More

    ಕೋಲಾರ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

    ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನವು ಶುಕ್ರವಾರ ಶಾಂತಿಯುತವಾಗಿ ನಡೆದಿದ್ದು, ಕ್ಷೇತ್ರಾದ್ಯಂತ ಅಂದಾಜು ಶೇ.78.11 ಮತದಾನವಾಗಿದೆ.

    ಬೆಳಗ್ಗೆ 7 ಗಂಟೆಗೆ 2060 ಮತಗಟ್ಟೆಗಳಲ್ಲಿ ಏಕಕಾಲಕ್ಕೆ ಮತದಾನ ಶುರುವಾಗಿ ಕೆಲವೆಡೆ ಸಂಜೆ 7ರ ತನಕವು ನಡೆಯಿತು. ಆರಂಭದಲ್ಲಿ 10 ಗಂಟೆ ತನಕ ಮತದಾನ ಬಿರುಸಾಗಿ ನಡೆಯಿತು. ಜಿಲ್ಲೆಯಲ್ಲಿ ಬೆಳಗ್ಗೆ 9ಕ್ಕೆ ಶೇ.8.35 ಹಾಗೂ 11ಕ್ಕೆ ಶೇ.20.52 ಮತದಾನವಾಗಿತ್ತು.
    ಬಿಸಿಲಿನ ತಾಪಮಾನ ಹೆಚ್ಚಾದ ಕಾರಣ ಮತದಾನ ನಿಧಾನಗತಿಯಲ್ಲಿ ನಡೆಯಿತು. ಮಧ್ಯಾಹ್ನ 1ಕ್ಕೆ ಶೇ.37.19, 3 ಗಂಟೆತನಕ ಶೇ.45.80 ಹಾಗೂ ಸಂಜೆ 5ಕ್ಕೆ 71.26 ಮತದಾನವಾಗಿತ್ತು. ಕ್ಷೇತ್ರದಲ್ಲಿ ಒಟ್ಟು 1726914 ಮತದಾರರಿದ್ದು ಆ ಪೈಕಿ ಪುರುಷರು 853829, ಮಹಿಳೆಯರು 872874 ಹಾಗೂ 1023 ಇತರ ಮತರಾರಿದ್ದು, ಒಟ್ಟು 1351426 ಮತದಾರರು ಮತ ಚಲಾಯಿಸಿದ್ದು, ಆ ಪೈಕಿ ಪುರುಷರು 680280, ಮಹಿಳೆಯರು 671070 ಹಾಗೂ ಇತರ 76 ಮಂದಿ ಮತದಾನ ಮಾಡಿದ್ದಾರೆ.
    ಲೋಕಸಭಾ ಚುನಾವಣಾ ಕಣದಲ್ಲಿ ಒಟ್ಟು 18 ಮಂದಿ ಸ್ಪರ್ಧಿಸಿದ್ದರು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಜೂ. ೪ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
    ಮೊದಲ ಬಾರಿಗೆ ಮತದಾನ ಮಾಡಿದ ಯುವಕ, ಯುವತಿಯರು ಖುಷಿಪಟ್ಟರು. 85 ವರ್ಷಕ್ಕೂ ಮೆಲ್ಪಟ್ಟ ಹಾಗೂ ಶತಾಯುಷಿಗಳು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಇದರ ನಡುವೆಯೂ ಕೆಲವರು ಮತಗಟ್ಟೆಗೆ ಬಂದು ಮತದಾನ ಮಾಡಿ ಮಾದರಿಯಾಗಿದ್ದಾರೆ. ಅಂಗವಿಕಲರು ಸಹ ಇವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಮತದಾನಕ್ಕೆ ಆಗಮಿಸುವ ಮತದಾರರ ದಣಿವು ನೀಗಿಸಲು ಕುಡಿಯುವ ನೀರು, ಹೆಚ್ಚು ಬಿಸಿಲಿರುವ ಕಾರಣ ಶಾಮಿಯಾನ, ಅಂಗವಿಕಲರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
    ಕೋಲಾರದ ಪ್ರಥಮ ದರ್ಜೆ ಕಾಲೇಜಿನ ಭದ್ರತಾ ಕೊಠಡಿಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರಪಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ವಿಭಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತ ಯಂತ್ರಗಳನ್ನು ಆಯ್ದ ಸ್ಥಳಗಳಲ್ಲಿ ಡಿ ಮಸ್ಟರಿಂಗ್ ಮಾಡಿ, ಆನಂತರ ಭದ್ರತಾ ಕೇಂದ್ರಕ್ಕೆ ತಂದು ಭದ್ರಪಡಿಸಲಾಗುತ್ತದೆ.

    ಅಭ್ಯರ್ಥಿಗಳ ರೌಂಡ್ಸ್: ಚುನಾವಣಾ ಕಣದಲ್ಲಿರುವ ಎನ್‌ಡಿಎ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಸೇರಿ ಇತರ ಅಭ್ಯರ್ಥಿಗಳು ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳಿ ಬೆಂಬಲಿಗರಿಂದ ಮಾಹಿತಿ ಪಡೆದುಕೊಂಡಿದ್ದು ಕಂಡುಬಂತು.

    • ದುಬೈನಿಂದ ಬಂದು ಮತದಾನ
      ಕೋಲಾರದ ನಿವಾಸಿ ಅಬ್ದುಲ್ ಸುಬಾನ್ ದುಬೈನಲ್ಲಿ ವಾಸವಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಬುಧವಾರವೆ ಕೋಲಾರಕ್ಕೆ ಆಗಮಿಸಿದ್ದರು. ಶುಕ್ರವಾರ ನಗರದ ಪಿಸಿ ಬಡಾವಣೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
      ದುಬೈನಲ್ಲಿ ವಾಸವಿದ್ದರೂ ವಿಳಾಸವನ್ನು ಬದಲಾವಣೆ ಮಾಡಿಕೊಂಡಿಲ್ಲ, ನನ್ನ ವಿಳಾಸವನ್ನು ಕೋಲಾರದಲ್ಲೆ ಉಳಿಸಿಕೊಂಡಿದ್ದೇನೆ, ಇಲ್ಲಿ ನಮ್ಮ ಸಂಬಂಧಿಕರು ಇದ್ದಾರೆ. ಇದರಿಂದಾಗಿ ಆಗಾಗ ಬಂದು ಹೋಗುತ್ತಿರುತ್ತೆನೆ ಎಂದು ಅಬ್ದುಲ್ ಸುಬಾನ್ ಹೇಳಿದರು.
    • ಯುಎಸ್‌ಎ ಉದ್ಯೋಗಿನಿ ಮತಚಲಾವಣೆ
      ಕೋಲಾರ ನಗರದ ಮಾಸ್ತಿ ಬಡಾವಣೆಯ ಅನುಪಮಾ ಜಯಕುಮಾರ್ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಗುರುವಾರ ಕೋಲಾರಕ್ಕೆ ಆಗಮಿಸಿ ಮತ ಚಲಾಯಿಸಿದರು.
    • ಡಿಮಸ್ಟರಿಂಗ್ ಕೇಂದ್ರಗಳು
      ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿದ್ದು, ಶಿಡ್ಲಘಟ್ಟ ಸರ್ಕಾರಿ ಪ್ರೌಢ ಶಾಲೆ, ಚಿಂತಾಮಣಿ ಪಾಲಿಟೆಕ್ನಿಕ್ ಕಾಲೇಜು, ಶ್ರೀನಿವಾಸಪುರ ಪಿಯು ಬಾಲಕಿಯರ ಕಾಲೇಜು, ಮುಳಬಾಗಿಲು ಸರ್ಕಾರಿ ಪಿಯು ಕಾಲೇಜು, ಕೆಜಿಎಫ್ ಸರ್ಕಾರಿ ಮೇನ್ಸ್ ಶಾಲೆ, ಬಂಗಾರಪೇಟೆಯ ದೇಶಿಹಳ್ಳಿ ಸರ್ಕಾರಿ ಆದರ್ಶ ಶಾಲೆ, ಕೋಲಾರ ಸರ್ಕಾರಿ ಪಿಯು ಕಾಲೇಜು ಹಾಗೂ ಮಾಲೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಡಿ ಮಸ್ಟರಿಂಗ್ ನಡೆಯಲಿದ್ದು, ಆನಂತರ ಮತ ಏಣಿಕೆ ಕೇಂದ್ರಕ್ಕೆ ತಂದು ಭದ್ರಪಡಿಸಲಾಯಿತು. ಭದ್ರತಾ ಕೊಠಡಿಹೊಳಗೆ ಯಾರು ಪ್ರವೇಶ ಮಾಡದಂತೆ ಮೂರು ಸುತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ 27*4 ತಾಸು ಸಿಟಿ ಟಿವಿಗಳನ್ನು ಅಳವಡಿಸಲಾಗಿದ್ದು, ಕಟ್ಟೆಚ್ಚರವಹಿಸಲಾಗಿದೆ.

    ಈಗ ಏನಿದ್ದರೂ ಸೋಲು-ಗೆಲುವಿನ ಲೆಕ್ಕಾಚಾರ:
    ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಚುನಾವಣೆ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರಗೊಂಡಿದೆ. ಜೂ.4ರಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಕೆ.ವಿ.ಗೌತಮï ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ನಡುವೆ ತೀವ್ರ‌ ಪೈಪೋಟಿ ಏರ್ಪಟ್ಟಿತ್ತು. ಎಂ.ಮಲ್ಲೇಶ್‌ ಬಾಬು ಸ್ವಗ್ರಾಮ ಕುಂಬಾರಹಳ್ಳಿಯಲ್ಲಿ ಮತ ಚಲಾಯಿಸಿದ್ದರೆ, ಕೆ.ವಿ.ಗೌತಮ ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದರು ತಮಗೆ ಮತ ಹಾಕಿಕೊಳ್ಳುವ ಭಾಗ್ಯ ಇಲ್ಲವಾಗಿದೆ. ಮತದಾನ ದಿನವು ಸಹ ಅಭ್ಯರ್ಥಿಗಳು ವಿವಿಧ ಮತಗಟ್ಟೆಗಳಿಗೆ ತೆರಳಿ ತಮ್ಮ ಬೆಂಬಲಿಗರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಫಲಿತಾಂಶ ದಿನದ ತನಕ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts