More

    ಕರೊನಾ ಪಾಸಿಟಿವ್​ ಆದಾಗ ಆಸ್ಪತ್ರೆಗೆ ದಾಖಲಾಗಬೇಕೇ? ಬೇಡವೇ? ನೆರವಾಗಲಿದೆ ತಂತ್ರಜ್ಞಾನ

    ಬೆಂಗಳೂರು: ಕರೊನಾ ಪಾಸಿಟಿವ್ ಆದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಬೇಕೆ? ಮನೆ ಆರೈಕೆಗೆ ಒಳಪಡಬೇಕೆ ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಬೇಕೆ?… ಇದನ್ನು ಕೂಡಲೇ ನಿರ್ಧರಿಸಲು ಸಾಧ್ಯವಾಗುವಂತಹ ತಂತ್ರಜ್ಞಾನ ಆಧಾರಿತ ಕೇಂದ್ರೀಕೃತ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ನಿರ್ಮಿಸಲಿದೆ.

    ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಂಗಳವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

    ಕೋವಿಡ್​ಗೆ ಸಂಬಂಧಿಸಿದ ಸರ್ಕಾರ ಬಳಸುತ್ತಿರುವ ಎಲ್ಲ ಆ್ಯಪ್, ತಂತ್ರಜ್ಞಾನಗಳನ್ನು ಒಟ್ಟು ಮಾಡಿ ಕೇಂದ್ರೀಕೃತ ವ್ಯವಸ್ಥೆ ನಿರ್ಮಿಸುವುದರಿಂದ ಕೋವಿಡ್ ರೋಗಿಯು ಎಲ್ಲಿ ದಾಖಲಾಗಬೇಕು ಅಥವಾ ಯಾವ ರೀತಿಯ ಚಿಕಿತ್ಸೆಗೆ ಒಳಪಡಬೇಕು ಎಂಬುದನ್ನು ತಕ್ಷಣ ತೀರ್ಮಾನಿಸಬಹುದು. ಇದರಿಂದಾಗಿ ಚಿಕಿತ್ಸೆ ಪಡೆಯುವಲ್ಲಿನ ಗೊಂದಲ ನಿವಾರಣೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ಸಂಕಷ್ಟದಲ್ಲಿ ಭಾರತಕ್ಕೆ ಮತ್ತೊಂದು ಕುಖ್ಯಾತಿ; ಇದು ಕಳವಳಕಾರಿ ವಿದ್ಯಮಾನವೂ ಹೌದು…!

    ಸದ್ಯಕ್ಕೆ ಆಪ್ತಮಿತ್ರ ಸೇರಿ ಹಲವು ಆ್ಯಪ್​ಗಳು ಬಳಕೆಯಲ್ಲಿವೆ. ರಾಜ್ಯದಲ್ಲಿ ಕೋವಿಡ್ ಅಂಕಿ-ಅಂಶ ನೀಡುವ ಡ್ಯಾಶ್ ಬೋರ್ಡ್ ಕೂಡ ಇದೆ. ಈ ಡ್ಯಾಶ್ ಬೋರ್ಡ್​ನಲ್ಲಿ ರಿಯಲ್ ಟೈಮ್ ನಲ್ಲಿ ಮಾಹಿತಿ ದೊರೆಯುವಂತಾಗಬೇಕು, ಯಾವ ಆಸ್ಪತೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇದೆ, ಪ್ರತಿ ಆಸ್ಪತ್ರೆಯಲ್ಲಿರುವ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳೆಷ್ಟು ಎಂಬುದು ಕೂಡ ಡ್ಯಾಶ್ ಬೋರ್ಡ್ ನಲ್ಲಿ ತಿಳಿಯುವಂತಾಗಬೇಕು. ಕೋವಿಡ್ ಖಚಿತಪಟ್ಟ ನಂತರ ವ್ಯಕ್ತಿಯು ದೂರವಾಣಿ ಕರೆ ಮಾಡಿದ ಕೂಡಲೇ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗುವಂತೆ ಸಹಾಯ ದೊರೆಯಬೇಕು. ಇಂತಹ ಕೇಂದ್ರೀಕೃತ ವ್ಯವಸ್ಥೆ ರಾಜ್ಯದಲ್ಲಿ ತರಬೇಕು ಎಂದು ಸಚಿವರು ಸೂಚಿಸಿದರು.

    ಹೊಸದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಸ್ಟೆಪ್ 1 ಎಂಬ ಸಂಸ್ಥೆ ಯಶಸ್ವಿಯಾಗಿ ಈ ಸೇವೆ ನೀಡುತ್ತಿದೆ. ಈ ಸಂಸ್ಥೆ ತನ್ನದೇ ಆದ ವೈದ್ಯ, ನರ್ಸ್ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಹೊಂದಿದ್ದು, ಕೋವಿಡ್ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡುತ್ತಿದೆ. ಈ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡು ಆ ಮಾದರಿಯನ್ನು ಕೂಡ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬಹುದು ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

    ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್, ಕೇಂದ್ರೀಕೃತ ವ್ಯವಸ್ಥೆ ಕಲ್ಪಿಸಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

    ಇದನ್ನೂ ಓದಿ; 18 ಜಿಲ್ಲೆಗಳಲ್ಲಿ ನೂರು ದಾಟಿದ ಹೊಸ ಸೋಂಕಿತರ ಪ್ರಮಾಣ; ರಾಜ್ಯದಲ್ಲಿ ಮುಂದುವರಿದ ಕರೊನಾ ಏರುಗತಿ 

    ಇತರೆ ಅಂಶಗಳು: ರೋಗಿಯ ಗಂಭೀರತೆಯನ್ನು ನಿರ್ಧರಿಸಿ ಆತನನ್ನು ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಲಕ್ಷಣರಹಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬಾರದು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.
    ಗೂಗಲ್ ಮ್ಯಾಪ್ ಸಹಾಯದಿಂದಲೇ ರೋಗಿಯನ್ನು ಪತ್ತೆ ಮಾಡಿ ಅವರಿರುವಲ್ಲಿಗೆ ವೈದ್ಯರನ್ನು ಕಳುಹಿಸಿ ರೋಗದ ಗಂಭೀರತೆಯನ್ನು ಪರೀಕ್ಷಿಸಲಾಗುವುದು. ನಂತರ ವೈದ್ಯರು ಅವರನ್ನು ಆಸ್ಪತ್ರೆ ಅಥವಾ ಆರೈಕೆ ಕೇಂದ್ರಕ್ಕೆ ದಾಖಲಿಸುವ ಕುರಿತು ನಿರ್ಧರಿಸುತ್ತಾರೆ. ಹೊಸ ಕೇಂದ್ರೀಕೃತ ವ್ಯವಸ್ಥೆಯು ಇದನ್ನು ಒಳಗೊಳ್ಳಲಿದೆ ಎಂದು ಅಧಿಕಾರಿಗಳು ವಿವರಿಸಿದರು.

    ಬೇರೆ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷೆ ಸಂಖ್ಯೆ ಹೆಚ್ಚಿದೆ. ಆದರೆ ಬೆಂಗಳೂರಿನಲ್ಲಿ ಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿದೆ. ಪರೀಕ್ಷೆ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.

    ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts