More

    ಪರಿಷತ್ ಚುನಾವಣೆ: ಬಿಜೆಪಿ ಬಂಡಾಯ ಶೀಘ್ರ ಶಮನವೆಂದ ಬಿ.ವೈ.ವಿಜಯೇಂದ್ರ

    ಬೆಂಗಳೂರು: ರಾಜ್ಯದ ವಿಧಾನಪರಿಷತ್ತಿನ ವಿವಿಧ ಕ್ಷೇತ್ರಗಳಲ್ಲಿರುವ ಪಕ್ಷದ ಸಮಸ್ಯೆಗಳು, ಬಂಡಾಯ ಶಮನಕ್ಕೆ ಪ್ರಯತ್ನ ನಡೆದಿದ್ದು ಎಲ್ಲವೂ ಶೀಘ್ರವೇ ಪರಿಹಾರಗೊಳ್ಳಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ವಿಶ್ವಾಸ ವ್ಯಕ್ತಪಡಿಸಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ವಿಧಾನಪರಿಷತ್ತಿನ ಪದವೀಧರ- ಶಿಕ್ಷಕರ ಕ್ಷೇತ್ರದ 6 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ 4 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಎರಡು ಸ್ಥಾನಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೇವೆ ಎಂದು ತಿಳಿಸಿದರು.

    ಆರು ಕ್ಷೇತ್ರಗಳಿಗೆ ಬಿಜೆಪಿಯಿಂದ ಉಸ್ತುವಾರಿಗಳನ್ನೂ ನೇಮಿಸಿದ್ದೇವೆ. ಈಶಾನ್ಯ ಪದವೀಧರ ಕ್ಷೇತ್ರದ ನಮ್ಮ ಅಭ್ಯರ್ಥಿ ಅಮರನಾಥ ಪಾಟೀಲ್ ಅವರು ಮೊನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ಮುಖಂಡ ಸುರೇಶ್ ಸಜ್ಜನ್ ಅವರು ಕಳೆದೆರಡು ವರ್ಷಗಳಿಂದ ನಿರಂತರವಾಗಿ ಈ ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಸಂಘಟನೆ ಮಾಡಿ ಆಕಾಂಕ್ಷಿಯಾಗಿದ್ದು, ನಾಮಪತ್ರ ಸಲ್ಲಿಸಿದ್ದರು.

    ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪರನ್ನು  ಸುರೇಶ ಸಜ್ಜನ್ ಭೇಟಿ ಮಾಡಿದ್ದಾರೆ. ಚುನಾವಣಾ ಅಖಾಡದಿಂದ ಹಿಂದೆ ಸರಿದು ಬಿಜೆಪಿ ಬೆಂಬಲಿಸಲು ಮುಂದಾಗಿರುವುದು ಸಂತಸದ ವಿಚಾರ. ಇದರ ಪರಿಣಾಮವಾಗಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲು ಅನುಕೂಲವಾಗಿದೆ.

    ಅದೇ ರೀತಿ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲಿಂಗರಾಜ್ ಅವರ ಹೆಸರನ್ನು ಘೋಷಿಸಲಾಗಿತ್ತು. ನಂತರ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಡಲಾಗಿತ್ತು. ನಾಮಪತ್ರ ಸಲ್ಲಿಸಿದ್ದ ಲಿಂಗರಾಜ್ ಅವರ ಮನವೊಲಿಕೆ ಮಾಡಿ ನಾಮಪತ್ರ ಹಿಂದಕ್ಕೆ ಪಡೆಯುವುದಾಗಿ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಎರಡೂ ಕ್ಷೇತ್ರದಲ್ಲೂ ಕೂಡ ಸಮಸ್ಯೆಗಳು ಇತ್ಯರ್ಥವಾಗಿವೆ. ಬೇರೆ ಕ್ಷೇತ್ರಗಳ ಸಮಸ್ಯೆ ಬಗೆಹರಿಸುವ ಕೆಲಸವನ್ನು ಇವತ್ತು ಮತ್ತು ನಾಳೆ ಮಾಡಲಿದ್ದು, ಅವು ಪರಿಹಾರ ಕಾಣಲಿದೆ ಎಂದು ಬಿ.ವೈ.ವಿಜಯೇಂದ್ರ ಪುನರುಚ್ಚರಿಸಿದರು.

    ಮಹಿಳೆಯರಿಗೆ ಅಸುರಕ್ಷತೆ ಭಯ

    ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಎಲ್ಲಿ ನೋಡಿದರೆ ಅಲ್ಲಿ ಕೊಲೆ, ಸುಲಿಗೆಗಳು ಆಗುತ್ತಿವೆ. ಅತ್ಯಾಚಾರ ಪ್ರಕರಣಗಳು, ಲವ್ ಜಿಹಾದ್ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಮಹಿಳೆಯರಿಗೆ ಸುರಕ್ಷತೆ ಪ್ರಶ್ನೆ ಕಾಡುತ್ತಿದೆ ಎಂದು ವಿವರಿಸಿದರು.

    ಈ ಅಂಶಗಳನ್ನು ಮುಂದಿಟ್ಟು ಮಹಿಳಾ ಮೋರ್ಚಾದಿಂದ ರಾಜ್ಯಾದ್ಯಂತ ಶನಿವಾರ ಪ್ರತಿಭಟನೆ ನಡೆಸಿ, ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅಪರಾಧ ಪ್ರಮಾಣ ಹೆಚ್ಚಳದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಪೊಲೀಸ್ ವ್ಯವಸ್ಥೆ ಸರಿ ಇಲ್ಲ; ಯಾರೇನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ, ಸರಕಾರ ಬಿಗಿ ಕ್ರಮ ಕೈಗೊಳ್ಳದ ಕಾರಣ ದಿನೇದಿನೇ ಕೊಲೆ ಪ್ರಕರಣ ಹೆಚ್ಚಾಗಿದೆ ಎಂದು ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.

    ಸಿಬಿಐ ತನಿಖೆಗೆ ಒತ್ತಾಯ

    ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ಕೊಡಲು ಒತ್ತಾಯಿಸುತ್ತಿದ್ದೇವೆ. ದಿನನಿತ್ಯ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ತಡ ಮಾಡದೆ ಈ ಪೆನ್ ಡ್ರೈವ್, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷನ ನೆಲೆಯಲ್ಲಿ ಆಗ್ರಹಿಸುವೆ ಎಂದರು.

    ಯಾಕೆ ಹಿಂದೆ ಮುಂದೆ ನೋಡುತ್ತಿದ್ದಾರೆ? ಇದರಲ್ಲಿ ಸರ್ಕಾರದ ಘಟಾನುಘಟಿಗಳ ಹೆಸರುಗಳೂ ಕೇಳಿಬರುತ್ತಿವೆ. ಎಸ್‍ಐಟಿಯಿಂದ ಪಾರದರ್ಶಕ ತನಿಖೆ ಮಾಡಲು ಸಾಧ್ಯವಿಲ್ಲ. ಹೆಣ್ಮಕ್ಕಳಿಗೆ ನ್ಯಾಯ ಸಿಗಬೇಕು; ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಬಿಟ್ಟು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts