More

    ಅಕ್ರಮ ನುಸುಳುವಿಕೆಯಲ್ಲಿ ಪಾಕಿಸ್ತಾನವನ್ನು ಮೀರಿಸುತ್ತಿರುವ ಚೀನಾ? ಗಡಿಯಲ್ಲಿ ಸೇನೆ ಜಮಾವಣೆ

    ನವದೆಹಲಿ: ಗಡಿ ವಿಚಾರಕ್ಕೆ ಬಂದಾಗ ಭಾರತಕ್ಕೆ ಪಾಕಿಸ್ತಾನದ ತಂಟೆ ತಕರಾರುಗಳೇ ಜಾಸ್ತಿ. ಗಡಿಯೊಳಕ್ಕೆ ನುಗ್ಗಿ ಅಧಿಪತ್ಯ ಸಾಧಿಸುವುದಕ್ಕಿಂತಲೂ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವುದೇ ಪಾಕ್​ನ ಉದ್ದೇಶ.

    ಇನ್ನೊಂದೆಡೆ, ಪಾಕಿಸ್ತಾನವನ್ನು ಮೀರಿಸುವಂತೆ ಭಾರತದ ಗಡಿಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಚೀನಾ. ಕೆಲ ದಿನಗಳಿಂದ ಲಡಾಖ್​ನ ಮೂರು ಪ್ರದೇಶಗಳಿಗೆ ನುಗ್ಗಿ ಸೇನಾ ಜಮಾವಣೆ ಮಾಡಿದೆ.

    ಕಳೆದ ಕೆಲ ದಿನಗಳಿಂದ ಭಾಗಶಃ ಭಾರತದ ನಿಯಂತ್ರಣದಲ್ಲಿರುವ ಪೆನ್​ಗಾಂಗ್​ ತ್ಸೊ ಸರೋವರ, ಗಾಲ್ವನ್​ ಪ್ರದೇಶಗಳಲ್ಲಿ 2-3 ಕಿ.ಮೀ. ಅಂತರದಲ್ಲಿ ಚೀನಾ ಪಡೆಗಳು ಭಾರತದೊಳಕ್ಕೆ ನುಗ್ಗಿವೆ. ಮೂರು ಸ್ಥಳಗಳಲ್ಲಿ 800-1000 ಚೀನಿ ಸೈನಿಕರು ಜಮಾವಣೆಗೊಂಡಿದ್ದಾರೆ

    ಇದನ್ನೂ ಓದಿ; ಪರಮಾಣು ಪರೀಕ್ಷೆಗೆ ಸಜ್ಜಾಗುತ್ತಿದೆಯೇ ಅಮೆರಿಕ? 

    ಟೆಂಟ್​ಗಳನ್ನು ಹೂಡಿರುವ ಚೀನಿಯರು, ಭಾರಿ ವಾಹನಗಳೊಂದಿಗೆ ಬೀಡುಬಿಟ್ಟಿದ್ದಾರೆ. ಮಾತ್ರವಲ್ಲದೇ, ಕಣ್ಗಾವಲು ಸಾಧನಗಳನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಉತ್ತರ ಲಡಾಖ್​ನಲ್ಲಿರುವ ಸೇನಾ ಕಚೇರಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

    ಚೀನಿ ಸೇನಾಪಡೆಗೆ ಎದುರಾಗಿ ಭಾರತೀಯ ಯೋಧರು ಕೂಡ ಕೊಂಚ ದೂರದಲ್ಲಿ ಬೀಡುಬಿಟ್ಟಿದ್ದಾರೆ. ಆದರೆ, ಮುಖಾಮುಖಿಯಾಗಿಲ್ಲ ಮೇ 5 ಹಾಗೂ 6ರಂದು ನಡೆದಿದ್ದ ಮುಖಾಮುಖಿಯಲ್ಲಿ ಎರಡೂ ಕಡೆಯ ಕೆಲ ಯೋಧರು ಗಾಯಗೊಂಡಿದ್ದ ಕಾರಣ, ಅನಗತ್ಯ ಯುದ್ದೋನ್ಮಾದವನ್ನು ತಡೆಗಟ್ಟುವ ಉದ್ದೇಶದಿಂದ ಮುಖಾಮುಖಿಯಾಗಿಲ್ಲ ಎಂದು ಹೇಳಲಾಗಿದೆ. ಆದರೆ, ಯಾವುದೇ ಪರಿಸ್ಥಿತಿಯನ್ನಾದರೂ ಎದುರಿಸಲು ಭಾರತೀಯ ಸೇನೆಯೂ ಸಜ್ಜಾಗಿದೆ. ಕಳೆದ ಕೆಲ ದಿನಗಳಲ್ಲಿ ಎರಡು ಕಡೆಯ ಕಮಾಂಡರ್​ಗಳು ಐದು ಸುತ್ತಿನ ಮಾತುಕತೆ ನಡೆಸಿದ್ದರು. 80 ಕಿ.ಮೀ. ಗಡಿಯುದ್ದಕ್ಕೂ ಪರಿಸ್ಥಿತಿ ಸಹಜವಾಗಿಲ್ಲ ಎಂದು ಹೇಳಲಾಗಿದೆ.

    ಇದನ್ನೂ ಓದಿ; ಮತ್ತೊಂದು ಸುತ್ತಿನ ಸೀಲ್​ ​ಡೌನ್​ ಬರುತ್ತಾ? ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ಪಾಲಿಸಿದರೆ ಏಳು ರಾಜ್ಯಗಳು ಸಂಪೂರ್ಣ ಬಂದ್​?

    ಕಳೆದ ನಾಲ್ಕು ತಿಂಗಳಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಕನಿಷ್ಠ 170 ಬಾರಿ ಭಾರತದ ಗಡಿಯೊಳಗೆ ಅಕ್ರಮ ಪ್ರವೇಶ ಮಾಡಿದೆ. ಅದರಲ್ಲೂ ಲಡಾಖ್​ನಲ್ಲಿಯೇ 130 ಬಾರಿ ಈ ಕೃತ್ಯ ನಡೆಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 110 ಬಾರಿ ಇಂಥ ದುಸ್ಸಾಹಸ ನಡೆಸಿತ್ತು.

    ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಬಿಷ್ಟೇಕ್​ ಹಾಗೂ ಮಹಾಬಲಿಪುರಂನಲ್ಲಿ ಮುಖಾಮುಖಿಯಾಗಿದ್ದರು. ಹೀಗಿದ್ದರೂ ಚೀನಾ 2019ರಲ್ಲಿ 663 ಬಾರಿ ಅತಿಕ್ರಮಣ ನಡೆಸಿತ್ತು. 2018ಕ್ಕೆ ಹೋಲಿಸಿದಲ್ಲಿ ಭಾರಿ ಹೆಚ್ಚಾಗಿತ್ತು. ಆ ವರ್ಷ 404 ಬಾರಿ ಗಡಿಯೊಳಕ್ಕೆ ನುಸುಳಿತ್ತು. 2015ರಿಂದ ಈಚೆಗೆ ಗಮನಿಸಿದರೆ, ಲಡಾಖ್​ ಪ್ರದೇಶದಲ್ಲಿ ಚೀನಿಯರು ಹೆಚ್ಚು ದುಷ್ಕೃತ್ಯಕ್ಕೆ ಇಳಿದಿರುವುದು ಗೊತ್ತಾಗುತ್ತದೆ.

    ಭಾರತೀಯ ಗಡಿಯಲ್ಲಿ ರಸ್ತೆ ಹಾಗೂ ಇತರ ಮೂಲಸೌಕರ್ಯಗಳನ್ನು ಹೆಚ್ಚು ಮಾಡಿರುವುದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ. ಜತೆಗೆ, ವಿವಾದಗಳಿಲ್ಲದ ಪ್ರದೇಶಗಳಲ್ಲಿ ನುಗ್ಗಿ ತನ್ನದೇ ಜಾಗವೆಂದು ಹೇಳಿಕೊಳ್ಳುವ ಬುದ್ಧಿಯೂ ಚೀನಾದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ.

    ಕರೊನಾ ಲಸಿಕೆ ಎಲ್ಲೇ ಸಂಶೋಧಿಸಲ್ಪಟ್ಟರೂ ಇಲ್ಲಿ ಉತ್ಪಾದನೆ ಖಚಿತ, ಭಾರತದ ಬಳಿಯಲ್ಲೇ ಇರಲಿದೆ ಕೀಲಿ ಕೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts