More

    ಮಧ್ಯಪ್ರದೇಶದ ಕಮಲ್​ನಾಥ್​ ಸರ್ಕಾರಕ್ಕೆ ವರವಾಗಲಿದೆಯೇ ಕರೊನಾ ವೈರಸ್​ ಭೀತಿ?

    ಭೋಪಾಲ್​: ಬಹುಮತ ಸಾಬೀತುಪಡಿಸಲು ಆಹ್ವಾನಿಸಿರುವ ರಾಜ್ಯಪಾಲರೊಟ್ಟಿಗೆ ಸಿಎಂ ಕಮಲ್​ನಾಥ್​ ಇಂದು ಚರ್ಚೆ ನಡೆಸಿದ್ದು, ದೇಶದೆಲ್ಲೆಡೆ ಕರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ವಿಶ್ವಾಸಮತಯಾಚನೆಯನ್ನು ಮುಂದೂಡುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.

    ಪ್ರಮುಖ ನಾಯಕ ಹಾಗೂ ರಾಹುಲ್​ ಗಾಂಧಿ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ, ಸಿಎಂ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ವಿರುದ್ಧ ಬಂಡಾಯವೆದ್ದು ಬುಧವಾರವಷ್ಟೇ ಬಿಜೆಪಿ ಸೇರಿದ್ದಾರೆ. ಸಿಂಧಿಯಾ ಬಣದ 22 ಶಾಸಕರು ಕೂಡ ಕಾಂಗ್ರೆಸ್​ಗೆ​ ರಾಜೀನಾಮೆ ನೀಡಿರುವುದರಿಂದ ಕಮಲ್​ನಾಥ್​ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲ್​ಜಿ ಟಂಡನ್​ ಕಮಲ್ ಸರ್ಕಾರವನ್ನು ಬಹುಮತ ಸಾಬೀತಿಗೆ ಆಹ್ವಾನಿಸಿದ್ದಾರೆ.

    ಈ ಬಗ್ಗೆ ಚರ್ಚಿಸಲು ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್​, ವಿಶ್ವಾಸಮತಯಾಚನೆಯನ್ನು ಆನಂತರ ನೋಡೊಣ, ಮೊದಲು ಕರೊನಾ ವೈರಸ್​ ಬಗ್ಗೆ ಗಮನ ಹರಿಸೋಣ ಎಂದಿದ್ದಾರೆ. ಅಲ್ಲದೆ, ಭೇಟಿ ವೇಳೆ ರಾಜ್ಯಪಾಲರಿಗೆ ಪತ್ರವೊಂದನ್ನು ನೀಡಿ ಬೆಂಗಳೂರಿನಲ್ಲಿ ಹಿಡಿದಿಡ್ಡಿರುವ ಶಾಸಕರು ಬಿಡುಗಡೆಗೊಳಿಸುವಂತೆ ಕಮಲ್​ನಾಥ್​ ಒತ್ತಾಯಿಸಿದ್ದಾರೆ.

    ಶಾಸಕರನ್ನು ಹಿಡಿದಿಟ್ಟಿರುವಾಗ ವಿಶ್ವಾಸಮತಯಾಚನೆ ಹೇಗೆ ಸಾಧ್ಯ? ಮೊದಲು ಶಾಸಕರನ್ನು ಬಿಡುಗಡೆ ಮಾಡಿ ಇಲ್ಲಿಗೆ ಕರೆತರಲಿ. ಅವರ ಇಚ್ಛೆಯಂತೆ ಅವರು ದೂರದಲ್ಲಿದ್ದರೆ, ಅವರನ್ನೇಕೆ ಮಾಧ್ಯಮ ಮುಂದೆ ಬರಲು ಬಿಡುತ್ತಿಲ್ಲ ಎಂದು ಕಮಲ್​ನಾಥ್​ ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿ ಮಧ್ಯಪ್ರದೇಶ ರಾಜಕೀಯದಲ್ಲಿ ಅಕ್ರಮ ಹಾಗೂ ಅನೈತಿಕವಾಗಿ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಅಲ್ಲದೆ, ಬಿಜೆಪಿ ಕುದರೆ ವ್ಯಾಪಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಮಧ್ಯಪ್ರದೇಶದ ಒಟ್ಟು 230 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯ ಕಾಂಗ್ರೆಸ್​ 120 ಶಾಸಕರನ್ನು ಹೊಂದಿದ್ದು, ಬಹುಮತ ಸಂಖ್ಯೆ 116ಕ್ಕಿಂತ 4 ಶಾಸಕರನ್ನು ಹೆಚ್ಚಿಗೆ ಇದ್ದಾರೆ. ಒಂದು ವೇಳೆ 22 ಶಾಸಕರು ರಾಜೀನಾಮೆ ಅಂಗೀಕಾರವಾದರೆ ಬಹುಮತ ಸಂಖ್ಯೆ 104ಕ್ಕೆ ಕುಸಿಯಲಿದೆ. ಹೀಗಾದಲ್ಲಿ 107 ಸ್ಥಾನ ಇರುವ ಬಿಜೆಪಿಗೆ ವರವಾಗಲಿದೆ. ಬಳಿಕ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಸಾಧಿಸಲಿದೆ.

    ಮಾರ್ಚ್​ 16ರಂದು ವಿಶ್ವಾಸಮತಯಾಚನೆಗೆ ದಿನಾಂಕ ನಿಗದಿಯಾಗಿದ್ದು, ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅದನ್ನು ಮುಂದೂಡುವಂತೆ ಕಮಲ್​ ರಾಜ್ಯಪಾಲರೊಟ್ಟಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮತ್ತಷ್ಟು ಕಾಲಾವಕಾಶ ಪಡೆಯಬಹುದೆಂಬ ಲೆಕ್ಕಾಚಾರವನ್ನು ಕಮಲ್​ ಇಟ್ಟುಕೊಂಡಿದ್ದಾರೆ. (ಏಜೆನ್ಸೀಸ್​)

    ಕೋಮಾದಲ್ಲಿದೆ ಸರ್ಕಾರ: ಷೇರುಪೇಟೆ ಕುಸಿತಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ

    ಉತ್ತರ ಪ್ರದೇಶ ಸರ್ಕಾರ ಕ್ರಮಕ್ಕೆ ಸುಪ್ರೀಂನಲ್ಲಿ ಹಿನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts