More

    ಪ್ರವಾಹ ಭೀತಿ ಸೃಷ್ಟಿಸಿದ ಭಾರಿ ಮಳೆ

    ಮಂಗಳೂರು/ಉಪ್ಪಿನಂಗಡಿ/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರವೂ ಬಿರುಸಿನ ಮಳೆಯಾಗಿದ್ದು, ನಿರಂತರ ಮಳೆ ಮುಂದುವರಿದರೆ ಪ್ರವಾಹ ಭೀತಿ ಕಾಡಲಿದೆ. ಯೆಲ್ಲೊ ಅಲರ್ಟ್ ಪರಿಣಾಮ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಶನಿವಾರಕ್ಕೂ ಇದೇ ಅಲರ್ಟ್ ನೀಡಲಾಗಿದೆ.
    ನಿರಂತರ ಮಳೆಯಿಂದಾಗಿ ವಿವಿಧೆಡೆ ಮರ, ಆವರಣ ಗೋಡೆ ಬಿದ್ದು ಮನೆಗಳಿಗೆ ಹಾನಿಯಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ ತಂತಿ ಕಂಬಗಳು ಧರೆಗುರುಳಿ ವಿದ್ಯುತ್ ವ್ಯತ್ಯಯವಾಗಿದೆ. ಘಟ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರಗಳಲ್ಲಿ ನೆರೆ ಭೀತಿ ಉಂಟಾಗಿದೆ.
    ಸಮುದ್ರ ಪ್ರಕ್ಷುಬ್ಧವಾಗಿದ್ದು, ಮೀನುಗಾರಿಕೆಗೆ ತೆರಳಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪಡುಬಿದ್ರಿ ಬೀಚ್‌ನಲ್ಲಿ ಕಡಲ್ಕೊರೆತ ಉಂಟಾಗಿದ್ದು, ಬೀಚ್‌ಗೆ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಕಾಂಕ್ರೀಟ್ ಅಂಗಣ ಬಿರುಕು ಬಿಟ್ಟಿದೆ. ಕಾಂಕ್ರೀಟ್ ತಡೆಗೋಡೆ, ಇಂಟರ್‌ಲಾಕ್ ಮತ್ತು ಮೆಟ್ಟಿಲುಗಳು ಸಮುದ್ರ ಪಾಲಾಗುತ್ತಿವೆ.

    ಕುಸಿದ ಮನೆ: ಬಜ್ಪೆ ಸಮೀಪದ ಕಳವಾರದಲ್ಲಿ ಮನೆ ಆವರಣ ಗೋಡೆ ಜರಿದು ಇನ್ನೊಂದು ಮನೆಗೆ ಹಾನಿಯಾಗಿದೆ. ಬೊಂಡಂತಿಲದಲ್ಲಿ ಮರವೊಂದು ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ.
    ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ರಾಮ ಪೈ ಮಠದ ಬಳಿಯ ನಿವಾಸಿ, ಸೇಲ್ಸ್‌ಮನ್ ಮುಕುಂದ ನಾಯಕ್ ಎಂಬುವರ ಮನೆ ಸಂಪೂರ್ಣವಾಗಿ ಕುಸಿದಿದ್ದು, ಬೆಲೆ ಬಾಳುವ ವಸ್ತುಗಳು, ಪೀಠೋಪಕರಣಗಳು ಅವಶೇಷಗಳಡಿ ಸಿಲುಕಿ ಹಾನಿಗೊಳಗಾಗಿವೆ. ರಾತ್ರಿ 9 ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿ ಮುರಿಯುವ ಸದ್ದು ಕೇಳುತ್ತಿದ್ದಂತೆಯೇ ಮನೆಯಲ್ಲಿದ್ದ ನಾಲ್ವರು ಹೊರಗೋಡಿದ್ದರು. ಮನೆ ಕುಸಿದಿರುವುದರಿಂದ ಕುಟುಂಬ ಅತಂತ್ರವಾಗಿದೆ. ಕೋಟ ಮೂಡುಗಿಳಿಯಾರು ಸಣ್ಣಬಸವನಕಲ್ಲು ಒಳರಸ್ತೆ ಸಮೀಪ ಭಾರಿ ಗಾತ್ರದ ಅಶ್ವತ್ಥ ಮರವೊಂದು ಗುರುವಾರ ರಾತ್ರಿ ನೆಲಕ್ಕುರುಳಿದೆ.

    ಉಡುಪಿ ಅತ್ಯಧಿಕ: ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಉಡುಪಿ 89, ಕುಂದಾಪುರ 106.5, ಕಾರ್ಕಳ 74.5 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ ಸರಾಸರಿ ಮಳೆ 90 ಮಿ.ಮೀ ಮಳೆ ದಾಖಲಾಗಿದೆ. ಬಂಟ್ವಾಳ 77.9, ಬೆಳ್ತಂಗಡಿ 75.1, ಮಂಗಳೂರು 74.1, ಪುತ್ತೂರು 80.9, ಸುಳ್ಯ 95.3 ಮಿ.ಮೀ. ಸಹಿತ ದ.ಕ ಜಿಲ್ಲೆಯಲ್ಲಿ ಸರಾಸರಿ 80.7 ಮಳೆ ಸುರಿದಿದೆ.

    ರಕ್ಷಣಾ ಕಾರ್ಯಕ್ಕೆ ದೋಣಿ ರೆಡಿ: ಉಪ್ಪಿನಂಗಡಿ: ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು, ಶಂಭೂರು ಅಣೆಕಟ್ಟಿನ ಲೆಕ್ಕಾಚಾರದಂತೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 26.5 ಮೀ. ದಾಖಲಾಗಿದೆ. ಕಂದಾಯ ಇಲಾಖಾ ಮಾಪಕದಲ್ಲಿ ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ 26.5 ಮೀ. ಎಂದಾಗಿದ್ದರೆ, ಶಂಭೂರು ಅಣೆಕಟ್ಟಿನ ನೆಲೆಯಲ್ಲಿ ಉಪ್ಪಿನಂಗಡಿ ದೇವಳದ ಬಳಿ ನದಿಯಲ್ಲಿ ಹಾಕಲಾದ ಮಾಪಕದಲ್ಲಿ ಅಪಾಯದ ಮಟ್ಟ 30 ಮೀ. ಎಂದಾಗಿದೆ. ಶುಕ್ರವಾರ ನದಿಯಲ್ಲಿ ನೀರಿನ ಹರಿವು ಗಣನೀಯ ಹೆಚ್ಚಳವಾಗಿದ್ದು, ಇದೇ ರೀತಿಯಲ್ಲಿ ಮಳೆ ಸತತವಾಗಿ ಸುರಿದರೆ ನೆರೆ ಭೀತಿ ಸಹಜವಾಗಿ ಕಾಡಲಿದೆ.
    ದೋಣಿ ಸನ್ನದ್ಧ: ಇತ್ತ ನೆರೆ ಭೀತಿಯ ಉಪ್ಪಿನಂಗಡಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಸಲುವಾಗಿ ಜಿಲ್ಲಾಡಳಿತ ಒದಗಿಸಿದ್ದ ಯಾಂತ್ರೀಕೃತ ದೋಣಿಯನ್ನು ಕಾರ್ಯಾಚರಣೆಗೆ ಸನ್ನದ್ಧಗೊಳಿಸುವ ಕಾರ್ಯ ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಉಪಸ್ಥಿತಿಯಲ್ಲಿ ಶುಕ್ರವಾರ ನಡೆಯಿತು. ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಪ್ರಮುಖ್ ದಿನೇಶ್ ಬಿ. ದೋಣಿಯ ಸುಸ್ಥಿತಿಯನ್ನು ಚಾಲನೆಗೊಳಪಡಿಸಿ ದೃಢೀಕರಿಸಿದರು.

    ಕುಮಾರಧಾರಾ ಸ್ನಾನಘಟ್ಟ ಮುಳುಗಡೆ ಭೀತಿ
    ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಗುರುವಾರದಿಂದ ಶುಕ್ರವಾರ ತನಕ ನಿರಂತರ ಸುರಿದ ಮಳೆಗೆ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಸ್ನಾನಘಟ್ಟ ಮುಳುಗಡೆ ಭೀತಿಯಲ್ಲಿದೆ. ನದಿಯ ಕಿಂಡಿ ಅಣೆಕಟ್ಟು ಮುಳುಗಡೆ ಹಂತದಲ್ಲಿದೆ. ಕುಕ್ಕೆ ಪರಿಸರದ ಗ್ರಾಮೀಣ ಪ್ರದೇಶಗಳಲ್ಲೂ ಪ್ರವಾಹದ ವಾತಾವರಣವಿದೆ. ಉಪನದಿ ದರ್ಪಣತೀರ್ಥ ತುಂಬಿ ಸೇತುವೆಗೆ ತಾಗಿಕೊಂಡು ಹರಿಯುತ್ತಿದೆ. ನೀರಿನ ಹರಿವು ಅಧಿಕಗೊಂಡ ಕಾರಣ ಸಮೀಪದ ಕೃಷಿ ತೋಟಗಳಿಗೆ ನುಗ್ಗಿ ಕೃಷಿಕರು ಹಾಕಿದ್ದ ಗೊಬ್ಬರ ನೀರುಪಾಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts