More

  ಶಸ್ತ್ರಾಸ್ತ್ರ ಕಂಡರೂ ಬಗ್ಗದ ಭಾರತೀಯ ಕುರಿಗಾಹಿಗಳ ಧೈರ್ಯಕ್ಕೆ ಚೀನಾ ಯೋಧರೇ ಶಾಕ್​!

  ನವದೆಹಲಿ: ಸ್ಥಳೀಯ ಜನರು ಕುರಿ ಮೇಯಿಸುವುದನ್ನು ತಡೆಯಲು ಯತ್ನಿಸಿದ ಚೀನಾ ಯೋಧರ ಜೊತೆ ಕುರಿಗಾಹಿಗಳ ಗುಂಪು ವಾಗ್ವಾದಕ್ಕೆ ಇಳಿದು ಎದೆಗಾರಿಕೆ ಪ್ರದರ್ಶಿಸಿದ ಘಟನೆ ಲಡಾಖ್​ನ ಭಾರತ ಮತ್ತು ಚೀನಾ ಗಡಿ ಸಮೀಪ ನಡೆದಿದೆ.

  2020ರಲ್ಲಿ ನಡೆದ ಗಾಲ್ವಾನ್ ಘರ್ಷಣೆಯ ನಂತರ ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಮೇಯಿಸುವುದನ್ನು ಕುರಿಗಾಹಿಗಳು ನಿಲ್ಲಿಸಿದ್ದರು. ಆದರೆ, ಇದೀಗ ಮತ್ತೆ ಆರಂಭಿಸಿದ್ದಾರೆ. ಆದರೆ, ಚೀನಾದ ಯೋಧರು ಸ್ಥಳೀಯರನ್ನು ತಡೆದಿದ್ದು, ಇದನ್ನು ಪ್ರಶ್ನೆ ಮಾಡಿದಾಗ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ)ಯ ಯೋಧರು ಮತ್ತು ಕುರಿಗಾಹಿಗಳ ನಡುವೆ ವಾಗ್ವಾದ ನಡೆದಿದೆ.

  ವಾಗ್ವಾದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕುರಿಗಾಹಿಗಳ ಧೈರ್ಯವನ್ನು ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋವನ್ನು ಹಂಚಿಕೊಂಡಿರುವ ಚುಶುಲ್ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್, ನಮ್ಮ ಭೂಮಿಯನ್ನು ಯಾವಾಗಲೂ ರಕ್ಷಿಸಲು ಮತ್ತು ರಾಷ್ಟ್ರದ ಎರಡನೇ ರಕ್ಷಕ ಶಕ್ತಿಯಾಗಿ ನಿಲ್ಲುವ ಅಲೆಮಾರಿಗಳಿಗೆ ನಾನು ನಮಸ್ಕರಿಸುತ್ತೇನೆ ಎಂದಿದ್ದಾರೆ.

  ಪೂರ್ವ ಲಡಾಖ್‌ನ ಗಡಿ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಸೃಷ್ಟಿಸಿರುವ ಪಾಸಿಟಿವ್​ ಪ್ರಭಾವವನ್ನು ನೋಡಲು ಖುಷಿಯಾಗುತ್ತದೆ. ಪ್ಯಾಂಗಾಂಗ್‌ನ ಉತ್ತರ ದಂಡೆಯಲ್ಲಿರುವ ಸಾಂಪ್ರದಾಯಿಕ ಹುಲ್ಲುಗಾವಲುಗಳಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಅಲೆಮಾರಿಗಳಿಗೆ ಅನುಕೂಲವಾಗುತ್ತದೆ. ಇಂತಹ ಬಲವಾದ ನಾಗರಿಕ-ಮಿಲಿಟರಿ ಸಂಬಂಧಗಳು ಮತ್ತು ಗಡಿ ಪ್ರದೇಶದ ಜನಸಂಖ್ಯೆಯ ಹಿತಾಸಕ್ತಿಗಳನ್ನು ನೋಡಿಕೊಳ್ಳತ್ತಿರುವುದನ್ನು ಭಾರತೀಯ ಸೇನೆಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಸ್ಟಾಂಜಿನ್ ಹೇಳಿದ್ದಾರೆ.

  ಇನ್ನು ವಿಡಿಯೋದಲ್ಲಿ ಕನಿಷ್ಠ ಮೂರು ಚೀನೀ ಶಸ್ತ್ರಸಜ್ಜಿತ ವಾಹನಗಳು ಮತ್ತು ಸ್ಥಳದಲ್ಲೇ ಹಲವಾರು ಸೈನಿಕರು ಇರುವುದನ್ನು ನೋಡಬಹುದು. ವಾಹನಗಳ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತಿದ್ದು, ಸ್ಥಳದಿಂದ ತೆರಳುವಂತೆ ಘೋಷಣೆ ಕೂಗುತ್ತಿರುವುದು ವಿಡಿಯೋದಲ್ಲಿದೆ. ಆದರೆ, ಕುರಿಗಾಹಿಗಳು ಚೀನಾ ಯೋಧರಿಗೆ ಹೆದರದೆ ತಮ್ಮ ನೆಲೆಯಲ್ಲಿ ನಿಲ್ಲುತ್ತಾರೆ ಮತ್ತು ಯೋಧರೊಂದಿಗೆ ವಾದ ಮಾಡುವುದನ್ನು ಕಾಣಬಹುದು. ನಾವು ನಮ್ಮ ಭೂಪ್ರದೇಶದಲ್ಲಿ ಮೇಯಿಸುತ್ತಿದ್ದೇವೆ ಎಂದು ಕುರಿಗಾಹಿಗಳು ಹಕ್ಕು ಸಾಧಿಸುತ್ತಾರೆ. ಒಂದೆರಡು ಸಂದರ್ಭಗಳಲ್ಲಿ, ವಾಗ್ವಾದವು ಉಲ್ಬಣಗೊಂಡಾಗ, ಕೆಲವು ಕುರುಬರು ಕಲ್ಲುಗಳನ್ನು ಎತ್ತಿಕೊಳ್ಳುತ್ತಾರೆ. ಆದರೆ ಹಿಂಸಾಚಾರ ಭುಗಿಲೆದ್ದಿಲ್ಲ ಮತ್ತು ವಿಡಿಯೋದಲ್ಲಿ ಕಾಣುವ ಚೀನಾ ಸೈನಿಕರು ಶಸ್ತ್ರಸಜ್ಜಿತರಾಗಿಲ್ಲ. ಅಲ್ಲದೆ, ಯಾರಿಗೂ ಯಾವುದೇ ಹಾನಿಯಾಗಿಲ್ಲ. ಆದರೆ, ನಮ್ಮ ಕುರಿಗಾಹಿಗಳ ದಿಟ್ಟತನ ಎಲ್ಲರಿಗೂ ಇಷ್ಟವಾಗಿದೆ. (ಏಜೆನ್ಸೀಸ್​)

  ವಿಮಾನದಲ್ಲಿ ವಿಷಕಾರಿ ದ್ರವ ಸೇವನೆ: ಸಂಚು ನಡೆದಿರುವ ಶಂಕೆ, ದೂರು ದಾಖಲಿಸಿದ ಮಯಾಂಕ್​ ಅಗರ್ವಾಲ್​

  ಬೆಳ್ಳುಳ್ಳಿ ದರ ಏರಿಕೆ, ಕೆಜಿಗೆ 400-500 ರೂ; ದಿಢೀರ್ ಕುಸಿದ ಈರುಳ್ಳಿ ಬೆಲೆ ಕೆಜಿಗೆ 20 ರೂ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts