More

    ಸಂವಿಧಾನದ ಆಶಯದಿಂದ ಪ್ರಜಾಪ್ರಭುತ್ವ ರಕ್ಷಣೆ

    ದಾವಣಗೆರೆ : ಸಂವಿಧಾನದ ಆಶಯಗಳನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಸ್ವತಂತ್ರ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಮಾಡಲು ಸಾಧ್ಯ ಎಂದು ಹಿರಿಯ ವಕೀಲ ರಾಮಚಂದ್ರ ಕಲಾಲ್ ಹೇಳಿದರು.
     ಮಾ. 11 ಮತ್ತು 12ರಂದು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತ ವಕೀಲರ ಒಕ್ಕೂಟದ 9ನೇ ರಾಜ್ಯ ಸಮ್ಮೇಳನದ ಪೋಸ್ಟರ್‌ಗಳನ್ನು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಬಿಡುಗಡೆ ಮಾಡಿ ಮಾತನಾಡಿದರು.
     ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶವು ಬಹುತ್ವದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಹೊಂದಿದ್ದು, ಸಂವಿಧಾನವು ಎಲ್ಲ ಜನರ ಸರ್ವತೋಮುಖ ಅಭಿವೃದ್ಧಿ ಮತ್ತು ಹಕ್ಕುಗಳನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
     ಉದಾತ್ತ ವಿಚಾರಗಳು ಯಾವುದೇ ಕಡೆಯಿಂದ ಬಂದರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕಿದೆ. ವಕೀಲರ ಹಿತ ಮತ್ತು ಸಂವಿಧಾನ ರಕ್ಷಣೆಗಾಗಿ ಅಖಿಲ ಭಾರತ ವಕೀಲರ ಒಕ್ಕೂಟದ 9ನೇ ರಾಜ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
     ಮತ್ತೊಬ್ಬ ಹಿರಿಯ ವಕೀಲ ಎಲ್.ಎಚ್. ಅರುಣ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಯಾಗಲಿ, ನ್ಯಾಯಾಂಗ ವ್ಯವಸ್ಥೆ ಅಸ್ಥಿರಗೊಳಿಸುವ ರಾಜಕೀಯ ಹುನ್ನಾರ ನಿಲ್ಲಲಿ ಎಂಬ ಘೋಷಣೆಗಳೋಂದಿಗೆ ವಕೀಲರ ರಾಜ್ಯ ಸಮ್ಮೇಳನ ನಡೆಯುತ್ತಿದೆ ಎಂದು ತಿಳಿಸಿದರು.
     ದೇಶದ ವಿವಿಧೆಡೆ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ, ಹಲ್ಲೆ, ಕೊಲೆ ಮುಂತಾದ ಕೃತ್ಯ ತಡೆಗಟ್ಟಲು ಸರ್ಕಾರಗಳು ಶೀಘ್ರವಾಗಿ ವಕೀಲರ ರಕ್ಷಣಾ ಕಾಯ್ದೆ ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
     ಅನೀಸ್ ಪಾಷಾ ಮಾತನಾಡಿ, ವಕೀಲರು ಇಂದು ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ ಕ್ರಿಯಾಶೀಲವಾಗಿ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಕಂಕಣಬದ್ಧವಾಗಿದೆ ಎಂದರು.
     ವಕೀಲರಾದ ಉಷಾ ಕೈಲಾಸದ್, ಎಚ್.ಎಂ. ನಾಯ್ಕ, ಎನ್.ಬಿ. ನಾಗರಾಜ್, ಕೆ.ಎಚ್. ರುದ್ರೇಶ್, ಬಿ. ತಿರುಕಪ್ಪ, ಮಧು ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts