More

    ರಾಜ್ಯದಲ್ಲಿ ಬಿಜೆಪಿ ಸೋತಿದ್ದಕ್ಕೆ ಮೋದಿ ರಿವೆಂಜ್

    ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಯಾಗಿರುವ ಅಖಿಲ ಭಾರತ ಕಾಂಗ್ರೆಸ್ ರಣದೀಪ್ ಸಿಂಗ್ ಸುರ್ಜೆವಾಲಾ ಚುನಾವಣೆ ಪ್ರಚಾರದಲ್ಲಿ, ತಂತ್ರಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, ಈ ನಡುವೆ ವಿಜಯವಾಣಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

    | ಶ್ರೀಕಾಂತ್ ಶೇಷಾದ್ರಿ

    . ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿದಿದೆ. ಎರಡನೇ ಹಂತದ ಪ್ರಚಾರ ಕೊನೆ ಹಂತ ತಲುಪುತ್ತಿದೆ. ಕಾಂಗ್ರೆಸ್ ಸ್ಥಿತಿ ಹೇಗಿದೆ? ನಿಮ್ಮ ನಿರೀಕ್ಷೆಯಂತೆ ವಾತಾವರಣ ಇದೆ ಎನಿಸಿದೆಯೇ?

    ಮೊದಲ ಹಂತದಲ್ಲಿ ಮತದಾನ ನಡೆದ ಕಡೆ 10ಕ್ಕಿಂತ ಹೆಚ್ಚು ಸ್ಥಾನ ಬರುವುದು ನಿಶ್ಚಿತ. ಜನರಿಗೆ ಕಾಂಗ್ರೆಸ್ ಜತೆಗಿನ ಅಫೆಕ್ಷನ್ ಅವರ ನಗು ಮುಖದಲ್ಲಿ ಗೊತ್ತಾಗುತ್ತಿದೆ. ನಮಗೆ ನಿಶ್ಚಿತವಾಗಿ ಆಶೀರ್ವಾದ ಸಿಕ್ಕಿದೆ. ಒಟ್ಟಾರೆ 20 ಪ್ಲಸ್ ಸ್ಥಾನ ಗೆಲ್ಲುವುದು ನಿಶ್ಚಿತ. ಜನರು ನಮ್ಮ ಮೇಲೆ ಯಾವ ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆಂಬುದಕ್ಕೆ ಒಂದು ಉದಾಹರಣೆ ಎಂದರೆ, ಅರಸೀಕೆರೆ ಪ್ರಚಾರ ಸಭೆಯಲ್ಲಿ ಕಾನೂನು ವಿದ್ಯಾರ್ಥಿನಿ ಉಚಿತ ಬಸ್ ಟಿಕೆಟ್​ನ ಹಾರ ಮಾಡಿಕೊಂಡು ಬಂದು ಮುಖ್ಯಮಂತ್ರಿಯನ್ನು ಸ್ವಾಗತಿಸಿದರು. ಆಕೆಯಂತೆ ಲಕ್ಷ ಲಕ್ಷ ಆಶೀರ್ವಾದ ನಮ್ಮ ಮೇಲಿದೆ. ಈ ರೀತಿ ಕಾಂಗ್ರೆಸ್​ಗೆ ವಾತಾವರಣ ಧನಾನ್ಮಕವಾಗಿರುವುದು ಕಾಣಿಸುತ್ತಿದೆ.

    . ಜನರಿಗೆ ‘ಚೊಂಬು’ ತೋರಿಸಿದಿರಿ, ಈಗಲೂ ತೋರಿಸುತ್ತಲೇ ಇದ್ದೀರಿ. ವರ್ಕೌಟ್ ಆಗುತ್ತಾ?

    ರಾಜ್ಯದ ಜನರ ಮುಂದೆ ಎರಡು ಮಾಡಲ್ ಇದೆ. ಒಂದು ಕಾಂಗ್ರೆಸ್ ಗ್ಯಾರಂಟಿ ಮಾಡಲ್, ಇನ್ನೊಂದು ಖಾಲಿ ಚೊಂಬು ಮಾಡೆಲ್. ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಇನ್ನೊಂದು ಕಡೆ ಬಾಯಿ ಮಾತಿನ ಮಾಡೆಲ್. ಅದು ಖಾಲಿ ಚೊಂಬು ಮಾಡೆಲ್. 15 ಲಕ್ಷ ಪ್ರತಿಯೊಬ್ಬರ ಖಾತೆಗೆ ಹಾಕುತ್ತೇನೆಂದಿದ್ದರು, ಹತ್ತು ವರ್ಷದಲ್ಲಿ ಏನೂ ಆಗಲಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದಿದ್ದರು ಅದೂ ಆಗಲಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆಂದಿದ್ದರು ಆ ಕೆಲಸ ಆಗಲೇ ಇಲ್ಲ. 100 ಸ್ಮಾರ್ಟ್ ಸಿಟಿ, ವಸತಿ ರಹಿತರಿಗೆ ಮನೆ ಆಗಲಿಲ್ಲ. ಪ್ರತಿ ರಾಜ್ಯಕ್ಕೂ ಬುಲೆಟ್ ಟ್ರೖೆನ್ ಬರಲಿಲ್ಲ. ಇದು ಖಾಲಿ ಚೊಂಬು ಮಾಡೆಲ್, ಇನ್ನೊಂದು ಪಕ್ಕಾ ಗ್ಯಾರಂಟಿ ಮಾಡಲ್.

    . ಹುಬ್ಬಳ್ಳಿ ನೇಹಾ ಪ್ರಕರಣ ಕಾಂಗ್ರೆಸ್​ಗೆ ಬಿಸಿತುಪ್ಪವಾಗಿದೆಯೇ?

    ನೇಹಾ ಪ್ರಕರಣದ ಬಗ್ಗೆ ಬಹಳ ವಿಷಾದವಿದೆ. ಬಿಜೆಪಿಯು ಕರ್ನಾಟಕದ ಮಗುವಿನ ಸಾವಿನಲ್ಲಿ ರಾಜಕೀಯ ಮಾಡಲು ಹೊರಟಿರುವುದಕ್ಕೆ ನಮ್ಮ ಬೇಸರವಿದೆ. ಅಪರಾಧ ಎಸಗಿದವರ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಸರ್ಕಾರದ ಕ್ರಮಗಳ ಬಗ್ಗೆ ನೇಹಾ ಕುಟುಂಬಕ್ಕೆ ತೃಪ್ತಿ ಇದೆ. ಹತ್ಯೆ ವಿಚಾರ ಇಟ್ಟುಕೊಂಡು ಬಿಜೆಪಿಯವರು ಮಾಡುತ್ತಿದ್ದ ರಾಜಕೀಯದ ಬಲೂನ್ ಒಡೆದಿದೆ. ಪರೇಶ್ ಮೆಸ್ತಾ ಪ್ರಕರಣ ಇಟ್ಟುಕೊಂಡು ಮಾಡಿದಂತೆಯೇ ಇಲ್ಲೂ ಮಾಡಿದರು. ಆದರೆ, ಸಿಬಿಐ ವರದಿಯಲ್ಲಿ ಪರೇಶ್ ಮೆಸ್ತಾ ಪ್ರಕರಣದಲ್ಲಿ ಬಿಜೆಪಿ ಹೇಳಿದ್ದೆಲ್ಲ ಸುಳ್ಳು ಎಂಬುದು ಸಾಬೀತಾಯಿತು.

    . ಸಿಎಂ ಪವರ್ ಶೇರಿಂಗ್ ವಿಚಾರ ಚುನಾವಣೆ ಪ್ರಚಾರದಲ್ಲಿ ಅನುರಣಿಸಿತು. ಈ ವಿಚಾರ ಪ್ರತ್ಯಕ್ಷ, ಪರೋಕ್ಷ ಪ್ರಸ್ತಾಪ ತಂತ್ರಗಾರಿಕೆ ಭಾಗವಾಗಿತ್ತೇ?

    (ನಗುತ್ತಾ) ಹಾಗಲ್ಲ. ನಮ್ಮ ಪವರ್ ಶೇರಿಂಗ್ ಸಮಸ್ತ ಕನ್ನಡಿಗರಿಗೆ. ಸಿದ್ದರಾಮಯ್ಯ, ಡಿಕೆಶಿ ಜನ ಸೇವಕರು. ಇವರ ಮೂಲಕ ಗ್ಯಾರಂಟಿ ಯೋಜನೆಯ 58 ಸಾವಿರ ಕೋಟಿ ರೂ. ಮಧ್ಯ ವರ್ತಿಗಳ ಹಾವಳಿ ಇಲ್ಲದೇ, ಕಮೀಷನ್ ಇಲ್ಲದೇ ಫಲಾನುಭವಿಗಳಿಗೆ ತಲುಪುತ್ತಿದೆ. ಇದು ನಿಜವಾದ ಪವರ್ ಶೇರಿಂಗ್.

    . ಕೆಟ್ ಹಂಚಿಕೆ ವಿಷಯ ಈ ಹಂತದಲ್ಲಿ ಚರ್ಚಾ ವಿಷಯವಲ್ಲ. ಆದರೂ, ಸಚಿವರ ಮಕ್ಕಳು, ಬಂಧುಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರ ಯಾವ ರೀತಿ ಕೆಲಸ ಮಾಡಿದೆ ?

    ಕರ್ನಾಟಕದ ಟಿಕೆಟ್ ಹಂಚಿಕೆ ಈ ಹಿಂದಿನ ಎಲ್ಲ ಸಂದರ್ಭಕ್ಕಿಂತಲೂ ಬೆಸ್ಟ್ ಇದೆ. ಎದುರಾಳಿ ವಿಷಯಕ್ಕೆ ಬಂದರೆ ಯಡಿಯೂರಪ್ಪ ಮತ್ತು ಸನ್ಸ್ ಶಾಪ್ ತೆರೆಯಲಾಗಿದೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕರಾಗಿದ್ದ ಈಶ್ವರಪ್ಪ, ಯತ್ನಾಳ್, ವಿಶ್ವನಾಥ್ ಸೇರಿ ನೂರಾರು ಮುಖಂಡರರನ್ನು ಕೇಳಿದರೆ ಗೊತ್ತಾಗುತ್ತದೆ. ಇನ್ನೊಂದು ಕುಮಾರಸ್ವಾಮಿ ಸನ್. ಎರಡು ಶಾಪ್ ಓಪನ್ ಮಾಡಿದ್ದಾರೆ. ಹತ್ತು ತಿಂಗಳ ಹಿಂದೆ ಇವರಿಬ್ಬರನ್ನೂ ಜನ ರಿಜೆಕ್ಟ್ ಮಾಡಿದ್ದಾರೆ.

    . ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಕಾಂಗ್ರೆಸ್​ಗೆ ಲಾಭ ಆಗುತ್ತಿದೆಯೇ?

    ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್​ಐಟಿ ರಚನೆ ಮಾಡಲಾಗಿದೆ. ಒಬ್ಬ ವ್ಯಕ್ತಿ ಈ ರೀತಿ ಮಾಡುತ್ತಾನೆಂದು ಆಲೋಚಿಸುವುದಕ್ಕೂ ಆಗುವುದಿಲ್ಲ. ಪ್ರಧಾನಿ ಮೋದಿ ಬೇರೆ ಬೇರೆ ಘಟನೆ ಪ್ರಸ್ತಾಪಿಸುತ್ತಾರೆ. ಆದರೆ ಪ್ರಜ್ವಲ್ ವಿಷಯದಲ್ಲಿ ಮೌನವಾಗಿದ್ದಾರೆ. ಪ್ರಜ್ವಲ್ ಬಗ್ಗೆ ಆರು ತಿಂಗಳ ಹಿಂದೆಯೇ ಬಿಜೆಪಿ ನಾಯಕರು ಪತ್ರ ಬರೆದಿದ್ದಾರೆ, ಅಮಿತ್ ಷಾ ಭೇಟಿ ಕೂಡ ಮಾಡಿದ್ದಾರೆ. ಆದರೂ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಅಲ್ಲದೇ ಹಾಸನಕ್ಕೆ ಬಂದು ಪ್ರಚಾರ ಮಾಡಿದ್ದಾರೆ. ಅಮಿತ್ ಷಾ, ಯಡಿಯೂರಪ್ಪ, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ, ಯಾರೂ ಮಾತನಾಡುತ್ತಿಲ್ಲ. ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳು ಹಿಂದುಗಳಲ್ಲವೇ?

    . ನಿಮ್ಮ ವಿಮಾನ ಓಡಾಟದ ಬಗ್ಗೆ ರಾಜ್ಯ ಬಿಜೆಪಿ ತೀಕ್ಷ್ಣ ಟೀಕೆ ವ್ಯಕ್ತಮಾಡಿತು. ನಿಮ್ಮ ಪ್ರತಿಕ್ರಿಯೆ ಏನು?

    ಬಿಜೆಪಿಯವರು ಹತಾಶರಾಗಿದ್ದಾರೆ. ಮೋದಿಯವರೇನು ಪ್ರಚಾರಕ್ಕೆ ಎತ್ತಿನ ಗಾಡಿಯಲ್ಲಿ ಓಡಾಡುತ್ತಿದ್ದಾರಾ? ಎಂಟು ಸಾವಿರ ಕೋಟಿಯ ವಿಮಾನ, ಮೂರು ಹೆಲಿಕಾಪ್ಟರ್ ಬಳಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಕೂಟರ್​ನಲ್ಲಿ ಓಡಾಡುತ್ತಿದ್ದಾರೆಯೇ? ಯಡಿಯೂರಪ್ಪ, ಬೊಮ್ಮಾಯಿ ಪ್ರಚಾರಕ್ಕೆ ಹೇಗೆ ಓಡಾಡುತ್ತಿದ್ದಾರೆ? ಬಿಜೆಪಿಯವರು ವಿಮಾನ, ಹೆಲಿಕಾಪ್ಟರ್ ಬಾಡಿಗೆಗೆ ಪಡೆದಷ್ಟು ಕಾಂಗ್ರೆಸ್ ಪಡೆದಿಲ್ಲ. ಅಷ್ಟು ವೆಚ್ಚವನ್ನೂ ಮಾಡುತ್ತಿಲ್ಲ.

    . ನಿಮ್ಮ ಪಕ್ಷದಲ್ಲಿನ ಸ್ನೇಹಿತರೆಲ್ಲ ಬಿಟ್ಟು ಹೋಗುತ್ತಿದ್ದಾರೆ. ಇದಕ್ಕೆ ಮೋದಿ, ಷಾ ಮಾತ್ರ ಕಾರಣವೋ? ಅಥವಾ ನಿಮ್ಮ ಪಕ್ಷದೊಳಗಿನ ವ್ಯತ್ಯಾಸವೂ ಕಾರಣವೋ?

    ಕರ್ನಾಟಕದಲ್ಲಿ ಕೆಲವು ಡಜನ್ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ರಾಷ್ಟ್ರ ಮಟ್ಟದಲ್ಲಿ ಹಾಲಿ ಸಂಸದರೇ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಬಂದರು. ಬಿಜೆಪಿಯಿಂದ ಐಟಿ, ಇಡಿ ತೊಡೆದು ಹಾಕಿದರೆ ಎಲ್ಲ ಸರಿಯಾಗುತ್ತದೆ. ಬಿಜೆಪಿ ಬಿಟ್ಟು ಎಲ್ಲರೂ ಓಡುತ್ತಾರೆ.

    . ತೆರಿಗೆ ಅನ್ಯಾಯ ಎಂಬುದು ಕಾಂಗ್ರೆಸ್​ನ ಚುನಾವಣೆ ಅಸ್ತ್ರ. ತಾವು ಸಹ ನಾಡಿನ ಬಗ್ಗೆ ದನಿ ಎತ್ತಿದ್ದೀರಿ. ಈ ವಾದದ ಬಗ್ಗೆ ವೈರುಧ್ಯ ಇದೆಯಲ್ಲವೇ?

    ಕರ್ನಾಟಕದಲ್ಲಿ ಸಂಗ್ರಹವಾಗುವ ಪ್ರತಿ ನೂರು ತೆರಿಗೆಯಲ್ಲಿ 13 ರೂ. ಮಾತ್ರ ರಾಜ್ಯಕ್ಕೆ ವಾಪಸ್ ಬರುತ್ತಿದೆ. ಕನ್ನಡಿಗರು ದೇಶದ ಅಭಿವೃದ್ಧಿ ವಿರೋಧಿಗಳಲ್ಲ, ತೆರಿಗೆ ಪೂರ್ತಿ ನಮಗೇ ಬೇಕು ಎಂದೂ ಹೇಳುತ್ತಿಲ್ಲ. ಆದರೆ ಅರ್ಧದಷ್ಟಾದರೂ ಬರಬೇಕಲ್ಲವೇ? ಈ ಬಗ್ಗೆ ಮೋದಿ ಉತ್ತರಿಸಿಲ್ಲ. ಬಿಜೆಪಿ ಸೋಲಿಸಿದ್ದಕ್ಕೆ ಪ್ರಧಾನಿಗೆ ಕರ್ನಾಟಕದ ಮೇಲೆ ರಿವೆಂಜ್ ತೀರಿಸಿಕೊಳ್ಳುತ್ತಿದ್ದಾರೆ.

    ಲೋಕಸಭೆ ಚುನಾವಣೆ: ಸಿಎ ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಿರಾಕರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts