More

    ಸಾಹಿತ್ಯವನ್ನು ಲಿಂಗ, ವರ್ಗ, ಧರ್ಮ ಆಧರಿಸಿ ವರ್ಗೀಕರಿಸುವುದು ಸಲ್ಲ: ಕೇಶವ ಮಳಗಿ

    ಬೆಂಗಳೂರು: ಸಾಹಿತ್ಯವನ್ನು ಸ್ತ್ರೀವಾದ, ದಲಿತ ಸಾಹಿತ್ಯ, ಕರಾವಳಿ ಮುಸ್ಲಿಂ ಲೇಖಕರ ಸಾಹಿತ್ಯ ಎಂಬುದಾಗಿ ಪ್ರತ್ಯೇಕಿಸುವುದು ಸರಿಯಲ್ಲ ಎಂದು ಕಥೆಗಾರ ಕೇಶವ ಮಳಗಿ ಹೇಳಿದ್ದಾರೆ.

    ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಈ ಹೊತ್ತಿಗೆ ಸಂಸ್ಥೆ ಆಯೋಜಿಸಿದ್ದ ‘ಸಮಕಾಲೀನ ಕನ್ನಡ ಕಥಾ ಜಗತ್ತು’ ಎಂಬ ವಿಷಯಾಧಾರಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಎಲ್ಲವನ್ನೂ ಎಲ್ಲರನ್ನೂ ಸಾಹಿತ್ಯ ಒಳಗೊಂಡಿರುತ್ತದೆ. ಸಾಹಿತ್ಯದಲ್ಲಿ ನಿರ್ವಾತ ಅನ್ನುವುದೂ ಇರುವುದಿಲ್ಲ, ಸಮಾಜಕ್ಕೆ ತನ್ನನ್ನು ನಾನು ನೋಡಿಕೊಳ್ಳುವ, ವಿಶ್ಲೇಷಿಸಿಕೊಳ್ಳುವ, ಅವಲೋಕನ ಮಾಡಿಕೊಳ್ಳುವುದಕ್ಕೆ ಸಮಯ ಬೇಕಾಗುತ್ತದೆ. ಅದು ಕಥೆಗಳನ್ನು ಭಿನ್ನ ರೀತಿಯಲ್ಲಿ ಕಟ್ಟಲು ನೆರವಾಗುವಂಥದ್ದು’ ಎಂದು ಹೇಳಿದರು.

    ‘ಸಮಕಾಲೀನತೆ ಎಂದರೆ ಪ್ರಸ್ತುತ ಕಾಲ ಮಾತ್ರವಲ್ಲ. ಅದು ಯಾವ ಕಾಲಕ್ಕೂ ಸಲ್ಲುವಂಥದ್ದಾಗಿರಬೇಕು. ಅಂಥ ಎಲ್ಲ ಕಾಲಕ್ಕೂ ಸಲ್ಲುವ ನೂರಾರು ಕನ್ನಡದ ಕಥೆಗಳಿವೆ. ಕನ್ನಡ ಕಥಾ ಸಾಹಿತ್ಯದ ಬಗ್ಗೆ ಹೇಳುವುದಾದರೆ, ಅದು ಎಲ್ಲ ಕಾಲದಲ್ಲೂ ನಮ್ಮನ್ನು ತಿದ್ದಿದೆ, ಜಾಗೃತಗೊಳಿಸಿದೆ ಮತ್ತು ನಮ್ಮ ಬೌದ್ಧಿಕ ವಲಯವನ್ನು ವಿಸ್ತಾರ ಮಾಡಿದೆ’ ಎಂದರು.

    ನಿವೃತ್ತ ಉಪನ್ಯಾಸಕಿ ಕುಸುಮಾ ಹೆಗಡೆ ಅವರು ಕನ್ನಡ ಕಥಾ ಪರಂಪರೆಯ ಕುರಿತು ಮಾತನಾಡಿ, ಆಟ ಮೊದಲ ಸಣ್ಣ ಕಥೆ, ನನ್ನ ಚಿಕ್ಕ ತಾಯಿ ಹಾಗೂ ಮಾಸ್ತಿ ಅವರ ಹಲವು ಕಥೆಗಳನ್ನು ಪ್ರಸ್ತಾಪಿಸಿದರು.

    ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ನಾಲ್ವರಿಂದ ಸುಪ್ರೀಂಕೋರ್ಟ್​ಗೆ ಅರ್ಜಿ; ಶೀಘ್ರವೇ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು?

    ಕಥೆಗಾರ ಶ್ರೀಹರ್ಷ ಸಾಲಿಮಠ ಮಾತನಾಡಿ, ‘ಜಾಗತೀಕರಣದ ನಂತರ ಕಥಾ ಸ್ವರೂಪಗಳಲ್ಲಿ ಆದ ಮೂರು ಮುಖ್ಯ ಬದಲಾವಣೆಗಳೆಂದರೆ ಎಲಿಜಿಬಿಲಿಟಿ, ದಲಿತ ಕಥನಗಳಲ್ಲಿ ಹೊಸ ನೋಟ ಮತ್ತು ನಗರ ಕೇಂದ್ರಿತ ಕಥೆಗಳು. ಅಕಾಡೆಮಿಕ್ ಆಗಿ ಕಥೆ ಬರೆಯುವವರ ಜತೆಗೆ ಈಗಿನವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಲೇ ಸಮರ್ಥವಾಗಿ ಕಥೆಗಳನ್ನು ಬರೆಯುತ್ತಿರುವುದು ಗಮನಾರ್ಹ’ಎಂದರು.

    ಕಥೆಗಾರ್ತಿ ದೀಪಾ ಫಡ್ಕೆ ಮಾತನಾಡಿ, ‘ವಿಮರ್ಶೆ ಅನ್ನುವುದು ಯಾವತ್ತಿಗೂ ಸಾಹಿತ್ಯ ಕೃತಿಗಿಂತ ದೊಡ್ಡದಾಗಲು ಸಾಧ್ಯವಿಲ್ಲ. ಇದು ಕಥೆಗಳ ಸುಗ್ಗಿ ಕಾಲ. ಅನೇಕ ಹೊಸ ಬರಹಗಾರರು ಒಳ್ಳೊಳ್ಳೆಯ ಕಥೆಗಳನ್ನು ಬರೆಯುತ್ತಿದ್ದಾರೆ. ವಿಮರ್ಶಕರು ಹೊಸಬರನ್ನು ಮೃದು ಧೋರಣೆಯಿಂದ ನೋಡುತ್ತಿದ್ದಾರೆ. ಇತ್ತೀಚಿನ ಆರೇಳು ವರ್ಷಗಳಿಂದ ಮೊದಲೆಲ್ಲ ಕಟು ವಿಮರ್ಶೆ, ಬಹಳ ಪ್ರಖರವಾದ ಬಿಗಿ ಅಂತೆಲ್ಲ ಏನಿತ್ತೋ ಅದನ್ನು ಈಗಿನ ವಿಮರ್ಶಕರು ಮಾಡದೇ, ತಪ್ಪುಗಳನ್ನು ಹೇಳುತ್ತಲೇ ಒಪ್ಪುಗಳನ್ನೂ ಹೇಳಿ ಕಥೆಗಾರರನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

    ಕಥೆಗಾರ ಪದ್ಮನಾಭ ಭಟ್ ಶೇವ್ಕಾರ್ ಮಾತನಾಡಿ, ‘ಸಾಹಿತ್ಯದ ಕೆಲಸವೇ ಕಣ್ಣಿಗೆ ಕಾಣುವುದನ್ನು ಕಾಣಿಸುವುದರ ಮೂಲಕವೇ ಕಣ್ಣಿಗೆ ಕಾಣದ ಆಚೆಗಿನ ದನಿಯನ್ನು ಹಿಡಿಯುವುದು ಮತ್ತು ಆ ಥರದ ಮುಖವಾಡದ ಹಿಂದಿನ ಕೇಡನ್ನು ಕಾಣುವುದು. ಕಂಡಿದ್ದನ್ನು ನಮ್ಮ ಸಹಜೀವಿಗಳಿಗೆ ಕಾಣಿಸುತ್ತಿರುವ ಅನುಭವದ ಮೂಲಕವೇ ದಾಟಿಸುವುದು ಸಾಹಿತ್ಯದ ಬಹು ಮುಖ್ಯ ಅಂಶ’ ಎಂದರು.

    ‘ಈ ಹೊತ್ತಿಗೆ’ಯ ರೂವಾರಿ ಜಯಲಕ್ಷ್ಮಿ ಪಾಟೀಲ್ ಮಾತನಾಡಿ, ಇದೇ ಸೆಪ್ಟೆಂಬರ್ 23 ಮತ್ತು 24ರಂದು ಬಳ್ಳಾರಿಯಲ್ಲಿ ನಡೆಯಲಿರುವ ಕಥಾ ಕಮ್ಮಟಕ್ಕೆ ಕಥೆಗಳಲ್ಲಿ ಆಸಕ್ತಿ ಇರುವವರನ್ನು ಆಹ್ವಾನಿಸಿದರು. ಕಥೆಗಾರ್ತಿ, ಕವಿ ಅನನ್ಯ ತುಷಿರಾ ಕಾರ್ಯಕ್ರಮ ನಿರ್ವಹಿಸಿದರು.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts