More

    ಕರೊನಾದಿಂದ ಹೆಚ್ಚಾಗಲಿದೆ ಎಚ್​ಐವಿ ಸೋಂಕಿತರ ಸಾವಿನ ಸಂಖ್ಯೆ..!

    ಇಡೀ ಜಗತ್ತು ಕರೊನಾ ವಿರುದ್ಧ ಹೋರಾಟದಲ್ಲಿ ತೊಡಗಿದೆ. ಕೋವಿಡ್​-19 ನಿರ್ಮೂಲನೆಗಾಗಿ ಪಣ ತೊಟ್ಟಿದೆ. ನಿರ್ಬಂಧಗಳನ್ನು ಸಡಿಲಿಸಿದ್ದರೂ ಲಾಕ್​ಡೌನ್​ ಮುಂದುವರಿದಿದೆ. ಒಟ್ಟಿನಲ್ಲಿ ಜನಜೀವನ ಸಂಕಷ್ಟದಲ್ಲಿದೆ. ಇಡೀ ಆರೋಗ್ಯ ವ್ಯವಸ್ಥೆ ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದೆ. ಖಾಸಗಿ ಆಸ್ಪತ್ರೆಗಳು ತೀರಾ ಅನಿವಾರ್ಯ ಅಥವಾ ತುರ್ತು ಎನಿಸದಿದ್ದರೆ ಚಿಕಿತ್ಸೆಯನ್ನೇ ನೀಡುತ್ತಿಲ್ಲ. ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗುತ್ತಿದೆ. ಹೀಗಾಗಿ ಕೋವಿಡ್​ ಅಲ್ಲದ ರೋಗಿಗಳು ಚಿಕಿತ್ಸೆ ಪಡೆಯುವುದು ದುಸ್ತರವಾಗಿ ಪರಿಣಮಿಸಿದೆ.
    ಒಂದು ವೈರಸ್​ ವಿರುದ್ಧ ಹೋರಾಟದಲ್ಲಿ ಇನ್ನೊಂದು ವೈರಸ್​ನಿಂದ ಬಾಧೆಗೊಳಗಾಗದವರು ಸಾಯುವಂತಾಗಿದೆ. ಅಕ್ಷರಶಃ ಚಿಕಿತ್ಸೆ, ಔಷಧ ದೊರೆಯದೇ ನರಳುವಂತಾಗಿದೆ.

    ಇದನ್ನೂ ಓದಿ; ಕರೊನಾ ಯೋಧರಿಗೆ ‘ಗುರಾಣಿ’ ನೀಡಿದ ಸ್ತ್ರೀಶಕ್ತಿ

    ಈಗಾಗಲೇ ಮೂರು ತಿಂಗಳಿಂದ ಇತರ ರೋಗಿಗಳು ಅಂದರೆ ಆ್ಯಂಟಿರೆಟ್ರಾವೈರಲ್​ ಚಿಕಿತ್ಸೆ ಪಡೆಯುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಚಿಕಿತ್ಸೆ ಹಾಗೂ ಔಷಧ ಪೂರೈಕೆಯಲ್ಲಿ ಇನ್ನೂ ಮೂರು ತಿಂಗಳು ವ್ಯತ್ಯಯ ಉಂಟಾದಲ್ಲಿ ಕನಿಷ್ಠ 5 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಲಿದ್ದಾರೆ. ಅಂದರೆ, ಏಡ್ಸ್​ನಿಂದ ಮೃತಪಡುವವರ ಸಂಖ್ಯೆಯಲ್ಲಿ ಶೇ.104 ಹೆಚ್ಚಳವಾಗಲಿದೆ.

    ಹೌದು… ಕರೊನಾದಿಂದ ಮೃತಪಟ್ಟವರ ಸಂಖ್ಯೆಗಿಂತಲೂ ಇದು ಹೆಚ್ಚಾಗಲಿದೆ. ಎಚ್​ಐವಿ ಸಂಬಂಧಿತ ಹಾಗೂ ಕ್ಷಯ ರೋಗದಿಂದ ಆಫ್ರಿಕಾ ಖಂಡವೊಂದರಲ್ಲಿಯೇ ಈ ಪ್ರಮಾಣದ ಸಾವು ಸಂಭವಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಸಿದೆ.

    ಪ್ರಸ್ತುತ ಜಗತ್ತಿನಲ್ಲಿ 2018ರ ಲೆಕ್ಕಾಚಾರದಂತೆ 2.57 ಕೋಟಿ ಏಡ್ಸ್​ ರೋಗಿಗಳಿದ್ದಾರೆ. ಈ ಪೈಕಿ 1.64 ಕೋಟಿ ರೋಗಿಗಳಿಗೆ ಆ್ಯಂಟಿರೆಟ್ರಾವೈರಲ್​ ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿಕಿತ್ಸೆಯಲ್ಲಿ ಆರು ತಿಂಗಳು ವ್ಯತ್ಯಯವಾದರೆ, ಸಾವಿನ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬರಲಿದೆ. ಅಂದರೆ ಚಿಕಿತ್ಸೆ ದೊರೆಯದಿದ್ದರೆ ಅವರ ದೇಹದಲ್ಲಿ ಹ್ಯುಮನ್​ ಇಮ್ಯುನೋಡಿಫಿಸಿಯೆನ್ಸ್​ ವೈರಸ್​ (ಎಚ್​ಐವಿ) ವಿರುದ್ಧ ಹೋರಾಡುವ ಶಕ್ತಿ ಕುಂದಿ ರೋಗಿ ಏಡ್ಸ್​ ರೋಗಕ್ಕೆ ಬಲಿಯಾಗುತ್ತಾನೆ. ಹೀಗಾಗಿ ಏಡ್ಸ್​ ಸಂಬಂಧಿತ ರೋಗಿಗಳ ಚಿಕಿತ್ಸೆ ಹಾಗೂ ಔಷಧ ಪೂರೈಕೆ ನೀಡುವವರು ಇದರಲ್ಲಿ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕಾದ ತುರ್ತು ಎದುರಾಗಿದೆ.

    ಇದನ್ನೂ ಓದಿ; ವಿಶಾಖಪಟ್ಟಣದ 13,000 ಟನ್ ವಿಷಾನಿಲ ಎಲ್ಲಿಗೆ ರವಾನೆಯಾಗುತ್ತಿದೆ ಗೊತ್ತಾ?

    ಈಗಾಗಲೇ ಮೂರು ತಿಂಗಳು ವ್ಯತ್ಯಯ ಉಂಟಾಗಿದೆ. ಇದರಿಂದ ಉಂಟಾಗುವ ಪರಿಣಾಮ ಸಣ್ಣದಾದರೂ ಭಾರಿ ಗಂಭೀರವಾಗಿದೆ. ಇದು ಮುಂದುವರಿದರೆ, 2008ಕ್ಕಿಂತಲೂ ಹಿಂದಿನ ಸ್ಥಿತಿ ಮರುಕಳಿಸಲಿದೆ. 2008ರಲ್ಲಿ 9.5 ಲಕ್ಷ ಜನರು ಏಡ್ಸ್​ಗೆ ಬಲಿಯಾಗಿದ್ದರು. ಇದಷ್ಟೇ ಅಲ್ಲ, ಮುಂದಿನ ಐದು ವರ್ಷಗಳವರೆಗೂ ಈ ಸಾವಿನ ಸರಣಿ ಮುಂದುವರಿಯಲಿದೆ. ಒಟ್ಟಾರೆ ಸಾವಿನ ಪ್ರಮಾಣದಲ್ಲಿ ಪ್ರತಿವರ್ಷ ಶೇ.40 ಏರಿಕೆ ಕಂಡುಬರಲಿದೆ ಎಂಬ ಕಳವಳ ವ್ಯಕ್ತವಾಗಿದೆ.

    ಆಫ್ರಿಕಾದಲ್ಲಿ 5 ಲಕ್ಷಕ್ಕೂ ಅಧಿಕ ಜನರು ಎಚ್​ಐವಿಯಿಂದ ಸಾವಿಗೀಡಾಗುವುದೆಂದರೆ, ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ ಎಂದೇ ಅರ್ಥ ಎನ್ನುತಾರೆ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಟೆಡ್ರೊಸ್​ ಅಡ್ನಾಮ್​ ಘೆಬ್ರೆಯೆಸಸ್​.

    ಯಾವುದೇ ದೇಶವೇ ಇರಲಿ, ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು ಸುಸ್ಥಿರವಾಗಿಟ್ಟುಕೊಳ್ಳುವುದು ಅತಿ ಮುಖ್ಯವಾಗಿದೆ. ಕೆಲವೆಡೆ ಎಚ್​ಐವಿ ರೋಗಿಗಳಿಗೆ ಅನುಕೂಲವಾಗುವಂತೆ ಒಟ್ಟಿಗೆ ದೊಡ್ಡ ಪ್ರಮಾಣದಲ್ಲಿ ಔಷಧ, ಚಿಕಿತ್ಸಾ ಪರಿಕರ ಹಾಗೂ ಇತರ ಸಾಮಗ್ರಗಳನ್ನು ನೀಡಲಾಗುತ್ತಿದೆ. ಇದು ಆರೋಗ್ಯ ವ್ಯವಸ್ಥೆ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಅಂತೆಯೇ ಜಾಗತಿಕ ಮಟ್ಟದಲ್ಲೂ ಎಚ್​ಐವಿಗೆ ಸಂಬಂಧಿಸಿದ ಔಷಧ ಹಾಗೂ ಚಿಕಿತ್ಸಾ ಸಲಕರಣೆಗಳು ಅಗತ್ಯವಿರುವ ದೇಶಗಳಿಗೆ ಪೂರೈಕೆಯಾಗುವಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕೆಂದು ಡಾ. ಟೆಡ್ರೊಸ್​ ಸಲಹೆ ನೀಡುತ್ತಾರೆ.

    ಇದನ್ನೂ ಓದಿ; ಅತ್ತ ಮಟ್ಕಾ ನಿಂತು ಹೋಯ್ತು, ಇತ್ತ ‘ರಾಜ’ನೂ ಇಲ್ಲ 

    ತಾಯಿಯಿಂದ ಮಗುವಿಗೆ ಸೋಂಕು: ಆ್ಯಂಟಿರೆಟ್ರಾವೈರಲ್​ ಚಿಕಿತ್ಸೆಯಲ್ಲಿ ವ್ಯತ್ಯಯ ಉಂಟಾದರೆ ಕಾರಣದಿಂದ ತಾಯಿಯಿಂದ ಮಗುವಿಗೆ ಎಚ್​ಐವಿ ಸೋಂಕು ತಗುಲುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಆರು ತಿಂಗಳು ತೊಂದರೆಯಾದರೆ, ಎಚ್​ಐವಿ ಸೋಂಕಿನ ಪ್ರಮಾಣ ಶೇ.40-70ರವರೆಗೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇಂಥವರಿಗೆ ಯಾವುದೇ ಕಾರಣಕ್ಕೂ ಔಷಧ, ಚಿಕಿತ್ಸೆ ದೊರೆಯುವಲ್ಲಿ ತೊಂದರೆಯಾಗದಂತೆ ನೋಡಕೊಳ್ಳಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts