More

    ಕರಾವಳಿಯಿಂದ ಕರೊನಾ ಭೀತಿ ದೂರ

    ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮೂವರ ವರದಿ ಕರೊನಾ ವೈರಸ್ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಸೋಮವಾರ ಮನೆಗಳಿಗೆ ತೆರಳಲಿದ್ದಾರೆ. ಚೀನಾದಲ್ಲಿ ನೆಲೆಸಿದ್ದ ಬ್ರಹ್ಮಾವರ ತಾಲೂಕಿನ ಕುಟುಂಬ 15 ದಿನಗಳ ಹಿಂದೆ ಭಾರತಕ್ಕೆ ಮರಳಿದ್ದು, ಜ್ವರ, ಕಫ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಂದೆ ಮತ್ತು ಮಗು ಮತ್ತು ಕಾಪು ತಾಲೂಕಿನ ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತಿತ್ತು. ಶಂಕಿತ ರೋಗಿಗಳ ರಕ್ತ ಮಾದರಿ ಮತ್ತು ಗಂಟಲಿನ ದ್ರವವನ್ನು ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಲಾಗಿದ್ದು, ಭಾನುವಾರ ಜಿಲ್ಲಾಡಳಿತಕ್ಕೆ ವೈದ್ಯಕೀಯ ಪರೀಕ್ಷೆ ವರದಿ ಲಭ್ಯವಾಗಿದೆ. ವರದಿಯಲ್ಲಿ ನೆಗೆಟಿವ್ ಎಂದು ಸ್ಪಷ್ಟಪಡಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
    ಮಗು ಸೇರಿದಂತೆ ಮೂವರು ಸಾಮಾನ್ಯ ಜ್ವರ ಮತ್ತು ಶೀತದಿಂದಷ್ಟೇ ಬಳಲುತ್ತಿದ್ದು, ಅವರಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗಿತ್ತು. ಈ ಗುಣಮುಖರಾಗಿರುವುದರಿಂದ ಫೆ.10ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಚೀನಾದಲ್ಲಿದ್ದ ದಕ್ಷಿಣ ಕನ್ನಡದ ಇಬ್ಬರು ವಾಪಸ್:
    ಮಂಗಳೂರು: ಚೀನಾದಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ನಿವಾಸಿಗಳು ತವರು ಜಿಲ್ಲೆಗೆ ಮರಳಿದ್ದು, ಇವರನ್ನು ಅವರ ಮನೆಯಲ್ಲೇ ಜಿಲ್ಲಾ ವೈದ್ಯಕೀಯ ತಂಡ ತಪಾಸಣೆಗೆ ಒಳಪಡಿಸಿ ಕರೊನಾ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿದೆ.
    ಆ ಇಬ್ಬರೂ ಚೀನಾದಲ್ಲಿ ಸೋಂಕು ಹುಟ್ಟಿಕೊಂಡಿರುವ ವುಹಾನ್ ಪ್ರದೇಶದಿಂದ ಹೊರಗೆ ಇದ್ದವರು. ಕರೊನಾ ಸೋಂಕಿನ ಲಕ್ಷಣ ಅವರಲ್ಲಿ ಇರದಿದ್ದರೂ ಕೆಲದಿನ ಮನೆ ಬಿಟ್ಟು ತೆರಳದಂತೆ ಸೂಚಿಸಲಾಗಿದೆ. ಅವರ ಮನೆಮಂದಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಂಡದ ಹಿರಿಯ ಅಧಿಕಾರಿಯೋರ್ವರು ‘ವಿಜಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
    ಸರ್ಕಾರದ ಮಾರ್ಗಸೂಚಿ ಪ್ರಕಾರ ಚೀನಾದಿಂದ ಮರಳಿದವರ ಬಗ್ಗೆ ಮಾಹಿತಿ ಬಹಿರಂಗಪಡಿಸುವಂತಿಲ್ಲ. ಜಿಲ್ಲಾಡಳಿತ ಎಲ್ಲ ವಿಷಯಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸರ್ಕಾರಕ್ಕೆ ವರದಿ ಮಾಡಿದೆ ಎಂದು ತಿಳಿಸಿದ್ದಾರೆ.

    ಹಡಗಿನಲ್ಲಿದ್ದವರು ಸೇಫ್, 2 ದಿನದಲ್ಲಿ ಬಿಡುಗಡೆ: ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಹಾಂಕಾಂಗ್‌ನಲ್ಲಿ ತಡೆಹಿಡಿಯಲ್ಪಟ್ಟ ಹಡಗಿನಲ್ಲಿರುವ ಮಂಗಳೂರು ಹಾಗೂ ಕಾಸರಗೋಡಿನ ಇಬ್ಬರ ಸಹಿತ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾರಿಗೂ ಸೋಂಕು ತಗುಲಿಲ್ಲವೆಂದು ವೈದ್ಯಕೀಯ ವರದಿ ಹೇಳಿದೆ. ಕರೊನಾ ಸೋಂಕು ಬಂದಿಲ್ಲ, ಮುಂಜಾಗ್ರತಾ ಕ್ರಮವಾಗಿ ನಿಗಾ ವಹಿಸಲಾಗಿದೆ, ಆತಂಕ ಅಗತ್ಯವಿಲ್ಲ. ವೈದ್ಯಕೀಯ ತಪಾಸಣೆ ಸಂಬಂಧಿಸಿದ ಪ್ರಕ್ರಿಯೆ ಫೆ.11ರಂದು ಪೂರ್ಣಗೊಳ್ಳಲಿದ್ದು, ಬಳಿಕ ಹಡಗು ಹಾಗೂ ಅದರಲ್ಲಿರುವ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗುವುದು ಎಂದು ಹಾಂಕಾಂಗ್ ಸರ್ಕಾರ ಭರವಸೆ ನೀಡಿದೆ.
    ಹಡಗಿನಲ್ಲಿರುವ ಕರಾವಳಿಯ ಪ್ರಯಾಣಿಕರ ಕುಟುಂಬ ವರ್ಗ ‘ವಿಜಯವಾಣಿ’ಗೆ ಭಾನುವಾರ ಸಾಯಂಕಾಲ ಈ ಮಾಹಿತಿಯನ್ನು ಒದಗಿಸಿದ್ದು, ಫೆ.19ಕ್ಕೆ ಹಡಗು ಮಂಗಳೂರು ತಲುಪುವ ನಿರೀಕ್ಷೆ ವ್ಯಕ್ತಪಡಿಸಿದೆ.ಫೆ.10ರಂದು ಮಂಗಳೂರಿನಲ್ಲಿ ನಡೆಯಬೇಕಿದ್ದ ಕುಂಪಲದ ಗೌರವ್ ಮದುವೆ ಮುಂದೂಡಲ್ಪಟ್ಟಿದ್ದು, ಅವರು ಊರಿಗೆ ತಲುಪಿದ ಬಳಿಕ ಹೊಸ ದಿನಾಂಕ ನಿಗದಿಪಡಿಸಲು ಕುಟುಂಬ ಸಿದ್ಧತೆ ನಡೆಸಿದೆ. ಹಡಗಿನಲ್ಲಿದ್ದ ಇನ್ನೋರ್ವ ಸಿಬ್ಬಂದಿ ಕಾಸರಗೋಡು ನಿವಾಸಿಯ ಮದುವೆ ಫೆ.16ರಂದು ಪುತ್ತೂರಿನಲ್ಲಿ ನಡೆಯುವ ಕುರಿತು ದಿನ ನಿಗದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts