More

    ಸರಳತೆ, ಪ್ರಾಮಾಣಿಕತೆಯ ಪ್ರತಿರೂಪ ಲಾಲ್ ಬಹಾದೂರ್ ಶಾಸ್ತ್ರಿ

    ಸರಳತೆ, ಪ್ರಾಮಾಣಿಕತೆಯ ಪ್ರತಿರೂಪ ಲಾಲ್ ಬಹಾದೂರ್ ಶಾಸ್ತ್ರಿಪ್ರಲ್ಹಾದ ಜೋಶಿ

    ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಯವರದ್ದು ಮೇರು ವ್ಯಕ್ತಿತ್ವ. ಎರಡು ದಶಕಗಳ ನೆಹರೂ ಆಡಳಿತ ಕೊನೆಗೊಂಡಾಗ ಭಾರತವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ದೇಶದ ಜನರಿಗೆ ಬೇಕಾಗಿದ್ದದ್ದು ಒಬ್ಬ ದಕ್ಷ ಮತ್ತು ಸಜ್ಜನ ರಾಜಕಾರಣಿ. ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕ. ಭಾರತದ ಜನ ಶಾಸ್ತ್ರಿಯವರಲ್ಲಿ ಈ ಎಲ್ಲಾ ಗುಣಗಳನ್ನು ಕಂಡರು. ಶಾಸ್ತಿ› ದೇಶದ ಚುಕ್ಕಾಣಿ ಹಿಡಿದರು. ಹಾಗೆ ನೋಡಿದರೆ ಬಡತನದಲ್ಲೆ ಹುಟ್ಟಿ, ಬಡತನದಲ್ಲೆ ಬೆಳೆದು, ಬಡತನದಲ್ಲೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ.

    ಅವರು ಆಡಳಿತ ಕೈಗೊಂಡಿದ್ದು 18 ತಿಂಗಳು ಮಾತ್ರ. ಅಷ್ಟು ಸಣ್ಣ ಅವಧಿಯಲ್ಲೆ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ದೇಶವನ್ನು ಮುನ್ನಡೆಸಿದರು. ದೇಶದಲ್ಲಿನ ಆಹಾರ ಕೊರತೆ ನೀಗಿಸಿದರು. ಹಿಂದಿ-ಇಂಗ್ಲಿಷ್ ಭಾಷಾ ಗೊಂದಲ ಬಗೆಹರಿಸಿದರು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗಟ್ಟಿದನಿಯಲ್ಲಿ ಹೇಳಿದರು. ನೆರೆಯ ಚೀನಾದ ಕ್ಯಾತೆಗೆ ಬಗ್ಗಲಿಲ್ಲ. ವಿಶ್ವಸಂಸ್ಥೆಯ ಒತ್ತಡಕ್ಕೂ ಮಣಿಯಲಿಲ್ಲ. ಅಮೆರಿಕದ ಬೆದರಿಕೆಗೆ ಕ್ಯಾರೇ ಎನ್ನಲಿಲ್ಲ. ಕೊನೆಗೆ ಶಾಂತಿ ಮಂತ್ರ ಜಪಿಸುತ್ತಾ ತಾಷ್ಕೆಂಟಿಗೆ ಹೋಗಿ ಅಲ್ಲಿ ತಮ್ಮ ಜೀವವನ್ನೇ ಬಲಿಕೊಟ್ಟರು.

    ಬಡತನದಲ್ಲೆ ಬೆಳೆದ ಶಾಸ್ತ್ರಿ: ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಶಾಸ್ತ್ರಿಯವರು ಸೆರೆಮನೆಯಲ್ಲಿದ್ದಾಗ ಅವರ ಮಗಳು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಶಾಸ್ತ್ರಿಯವರನ್ನು 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಿ ಮನೆಗೆ ಕಳಿಸಲಾಯಿತು. ಮನೆಗೆ ಬರುವ ವೇಳೆಗಾಗಲೇ ಮಗಳು ತೀರಿಕೊಂಡಿದ್ದಳು. ಕಾರಣ ವೈದ್ಯರು ಬರೆದುಕೊಟ್ಟ ಔಷಧಗಳನ್ನು ಕೊಂಡುಕೊಳ್ಳುವಷ್ಟು ಹಣವಿರಲಿಲ್ಲ.

    40 ರೂಪಾಯಿ ಸಾಕೆಂದರು!: ಗೋಪಾಲಕೃಷ್ಣ ಗೋಖಲೆಯವರ ದಿ ಸರ್ವೆಟ್ ಆಫ್ ಇಂಡಿಯಾ ಸೊಸೈಟಿಯು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಹೋರಾಟಗಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿತ್ತು. ಶಾಸ್ತ್ರಿಯವರ ಕುಟುಂಬವೂ ಆ ನೆರವನ್ನು ಪಡೆದುಕೊಳ್ಳುತ್ತಿತ್ತು. ಮನೆ ನಡೆಸಲು ಅವರ ಕುಟುಂಬಕ್ಕೆ ತಿಂಗಳಿಗೆ 50 ರೂಪಾಯಿ ನೀಡಲಾಗುತ್ತಿತ್ತು. ಐವತ್ತು ರೂಪಾಯಿಗಳಲ್ಲಿ ನಲವತ್ತು ರೂಪಾಯಿ ಖರ್ಚು ಮಾಡಿ, ಹತ್ತು ರೂಪಾಯಿ ಉಳಿಸಿ ಕೂಡಿಡುತ್ತಿದ್ದೇನೆ ಎಂದು ಪತ್ನಿ ತಿಳಿಸಿದ್ದರು. ಕೂಡಲೇ ಶಾಸ್ತ್ರಿಯವರು ಸೊಸೈಟಿಗೆ ಪತ್ರ ಬರೆದು ತಮ್ಮ ಕುಟುಂಬದ ನಿರ್ವಹಣೆಗೆ ನಲವತ್ತು ರೂಪಾಯಿ ಸಾಕೆಂದೂ ಉಳಿದ ಹತ್ತು ರೂಪಾಯಿಯನ್ನು ಕಷ್ಟದಲ್ಲಿರುವ ಇತರೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಶಾಸ್ತ್ರಿ ಅವರೊಬ್ಬ ಪ್ರಾಮಾಣಿಕ ಮತ್ತು ಸಾಮರ್ಥ್ಯವಿರುವ ವ್ಯಕ್ತಿಯಾಗಿದ್ದರು. ಪ್ರಗತಿಯೆಡೆಗೆ ರಾಷ್ಟ›ವನ್ನು ಮುನ್ನಡೆಸಿದ ದೂರದೃಷ್ಟಿ ಯುಳ್ಳ ವ್ಯಕ್ತಿ ಅವರಾಗಿದ್ದರು. ಎಂತಹ ಪರಿಸ್ಥಿತಿ ಎದುರಾದರೂ ತಮ್ಮ ವಿಚಾರಧಾರೆಗಳಿಂದ ಹಿಂದೆ ಸರಿಯದ, ದೇಶದ ಭದ್ರತೆ, ಹಿತಕ್ಕಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಅವರ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ.

    (ಲೇಖಕರು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts