ಮಂಗಳೂರು: ವಲಸೆ ಕಾರ್ಮಿಕರಿಗೆ ತಪ್ಪು ಮಾಹಿತಿ ನೀಡಿ ಪ್ರತಿಭಟನೆಯ ನಾಟಕ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಕರೊನಾ ಹಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಲಾಕ್‌ಡೌನ್ ಜಾರಿಯಲ್ಲಿದ್ದರೂ ಮಂಗಳೂರು ರೈಲು ನಿಲ್ದಾಣದಲ್ಲಿ ಸಾವಿರಾರು ಮಂದಿ ಹೊರರಾಜ್ಯದ ಕಾರ್ಮಿಕರನ್ನು ಸೇರಿಸಿ ಕಾಂಗ್ರೆಸ್ ನಾಯಕರು ಭಾಷಣ ಮಾಡಿದ್ದಾರೆ. ಕರೊನಾ ಪ್ರಕರಣ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ದಿಟ್ಟ ನಿರ್ಣಯಗಳಿಂದ ಕರೊನಾ ಈಗ ನಿಯಂತ್ರಣದಲ್ಲಿದೆ. ಸಾಮಾನ್ಯ ಜನತೆ ಕೂಡ ಕರೊನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಆದರೆ ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹೊರರಾಜ್ಯದವರನ್ನು ಕಳುಹಿಸುವ ಬಗ್ಗೆ ಜಿಲ್ಲಾಡಳಿತ ಅಧಿಕೃತ ಘೋಷಣೆ ಹೊರಡಿಸಲಿದೆ. ಸುಳ್ಳು ಸಂದೇಶಗಳಿಗೆ ಕಿವಿಗೊಡಬಾರದು. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಉದ್ಯಮ ಚಟುವಟಿಕೆ ಹಾಗೂ ಅಭಿವೃದ್ದಿ ಕಾಮಗಾರಿಗಳು ಆರಂಭವಾಗಲಿದ್ದು, ಅನಿವಾರ್ಯವಾದರೆ ಮಾತ್ರ ಊರಿಗೆ ಹೋಗುವ ನಿರ್ಧಾರ ಕೈಗೊಳ್ಳಿ ಎಂದು ವಿನಂತಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಶಾಸಕ ಡಿ.ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.
ಮಾನವ ಹಕ್ಕು ಉಲ್ಲಂಘನೆ
ಮಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿ ಊರಿಗೆ ತೆರಳಲು ಸಿದ್ಧವಾಗಿರುವ ಕಾರ್ಮಿಕರನ್ನು ಬಿಲ್ಡರ್‌ಗಳ ಮಾತಿಗೆ ಮಣಿದು ಇಲ್ಲೇ ಇರಿಸಿ ದುಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿರುವುದು ಮಾನವ ಹಕ್ಕಿನ ಉಲ್ಲಂಘನೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಇತರ ರಾಜ್ಯಗಳಲ್ಲಿ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸಲು ವ್ಯವಸ್ಥೆಯಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಆಯಾ ರಾಜ್ಯಗಳಿಂದ ರೈಲುಗಳನ್ನು ಕಳುಹಿಸಲು ಕೋರಿ ಬರೆದ ಪತ್ರವನ್ನು ರದ್ದುಪಡಿಸಿರುವುದು ಖಂಡನೀಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಕರೊನಾ ಸಾಮುದಾಯಿಕವಾಗಿ ಹರಡಿದರೆ ಅದಕ್ಕೆ ಬಿಜೆಪಿ ಮತ್ತು ಸಂಸದರೇ ಹೊಣೆಯಾಗುತ್ತಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರೋಪಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಎಐಟಿಯುಸಿಯ ಎಚ್.ವಿ.ರಾವ್, ಕರುಣಾಕರ್, ಸಿಐಟಿಯುನ ಜೆ.ಬಾಲಕೃಷ್ಣ ಶೆಟ್ಟಿ, ಕಾಂಗ್ರೆಸ್ ಮುಖಂಡ ಸಂತೋಷ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.