More

    ಸಾರ್ವಜನಿಕವಾಗಿ ಏಕವಚನದಲ್ಲಿ ಬೈದಾಡಿಕೊಂಡ ಸಂಸದ-ಶಾಸಕ

    ದಾವಣಗೆರೆ: ಕರೊನಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಡುವೆ ಜಟಾಪಟಿ ನಡೆದಿದೆ.

    ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡ ಉಭಯ ನಾಯಕರು ಒಂದು ಹಂತದಲ್ಲಿ ಕೈಕೈ ಮಿಲಾಯಿಸಲು ಮುಂದಾಗಿದ್ದರು.

    ಇದನ್ನೂ ಓದಿ: ಅಡಮಾನ ಸಾಲ ಖರೀದಿ ಮಿತಿ ಏರಿಕೆ; ರೀಲರ್ಸ್, ಟ್ರೇಡರ್ಸ್ ಸಂತಸ

    ತಮ್ಮದೇ ಪಕ್ಷದ ನಾಯಕರಿಬ್ಬರೂ ಸಾರ್ವಜನಿಕವಾಗಿ ಬೈದಾಡಿಕೊಂಡು, ಹೊಡೆದಾಡಲು ಮುಂದಾಗಿದ್ದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಮತ್ತು ಸಚಿವ ಡಾ. ಸುಧಾಕರ್​ ಇಬ್ಬರೂ ಅಸಹಾಯಕರಾಗಿ ಮೂಕಪ್ರೇಕ್ಷಕರಾದರು.

    ಲಾಕ್‌ಡೌನ್ ಇರುವುದರಿಂದ ಜನರ ಬಳಿ ಹಣವಿಲ್ಲ, ಶುದ್ಧ ಕುಡಿಯುವ ನೀರನ್ನು ಜನರಿಗೆ ಉಚಿತವಾಗಿ ಕೊಡಬೇಕು ಎಂದು ಮಾಡಾಳು ವಿರೂಪಾಕ್ಷಪ್ಪ ಸಲಹೆ ನೀಡಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ ಅವರ ಕೋಪಕ್ಕೆ ಕಾರಣವಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಕರೊನಾ ಅಟ್ಟಹಾಸ: ಇಂದು 30 ವಯಸ್ಸಿಗಿಂತ ಕೆಳಗಿನವರಲ್ಲೇ ಹೆಚ್ಚು ಪ್ರಕರಣ ಪತ್ತೆ

    ಆಗ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಮಾಡಾಳು ವಿರೂಪಾಕ್ಷಪ್ಪ ನಡುವೆ ವಾಗ್ಯುದ್ಧ ಆರಂಭವಾಯಿತು. ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡರು. ಒಂದು ಹಂತದಲ್ಲಿ ಸಂಸದ ಸಿದ್ದೇಶ್ವರ ಕುರ್ಚಿಯಿಂದ ಎದ್ದು ಮಾಡಾಳು ವಿರೂಪಾಕ್ಷಪ್ಪ ಅವರ ಬಳಿಗೆ ಬಂದರು. ಸ್ವಪಕ್ಷೀಯರ ಗಲಾಟೆ ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಎಸ್ಪಿ ಹನುಮಂತರಾಯ ಮಧ್ಯ ಪ್ರವೇಶಿಸಿ ವಿಕೋಪಕ್ಕೆ ಹೋಗದಂತೆ ತಡೆದರು.
    ಅಷ್ಟಕ್ಕೂ ಈ ಜಟಾಪಟಿಗೆ ಅಂಥ ಗಂಭೀರ ಕಾರಣವೇನೂ ಇರಲಿಲ್ಲ. ಅದ್ಯಾವುದೋ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡ ಇಬ್ಬರೂ ಯುದ್ಧಕ್ಕೆ ಬಿದ್ದವರಂತೆ ವರ್ತಿಸಿದರು.
    ಸಭೆಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಶುದ್ಧ ಕುಡಿಯುವ ನೀರಿನ ವಿಚಾರವನ್ನು ಪ್ರಸ್ತಾಪಿಸಿದರು. 20 ಲೀ. ಶುದ್ಧ ನೀರನ್ನು ಈ ಹಿಂದೆ 2 ರೂ.ಗೆ ನೀಡಲಾಗುತ್ತಿತ್ತು, ಅದನ್ನು 5 ರೂ.ಗೆ ಹೆಚ್ಚಿಸಲಾಗಿದೆ. ಲಾಕ್‌ಡೌನ್ ಆಗಿರುವುದರಿಂದ ಜನರ ಬಳಿ ಹಣವಿಲ್ಲ, ಮೊದಲು ಇದ್ದಂತೆ 2 ರೂ. ನಿಗದಿಪಡಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
    ಅದಕ್ಕೆ ಜಿಪಂ ಸಿಇಒ ಪದ್ಮಾ ಬಸವಂತಪ್ಪ ಪ್ರತಿಕ್ರಿಯಿಸಿ, ಶುದ್ಧ ನೀರನ್ನು 5 ರೂ. ಮಾಡದಿದ್ದರೆ ವ್ಯತ್ಯಾಸದ ಹಣವನ್ನು ಗ್ರಾ.ಪಂ.ಗಳೇ ಭರಿಸಬೇಕಾಗುತ್ತದೆ ಎಂದರು. ಗ್ರಾ.ಪಂ.ಗಳಲ್ಲಿ ಹಣವೆಲ್ಲಿದೆ ಎಂದು ಮಾಡಾಳ್ ಮರುಪ್ರಶ್ನೆ ಮಾಡಿದರು.
    ಆ ಹಂತದಲ್ಲಿ ಸಂಸದ ಜಿ.ಎಂ. ಸಿದ್ಧೇಶ್ವರ ಮಧ್ಯ ಪ್ರವೇಶಿಸಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳಿ ಹೆಚ್ಚುವರಿ ಹಣ ಕೊಡಿಸಿ. ಎಲ್ಲವೂ ಪುಕ್ಕಟೆ ಆಗಬೇಕೆಂದರೆ ಹೇಗೆ ಎಂದು ಕಾಲೆಳೆದರು. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತು. ನಂತರ ಅವರ ನಡುವಿನ ಜಗಳವನ್ನು ಶಮನ ಮಾಡಲು ಎಸ್‌ಪಿ ಅವರೇ ಮಧ್ಯಪ್ರವೇಶ ಮಾಡಬೇಕಾಯಿತು. ಜಿಲ್ಲೆಯ ಶಾಸಕರು, ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.
    ಈ ಕುರಿತು ನಂತರ ಸುದ್ದಿಗಾರರ ಜತೆ ಮಾತನಾಡಿದ ಮಾಡಾಳು ವಿರೂಪಾಕ್ಷಪ್ಪ, ನಾನು ಜನರ ಪರವಾಗಿ ಮಾತನಾಡಿದೆ. ಜನರು ಕಷ್ಟದಲ್ಲಿದ್ದಾರೆ, ಅವರಿಗೆ 2 ರೂ. ದರದಲ್ಲಿ ಶುದ್ಧ ನೀರು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳಿದೆ. ಅದಕ್ಕೆ ಸಂಸದರು ಬಳಸಿದ ಶಬ್ದಗಳು ವಾಗ್ವಾದಕ್ಕೆ ಕಾರಣವಾಯಿತು ಎಂದರು.
    ಜಿ.ಎಂ. ಸಿದ್ದೇಶ್ವರ ಪ್ರತಿಕ್ರಿಯಿಸಿ, ಕೋವಿಡ್ 19 ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಮಾಡಾಳು ವಿರೂಪಾಕ್ಷಪ್ಪ ಕುಡಿವ ನೀರಿನ ವಿಚಾರ ಪ್ರಸ್ತಾಪಿಸಿದಾಗ, ಈ ಸಭೆಯಲ್ಲಿ ಕರೊನಾ ಬಗ್ಗೆ ಚರ್ಚಿಸಬೇಕು. ಕುಡಿಯುವ ನೀರಿನ ಬಗ್ಗೆ ಮಾತನಾಡುತ್ತಿದ್ದಾರೆ, ನೀವು ಅವರಿಗೆ ಹೇಳಬೇಕಿತ್ತು ಎಂದು ಜಿಲ್ಲಾಧಿಕಾರಿಗೆ ಮಂತ್ರಿಗಳು ತಿಳಿಸಿದರು. ಆಗ ನಾನು, ಕುಡಿಯುವ ನೀರಿಗೆ ಹಣ ಬೇಕು, ಸಿಎಂ ಬಳಿಗೆ ಹೋಗಿ ಕೇಳಿದರಾಯಿತು, ಆ ಪ್ರಶ್ನೆ ಈಗೇಕೆ ಎಂದು ಹೇಳಿದೆ. ಅದಕ್ಕೆ ಅವರು ಒರಟಾಗಿ ಮಾತನಾಡಿದರು, ನಾನೂ ಒರಟಾಗಿ ಮಾತಾಡಿದೆ ಎಂದರು.

    ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts