

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದರ್ಶನ್ ಅಭಿನಯದ, ತರುಣ್ ಕಿಶೋರ್ ಸುಧೀರ್ ನಿರ್ದೇಶನದ, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರ ಬಾಕ್ಸಾಫೀಸಿನಲ್ಲಿ ಗೆಲುವಿನ ನಗು ಬೀರಿದೆ. ವರ್ಷದ ಕೊನೆಯ ಶುಕ್ರವಾರ ಡಿ. 29ರಂದು ರಾಜ್ಯಾದ್ಯಂತ ರಿಲೀಸ್ ಆದ ಚಿತ್ರ ಮೂರು ದಿನಗಳಲ್ಲಿ 77 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ. ಆ ಮೂಲಕ ಹೊಸ ದಾಖಲೆ ಬರೆದಿದೆ. ಅದರ ಬೆನ್ನಲ್ಲೇ ಈ ವಾರದಿಂದ ‘ಕಾಟೇರ’ ಚಿತ್ರವನ್ನು ವಿದೇಶಗಳಲ್ಲೂ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಅಮೆರಿಕಾ, ಬ್ರಿಟನ್, ಕೆನಡಾ, ಯೂರೋಪ್ ಸೇರಿ ಹಲವೆಡೆಗಳಲ್ಲಿ ಜ. 5ರಂದು ಸಿನಿಮಾ ರಿಲೀಸ್ ಆಗಲಿದೆ.
ಮೂರು ಅಂಶಗಳು ಮುಖ್ಯ:
ಸಿನಿಮಾ ಒಪ್ಪಲು ನಟ ದರ್ಶನ್ ಮೂರು ಪ್ರಮುಖ ಅಂಶಗಳನ್ನು ಗಮನಿಸುತ್ತಾರಂತೆ. ‘ಹೆಣ್ಣನ್ನು ತುಚ್ಛವಾಗಿ ನೋಡಬಾರದು, ನನ್ನ ನೆಲ, ಕನ್ನಡದ ಬಗ್ಗೆ ಕೇವಲವಾದ ಸಂಭಾಷಣೆ ಇರಬಾರದು, ನಿರ್ಮಾಪಕರಿಗೆ ಒಳ್ಳೆಯದಾಗಬೇಕು. ಈ ಮೂರೂ ಅಂಶಗಳನ್ನು ಇಟ್ಟುಕೊಂಡು ನಾನು ಸಿನಿಮಾ ಮಾಡುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ ದರ್ಶನ್.
ನನಗೆ ಪ್ರಶಸ್ತಿಗಳು ಮುಖ್ಯವಲ್ಲ:
‘ಕಾಟೇರ’ ಚಿತ್ರದಲ್ಲಿ ದರ್ಶನ್ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಜತೆಗೆ ಅವರಿಗೆ ಪ್ರಶಸ್ತಿಗಳು ದೊರೆಯಲಿದೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಕ್ಕೆ ದರ್ಶನ್, ‘ನನಗೆ ಪ್ರಶಸ್ತಿಗಳು ಮುಖ್ಯ ಅಲ್ಲ. ನಾನು ಮಾಡುವುದು ಕಮರ್ಷಿಯಲ್ ಸಿನಿಮಾ, ಪ್ರಶಸ್ತಿಗಲ್ಲ. ನಿರ್ಮಾಪಕರು, ವಿತರಕರು ಹಾಕಿದ ಹಣ ವಾಪಸ್ ಬರಬೇಕು. ದುಡ್ಡು ಕೊಟ್ಟು ಸಿನಿಮಾ ನೋಡಲು ಬರುವ ಜನ ಖುಷಿಯಾಗಿ ಹೊರಗೆ ಬರಬೇಕು. ಕನ್ನಡದ ಜನ ಈ ಚಿತ್ರಕ್ಕೆ ಕೊಡುತ್ತಿರುವ ಪ್ರತಿಕ್ರಿಯೆ ನನ್ನ ಪಾಲಿಗೆ ಆಸ್ಕರ್‌ಗೂ ಮಿಗಿಲಾದ ಪ್ರಶಸ್ತಿ’ ಎಂದು ಹೇಳಿಕೊಂಡರು.
ಇದನ್ನೂ ಓದಿ : ಜಸ್ಟ್ ಪಾಸ್ ಆದವರಿಗೆ ಪ್ರಿನ್ಸಿಪಲ್ ಆದರು ರಂಗಾಯಣ ರಘು!
ಅವರ ಕಾಲ ಧೂಳಿಗೂ ಸಮನಲ್ಲ:
‘ಕಾಟೇರ’ ಚಿತ್ರದಲ್ಲಿ ದರ್ಶನ್, ಡಾ. ರಾಜಕುಮಾರ್ ಅವರ ‘ಭಕ್ತ ಪ್ರಹ್ಲಾದ’ ಚಿತ್ರದ ಡೈಲಾಗ್ ಹೇಳಿದ್ದಾರೆ. ಆ ಬಗ್ಗೆ ದರ್ಶನ್, ‘ಡಾ. ರಾಜಕುಮಾರ್ ಅವರ ಕಾಲಿನ ಧೂಳಿಗೂ ನಾನು ಸಮನಲ್ಲ. ಅವರು ಮಾಡಿದ ನಟನೆಯಲ್ಲಿ ಐದು ಪರ್ಸೆಂಟ್ ಅಲ್ಲ 000.1 ಪರ್ಸೆಂಟ್ ಕೂಡ ನಾವಿಲ್ಲ’ ಎಂದರು.
ಪೈರಸಿ ವಿರುದ್ಧ ಗುಡುಗು
ಇನ್ನು ‘ಕಾಟೇರ’ ಚಿತ್ರ ರಿಲೀಸ್ ಆದ ಎರಡೇ ದಿನಗಳಲ್ಲಿ ಪೈರಸಿ ಕಾಪಿ ಹರಿದಾಡುತ್ತಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದರ್ಶನ್, ‘ಕಷ್ಟ ಪಟ್ಟು, ಇಷ್ಟ ಪಟ್ಟು ಕನ್ನಡ ಸಿನಿಮಾ ಮಾಡಿದ್ದೇವೆ. ತುಂಬ ಜನರ ಶ್ರಮ ಈ ಚಿತ್ರದ ಮೇಲಿದೆ. ರೀಲ್ಸ್ ಮಾಡುವಾಗ, ಜಾಲತಾಣಗಳಲ್ಲಿ ಶೇರ್ ಮಾಡುವಾಗ ನೋಡಿಕೊಂಡು ಶೇರ್ ಮಾಡಿ. ಪೈರಸಿ ಮಾಡುವವರು ಸಿಕ್ಕಿಹಾಕಿಕೊಂಡರೆ ಟಾಟಾ ಬೈಬೈ ಸೀಯೂ…’ ಎಂದು ಎಚ್ಚರಿಕೆ ನೀಡಿದರು.