More

    ಗೆಲ್ಲಲ್ಲ ಅಂತ ಗೊತ್ತಿದ್ರೂ ಸರ್ಕಾರದ ವಿರುದ್ಧ ಕಾಂಗ್ರೆಸ್​ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿರುವುದೇಕೆ? ಇಲ್ಲಿದೆ ಉತ್ತರ

    ನವದೆಹಲಿ: ಮಣಿಪುರ ಬಿಕ್ಕಟ್ಟಿನ ಸಂಬಂಧ ಸಂಸತ್ತಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಂಗ್ರೆಸ್​ ಮುಂದಾಗಿದೆ. ಅವಿಶ್ವಾಸ ನಿರ್ಣಯದಲ್ಲಿ ಗೆಲ್ಲುವಷ್ಟು ಸದಸ್ಯ ಬಲ ಕಾಂಗ್ರೆಸ್​ನಲ್ಲಿ ಇಲ್ಲದಿದ್ದರೂ ಕಾಂಗ್ರೆಸ್​ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ, ಕಳೆದ ನಾಲ್ಕು ದಿನಗಳಿಂದ ಇದೇ ಮಣಿಪುರ ವಿಚಾರಕ್ಕೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗದ್ದಲ ಉಂಟಾಗಿದ್ದು, ಆ ಗದ್ದಲ ಮುಂದುವರಿದಿದೆ. ಇದರಿಂದ ಯಾವುದೇ ಚರ್ಚೆಯಾಗದೇ ಕಲಾಪ ನಿಂತಲ್ಲಿಯೇ ನಿಂತಿದೆ.

    ಇಂದು ಮಣಿಪುರ ಬಿಕ್ಕಟ್ಟು ಸಂಬಂಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಂಗ್ರೆಸ್​ ಮುಂದಾಗಿದೆ. ಅತ್ತ ತೆಲಂಗಾಣ ಸಿಎಂ ಚಂದ್ರಶೇಖರ್​ ರಾವ್​ ನೇತೃತ್ವದ ಭಾರತ್​ ರಾಷ್ಟ್ರ ಸಮಿತಿ (ಬಿಆರ್​ಎಸ್​) ಕೂಡ ಗೊತ್ತುವಳಿ ಮಂಡಿಸಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದೆ. ಬಿಆರ್​ಎಸ್ ಸೇರಿದಂತೆ ವಿಪಕ್ಷಗಳ ಇಂಡಿಯಾ ಒಕ್ಕೂಟವನ್ನು ಸೇರದೆ ಹೊರಗುಳಿದಿದೆ.

    ಇದನ್ನೂ ಓದಿ: ಯುವಕ ಯುವತಿಯರಿಗೆ ಕಡಿವಾಣ ಹಾಕಲು ಮುಂದಾದ ಸಮುದಾಯ: ಇಲ್ಲಿ ಅಂತರ್ಜಾತಿ ಮದುವೆಯಾದರೆ 1 ಲಕ್ಷ ರೂ. ದಂಡ…

    ನಮ್ಮ ಬಿಆರ್​ಎಸ್​ ಪಕ್ಷದ ಪರವಾಗಿ ನಾವು ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದೇವೆ. ಅಧಿವೇಶನ ಆರಂಭವಾದಾಗಿನಿಂದ ಎಲ್ಲ ವಿಪಕ್ಷಗಳು ಮಣಿಪುರ ವಿಚಾರದ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿವೆ. ಪ್ರಧಾನಿಯವರು ಈ ಕುರಿತು ಮಾತನಾಡಿದರೆ, ದೇಶದ ಜನರಲ್ಲಿ ಶಾಂತಿ ನೆಲೆಸುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ನಾವು ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಬಿಆರ್‌ಎಸ್ ಸಂಸದ ನಾಮ ನಾಗೇಶ್ವರ ರಾವ್ ಹೇಳಿದರು.

    ಸದನದಲ್ಲಿ 50 ಸದಸ್ಯರು ಬೆಂಬಲ ನೀಡಿದರೆ ಮಾತ್ರ ಅವಿಶ್ವಾಸ ಗೊತ್ತುವಳಿ ಮಂಡನೆ ನಡೆಯಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅವಿಶ್ವಾಸ ನಿರ್ಣಯವು ಅಗತ್ಯ ಬೆಂಬಲವನ್ನು ಕಂಡುಕೊಳ್ಳುವ ನಿರೀಕ್ಷೆಯಿದ್ದರೂ, ಬಿಆರ್‌ಎಸ್ ಲೋಕಸಭೆಯಲ್ಲಿ ಕೇವಲ 9 ಸ್ಥಾನಗಳನ್ನು ಹೊಂದಿರುವುದರಿಂದ ಅದರ ಗೊತ್ತುವಳಿ ಮಂಡಳಿ ಮಾನ್ಯವಾಗುವುದಿಲ್ಲ..

    ಲೋಕಸಭೆಯ ಒಟ್ಟು 543 ಸದಸ್ಯ ಸ್ಥಾನಗಳನ್ನು ಹೊಂದಿದೆ. ಅದರಲ್ಲಿ ಆಡಳಿತಾರೂಢ ಎನ್​ಡಿಎ ಒಕ್ಕೂಟ 331 ಸದಸ್ಯ ಬಲವನ್ನು ಹೊಂದಿದೆ. ವಿಪಕ್ಷಗಳ ಇಂಡಿಯಾ ಒಕ್ಕೂಟ 144 ಸದಸ್ಯರ ಬಲವನ್ನು ಹೊಂದಿದೆ. ಅವಿಶ್ವಾಸ ನಿರ್ಣಯವನ್ನು ಗೆಲ್ಲುವಷ್ಟು ಸದಸ್ಯ ಬಲ ಕಾಂಗ್ರೆಸ್​ನಲ್ಲಿ ಇಲ್ಲ. ಆದರೂ, ಚರ್ಚೆಯ ಸಮಯದಲ್ಲಿ ಮಣಿಪುರ ವಿಷಯದ ಬಗ್ಗೆ ಸರ್ಕಾರವನ್ನು ಮೂಲೆಗುಂಪು ಮಾಡುವ ಮೂಲಕ ಜನರ ದೃಷ್ಟಿಕೋನ ಯುದ್ಧದಲ್ಲಿ ಗೆಲ್ಲುತ್ತೇವೆ ಎಂದು ಕಾಂಗ್ರೆಸ್​ನವರು ವಾದಿಸುತ್ತಾರೆ.

    ಮಣಿಪುರ ಪರಿಸ್ಥಿತಿಯ ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಉತ್ತರ ನೀಡಲಿದ್ದಾರೆ ಸರ್ಕಾರ ಒತ್ತಾಯಿಸುತ್ತಿದ್ದರೂ ಸಹ, ನಿರ್ಣಾಯಕ ವಿಷಯದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಮಾತನಾಡುವಂತೆ ಮಾಡುವುದು ಒಂದು ತಂತ್ರವಾಗಿದೆ ಎಂದು ವಿಪಕ್ಷಗಳ ವಾದವಾಗಿದೆ. ಜುಲೈ 20ರಿಂದ ಆರಂಭವಾದ ಅಧಿವೇಶವನವನ್ನು ಪದೇಪದೆ ಮುಂದೂಡುತ್ತಿರುವ ಕ್ರಮದ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷದವರು ಪ್ರತಿಭಟನೆ ಮುಂದುವರಿಸಿದ್ದಾರೆ. ಇತ್ತ ಮಣಿಪುರ ಕುರಿತಾದ ಚರ್ಚೆಗೆ ಸಿದ್ಧ ಎಂದು ಸರ್ಕಾರ ಹೇಳುತ್ತಿದೆ. ಆದರೆ ವಿಪಕ್ಷಗಳು ಮತದಾನವನ್ನು ಒಳಗೊಂಡಿರುವ ನಿಯಮಾವಳಿಯ ಅಡಿಯಲ್ಲಿ ಚರ್ಚಿಸಲು ಒತ್ತಾಯಿಸುತ್ತಿವೆ.

    ಇದನ್ನೂ ಓದಿ: ಗಲಭೆಯಲ್ಲಿ ಭಾಗಿಯಾದವರ ಕೇಸ್ ವಾಪಾಸ್ ಪಡೆಯುವ ವಿಚಾರ: ತಕ್ಷಣಕ್ಕೆ ಆಗೋದಿಲ್ಲ ಎಂದ ಗೃಹಸಚಿವ ಜಿ ಪರಮೇಶ್ವರ್

    ಏನಿದು ಮಣಿಪುರ ಘಟನೆ?

    ಜು.19ರ ರಾತ್ರಿಯಿಂದ ಟ್ವಿಟರ್​ನಲ್ಲಿ ವಿಡಿಯೋವೊಂದು ವೈರಲ್​ ಆಯಿತು. ಅದರಲ್ಲಿ ಮಹಿಳೆಯರಿಬ್ಬರನ್ನು ಪುರುಷರ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ದಶ್ರವಿತ್ತು. ಅಲ್ಲದೆ, ಮಹಿಳೆಯರ ಮೇಲೆ ಗ್ಯಾಂಗ್​ರೇಪ್​ ಸಹ ನಡೆದಿದೆ ಎನ್ನಲಾಗಿದೆ. ಈ ಘಟನೆ ಮೇ 4ರಂದು ಮಣಿಪುರ ರಾಜಧಾನಿ ಇಂಫಾಲ್​ನಿಂದ 35 ಕಿ.ಮೀ. ದೂರದಲ್ಲಿರುವ ಕೊಂಗ್​ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ಜುಲೈ 20ರಂದು ಬೆಳಕಿಗೆ ಬಂದಿದೆ.

    ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನಕ್ಕಾಗಿ ಮೈತೀಸ್​ ಸಮುದಾಯ ಇಟ್ಟಿರುವ ಬೇಡಿಕೆಯ ಕುರಿತು ಮಣಿಪುರದ ಮೈತೀಸ್​ ಮತ್ತು ಕುಕಿ ಬುಡಕಟ್ಟುಗಳ ನಡುವೆ ಘರ್ಷಣೆಗಳು ಉಂಟಾಗಿದೆ. ಕಳೆದೆರೆಡು ತಿಂಗಳಿಂದಲೂ ಈ ಘರ್ಷಣೆ ಮುಂದುವರಿದೇ ಇದೆ. ಇದರ ನಡುವೆ ಈ ಭಯಾನಕ ಕೃತ್ಯ ನಡೆದಿದೆ. ಮಣಿಪುರದ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತೆ ಇದೆ. ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವುದನ್ನು ಪ್ರಧಾನಿ ಮೋದಿ ಸಹ ಖಂಡಿಸಿದ್ದಾರೆ. ಮುಂಗಾರು ಅಧಿವೇಶನದಲ್ಲೂ ಈ ಘಟನೆ ಭಾರೀ ಕೋಲಾಹಲವನ್ನೇ ಎಬ್ಬಿಸಿದೆ. ಸುಪ್ರೀಂಕೋರ್ಟ್​ ಸಹ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

    ಇನ್ನು ಮಣಿಪುರದ ಹಿಂಸಾಚಾರದಲ್ಲಿ ಈವರೆಗೂ 150 ಮಂದಿ ಅಸುನೀಗಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಿದ್ದು, ಪರಿಹಾರ ಶಿಬಿರಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ. (ಏಜೆನ್ಸೀಸ್​)

    VIRAL VIDEO | ಪ್ರಧಾನಿ, 2019ರಲ್ಲೇ ಈ ಬಾರಿಯ ಅವಿಶ್ವಾಸ ಗೊತ್ತುವಳಿ ಮಂಡನೆ ಬಗ್ಗೆ ಭವಿಷ್ಯ ನುಡಿದಿದ್ರಾ?!

    ATM ಒಳಗೆ ಹೋದಾಗ ಅಪಹರಣ​: ಇಡೀ ರಾತ್ರಿ ಬೆಟ್ಟದಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಮಣಿಪುರದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts