More

    ಸಂಶೋಧನೆಗಳ ಸಾಕ್ಷಿಗಳು ಚಿಕಿತ್ಸೆಗೆ ಬೆನ್ನೆಲುಬೇ?

    ಸಂಶೋಧನೆಗಳ ಸಾಕ್ಷಿಗಳು ಚಿಕಿತ್ಸೆಗೆ ಬೆನ್ನೆಲುಬೇ?ದಿನ ಬೆಳಗಾದರೆ ವೈದ್ಯಕೀಯ ಕ್ಷೇತ್ರ ನಮಗೆ ಅಚ್ಚರಿಗಳ ಮೇಲೆ ಅಚ್ಚರಿಯನ್ನು ನೀಡುತ್ತಾ ಹೋಗುತ್ತದೆ. ಒಂದೆಡೆ ದಿನಕ್ಕೆ ಹತ್ತು ಲೋಟ ಕಾಫಿ ಕುಡಿದರೆ ರೋಗಗಳು ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಹೊಸ ಸಂಶೋಧನೆಯ ಫಲಿತಾಂಶ ಹೇಳಿದರೆ ಮತ್ತೊಂದೆಡೆ ದಿನಕ್ಕೆ ಐದು ಲೋಟಕ್ಕಿಂತ ಹೆಚ್ಚು ಕಾಫಿ ಕುಡಿದರೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ ಹೇಳಿರುತ್ತದೆ! ಮತ್ಯಾವುದೋ ಮಾಧ್ಯಮ ಕಾಫಿ ಕುಡಿಯದೇ ಇದ್ದರೆ ಆಮ್ಲಪಿತ್ತ, ಹೊಟ್ಟೆಯುಬ್ಬರ, ತಲೆನೋವು ಸೇರಿದಂತೆ ಬಹುತೇಕ ರೋಗಗಳು ಮನುಷ್ಯರ ಬಳಿ ಸುಳಿಯುವುದೇ ಇಲ್ಲ ಎಂದು ದೂರದ ದೇಶದಲ್ಲಿ ನಡೆದ ಮತ್ತೊಂದು ವೈಜ್ಞಾನಿಕ ಸಂಶೋಧನೆಯ ನಿರ್ಣಯವನ್ನು ಬಿತ್ತರಿಸುತ್ತಿರುತ್ತದೆ. ಹಾಗೇ ಇನ್ನೊಂದು ದಿನವೊಂದಕ್ಕೆ ಕನಿಷ್ಟ ನಾಲ್ಕು ಲೋಟ ಕಾಫಿ ಕುಡಿಯದಿದ್ದಲ್ಲಿ ಮಾನಸಿಕವಾಗಿ ಕುಗ್ಗಿ ತಲೆನೋವು, ಸುಸ್ತು, ಹೊಟ್ಟೆ ಉರಿ, ನಿದ್ರಾಹೀನತೆ, ಖಿನ್ನತೆಯಂತಹ ತೊಂದರೆಗಳು ತೀವ್ರವಾಗಿ ಕಾಡುತ್ತದೆ ಎಂದು ಹೇಳುತ್ತಿದ್ದಂತೆಯೇ ಕಾಫಿ ಕಂಪನಿಯೊಂದರ ಜಾಹೀರಾತು ಪ್ರಸಾರವಾಗುತ್ತದೆ!

    ಏಕಕಾಲದಲ್ಲಿ ಯಾಕೆ ಹೀಗೆ ತದ್ವಿರುದ್ಧವಾದ ಸಂಶೋಧನಾ ಫಲಿತಾಂಶಗಳು ಬರುತ್ತವೆಯೆಂಬ ವಿಚಾರ ಹಲವರನ್ನು ಹಲವಾರು ಬಾರಿ ಕಾಡಿರಬಹುದು. ಇಂತಹ ಫಲಿತಾಂಶಕ್ಕೆ ಅನೇಕ ಕಾರಣಗಳಿವೆಯಾದರೂ ಸಂಶೋಧನೆಗಳಲ್ಲಿ ಯಾವುದು ವೈಜ್ಞಾನಿಕ ಅಲ್ಲ, ವಸ್ತುನಿಷ್ಠವಾಗಿಲ್ಲ ಎಂದು ನಿರ್ಣಯಿಸುವವರು ಯಾರು ಮತ್ತು ಹೇಗೆ ಎಂಬುದೇ ಯಕ್ಷಪ್ರಶ್ನೆ. ಇವುಗಳಲ್ಲಿ ಕನಿಷ್ಟ ಪಕ್ಷ ಅರ್ಧದಷ್ಟು ಸಂಶೋಧನೆಗಳು ದಾರಿ ತಪ್ಪಿವೆ, ಜನರ ದಾರಿ ತಪ್ಪಿಸುತ್ತಿವೆ. ಇಂತಹ ಸಂಶೋಧನೆಗಳನ್ನೇ ಆಧಾರವಾಗಿ ಇಟ್ಟುಕೊಂಡಾಗ ಔಷಧಿ ಅಥವಾ ಚಿಕಿತ್ಸೆಯನ್ನು ಸಾಕ್ಷಿ ಆಧಾರಿತ ಎಂದು ಹೇಳುವುದರಲ್ಲಿ ಎಷ್ಟು ಅರ್ಥವಿದೆ, ಅದೆಷ್ಟು ಮೌಲ್ಯವಿದೆ? ಇಂದಿನ ರಾಸಾಯನಿಕ ಔಷಧಿಗಳು ಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಹಲವಾರು ವರ್ಷಗಳ ತೀವ್ರ ಸಂಶೋಧನೆಗಳು ನಡೆದಿರುತ್ತದೆ. ವೈಜ್ಞಾನಿಕವಾಗಿ ಪರಾಂಬರಿಸಿಯೂ ನೋಡಲಾಗಿರುತ್ತದೆ.

    ಫಲಿತಾಂಶದ ಅಂಕಿಸಂಖ್ಯೆಗಳ ಆಧಾರದಲ್ಲಿ ವಿಮರ್ಶೆ, ಪರಾಮರ್ಶೆಯನ್ನೂ ಮಾಡಲಾಗಿರುತ್ತದೆ. ಮಾರುಕಟ್ಟೆಗೆ ಬಂದ ನಂತರ ದಿನಗಳೆದಂತೆ ಅಡ್ಡಪರಿಣಾಮಗಳ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಇತ್ತೀಚೆಗಷ್ಟೆ ಮಧುಮೇಹ ಚಿಕಿತ್ಸೆಯ ಹಲವಾರು ಔಷಧಿಗಳು ನಿಷೇಧಿತವಾದದ್ದು ಎಲ್ಲರಿಗೂ ನೆನಪಿರಬಹುದು. ಒಳ್ಳೆಯ ಪರಿಣಾಮಗಳಿಗಿಂತ ದುಷ್ಪರಿಣಾಮಗಳೇ ಹೆಚ್ಚಾದಾಗ ಅವುಗಳು ನಿಷೇಧಿಸಲ್ಪಡುತ್ತವೆ. ಮತ್ತೆ ಕೆಲವೇ ತಿಂಗಳುಗಳಲ್ಲಿ ಅದೇ ಔಷಧಗಳು ಹಸಿರು ನಿಶಾನೆಯೊಂದಿಗೆ ಪುನಃ ಮಾರುಕಟ್ಟೆ ಪ್ರವೇಶಿಸಿದವು!

    ವೈಜ್ಞಾನಿಕವಾಗಿ ನಿಷೇಧಿಸಲ್ಪಟ್ಟು ಮತ್ತೆ ವೈಜ್ಞಾನಿಕವಾಗಿ ಮರುಬಳಕೆಗೆ ಸಿದ್ಧವಾದವು ಎಂಬ ದ್ವಂದ್ವವು ಗೊಂದಲದ ಗೂಡಾಗಿ ಅದೆಷ್ಟು ಹಾಸ್ಯಾಸ್ಪದ ಎನಿಸುತ್ತದೆ. ಇಲ್ಲಿಯೂ ಲಾಬಿಗಳ ಕೈಚಳಕ ಎದ್ದು ಕಾಣುತ್ತದೆ. ನೈಜ ಸಂಶೋಧನೆಗಳಿಗೆ ಬಹುದೊಡ್ಡ ತೊಡರುಗಳು ಇರುವುದೂ ಇಲ್ಲಿಯೇ. ಔಷಧಿಯ ಸಂಶೋಧನೆಗಳಿಗೆ ಬೃಹತ್ ಪ್ರಮಾಣದಲ್ಲಿ ಹಣ ಸುರಿಯಬೇಕಾಗುತ್ತದೆ. ಜನರ ಹಿತದೃಷ್ಟಿಯಿಂದ ಇಂತಹ ಸಂಶೋಧನೆ ನಡೆಸುವುದು ದುಸ್ತರ. ಆದುದರಿಂದ ಸಾಮಾನ್ಯವಾಗಿ ಔಷಧಿ ತಯಾರಿಕಾ ಕಂಪನಿಗಳೇ ಇದರ ಹಿಂದಿರುತ್ತವೆ. ಹಾಗಾಗಿ ಬಹುತೇಕ ಸಂಶೋಧನೆಗಳು ಪೂರ್ವಗ್ರಹ ಪೀಡಿತವಾಗಿಯೇ ನಡೆಯುತ್ತವೆ. ಅದಿಲ್ಲವೆಂದಾದಲ್ಲಿ ಔಷಧಗಳು ಜನರನ್ನು ಸೇರಿದ ದಶಕದ ತರುವಾಯ ಮತ್ತೆ ಅನಾರೋಗ್ಯಕಾರಿ ಎಂದು ನಿರ್ಧರಿಸಲ್ಪಡುವುದಾದರೂ ಹೇಗೆ? ಪ್ರಾರಂಭದ ಸಂಶೋಧನೆಯೇ ಔಷಧಿಗೆ ಸಾಕ್ಷಿ ಆಧಾರವಾಗಿತ್ತಲ್ಲ! ಈಗ ಆ ಸಾಕ್ಷಿ ತದ್ವಿರುದ್ಧವಾಗುವುದು ಹೇಗೆ? ನಾವಿಂದು ಪ್ರತಿನಿತ್ಯ ಒಂದೊಲ್ಲೊಂದು ರಾಸಾಯನಿಕ ಔಷಧಿಗಳು ನಿಷೇಧಿಸಲ್ಪಡುವುದನ್ನು ನೋಡುತ್ತಿದ್ದೇವೆ. ಆದರೆ ಅವುಗಳೆಲ್ಲವೂ ಸಾಕ್ಷಿ ಆಧಾರಿತವಾಗಿಯೇ ಚಿಕಿತ್ಸೆಗೆ ಬಂದ ಔಷಧಗಳು ಎಂಬುದಿಲ್ಲಿ ಗಮನಾರ್ಹ.

    ಇದಿಷ್ಟೇ ಅಲ್ಲ, ನಮ್ಮ ಕಾಲಾವಧಿಯಲ್ಲೇ ನಾಲ್ಕೈದು ಜನರೇಶನ್​ನ ಆಂಟಿಬಯೋಟಿಕ್​ಗಳನ್ನು ನೋಡಿದ್ದೇವೆ. ಮೊದಲಿನದು ಕೆಲಸ ಮಾಡುತ್ತಿಲ್ಲ ಎಂಬುದು ಖಾತ್ರಿಯಾದ ಮೇಲೆ ತಾನೇ ಮುಂದಿನ ಜನರೇಶನ್​ನ ಆಂಟಿಬಯೋಟಿಕ್ ಮಾರುಕಟ್ಟೆಗೆ ಲಗ್ಗೆಯಿಡುವುದು? ಮೊದಲಿನದು ಕೆಲಸ ಮಾಡುತ್ತಿಲ್ಲವೆಂದರೆ ಅದರ ಹಿಂದಿನ ಸಂಶೋಧನೆಯ ಫಲಿತಾಂಶವನ್ನು ಚಿಕಿತ್ಸಾ ಕ್ಷೇತ್ರದಲ್ಲಿ ಬಳಸಿ ನೋಡಿದಾಗ ಪರಿಣಾಮದಲ್ಲಿ ತಿರುವುಮುರುವು ಆಗಿದೆಯೆಂದೇ ಅರ್ಥ. ಹೀಗೆಲ್ಲ ಇರುವುದರಿಂದಲೇ ಆಯುರ್ವೇದ ಔಷಧಿಗಳು ಸಾಗಿಬಂದ ದಾರಿಯು ಅನೇಕ ಸಾರ್ವಕಾಲಿಕ ವೈಜ್ಞಾನಿಕ ಅಚ್ಚರಿಗಳಿಗೆ ಇಂದು ಸಾಕ್ಷಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ ಆಯುರ್ವೆದದ ಸಹಸ್ರಾರು ಶಾಸ್ತ್ರೀಯ ಔಷಧಿಗಳಲ್ಲಿ ಒಂದೇ ಒಂದು ಔಷಧವೂ ಇವತ್ತಿನ ತನಕ ನಿಷೇಧಿಸಲ್ಪಟ್ಟಿಲ್ಲ ಎಂಬುದು ಶಾಶ್ವತವಾದ ಪರಿಣಾಮವುಳ್ಳ ವೈಜ್ಞಾನಿಕ ಸಂಶೋಧನೆಗಳ ಮೇರು ಶಿಖರ ಎನಿಸಿಕೊಳ್ಳುತ್ತದೆ. ಒಂದುವೇಳೆ ಹಿಂದೆ ಸಂಶೋಧನೆಗಳೇ ಇರಲಿಲ್ಲ ಎಂದಾದರೆ ಇಷ್ಟು ಸಹಸ್ರ ವರ್ಷಗಳ ಕಾಲ ಔಷಧಗಳು ಸ್ವತಃ ಬಾಳಿ ನೂರಾರು ಪೀಳಿಗೆಗಳನ್ನು ದಾಟಿ ಮಾನವನ ಬಾಳನ್ನು ಈಗಲೂ ಬೆಳಗುತ್ತಿರುವುದು ಹೇಗೆಂಬುದರ ಹಿಂದೆ ಇನ್ನೂ ಅನೇಕ ಸ್ವಾರಸ್ಯಕರವಾದ ವಿಚಾರಗಳಿವೆ.

    ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​

    180 ಕೆ.ಜಿ. ತೂಕದ ವ್ಯಕ್ತಿ, ಧೋಖಾ ವ್ಯಕ್ತಿತ್ವ: ಖಾಕಿ ಧರಿಸಿ ಹಣ ವಸೂಲಿ ಮಾಡ್ತಿದ್ದ ನಕಲಿ ಇನ್​ಸ್ಪೆಕ್ಟರ್ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts