More

    ಧೋನಿ ನಿವೃತ್ತಿಗೆ ಕರೊನಾ ಕೂಡ ಕಾರಣ ಎಂದ ಚಾಹಲ್​!

    ನವದೆಹಲಿ: ಟೀಮ್​ ಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಇದಕ್ಕೆ ಕ್ರಿಕೆಟ್​ ವಲಯ ಮತ್ತು ಅಭಿಮಾನಿಗಳು ವಿವಿಧ ಕಾರಣಗಳನ್ನು ನೀಡುತ್ತಿದ್ದಾರೆ. ಮಾಧ್ಯಮಗಳ ಟೀಕೆಗಳೇ ಧೋನಿ ಅವರ ನಿವೃತ್ತಿಗೆ ಕಾರಣ ಎಂದು ಅವರ ಬಾಲ್ಯದ ಕೋಚ್​ ಹೇಳಿದ್ದರು. ಇದೀಗ ಟೀಮ್​ ಇಂಡಿಯಾದ ಸ್ಪಿನ್ನರ್​ ಯಜುವೇಂದ್ರ ಚಾಹಲ್​, ಕೋವಿಡ್​-19 ಸಾಂಕ್ರಾಮಿಕ ಪಿಡುಗು ಕೂಡ ಧೋನಿ ಅವರ ನಿವೃತ್ತಿ ನಿರ್ಧಾರದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ‘ಧೋನಿ ಅವರ ನಿವೃತ್ತಿ ನನಗೆ ದೊಡ್ಡ ಆಘಾತಕಾರಿ ಸುದ್ದಿಯಾಗಿತ್ತು. ಅವರ ಈ ನಿರ್ಧಾರದಲ್ಲಿ ಕರೊನಾ ವೈರಸ್​ ಕೂಡ ಪ್ರಮುಖ ಪಾತ್ರವಹಿಸಿದೆ. ಇಲ್ಲದಿದ್ದರೆ ಧೋನಿ ಈ ವರ್ಷ ಟಿ20 ವಿಶ್ವಕಪ್​ ಆಡುತ್ತಿದ್ದರು’ ಎಂದು ಚಾಹಲ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಈ ವರ್ಷ ಅಕ್ಟೋಬರ್​-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್​ ಟೂರ್ನಿ ಕರೊನಾ ವೈರಸ್​ ಹಾವಳಿಯಿಂದಾಗಿ 2022ಕ್ಕೆ ಮುಂದೂಡಲ್ಪಟ್ಟಿದೆ. ಮುಂದಿನ ಟಿ20 ವಿಶ್ವಕಪ್​ ಇನ್ನು ಮುಂದಿನ ವರ್ಷ ಅಕ್ಟೋಬರ್​-ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿದೆ. ಆ ವೇಳೆ ಧೋನಿಗೆ 40 ವರ್ಷವಾಗಿರುತ್ತದೆ.

    ಇದನ್ನೂ ಓದಿ: ಐಪಿಎಲ್​ ಪ್ರಾಯೋಜಕತ್ವದಿಂದ ಟಾಟಾ ಗ್ರೂಪ್​ ಹಿಂದೆ ಸರಿದಿದ್ದು ಯಾಕೆ ಗೊತ್ತೇ?

    ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುವ ಸಾಮರ್ಥ್ಯ ಧೋನಿ ಅವರಲ್ಲಿದೆ ಎಂದು ಅಭಿಪ್ರಾಯಪಟ್ಟಿರುವ ಚಾಹಲ್​, ಧೋನಿ ಇನ್ನೂ ಆಡಬೇಕೆಂಬುದು ನನ್ನಾಸೆ. ಯಾಕೆಂದರೆ ನಾನು ಮತ್ತು ಕುಲದೀಪ್ ಯಾದವ್​​ ಅವರಿಂದಾಗಿಯೇ ಹೆಚ್ಚಿನ ಯಶಸ್ಸು ಪಡೆದಿದ್ದೇವೆ. ವಿಕೆಟ್​ ಹಿಂದಿನಿಂದ ಅವರಿಂದ ಸಾಕಷ್ಟು ನೆರವು ಪಡೆದುಕೊಂಡಿದ್ದೇವೆ. ಧೋನಿ ವಿಕೆಟ್​ ಹಿಂದೆ ಇದ್ದರೆ ನಮ್ಮ ಶೇ. 50ರಷ್ಟು ಕೆಲಸ ಸುಲಭವಾಗುತ್ತದೆ ಎಂದು ಹೇಳಿದ್ದಾರೆ. ಚಾಹಲ್​ ಭಾರತ ಪರ 52 ಟಿ20 ಮತ್ತು 42 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

    ಪಿಚ್​ ವರ್ತನೆಯ ಬಗ್ಗೆ ಧೋನಿಗೆ ತಿಳಿದಿರುತ್ತದೆ. ಮೊದಲ ಎಸೆತ ಎಸೆಯುವುದಕ್ಕೆ ಮುನ್ನವೇ ನಮಗೆ ಪಿಚ್​ ಬಗ್ಗೆ ಅವರು ಅರಿವು ಮೂಡಿಸುತ್ತಾರೆ. ಧೋನಿ ಇಲ್ಲದೇ ಇದ್ದಾಗ ನಮಗೆ ಪಿಚ್​ ಬಗ್ಗೆ ಅರಿತುಕೊಳ್ಳಲು 2 ಓವರ್​ ಬೇಕಾಗುತ್ತದೆ. ಪಂದ್ಯದ ವೇಳೆ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಬೌಂಡರಿ ಬಳಿ ಇರುತ್ತಾರೆ. ನಮಗೆ ಹತ್ತಿರದಲ್ಲಿರುವ ಹಿರಿಯ ಆಟಗಾರ ಧೋನಿ ಅವರೇ ಆಗಿರುತ್ತಾರೆ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನನಗೆ ಮತ್ತು ಕುಲದೀಪ್​ ಯಾದವ್​ ಅವರಿಗೆ ಧೋನಿಯಿಂದ ಸಾಕಷ್ಟು ನೆರವು ಲಭಿಸಿತ್ತು ಎಂದು 30 ವರ್ಷದ ಚಾಹಲ್​ ವಿವರಿಸಿದ್ದಾರೆ. ಮುಂಬರುವ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡಲಿರುವ ಚಾಹಲ್​ ಸದ್ಯ ಬೆಂಗಳೂರಿನಲ್ಲಿ ಹೋಟೆಲ್​ ಕ್ವಾರಂಟೈನ್​ನಲ್ಲಿದ್ದಾರೆ.

    ಧೋನಿಗೆ ವಿದಾಯ ಪಂದ್ಯ ನೀಡಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಚಾಹಲ್​, ಈ ನಿರ್ಧಾರ ಬಿಸಿಸಿಐಗೆ ಬಿಟ್ಟಿದ್ದು. ಇದಲ್ಲದೆ ಧೋನಿ ಏನನ್ನು ಬಯಸುತ್ತಾರೆ ಎಂಬುದು ಕೂಡ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಅಥಿಯಾ ಶೆಟ್ಟಿ ಈಜುಡುಪು ಚಿತ್ರಕ್ಕೆ ಕೆಎಲ್​ ರಾಹುಲ್​ ಕಮೆಂಟ್​ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts