ತು. ಹೀಗೆ ಸ್ವಯಂಚಾಲಿತ ವ್ಯವಸ್ಥೆಗಳಿಂದಾಗಿ ಕೊಂಚವೂ ಆಯಾಸ, ಶ್ರಮವಿಲ್ಲದೆ ಕಾರನ್ನು ಚಲಾಯಿಸಬಹುದಾಗಿತ್ತು. ವಾಹನಗಳಲ್ಲಿ ಇಷ್ಟೆಲ್ಲ ವ್ಯವಸ್ಥೆ ಮತ್ತು ಅನುಕೂಲಗಳು ಇದ್ದಾಗ ಚಾಲನಾ ವಿಷಯದಲ್ಲಿ ಸೋಮಾರಿಯಾಗುವುದು ಸಹಜವೇ. ಹಾಗೇ ಸೋಮಾರಿತನ ತೋರಿದರೆ ಅಪಾಯವನ್ನು ಆಹ್ವಾನ ಮಾಡಿದಂತೆಯೇ ಸರಿ.

    ವಾಹನ ಚಾಲನೆಯಲ್ಲಿ ವೇಗಕ್ಕೆ ಮಹತ್ವವಿದೆ. ಆಧುನಿಕ ವಾಹನಗಳನ್ನು ವೇಗಕ್ಕೆ ಅನುಗುಣವಾಗಿ ನಿರ್ವಿುಸಿರುತ್ತಾರೆ. ಕೆಲವು ದೇಶಗಳಲ್ಲಿ ಅತ್ಯಂತ ವೇಗವಾಗಿ ಹೋಗುವ ವಾಹನಗಳಿಗೆಂದೇ ರಸ್ತೆಯ ವ್ಯವಸ್ಥೆ ಕಲ್ಪಿಸಿರುತ್ತಾರೆ. ಜರ್ಮನಿಯಲ್ಲಿ ಅಟೋಬಾನ್ ಎಂಬ ರಸ್ತೆಯಿದೆ. ಈ ರಸ್ತೆಯಲ್ಲಿ ಎಷ್ಟು ವೇಗವಾಗಿ ಬೇಕಾದರೂ ವಾಹನವನ್ನು ಚಲಾಯಿಸಲು ಅನುಮತಿ ಇದೆ. ಪ್ರಪಂಚದ ಯಾವುದೇ ದೇಶಗಳಲ್ಲಿ ಅಮೆರಿಕ, ಯುರೋಪ್ ರಾಷ್ಟ್ರಗಳಲ್ಲೂ 120, 150 ಕೀ.ಮೀ ಹೀಗೆ ಮಿತಿಯನ್ನು ಹಾಕಿರುತ್ತಾರೆ. ಆದರೆ, ಜರ್ಮನಿಯ ಅಟೋಬಾನ್​ನಲ್ಲಿ ಮಾತ್ರ ಅನಿಯಮಿತ ವೇಗದಲ್ಲಿ ವಾಹನಗಳನ್ನು ಚಲಾಯಿಸಬಹುದಾಗಿದೆ. ಸಾಮಾನ್ಯವಾಗಿ ಅಲ್ಲಿ ತಾಸಿಗೆ 300 ಕೀ.ಮೀ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಅಪಘಾತ ರಹಿತವಾಗಿ ವಾಹನಗಳನ್ನು ಓಡಿಸಲು ಅಲ್ಲಿನ ರಸ್ತೆ ಸುರಕ್ಷತೆಯ ಬಗ್ಗೆಯೂ ಸಾಕಷ್ಟು ಒತ್ತು ನೀಡಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ನಮ್ಮಂಥ ದೇಶಗಳಲ್ಲಿ ಇಂತಹ ಅತ್ಯುತ್ತಮ ಸೌಲಭ್ಯಗಳುಳ್ಳ ರಸ್ತೆಗಳಿಲ್ಲ. ಇತ್ತೀಚೆಗೆ ದೇಶದ ನಾನಾ ಕಡೆಗಳ ರಸ್ತೆಗಳು ಮೇಲ್ದರ್ಜೆಗೇರುತ್ತಿವೆ. ನಾನು ಕಂಡಂತೆ ನಮ್ಮಲ್ಲಿ ಮೈಸೂರು-ಬೆಂಗಳೂರು, ದೆಹಲಿ ಮತ್ತ ಜೈಪುರಕ್ಕೆ ಸಂಪರ್ಕ ವ್ಯವಸ್ಥೆ ಮತ್ತು ಅನೇಕ ಕಡೆಗಳಲ್ಲಿ ಚತುಷ್ಪಥ ಮತ್ತು ಹತ್ತು ಲೇನ್​ಗಳ ರಸ್ತೆಗಳನ್ನು ಮಾಡಲಾಗಿದೆ. ಉತ್ತಮ ರಸ್ತೆಗಳಿದ್ದರೂ ಅಪಘಾತಗಳು ಯಾಕಾಗುತ್ತವೆ ಎಂದು ಊಹಿಸಿದರೆ, ರಸ್ತೆ ನಿಯಮಗಳ ಬಗ್ಗೆ ಹಾಗೂ ವಾಹನ ಚಾಲನೆ ನಿಯಮಗಳ ಬಗ್ಗೆ ಚಾಲಕರಿಗೆ ಸರಿಯಾದ ಅರಿವಿಲ್ಲದೆ ಇರುವುದು ಎನ್ನಬಹುದು. ಮೈಸೂರು-ಬೆಂಗಳೂರು ರಸ್ತೆಯಲ್ಲಿ ವಾಹನವನ್ನು ವೇಗವಾಗಿ ಓಡಿಸಲು ಸಾಧ್ಯವೇ ಇಲ್ಲ. ಏಕೆಂದರೆ ಮೊದಲನೇ ಲೇನ್ ವೇಗವಾಗಿ ಹೋಗುವ, ಎರಡನೇ ಲೇನ್ ಮಧ್ಯಮ ವೇಗ ಹಾಗೂ ಮೂರನೇ ಲೇನ್ ಘನ ವಾಹನಗಳಿಗೆ ಹೀಗೆ ವಿಭಾಗಿಸಲಾಗಿರುತ್ತದೆ. ಆದರೆ, ನಾನು ಕಂಡಂತೆ ನಮ್ಮಲ್ಲಿ ವೇಗವಾಗಿ ಹೋಗುವ ಲೇನ್​ಗಳಲ್ಲಿ ಕೆಲವರು ತಡೆರಹಿತವಾಗಿ ಸಾಗಬಹುದು ಎಂದೆನಿಸಿ ನಿಧಾನವಾಗಿ ಸಾಗುತ್ತಿರುತ್ತಾರೆ. ಒಮ್ಮೊಮ್ಮೆ ಘನ ವಾಹನಗಳೂ ಸಂಚರಿಸುತ್ತವೆ. ಆಗ ವೇಗವಾಗಿ ಹೋಗುವ ವಾಹನಗಳು ಎಡಕ್ಕೊಮ್ಮೆ-ಬಲಕ್ಕೊಮ್ಮೆ ಅಡ್ಡಾ-ದಿಡ್ಡಿಯಾಗಿ ಚಲಿಸುತ್ತಾ ಉಳಿದ ವಾಹನವನ್ನು ಹಿಂದಿಕ್ಕಿ ಮುಂದುವರಿಯಬೇಕಾಗುತ್ತದೆ. ಹೀಗೆ ಸಾಗುವುದು ಅಪಾಯಕಾರಿ. ಅಪಘಾತದ ದೃಷ್ಟಿಯಿಂದ ಹೆದ್ದಾರಿಗಳು ಅತ್ಯಂತ ಅಪಾಯಕಾರಿ ಎನ್ನಬಹುದು. ರಾಜ್ಯ, ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಅಪಘಾತಗಳಾಗುವುದು ಕಡಿಮೆ. ಯಾಕೆಂದರೆ ಅಪಘಾತಗಳು ಆಗಬಹುದು ಎಂಬ ಭಯದಿಂದ ಎಚ್ಚರ ವಹಿಸಿ ವಾಹನ ಚಾಲನೆ ಮಾಡುತ್ತಾರೆ. ಆದರೆ, ಹೆದ್ದಾರಿಗಳಲ್ಲಿ ಯಾವುದೇ ತೊಂದರೆಯಿಲ್ಲ ಎಂಬ ಕಾರಣಕ್ಕೆ ವೇಗವಾಗಿ ಸಾಗುತ್ತಾರೆ. ಮಾತ್ರವಲ್ಲದೆ ಚಾಲನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದಾಗ ಅಪಘಾತಕ್ಕೀಡಾಗುತ್ತಾರೆ.

    ಒಮ್ಮೆ ಮಲೇಷ್ಯಾಕ್ಕೆ ಹೋಗಿದ್ದಾಗ ಬಾಡಿಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದೆವು. ಆ ಚಾಲಕ ಬಹಳಷ್ಟು ನಿಧಾನವಾಗಿ ವಾಹನ ಚಲಾಯಿಸುತ್ತಿದ್ದ, ಎದುರುಗಡೆಯಿಂದ ಬಲ ಪಕ್ಕದ ಲೇನ್​ನಲ್ಲಿ ವಾಹನ ಇರದೇ ಇದ್ದರೂ ಹಾಗೂ ಮುಂದಿರುವ ವಾಹವನನ್ನು ಹಿಂದಿಕ್ಕಿ ಹೋಗಲು ಅವಕಾಶವಿದ್ದರೂ ಮುಂದಿರುವ ವಾಹನದ ಹಿಂದೆಯೇ ನಿಧಾನವಾಗಿ ಸಾಗುತ್ತಿದ್ದ. ನನಗಂತೂ ಕೈ-ಕಾಲು ತುರಿಸುವಂತಾಯಿತು. ಯಾಕೆಂದರೆ ನಮ್ಮಲ್ಲಾದರೆ ಅಷ್ಟೊಂದು ಅವಕಾಶವಿದ್ದಾಗ ವಾಹನಗಳನ್ನು ಹಿಂದಿಕ್ಕಿ ಸಾಕಷ್ಟು ದೂರ ಸಾಗಬಹುದಾಗಿತ್ತು. ಆದರೆ, ಸ್ಪಲ್ಪ ಸಮಯದಲ್ಲಿ ಪಕ್ಕದ ಲೇನ್​ನಲ್ಲಿ ಸಾಕಷ್ಟು ವೇಗದಲ್ಲಿ ವಾಹನವೊಂದು ಮುಂದುಗಡೆಯಿಂದ ಕ್ಷಣ ಮಾತ್ರದಲ್ಲಿ ಚಲಿಸಿತು. ಆಗ ಡ್ರೈವರ್ ಯಾಕೆ ಅಷ್ಟೊಂದು ತಾಳ್ಮೆ ನಿಧಾನವಾಗಿ ಚಲಾಯಿಸಿದ ಎಂದು ನನಗೆ ಅರ್ಥವಾಯಿತು. ಒಂದೊಮ್ಮೆ ಮುಂದಿನ ವಾಹನವನ್ನು ಹಿಂದಿಕ್ಕುವ ಪ್ರಯತ್ನ ಮಾಡುತ್ತಿದ್ದಲ್ಲಿ ಎದುರಿನಿಂದ ವೇಗವಾಗಿ ಬರುತ್ತಿರುವ ವಾಹನಕ್ಕೆ ಇದಿರಾಗಿ ಅಪಘಾತಕ್ಕೊಳಗಾಗುವ ಸಾಧ್ಯತೆ ಹೆಚ್ಚಿತ್ತು. ಮಲೇಷ್ಯಾದಂಥ ದೇಶಗಳ ವಾಹನ ಚಾಲಕರ ತಾಳ್ಮೆ, ಸಹನೆ ಮತ್ತು ಮುಂಜಾಗ್ರತೆಗಳು ನಮ್ಮಲ್ಲಿಯೂ ಇದ್ದರೆ ಅಪಘಾತಗಳಾಗುವುದು ಸಾಕಷ್ಟು ತಪ್ಪಬಹುದು ಎಂದು ನನಗನ್ನಿಸಿತು.

    ನಮ್ಮ ದೇಶದಲ್ಲಿ ಮುಂಜಾಗ್ರತೆ, ಎಚ್ಚರಿಕೆಗಳಿಲ್ಲದೆ ವಾಹನಗಳನ್ನು ಮುನ್ನುಗ್ಗಿಸುವ ಪ್ರವೃತ್ತಿ ಹೆಚ್ಚಾಗಿದೆ. ಮುಖ್ಯವಾಗಿ ಘಾಟ್​ಗಳಲ್ಲಿ ಉದಾಹರಣೆಗೆ ಶಿರಾಡಿ, ಆಗುಂಬೆ, ಚಾರ್ವಡಿ ಇತ್ಯಾದಿ ಘಾಟ್​ಗಳಲ್ಲಿ ವಾಹನ ಚಾಲನೆ ಮಾಡುವಾಗ ಬಹಳಷ್ಟು ತಾಳ್ಮೆ, ನಿಪುಣತೆ ಬೇಕಾಗುತ್ತದೆ. ಬಸ್ ಚಾಲಕರು, ಘನ ವಾಹನ ಹಾಗೂ ಇನ್ನಿತರ ವಾಹನಗಳ ಚಾಲಕರು ಬಹಳ ಚೆನ್ನಾಗಿ ವಾಹನ ಚಾಲನೆ ಮಾಡುತ್ತಾರೆ. ಆದರೆ, ಒಬ್ಬಿಬ್ಬರು ವಾಹನ ಚಾಲನಾ ನಿಯಮಗಳನ್ನು ಪಾಲಿಸದೆ ಅಥವಾ ಸಾಕಷ್ಟು ಚಾಲನಾ ನಿಪುಣತೆ ಇಲ್ಲದಿರುವವರು, ಹಿಂದುಗಡೆ ಅಥವಾ ಮುಂದುಗಡೆ ಬರುವ ವಾಹನವನ್ನು ಗಮನಿಸಿದೆ ತಟಕ್ಕನೆ ಬ್ರೇಕ್ ಹಾಕುವ, ತಿರುವುಗಳಲ್ಲಿ ಅವಸರದಿಂದ ಓವರ್​ಟೇಕ್ ಮಾಡುವುದು, ಹೀಗೆ ವಿವಿಧ ಕಾರಣದಿಂದ ಅಪಘಾತಗಳು ನಡೆಯುತ್ತವೆ.

    ಸಚಿವರು ಬರೆದ ಪತ್ರದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವುದರ ಜೊತೆಗೆ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಶೆ. 50ರಷ್ಟನ್ನು ಎರಡು ವರ್ಷಗಳಲ್ಲಿ ಕಡಿಮೆ ಮಾಡುವ ಬಗ್ಗೆ ಗುರಿ ಹಾಕಿಕೊಳ್ಳಿ ಎಂದು ತಿಳಿಸಿದ್ದಾರೆ. ಜತೆಗೆ ಮುಖ್ಯ ರಸ್ತೆಗಳಲ್ಲಿ ಅಪಘಾತಗಳು ಆಗಲು ಕಾರಣ ಏನು ಎಂಬುದನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಿ. ಅಪಘಾತ ವಲಯ ಎಂದು ಬೋರ್ಡ್ ಹಾಕಬೇಕು. ಅಲ್ಲದೆ, ಪ್ರತಿ ತಿಂಗಳೂ ವಾಹನ ಅಪಘಾತಗಳ ಸಂಖ್ಯೆಯನ್ನು ಗಮನಿಸಿ, ಅಪಘಾತಕ್ಕೆ ಕಾರಣವಾಗುವ ವಿಷಯಗಳನ್ನು ಗಮನಿಸಿಕೊಂಡು ಪರಿಹಾರ ಕೈಗೊಳ್ಳಿ ಎಂದಿದ್ದಾರೆ.

    ಅಪಘಾತಗಳಾದಾಗ ಮರುದಿನ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುತ್ತದೆಯೇ ಹೊರತು ಯಾಕೆ ಆಯಿತು? ಯಾರ ತಪ್ಪು, ವಾಹನ ಚಾಲಕನ ನಿರ್ಲಕ್ಷ್ಯವೇ? ವಾಹನದ ವೈಫಲ್ಯವೇ ಹೀಗೆ ವರದಿಗಳು ಬಂದಿರುವುದಿಲ್ಲ. ಅಷ್ಟೊಂದು ಶೀಘ್ರದಲ್ಲಿ ಅಪಘಾತದ ಬಗ್ಗೆ ತನಿಖೆ ನಡೆಸಲು ಕೂಡ ಆಗದಿರುವುದರಿಂದ ಅದರ ವಿವರ ಪ್ರಕಟಿಸಲು ಸಾಧ್ಯವಾಗದಿರಬಹುದು. ಯಾಕಾಗಿ ಅಪಘಾತ ಆಯಿತು ಎಂಬಿತ್ಯಾದಿ ವಿವರಗಳು ಪ್ರಕಟವಾದರೆ ಉಳಿದವರಿಗೂ ಮುಂಜಾಗ್ರತೆ ವಹಿಸಲು ಅನುಕೂಲವಾಗುತ್ತದೆ.

    ರಸ್ತೆ ಅಪಘಾತಗಳು ಮುಖ್ಯವಾಗಿ ಎರಡು ಕಾರಣಗಳಿಂದ ಆಗುತ್ತವೆ. ಒಂದು ಚಾಲಕನ ನಿರ್ಲಕ್ಷ್ಯ, ಬೇಜವಾಬ್ದಾರಿ ಅಥವಾ ಅವಸರ ಇತ್ಯಾದಿ. ಇನ್ನೊಂದು ವಾಹನದ ವೈಫಲ್ಯ. ವಾಹನ ಅಪಘಾತವಾಗದಂತೆ ಇರಲು ವಾಹನವನ್ನು ಸದಾ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಕಾಲ-ಕಾಲಕ್ಕೆ ಅಗತ್ಯ ತಪಾಸಣೆ, ರಿಪೇರಿ ಮಾಡಿಸಿಕೊಳ್ಳಬೇಕು. ವಾಹನದ ವಿಮೆ ಇನ್ನಿತರ ಅಗತ್ಯ ಕಾಗದ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಅಗತ್ಯ. ಈಗ ಉತ್ತಮವಾಗಿ ಬ್ರೇಕ್ ಮತ್ತಿತರ ವ್ಯವಸ್ಥೆಗಳನ್ನು ಹೊಂದಿರುವ ವಾಹನಗಳು ಇದ್ದಾವೆ. ಆದರೂ ಕೆಲವೊಂದು ಸಂದರ್ಭದಲ್ಲಿ ಕ್ಷಣ ಮಾತ್ರದಲ್ಲಿ, ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅಪಘಾತಕ್ಕೆ ಕಾರಣವಾಗುತ್ತವೆ. ಹಾಗೆಯೇ ಚಾಲಕರು ಕೂಡ ಅತ್ಯಂತ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು. ಸರಿಯಾಗಿ ವಿಶ್ರಾಂತಿ ಪಡೆಯಬೇಕು. ಮುಖ್ಯವಾಗಿ ಬಸ್, ಟ್ಯಾಕ್ಸಿ ಘನ ವಾಹನ ಚಾಲಕರು ವಿಶ್ರಾಂತಿ ಪಡೆಯಲೇಬೇಕು. ನಿದ್ದೆ ಬಿಟ್ಟು ಹಗಲೂರಾತ್ರಿ ವಾಹನ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ. ಮದ್ಯಪಾನ ಇತ್ಯಾದಿ ದುಶ್ಚಟಗಳನ್ನು ಮಾಡಲೇಬಾರದು. ರಸ್ತೆ ನಿಯಮ ಹಾಗೂ ವಾಹನ ಚಾಲನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

    ದುಬೈಗೆ ಪ್ರವಾಸಕ್ಕೆ ಹೋದಾಗ ಮರಳು ದಿಬ್ಬಗಳಲ್ಲಿ ವಾಹನ ಚಲಾಯಿಸಿ ಪ್ರವಾಸಿಗರಿಗೆ ರೋಮಾಂಚನ ಉಂಟು ಮಾಡುತ್ತಾರೆ. ನಾವು ಕುಳಿತಿದ್ದ ವಾಹನದಲ್ಲಿ ಭಾರತೀಯ ಕೇರಳಿಗ ಡ್ರೈವರ್ ಇದ್ದ. ಆತನ ಚಾಲನೆಯನ್ನು ಮೆಚ್ಚಿ ಎಷ್ಟು ಚೆನ್ನಾಗಿ ಓಡಿಸುತ್ತಿಯಾ ಎಂದು ಪ್ರಶಂಸಿಸಿದಾಗ ಆತನೆಂದನು, ‘ಇಲ್ಲಿ ಓಡಿಸಬಲ್ಲೆ; ಆದರೆ, ಭಾರತದಲ್ಲಿ ವಿಮಾನ ನಿಲ್ದಾಣದಿಂದ ಮನೆಗೆ ಓಡಿಸಲಾರೆ, ಯಾಕೆಂದರೆ ಭಾರತದಲ್ಲಿ ವಾಹನ ಚಲಾಯಿಸಲು ತಜ್ಞತೆಯಷ್ಟೇ ಇದ್ದರೆ ಸಾಲದು, ಅದೃಷ್ಟವಿರಬೇಕು’ ಎಂದನು. ನೇರ ರಸ್ತೆಗಳಲ್ಲಿ ಮಾತ್ರ ಓವರ್​ಟೇಕ್ ಮಾಡಬೇಕು ಮತ್ತು ತಿರುವುಗಳಲ್ಲಂತೂ ಓವರ್​ಟೇಕ್ ಮಾಡಲೇಬಾರದು.

    ನಾಯಿ ಅಡ್ಡ ಬರುವುದು, ಟೈರ್​ಗಳಲ್ಲಿ ಗಾಳಿ ಇರದಿರುವುದು, ಬ್ರೇಕ್ ಸಮರ್ಪಕವಾಗಿಲ್ಲದಿರುವುದು, ಗುಂಡಿ ತಪ್ಪಿಸಲು ಹೋಗಿ ಚರಂಡಿಗೆ ಬೀಳುವುದು, ಅತಿ ವೇಗದಿಂದ ನಿಯಂತ್ರಣ ಸಿಗದಿರುವುದು ಇತ್ಯಾದಿ ಮಾತ್ರವಲ್ಲದೆ ಸಣ್ಣ-ಪುಟ್ಟ ವಿಚಾರಗಳು ಕೂಡ ಅಪಘಾತಕ್ಕೆ ಕಾರಣವಾಗುತ್ತವೆ. ಯಾರೂ ಬೇಕೆಂದೇ ಅಪಘಾತಗಳನ್ನು ಮಾಡುವುದಿಲ್ಲ. ಆಕಸ್ಮಿಕವಾಗಿ ನಡೆಯುತ್ತವೆ. ಆದಷ್ಟು ಅಪಘಾತಗಳು ಸಂಭವಿಸದಂತೆ ಎಚ್ಚರ ವಹಿಸೋಣ. ರಸ್ತೆ ನಿಯಮ ಮತ್ತು ವಾಹನ ಚಾಲನಾ ನಿಯಮಗಳನ್ನು ಪಾಲಿಸಿಕೊಂಡು ಸುರಕ್ಷತೆಯನ್ನು ಕಾಪಾಡಿಕೊಳ್ಳೋಣ. ನಮ್ಮ ಹಾಗೂ ನಮ್ಮವರ ಅಮೂಲ್ಯ ಜೀವ-ಜೀವನವನ್ನು ಉತ್ತಮವಾಗಿ ಕಾಪಾಡಿಕೊಳ್ಳೋಣ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts