More

  ಹಿಮಾಚಲದಲ್ಲಿ ಕಾಂಗ್ರೆಸ್​ ಸರ್ಕಾರಕ್ಕೆ ಬಿಗ್​ ಶಾಕ್​: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಸಿಎಂ ಪುತ್ರ

  ಶಿಮ್ಲಾ: ರಾಜ್ಯಸಭಾ ಚುನಾವಣೆ ಬೆನ್ನಲ್ಲೇ ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಪತನದ ಭೀತಿ ಎದುರಿಸುತ್ತಿದೆ. ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ವಿರುದ್ಧ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಭಿನ್ನಮತಿಯರನ್ನು ಸಮಧಾನಪಡಿಸುವ ಪಯತ್ನದ ನಡುವೆಯೇ ಸಚಿವ ವಿಕ್ರಮಾದಿತ್ಯ ಸಿಂಗ್​ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸರ್ಕಾರಕ್ಕೆ ಶಾಕ್​ ನೀಡಿದ್ದಾರೆ.

  ಸಿಎಂ ಸುಖು ಅವರು ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಮತ್ತು ಕಾಂಗ್ರೆಸ್​ನ ಹಿರಿಯ ರಾಜಕಾರಣಿ ಹಾಗೂ ನನ್ನ ತಂದೆ ದಿವಂಗತ ವಿರಭದ್ರ ಸಿಂಗ್​ ಅವರಿಗೆ ಅಗೌರವ ತೋರಿದ್ದಾರೆಂದು ವಿಕ್ರಮಾದಿತ್ಯ ಸಿಂಗ್​ ಗಂಭೀರ ಆರೋಪ ಮಾಡಿದ್ದಾರೆ.

  ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಸರ್ಕಾರವಿದ್ದು, 68 ಸದಸ್ಯರ ವಿಧಾನಸಭೆಯಲ್ಲಿ 40 ಶಾಸಕರ ಸಂಖ್ಯಾಬಲವನ್ನು ಹೊಂದಿದೆ. ಹೀಗಾಗಿ ನಿನ್ನೆ (ಫೆ.27) ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಿರಿಯ ನಾಯಕ, ಸುಪ್ರೀಂಕೋರ್ಟ್ ವಕೀಲ ಅಭಿಷೇಕ್ ಮನುಸಿಂಘಿಯವರಿಗೆ ಗೆಲುವು ಸುಲಭದ ತುತ್ತಾಗಬೇಕಿತ್ತು. ಆದರೆ, ಭಾರಿ ಕಾರ್ಯಾಚರಣೆ ನಡೆಸಿದ ಬಿಜೆಪಿ ನಾಯಕರು, 6 ಕಾಂಗ್ರೆಸ್ ಶಾಸಕರಿಂದ ಅಡ್ಡಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, 3 ಪಕ್ಷೇತರ ಶಾಸಕರು ಕೂಡ ಬಿಜೆಪಿ ಅಭ್ಯರ್ಥಿ ಬೆಂಬಲಿಸಿ ಮತ ಹಾಕಿದ್ದು, ಇದರಿಂದಾಗಿ ಬಿಜೆಪಿ ಹರ್ಷ ಮಹಾಜನ್ ಗೆಲುವು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸಿಎಂ ಸುಖು ವಿರುದ್ಧ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮಾದಿತ್ಯ ಸಿಂಗ್​, ಹಿಮಾಚಲ ಪ್ರದೇಶದ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಕಳವಳಕಾರಿಯಾಗಿದೆ. ಆದರೆ, ನಾವು ಹಿಂದೆ ಹೋಗಿ, ಈ ಪರಿಸ್ಥಿತಿಗೆ ಕಾರಣವೇನು ಎಂಬುದನ್ನು ನೋಡಬೇಕು. 2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಗಿನ ವಿರೋಧ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಪ್ರಚಾರ ಸಮಿತಿ ಮುಖ್ಯಸ್ಥ ಮತ್ತು ಪ್ರಸ್ತುತ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಗೆದ್ದವು. ಮಾಜಿ ಮುಖ್ಯಮಂತ್ರಿ, ದಿವಂಗತ ವೀರಭದ್ರ ಸಿಂಗ್ ಅವರ ಹೆಸರಿನಲ್ಲಿಯೂ ಚುನಾವಣೆ ನಡೆದಿದೆ ಎಂಬುದರಲ್ಲಿ ಸಂದೇಹವಿಲ್ಲ. ಅವರ ಫೋಟೋ ಇಲ್ಲದ ಯಾವುದೇ ಬ್ಯಾನರ್ ಅಥವಾ ಪೋಸ್ಟರ್ ಇರಲಿಲ್ಲ. ಮತದಾನಕ್ಕೆ ಒಂದು ದಿನ ಮುಂಚಿತವಾಗಿ, ಪೂರ್ಣ ಪುಟದ ಪತ್ರಿಕೆಯ ಜಾಹೀರಾತಿನಲ್ಲಿ ನನ್ನನ್ನು ನೆನಪಿಡಿ, ನನ್ನ ಹೆಸರಿನಲ್ಲಿ ಮತ ಚಲಾಯಿಸಿ ಎಂಬ ಸಂದೇಶದೊಂದಿಗೆ ಅವರ ಫೋಟೋ ಇತ್ತು. ಇದು ದಾಖಲೆಯ ಸಂಗತಿ ಎಂದರು.

  ಕಳೆದ ಒಂದು ವರ್ಷದಲ್ಲಿ ನಾನು ಸರ್ಕಾರದ ಕಾರ್ಯವೈಖರಿಯ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ, ಆದರೆ ಈಗ ಜನರೊಂದಿಗೆ ಮಾತನಾಡುವುದು ನನ್ನ ಜವಾಬ್ದಾರಿಯಾಗಿದೆ. ನನಗೆ ಸ್ಥಾನ ಮುಖ್ಯವಲ್ಲ, ಹಿಮಾಚಲದ ಜನರೊಂದಿಗಿನ ನನ್ನ ಸಂಬಂಧ ಮುಖ್ಯವಾಗಿದೆ. ಸರಕಾರ ನಡೆಸುತ್ತಿರುವ ರೀತಿ, ಶಾಸಕರ ಬಗೆಗಿನ ನಿರ್ಲಕ್ಷ್ಯ ಮತ್ತು ಶಾಸಕರ ಧ್ವನಿಯನ್ನು ಹತ್ತಿಕ್ಕಿರುವುದು ನಮ್ಮನ್ನು ಈ ಹಂತಕ್ಕೆ ತಲುಪಿಸಿದೆ ಎಂದು ವಿಕ್ರಮಾದಿತ್ಯ ಸಿಂಗ್​ ಹೇಳಿದರು.

  ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಮತ್ತು ಹಣಕಾಸಿನ ದುರುಪಯೋಗದ ವಿರುದ್ಧ ವಿಕ್ರಮಾದಿತ್ಯ ಸಿಂಗ್ ಆಕ್ರೊಶ ಹೊರಹಾಕಿದ್ದಾರೆ. ಈ ವಿಚಾರವನ್ನು ಪಕ್ಷದ ಹೈಕಮಾಂಡ್‌ಗೆ ಪದೇಪದೆ ಪ್ರಸ್ತಾಪಿಸಲಾಗಿದೆ. ಆದರೆ, ಹೈಕಮಾಂಡ್​ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೆ, ರಾಜ್ಯದ ಯುವಕರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಆದರೆ, ಯುವಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಸ್ಥಿತಿಯಲ್ಲಿ ನಾವಿದ್ದೇವೆಯೇ ಎಂಬುದು ಯೋಚಿಸಬೇಕಾದ ಪ್ರಶ್ನೆಯಾಗಿದೆ ಎಂದರು.

  ಒಟ್ಟು 26 ಶಾಸಕರು ಸಿಎಂ ಸುಖು ವಿರುದ್ಧ ಅಸಮಾಧಾನಗೊಂಡಿದ್ದಾರೆ ಮತ್ತು ಸಿಎಂ ಬದಲಾವಣೆಯನ್ನೂ ಬಯಸಿದ್ದಾರೆ. ಅಡ್ಡ ಮತದಾನ ಮಾಡಿದ ಶಾಸಕರೇ ಇದನ್ನು ಬಹಿರಂಗವಾಗಿ ಹೇಳಿದ್ದು, ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರದ ಬುಡ ಅಲುಗಾಡುತ್ತಿದೆ. ಸಿಎಂ ಸುಖು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಮತ್ತೊಬ್ಬ ಬಲಿಷ್ಠ ನಾಯಕನ್ನು ಸಿಎಂ ಸ್ಥಾನಕ್ಕೆ ಕೂರಿಸುವ ಸಾಧ್ಯತೆಯೂ ಇದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್​ ಹೈಕಮಾಂಡ್​, ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮತ್ತು ಮಾಜಿ ಹರಿಯಾಣ ಸಿಎಂ ಭೂಪಿಂದ್ರ ಹೂಡರನ್ನು ಕಳುಹಿಸಿ, ಅಸಮಾಧಾನಿತರ ಜತೆ ಮಾತುಕತೆ ನಡೆಸಲು ಸೂಚಿಸಲಾಗಿದೆ. ಸುಖುವನ್ನು ಬದಲಾಯಿಸದ ಹೊರತು ನಮ್ಮ ಅಸಮಾಧಾನ ತಗ್ಗುವುದಿಲ್ಲ ಎಂದು ಭಿನ್ನಮತಿಯರು ಹೇಳಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

  ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿಕಾಂತ್ ಗಲಿಬಿಲಿಗೊಂಡಿದ್ದರು!

  ಹಿಮಾಚಲ ಪ್ರದೇಶದಲ್ಲಿ ಪತನದ ಅಂಚಿನಲ್ಲಿ ಕಾಂಗ್ರೆಸ್​ ಸರ್ಕಾರ: 26 ಶಾಸಕರು ರೆಬೆಲ್​, ಡಿಕೆಶಿ ದೌಡು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts