More

  ಕಸದ ರಾಶಿಯಿಂದ ಅನೈರ್ಮಲ್ಯ ತಾಂಡವ

  ಮದ್ದೂರು: ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಪೇಟೆ ಬೀದಿ ಸೇರಿದಂತೆ ಹಲವು ಕಡೆ ಕಸದ ರಾಶಿ ತುಂಬಿ ತುಳುಕುತ್ತಿದ್ದರೂ ಪುರಸಭಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಅನೈರ್ಮಲ್ಯ ತಾಂಡವಾಡುತ್ತಿದೆ.

  ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕೊಲ್ಲಿ ವೃತ್ತ, ಪಟ್ಟಣದ ಪುರಾಣ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆ ಹಾಗೂ ಪಟ್ಟಣದ ಪೇಟೆ ಬೀದಿಯ ಬೈರಾನ್ ನಾಲೆ ಸಮೀಪ ಸೇರಿದಂತೆ ಹಲವು ಕಡೆ ಕಸದ ರಾಶಿ ಬಿದಿದ್ದರೂ ಪುರಸಭಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರು-ಮೈಸೂರು ಹೆದ್ದಾರಿಯ ಕೊಲ್ಲಿಯ ಪಕ್ಕದಲ್ಲೇ ಕಸದ ರಾಶಿ ಇರುವುದರಿಂದ ವಾಹನ ಸವಾರರಿಗೆ ಕಸ ರಾಶಿ ಸ್ವಾಗತ ಕೋರುತ್ತಿದೆ ಹಾಗೂ ಕಸ ಕೊಲ್ಲಿಗೆ ಸೇರುವ ಮೂಲಕ ನೀರು ಕಲುಷಿತಗೊಳ್ಳುತ್ತಿದೆ. ಪಟ್ಟಣದ ಪೇಟೆ ಬೀದಿಯ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಬಾಳೆದಿಂಡು, ಬಾಳೆ ಎಲೆ ಸೇರಿದಂತೆ ಕಸವನ್ನು ಹಾಕುತ್ತಿರುವುದರಿಂದ ಇಲ್ಲಿ ಸಂಚಾರ ಮಾಡುವ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ.

  ಇದರ ಜತೆಗೆ ಪೇಟೆ ಬೀದಿಯಲ್ಲಿರುವ ಬೈರಾನ್ ನಾಲೆಯ ಸಮೀಪದ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಹಾಕುತ್ತಿರುವುದರಿಂದ ಅನೈರ್ಮಲ್ಯ ತಾಂಡವಾಡುವ ಜತೆಗೆ ಗಬ್ಬೆದ್ದು ನಾರುತ್ತಿದೆ. ಇದರ ಪರಿಣಾಮವಾಗಿ ರೋಗ ರುಜೀನಗಳ ಭೀತಿ ಶುರುವಾಗಿದೆ. ಇದರಿಂದ ಪೇಟೆ ಬೀದಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗಿದೆ.

  ಪಟ್ಟಣದ ಹಲವು ಕಡೆಗಳಲ್ಲಿ ಇದೇ ರೀತಿ ಕಸದ ರಾಶಿ ಬಿದ್ದಿದ್ದರು ಪುರಸಭಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಸದ ರಾಶಿಯನ್ನು ಹಾಗೆ ಬಿಡುವುದರ ಮೂಲಕ ಪಟ್ಟಣದ ಅಂದವನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಪುರಸಭಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

  ಸಾರ್ವಜನಿಕರು ಕೂಡ ಕಸವನ್ನು ಎಲ್ಲೆಂದರಲ್ಲಿ ಬಿಸಾಕುವುದನ್ನು ಬಿಟ್ಟು ಪ್ರತಿನಿತ್ಯ ಪುರಸಭೆಯ ಆಟೋಗೆ ಕಸವನ್ನು ಹಾಕಿದರೆ ಸಮಸ್ಯೆ ಉಂಟಾಗುವುದಿಲ್ಲ. ಇದನ್ನು ಸಾರ್ವಜನಿಕರು ಅರಿತುಕೊಂಡು ಪುರಸಭಾ ಅಧಿಕಾರಿಗಳೊಂದಿಗೆ ಸಹಕರಿಸಿದರೆ ಕಸದ ಸಮಸ್ಯೆಯನ್ನು ತಡೆಗಟ್ಟಬಹುದು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts