More

    ಕಾಡಿಗೆ ಬೆಂಕಿ, ಮಳೆಯಿಂದ ನಿರಾಳ

    ಗುಂಡ್ಲುಪೇಟೆ: ಸೋಮವಾರ ಸಂಜೆ ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಕರಡಿಕಲ್ಲುಗುಡ್ಡಕ್ಕೆ ಬಿದ್ದ ಬೆಂಕಿ ನೆರೆಯ ಗೋಪಾಲಸ್ವಾಮಿಬೆಟ್ಟ ವಲಯಕ್ಕೂ ವ್ಯಾಪಿಸಿ ಹಲವಾರು ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟುಹೋಗಿದೆ. ಸೋಮವಾರ ಬೆಂಕಿ ಬಿದ್ದ ಅರಣ್ಯ ಪ್ರದೇಶಕ್ಕೆ ಮಂಗಳವಾರ ಸಂಜೆ ಮಳೆಬಿದ್ದು ಸದ್ಯ ಬೆಂಕಿ ಆತಂಕ ನಿವಾರಿಸಿದೆ.

    ಸೋಮವಾರ ಸಂಜೆ ಗುಡ್ಡದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಗಸ್ತು ಸಿಬ್ಬಂದಿ ಅಧಿಕಾರಿಗಳ ಗಮನಕ್ಕೆ ತಂದರೂ ಅಕ್ಕಪಕ್ಕದ ವಲಯಗಳ ಸಿಬ್ಬಂದಿ ಕರೆಸಿ ಸ್ಥಳಕ್ಕೆ ತೆರಳುವ ವೇಳೆಗೆ ಬೆಂಕಿ ನೆರೆಯ ಗೋಪಾಲಸ್ವಾಮಿಬೆಟ್ಟ ವಲಯಕ್ಕೂ ವ್ಯಾಪಿಸಿತು. ಸುಮಾರು 100ಕ್ಕೂ ಹೆಚ್ಚಿನ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಳಗಿನ 6 ಗಂಟೆ ಸಮಯದಲ್ಲಿ ಬೆಂಕಿ ಹತೋಟಿಗೆ ತಂದರು. ಬೆಳಗ್ಗೆ ಜೀಪು ಹಾಗೂ ಟ್ರಾೃಕ್ಟರುಗಳಲ್ಲಿ ನೀರಿನ ಕ್ಯಾನುಗಳನ್ನು ಕೊಂಡೊಯ್ದು ಒಣಗಿ ನೆಲಕ್ಕುರುಳಿದ್ದ ಮರಗಳಲ್ಲಿರುವ ಬೆಂಕಿ ನಂದಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅರಣ್ಯ ಇಲಾಖೆ ಕಳೆದ ಮೂರು ವರ್ಷಗಳಿಂದ ಬಂಡೀಪುರಕ್ಕೆ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಿತ್ತು. ಕಾಲಕಾಲಕ್ಕೆ ಫೈರ್‌ಲೈನ್ ನಿರ್ಮಾಣ, ರಸ್ತೆಬದಿಗಳಲ್ಲಿ ವ್ಯೆ ಲೈನ್ ನಿರ್ಮಾಣ, ಮಳೆಬೀಳುವವರೆಗೂ ಕಾಡಂಚಿನ ಗ್ರಾಮಗಳ ಜನರಿಗೆ ಫೈರ್ ವಾಚರ್ ಕೆಲಸ ನೀಡಿ ಕಾಡಿಗೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ 2021, 22 ಹಾಗೂ 23ರಲ್ಲಿ ಒಂದು ಸಣ್ಣ ಬೆಂಕಿ ಪ್ರಕರಣವೂ ದಾಖಲಾಗಿರಲಿಲ್ಲ. ಈ ಬಾರಿಯೂ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳ ಜನರು ಹಾಗೂ ಹಾಡಿಗಳ ಗಿರಿಜನರ ಸಹಕಾರ ಪಡೆಯಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು.

    ಆದರೆ ಮಳೆ ಬೀಳುವ ಮೊದಲೇ ಫೈರ್ ವಾಚರ್‌ಗಳನ್ನು ಕೆಲಸದಿಂದ ತೆಗೆದು ಹಾಕಿದ್ದೇ ಕರಡಿಗುಡ್ಡಕ್ಕೆ ಬೆಂಕಿ ಬೀಳಲು ಕಾರಣ ಎನ್ನಲಾಗುತ್ತಿದೆ. ಕೆಲ ವಲಯಗಳ ಅಧಿಕಾರಿಗಳು ದಿನಗೂಲಿ ಆಧಾರದಲ್ಲಿ ಬೇಸಿಗೆ ಸಂದರ್ಭದಲ್ಲಿ ನಿಯೋಜಿಸಿದ್ದ ಬಹುತೇಕ ಫೈರ್ ವಾಚರುಗಳನ್ನು ಕೆಲಸದಿಂದ ಬಿಡುಗಡೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕೆಲವರು ದಟ್ಟಾರಣ್ಯದೊಳಗೆ ಪ್ರವೇಶಿಸಿ ಬೆಂಕಿಯಿಟ್ಟಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಸಿಬ್ಬಂದಿ ತಿಳಿಸಿದ್ದಾರೆ.
    2021ರಲ್ಲಿಯೂ ಕೆಲಸದಿಂದ ತೆಗೆದುಹಾಕಿದ್ದರಿಂದ ಸಿಟ್ಟಿಗೆದ್ದ ಕೆಲ ಫೈರ್ ವಾಚರುಗಳು ಏ.1 ರಂದು ಕರಡಿಗುಡ್ಡಕ್ಕೆ ಬೆಂಕಿಯಿಟ್ಟಿದ್ದರು. ಈ ಬಗ್ಗೆಯೂ ಅಂದಿನ ಆರ್‌ಎಫ್‌ಒ ಸುಧಾಕರನಾಯಕ್ ಪ್ರಕರಣ ದಾಖಲಿಸಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.

    ಆತಂಕ ದೂರಾಗಿಸಿದ ಮಳೆ:
    ಸೋಮವಾರ ಬೆಂಕಿ ಬಿದ್ದ ಪ್ರದೇಶಕ್ಕೆ ಮಂಗಳವಾರ ಸಂಜೆ ಜೋರಾಗಿ ಮಳೆ ಸುರಿದಿದ್ದರಿಂದ ಅರಣ್ಯ ಪ್ರದೇಶವು ಬೆಂಕಿ ಆತಂಕದಿಂದ ಪಾರಾದಂತಾಗಿದೆ. ಬಿರುಬಿಸಿಲಿನ ಬೇಗೆಯಲ್ಲಿ ಒಣಗುತ್ತಿದ್ದ ಹುಲ್ಲು ಗರಿಕೆ ಚಿಗುರಿದರೆ ವನ್ಯಜೀವಿಗಳಿಗೂ ಆಹಾರ ದೊರಕುತ್ತದೆ ಎಂದು ಅರಣ್ಯಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

    ಕಾಣದ ಕೈವಾಡ, ಎಸಿಎಫ್ ರವೀಂದ್ರ:
    ನೆಲಬೆಂಕಿಯಾಗಿದ್ದರಿಂದ ಮದ್ದೂರು ವಲಯದ 10 ಹಾಗೂ ಗೋಪಾಲಸ್ವಾಮಿ ಬೆಟ್ಟ ವಲಯದ 20 ಹೆಕ್ಟೇರ್ ಪ್ರದೇಶದಲ್ಲಿ ಹುಲ್ಲುಗರಿಕೆ ಸುಟ್ಟಿವೆ. ಬಂಡೀಪುರದ ಸೂಕ್ಷ್ಮ ಪ್ರದೇಶದಲ್ಲಿರುವ ಕರಡಿಗುಡ್ದಕ್ಕೆ ಬೆಂಕಿ ಬೀಳುವ ಹಿಂದೆ ಕೆಲ ಕಾಣದ ಕೈಗಳ ಕೈವಾಡವಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಡಿಸಿಎಫ್ ಪ್ರಭಾಕರನ್ ಹಾಗೂ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ ಎಂದು ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಸಿ.ರವೀಂದ್ರ ವಿಜಯವಾಣಿಗೆ ತಿಳಿಸಿದ್ದಾರೆ.

    ಸೋಮವಾರ ಸಂಜೆ 6ರಿಂದ ಮಂಗಳವಾರ ಬೆಳಗಿನ 6 ಗಂಟೆವರೆಗೂ ಬೆಂಕಿ ಉರಿದಿದ್ದು ನಷ್ಟದ ಪ್ರಮಾಣವನ್ನು ಅಧಿಕಾರಿಗಳು ಅಂದಾಜು ಮಾಡಲಿದ್ದಾರೆ. ಮಳೆ ಬಿದ್ದು ಅರಣ್ಯವು ಬೆಂಕಿ ಅನಾಹುತದಿಂದ ಪಾರಾಗುವವರೆಗೂ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ಇದ್ದು ಆಯಕಟ್ಟಿನ ಸ್ಥಳಗಳಲ್ಲಿ ಫೈರ್ ವಾಚರ್ ನಿಯೋಜನೆ, ಉಪವಿಭಾಗ ಮಟ್ಟದಲ್ಲಿ ಕನಿಷ್ಠ 200 ಸಿಬ್ಬಂದಿ ಕೂಡಲೇ ಕೈಗೆ ಸಿಗುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
    ಡಾ.ಪಿ.ರಮೇಶ್ ಕುಮಾರ್
    (ಮೈಸೂರು ವಿಭಾಗದ) ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts