More

    ಡೆಲ್ಲಿ ಕ್ಯಾಪಿಟಲ್ಸ್‌ಗೆ ಇಂದು ಕೆಕೆಆರ್ ಸವಾಲು

    ಅಬುಧಾಬಿ: ಗೆಲುವಿನ ಓಟಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ತಡೆ ಬಿದ್ದ ಬಳಿಕ ಮತ್ತೆ ಅಗ್ರಸ್ಥಾನಕ್ಕೆ ಮರಳುವ ಹಂಬಲದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೊಸ ನಾಯಕನನ್ನು ಪಡೆದರೂ ಚೇತೋಹಾರಿ ನಿರ್ವಹಣೆ ತೋರಲು ವಿಫಲವಾಗುತ್ತಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್-13ರಲ್ಲಿ ಶನಿವಾರದ ಮೊದಲ ಪಂದ್ಯದಲ್ಲಿ ಸೆಣಸಲಿವೆ.

    ಡೆಲ್ಲಿ ತಂಡಕ್ಕೆ ಈ ಪಂದ್ಯವನ್ನು ಜಯಿಸಿದರೆ ಪ್ಲೇಆಫ್​ ಸ್ಥಾನ ಖಚಿತಪಡಿಸಿಕೊಳ್ಳುವ ಅವಕಾಶವಿದ್ದರೆ, ಕೆಕೆಆರ್ ತಂಡಕ್ಕೆ ಪ್ಲೇಆಫ್​ ಅವಕಾಶಕ್ಕೆ ಹೆಚ್ಚಿನ ಬಲ ತುಂಬಿಸಿಕೊಳ್ಳಲು ಗೆಲುವು ಅಗತ್ಯವಾಗಿದೆ. ಶಾರ್ಜಾದಲ್ಲಿ ನಡೆದ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ತಂಡ 18 ರನ್‌ಗಳಿಂದ ಗೆಲುವು ದಾಖಲಿಸಿತ್ತು.

    ಎಡಗೈ ಆರಂಭಿಕ ಶಿಖರ್ ಧವನ್ ಸಿಡಿಸಿದ ಸತತ 2ನೇ ಶತಕದ ನಡುವೆ ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಆಘಾತ ಎದುರಿಸಿತ್ತು. ಯುವ ಆರಂಭಿಕ ಪೃಥ್ವಿ ಷಾ ಜವಾಬ್ದಾರಿಯುತ ಬ್ಯಾಟಿಂಗ್ ನಿರ್ವಹಣೆ ತೋರದಿರುವುದು ಡೆಲ್ಲಿ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಪೃಥ್ವಿ ಷಾ ಕಳೆದ 4 ಇನಿಂಗ್ಸ್‌ಗಳಲ್ಲಿ 2 ಬಾರಿ ಸೊನ್ನೆ ಸುತ್ತಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ಕೂಡ ಉತ್ತಮ ಆರಂಭ ಪಡೆದರೂ, ದೊಡ್ಡ ಇನಿಂಗ್ಸ್ ಆಡುವಲ್ಲಿ ಎಡವುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಅವರಿಂದಲೂ ಡೆಲ್ಲಿ ತಂಡ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಉತ್ತಮ ನಿರ್ವಹಣೆ ನಿರೀಕ್ಷಿಸುತ್ತಿದೆ.

    ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ದಯನೀಯ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. 8 ವರ್ಷಗಳ ಬಳಿಕ ಆಂಡ್ರೆ ರಸೆಲ್ ಮತ್ತು ಸುನೀಲ್ ನಾರಾಯಣ್ ಇಬ್ಬರೂ ಇಲ್ಲದೆ ಆಡಿದ ಕೆಕೆಆರ್ ತಂಡ ಶೀಘ್ರದಲ್ಲಿ ಲಯಕ್ಕೆ ಮರಳದಿದ್ದರೆ ಟೂರ್ನಿಯ ನಿರ್ಗಮನ ಬಾಗಿಲಲ್ಲಿ ನಿಲ್ಲಬೇಕಾಗುತ್ತದೆ. ತಂಡದ ನಾಯಕತ್ವ ದಿನೇಶ್ ಕಾರ್ತಿಕ್ ಕೈಯಿಂದ ಇವೊಯಿನ್ ಮಾರ್ಗನ್ ಹೆಗಲೇರಿದರೂ, ತಂಡದ ದೌರ್ಬಲ್ಯಗಳನ್ನು ಸರಿಪಡಿಸಲು ಅವರಿಂದ ಸಾಧ್ಯವಾಗಿಲ್ಲ. ಪ್ರಮುಖವಾಗಿ ತಂಡದ ಬ್ಯಾಟಿಂಗ್ ವಿಭಾಗದ ಸರಿನೀಗಿಸಿಕೊಳ್ಳುವುದು ಅಗತ್ಯವಾಗಿದೆ. ಶುಭಮಾನ್ ಗಿಲ್, ನಿತೀಶ್ ರಾಣಾ ಮತ್ತು ಮಾಜಿ ನಾಯಕ ದಿನೇಶ್ ಕಾರ್ತಿಕ್ ಅವರಿಂದ ಜವಾಬ್ದಾರಿಯುತ ಆಟ ಬರಬೇಕಾಗಿದೆ.

    ಟೀಮ್ ನ್ಯೂಸ್:
    ಡೆಲ್ಲಿ ಕ್ಯಾಪಿಟಲ್ಸ್: ಸಣ್ಣ ಗಾಯದ ಸಮಸ್ಯೆಯಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ವೇಗಿ ಆನ್ರಿಚ್ ನೋರ್ಜೆ ಈ ಪಂದ್ಯಕ್ಕೆ ಫಿಟ್ ಆಗಿ ಮರಳುವ ನಿರೀಕ್ಷೆ ಇದೆ. ಇದರಿಂದ ಆಸೀಸ್ ವೇಗಿ ಡೇನಿಯಲ್ ಸ್ಯಾಮ್ಸ್ ಹೊರಗುಳಿಯಬೇಕಾಗುತ್ತದೆ.
    ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 5 ವಿಕೆಟ್ ಸೋಲು.

    ಕೋಲ್ಕತ ನೈಟ್‌ರೈಡರ್ಸ್‌: ಗಾಯದಿಂದಾಗಿ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ವಿಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ ಫಿಟ್ ಆದರೆ ಮತ್ತೆ ತಂಡಕ್ಕೆ ಮರಳಬಹುದು. ಸಿಕ್ಕ 2 ಅವಕಾಶವನ್ನು ಬಳಸಿಕೊಳ್ಳದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಟಾಮ್ ಬ್ಯಾಂಟನ್‌ಗೆ ಹೊರಗುಳಿಯಬಹುದು. ಸುನೀಲ್ ನಾರಾಯಣ್ ಬೌಲಿಂಗ್‌ಗೆ ಕ್ಲೀನ್‌ಚಿಟ್ ಸಿಕ್ಕಿರುವುದರಿಂದ ಅವರು ಮರಳಿ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಸತತ ವೈಫಲ್ಯ ಕಾಣುತ್ತಿರುವ ನಿತೀಶ್ ರಾಣಾ ಬದಲಿಗೆ ರಿಂಕು ಸಿಂಗ್ ಆಡುವ ಸಾಧ್ಯತೆಯೂ ಇದೆ.
    ಕಳೆದ ಪಂದ್ಯ: ಆರ್‌ಸಿಬಿ ವಿರುದ್ಧ 8 ವಿಕೆಟ್ ಸೋಲು.

    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.
    ಮುಖಾಮುಖಿ: 24
    ಡೆಲ್ಲಿ: 11
    ಕೆಕೆಆರ್: 13

    ಮುಂಬೈ ಭರ್ಜರಿ ಜಯಭೇರಿ, ಐಪಿಎಲ್‌ನಿಂದ ಹೊರಬಿದ್ದ ಚೆನ್ನೈ ಸೂಪರ್‌ಕಿಂಗ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts