More

    ಮತಗಟ್ಟೆಗಳಲ್ಲಿನ ಸೌಕರ್ಯ ಪರಿಶೀಲಿಸಿದ ಡಿಸಿ

    ಹುಬ್ಬಳ್ಳಿ : ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸಿಬ್ಬಂದಿ ನೇಮಕಾತಿ, ತರಬೇತಿ ಹಾಗೂ ಮತಗಟ್ಟೆ ಮೂಲ ಸೌಕರ್ಯಗಳ ಪರಿಶೀಲನಾ ಕಾರ್ಯ ಬರದಿಂದ ನಡೆದಿದ್ದು, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಬುಧವಾರದಂದು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.

    ಹುಬ್ಬಳ್ಳಿ ತಾಲೂಕಿನ ಮಂಟೂರು ಮತ್ತು ಬಂಡಿವಾಡ ಗ್ರಾಮಗಳಲ್ಲಿನ ಕ್ಲಸ್ಟರ್ ಮತಗಟ್ಟೆಗಳಿಗೆ ಭೇಟಿ ನೀಡಿದರು. ಅಲ್ಲಿನ ಕುಡಿಯುವ ನೀರು, ಶೌಚಾಲಯ, ಕಟ್ಟಡದ ಭದ್ರತೆ, ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಸುಗಮವಾಗಿ ಮತಗಟ್ಟೆ ಸಂರ್ಪಸಲು ರ‍್ಯಾಂಪ್ ವ್ಯವಸ್ಥೆ, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಬಗ್ಗೆ ತಹಸೀಲ್ದಾರ ಪ್ರಕಾಶ ಹೊಳೆಪ್ಪನವರಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು.

    ಮತಗಟ್ಟೆಯಲ್ಲಿ ಉಪಸ್ಥಿತರಿದ್ದ ಮತಗಟ್ಟೆ ಅಧಿಕಾರಿ (ಬಿಎಲ್​ಒ)ಗಳಿಗೆ ಅಂತಿಮ ಮತದಾರ ಪಟ್ಟಿ ಬಗ್ಗೆ ತಿಳಿಸಿ, ಹೊಸ ಹೆಸರು ಸೇರ್ಪಡೆಗೆ ಅವಕಾಶವಿದ್ದು ಸರಿಯಾಗಿ ಪರಿಶೀಲನೆ ಮಾಡಿದ ನಂತರ ಕ್ರಮ ವಹಿಸಲು ಸೂಚಿಸಿದರು.

    ಹುಬ್ಬಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 128 ಮತಗಟ್ಟೆಗಳಿದ್ದು, ಪ್ರತಿಯೊಂದು ಮತಗಟ್ಟೆಯನ್ನು ಮತ್ತೊಂದು ಬಾರಿ ಪರಿಶೀಲಿಸಿ, ಸಣ್ಣಪುಟ್ಟ ದುರಸ್ತಿ ಇದ್ದರೆ ತಕ್ಷಣ ಕ್ರಮ ವಹಿಸಲು ಜಿಲಾಧಿಧಿಕಾರಿ ಅವರು ತಹಶೀಲ್ದಾರರಿಗೆ ನಿರ್ದೇಶಿಸಿದರು.

    ನಂತರ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಮತ್ತು ಅಣ್ಣಿಗೇರಿ ಪಟ್ಟಣದ ಕ್ಲಸ್ಟರ್ ಮತಗಟ್ಟೆಗಳಿಗೆ ಜಿಲಾಧಿಕಾರಿ ಭೇಟಿ ನೀಡಿ, ಕ್ಲಸ್ಟರ್ ಮತಗಟ್ಟೆಗಳಲ್ಲಿ ಜನದಟ್ಟಣೆ ಆಗುವುದರಿಂದ ಯೋಜನಾ ಬದ್ಧವಾಗಿ ಮತಗಟ್ಟೆ ಪ್ರವೇಶ ಮತ್ತು ನಿರ್ಗಮನ ಮಾಡಿಕೊಳ್ಳಬೇಕು. ಪ್ರತಿ ಮತಗಟ್ಟೆಗೆ ಪ್ರತ್ಯೇಕವಾಗಿ ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯಗಳನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು.

    ಈಗಾಗಲೇ ಎಲ್ಲ ತಾಲೂಕುಗಳಿಗೆ ಸೆಕ್ಟರ್ ಆಫೀಸರ್​ಗಳನ್ನು ನೇಮಿಸಲಾಗಿದೆ. ಅವರೊಂದಿಗೆ ತಾಲೂಕು ಆಡಳಿತ ಸಮನ್ವಯ ಸಾಧಿಸಿ, ಚುನಾವಣೆಯನ್ನು ಯಶಸ್ವಿಯಾಗಿ ಜರುಗಿಸಬೇಕೆಂದು ತಿಳಿಸಿದರು.

    ತಹಶಿಲ್ದಾರ ರಾಜು ಮಾವರಕರ ಮಾತನಾಡಿ, ಅಣ್ಣಿಗೇರಿ ತಾಲೂಕಿನ ಎಲ್ಲ 63 ಮತಗಟ್ಟೆಗಳನ್ನು ಸಿದ್ಧಗೊಳಿಸಲಾಗಿದೆ. ಮತೊಮ್ಮೆ ಪ್ರತಿ ಮತಗಟ್ಟೆಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಕ್ಲಸ್ಟರ್, ಸೂಕ್ಷ್ಮ ಮತ್ತು ವಲ್ನೆರಬಲ್ ಮತಗಟ್ಟೆಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಸರಿಯಾದ ಮಾಹಿತಿ ಮತ್ತು ಸಹಕಾರ ನೀಡಬೇಕು ಎಂದು ತಿಳಿಸಿದರು.

    ಮತಗಟ್ಟೆ ಪರಿಶೀಲನೆ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ, ಹುಬ್ಬಳ್ಳಿ ತಹಶೀಲ್ದಾರ ಪ್ರಕಾಶ ಹೊಳೆಪ್ಪನವರ, ಗ್ರಾಮೀಣ ಸಿ.ಪಿ.ಐ. ಮುರುಗೇಶ ಚನ್ನಣ್ಣನವರ, ಕಂದಾಯ ನಿರೀಕ್ಷಕ ಅಯ್ಯನಗೌಡರ ಹಾಗೂ ಅಣ್ಣಿಗೇರಿ ತಹಶೀಲ್ದಾರ ರಾಜು ಮಾವರಕರ, ಸಿ.ಪಿ.ಐ. ರವಿಕುಮಾರ ಕಪ್ಪುತ್ತನವರ, ಕಂದಾಯ ನಿರೀಕ್ಷಕ ರಿಷಿಕುಮಾರ ಸಾರಂಗಿ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts