More

    ಕೃಷಿ ವಲಯ ನಿರ್ಲಕ್ಷೃಕ್ಕೆ ಆಕ್ರೋಶ

    ಮದ್ದೂರು: ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲವನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ಕೃಷಿಕ ಹಾಗೂ ಕೃಷಿ ವಲಯವನ್ನು ರಕ್ಷಿಸುವಂತೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಪ್ರಗತಿಪರ ಸಂಘಟನೆ ತೀರ್ಮಾನಿಸಿತು.

    ಪಟ್ಟಣದ ಪಿಕಾರ್ಡ್ ಬ್ಯಾಂಕ್‌ನ ಕುವೆಂಪು ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಯ ಮುಖಂಡ ನ.ಲಿ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ‘ಬರಪರಿಹಾರ ಹೀಗಿರಲಿ’ ಚಿಂತನಾ ಕಾರ್ಯಕ್ರಮದಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

    50 ವರ್ಷಗಳಲ್ಲಿ ಕಂಡರಿಯದ ಭೀಕರ ಬರಗಾಲ ಎದುರಾಗಿದ್ದು ಇಂತಹ ಸಮಯದಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಸರ್ಕಾರ ನೀತಿ ಸಂಹಿತೆ ನೆಪದಲ್ಲಿ ಕಾಲಹರಣ ಮಾಡುತ್ತಿರುವುದು ಖಂಡನೀಯ. ಅಲ್ಲದೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಗಿಬೆಳೆಗೆ ವಿಮೆ ಮಾಡಿಸಿದ್ದ ರೈತರಿಗೆ ಈವರೆಗೂ ವಿಮೆ ಹಣ ಬಂದಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

    ಹಾಲು ಉತ್ಪಾದಕರಿಗೆ ನೀಡುವ ಪ್ರೊತ್ಸಾಹ ಧನವನ್ನು ಐದಾರು ತಿಂಗಳಿನಿಂದ ಕೊಟ್ಟಿಲ್ಲ. ಹೈನುಗಾರರಿಗೆ ಕೂಡಲೇ ಬಾಕಿ ಹಣ ಪಾವತಿಸುವ ಕುರಿತು ಸರ್ಕಾರದ ಗಮನ ಸೆಳೆಯಲು ಸಭೆ ಒಕ್ಕೂರಲಿನಿಂದ ತೀರ್ಮಾನಿಸಿತು.

    ಜಾನುವಾರುಗಳಿಗೆ ಮೇವಿನ ಬ್ಯಾಂಕ್ ತೆಗೆಯಬೇಕು. ಮುಂದಿನ ಹಂಗಾಮಿಗೆ ಉಚಿತವಾಗಿ ಕಬ್ಬು, ಭತ್ತ ರಾಗಿ ಹಾಗೂ ಇತರ ಕಾಳಿನ ಬಿತ್ತನೆ ಬೀಜ ವಿತರಣೆಗೆ ಕ್ರಮ ವಹಿಸಬೇಕು. ಸ್ವ ಸಹಾಯ ಸಂಘಗಳಿಗೆ ಪಾವತಿಸಬೇಕಾದ ಕಂತನ್ನು ವಿಸ್ತರಿಸಲು ಸರ್ಕಾರ ಕ್ರಮ ವಹಸಿಬೇಕು ಎಂಬ ಆಗ್ರಹ ಕೇಳಿಬಂತು.

    ಸಭೆಯಲ್ಲಿ ಪ್ರಗತಿಪರ ಸಂಘಟನೆ ಮುಖಂಡರಾದ ಟಿ.ಎಸ್.ಪ್ರಸನ್ನ ಕುಮಾರ, ದಯಾನಂದ, ಶ್ರೀನಿವಾಸ್, ಸೊ.ಶಿ.ಪ್ರಕಾಶ್, ಉಮೇಶ್ ಕೊತ್ತನಹಳ್ಳಿ, ಮಹೇಂದ್ರ ಅಣ್ಣೂರು, ಕೀಳಘಟ್ಟ ನಂಜುಂಡಯ್ಯ, ಮರಳಿಗ ಶಿವರಾಜ್, ದೇಶಹಳ್ಳಿ ಬೋರಣ್ಣ, ವಳಗೆರೆಹಳ್ಳಿ ವೆಂಕಟೇಶ, ವಿ.ಸಿ. ಉಮಾಶಂಕರ್, ಚನ್ನಪ್ಪ, ಉಪ್ಪಿನಕೆರೆ ಶಿವರಾಮ್, ಸಕ್ಕರೆ ನಾಗರಾಜ್, ರಾಖೇಶ್ ಕುದರಗುಂಡಿ, ದೇಶಹಳ್ಳಿ ಶಿವಪ್ಪ, ಚಂದೂಪೂರ ಶಿವಲಿಂಗೇಗೌಡ, ಗೋಪಾಲ್ ತಗ್ಗಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts