More

    ತಾಯಿ, ಮಗು ಮರಣ ಪ್ರಮಾಣ ಇಳಿಕೆಗೆ ಕ್ರಮ

    ದಾವಣಗೆರೆ : ಜಿಲ್ಲೆಯಲ್ಲಿ ಸಾಂಸ್ಥಿಕ ಹೆರಿಗೆ ಪ್ರಮಾಣ ಶೇ. 100ರಷ್ಟಿದೆ. ತಾಯಂದಿರ ಮರಣ ಪ್ರಮಾಣ ಒಂದು ಲಕ್ಷ ಜೀವಂತ ಜನನಗಳಿಗೆ 121 ತಾಯಿ ಮರಣ ಸಂಭವಿಸುತ್ತಿದ್ದು ಇದನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ತಾಯ್ತನದ ಸಂದರ್ಭದಲ್ಲಿ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
     ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಈ ಸೂಚನೆ ನೀಡಿದರು.
     ಜುಲೈ ಅಂತ್ಯದ ವರೆಗೆ 8 ತಾಯಿ ಮರಣಗಳು ಸಂಭವಿಸಿದ್ದು ಈ ರೀತಿ ಆಗಬಾರದು ಎಂದಾಗ ಇದರಲ್ಲಿ ಹರಪನಹಳ್ಳಿ 4 ಮತ್ತು ಚಿತ್ರದುರ್ಗದಿಂದ 1 ರೆಫರೆಲ್ ಆಗಿ ಬಂದ ಪ್ರಕರಣಗಳಾಗಿವೆ ಎಂದು ಡಿಎಚ್‌ಒ ಡಾ. ಷಣ್ಮುಖಪ್ಪ ಸಭೆಗೆ ತಿಳಿಸಿದರು. ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ವಹಿಸುವ ತೀವ್ರ ನಿಗಾ ಮತ್ತು ಅತ್ಯುತ್ತಮ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
     ಏಪ್ರಿಲ್ನಿಂದ ಜುಲೈ ಅಂತ್ಯದ ವರೆಗೆ 231 ಶಿಶು ಮರಣಗಳು ಸಂಭವಿಸಿದ್ದು ಒಂದು ಸಾವಿರ ಜೀವಂತ ಜನನಗಳಿಗೆ 35 ಶಿಶು ಮರಣ ಪ್ರಮಾಣವಿದೆ. ಇದನ್ನು ಇನ್ನಷ್ಟು ಕಡಿಮೆ ಮಾಡಲು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಆಡಿಟ್ ಸಭೆಗೆ ಎಲ್ಲ ಪ್ರಕರಣಗಳ ವಿವರವನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
     ಜಿಲ್ಲೆಯಲ್ಲಿ ಶೇ. 97ರಷ್ಟು ಮಕ್ಕಳು ಪೂರ್ಣ ಪ್ರಮಾಣದ ಲಸಿಕೆಯನ್ನು ಪಡೆದಿದ್ದು, ಮಹಿಳಾ ಸಂತಾನಹರಣ ಶಸ್ತ್ರ ಚಿಕಿತ್ಸೆಗಳಲ್ಲಿ ಶೇ. 128 ರಷ್ಟು ಸಾಧನೆಯಾಗಿದೆ. ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ 32 ಪ್ರಕರಣಗಳಿದ್ದು, 22 ರೋಗಿಗಳು ಚೇತರಿಸಿಕೊಂಡಿದ್ದಾರೆ. ಅಂಧತ್ವ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ 5892 ಪ್ರಕರಣಗಳಿಗೆ ಕ್ಯಾಟರ‌್ಯಾಕ್ಟೃ್ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದ್ದು, ಪ್ರಸ್ತುತ 1388 ಕ್ಷಯ ಪ್ರಕರಣಗಳಿವೆ ಎಂದು ಡಿಎಚ್‌ಒ ಸಭೆಗೆ ತಿಳಿಸಿದರು.
     ಜಿಲ್ಲೆಯಲ್ಲಿ 1 ಜಿಲ್ಲಾ ಆಸ್ಪತ್ರೆ, 1 ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, 4 ತಾಲೂಕು ಸಾರ್ವಜನಿಕ ಆಸ್ಪತ್ರೆ, 80 ಪ್ರಾಥಮಿಕ ಆರೋಗ್ಯ ಕೇಂದ್ರಗಳು,  ನಾಲ್ಕು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 11 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಯಾವುದೇ  ವೈದ್ಯರ ಕೊರತೆ ಇಲ್ಲ. ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಾರ್ಮಸಿ ಅಧಿಕಾರಿ ಪ್ರಯೋಗ ಶಾಲಾ ಅಧಿಕಾರಿ ಹುದ್ದೆಯ ಕೆಲವು ಮಾತ್ರ ಖಾಲಿ ಇದ್ದು ಉಳಿದಂತೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.
     ಜಿ.ಪಂ. ಸಿಇಒ ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts