More

    ಯೋಗಿ ಆದಿತ್ಯನಾಥ್​ರಿಂದ ಮಹತ್ವದ ನಿರ್ಧಾರ; ಉಳಿದೆಲ್ಲ ರಾಜ್ಯಗಳಿಗೆ ಖಡಕ್​ ಸಂದೇಶ ರವಾನೆ

    ಲಖನೌ: ಕಳೆದ ಎರಡೂವರೆ ತಿಂಗಳುಗಳಿಂದಲೂ ದೇಶದಲ್ಲಿ ಕೊವಿಡ್​-19 ಲಾಕ್​ಡೌನ್​ ಮುಂದುವರಿಯುತ್ತಿದೆ. ಈ ಲಾಕ್​ಡೌನ್​ನಿಂದ ಅತಿ ಹೆಚ್ಚು ಸಂಕಷ್ಟಕ್ಕೀಡಾದವರು ವಲಸೆ ಕಾರ್ಮಿಕರು. ಅದರಲ್ಲೂ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದುಡಿಮೆಗಾಗಿ ಹೋದವರಂತೂ ಪರದಾಡಿಬಿಟ್ಟಿದ್ದಾರೆ.

    ಮೊದಲ ಹಂತದ ಲಾಕ್​ಡೌನ್​ ಶುರುವಾದಾಗಲೇ ಅದೆಷ್ಟೋ ಕಾರ್ಮಿಕರು ತಮ್ಮ ಊರು ಸೇರಿದ್ದಾರೆ. ಅದಾದ ಬಳಿಕ ಕೇಂದ್ರ, ರಾಜ್ಯ ಸರ್ಕಾರಗಳೇ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು, ತಮ್ಮ ರಾಜ್ಯಗಳ ಕಾರ್ಮಿಕರನ್ನು ವಾಪಸ್​ ಕರೆಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿವೆ.

    ಇದನ್ನೂ ಓದಿ: ಉಡುಪಿಯಲ್ಲಿ ಕರೊನಾ ಅಟ್ಟಹಾಸ ಮತ್ತೆ 8 ಮಕ್ಕಳ ಸಹಿತ 16 ಮಂದಿಗೆ ಕರೊನಾ

    ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ವಲಸೆ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಒಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಉತ್ತರ ಪ್ರದೇಶದಿಂದ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದ ಅನೇಕ ಕಾರ್ಮಿಕರು ಈಗ ವಾಪಸ್​ ಆಗಿದ್ದಾರೆ. ಇನ್ನು ಮುಂದೆ ಯಾವುದೇ ರಾಜ್ಯಗಳಿಗೆ ತಮ್ಮಲ್ಲಿನ ಕೆಲಸಕ್ಕೆ ಉತ್ತರ ಪ್ರದೇಶದ ಕಾರ್ಮಿಕರ ಅಗತ್ಯವಿದ್ದು, ಅವರನ್ನು ಕರೆಸಿಕೊಳ್ಳಲು ಬಯಸಿದರೆ ಮೊದಲು ನಮ್ಮ ಸರ್ಕಾರದ ಅನುಮತಿ ಪಡೆಯಬೇಕು ಎಂದು ಯೋಗಿ ಖಡಕ್​ ಸೂಚನೆ ನೀಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಲಸಿಗರ ಆಯೋಗವನ್ನು ರಚಿಸಲು ನಿರ್ಧರಿಸಿದ್ದೇವೆ. ಅದರ ಪೂರ್ವಭಾವಿ ಸಿದ್ಧತೆಯಾಗಿ ಬೇರೆಬೇರೆ ರಾಜ್ಯಗಳಿಂದ ಮರಳಿ ಯುಪಿಗೆ ಆಗಮಿಸಿರುವ ವಲಸೆ ಕಾರ್ಮಿಕರ ಸ್ಕಿಲ್​ ಮ್ಯಾಪಿಂಗ್ (ಕೌಶಲ ಮಟ್ಟ ಅಳೆಯುವುದು) ಪ್ರಕ್ರಿಯೆ ನಡೆಸಲಾಗಿದೆ ಎಂದು ಯೋಗಿ ಆದಿತ್ಯನಾಥ್​ ಮಾಹಿತಿ ನೀಡಿದ್ದಾರೆ.

    ಈ ಕೆಲಸಗಾರರು ನಮ್ಮ ಅತಿದೊಡ್ಡ ಸಂಪತ್ತು. ನಾವು ಅವರಿಗೆ ಇಲ್ಲೇ ಉದ್ಯೋಗ ವ್ಯವಸ್ಥೆ ಮಾಡುತ್ತೇವೆ. ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಹಲವು ರಾಜ್ಯಗಳು ವಲಸೆ ಕಾರ್ಮಿಕರನ್ನು ಸರಿಯಾಗಿ ಕಾಳಜಿ ಮಾಡಲಿಲ್ಲ. ಇವರೆಲ್ಲರೂ ನಮ್ಮ ಜನರು. ಈಗ ವಾಪಸ್​ ಬಂದವರನ್ನು ಮತ್ತೆ ಬೇರೆ ರಾಜ್ಯಗಳು ತಮ್ಮಲ್ಲಿನ ಕೆಲಸಕ್ಕೆ ಕರೆಸಿಕೊಳ್ಳಬೇಕೆಂದರೆ ಆ ರಾಜ್ಯ ನಮ್ಮ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಹಾಗೆ ಕರೆಸಿಕೊಂಡ ಕಾರ್ಮಿಕರಿಗೆ ಸಾಮಾಜಿಕ, ಕಾನೂನು ಭದ್ರತೆ, ಹಕ್ಕುಗಳನ್ನು ಆ ರಾಜ್ಯಗಳು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ತಾಯ್ನಡಿಗೆ ತೆರಳಿದ ವಲಸೆ ಕಾರ್ಮಿಕರು

    ನಾವು ರಚಿಸಲಿರುವ ವಲಸಿಗರ ಆಯೋಗ ವಲಸೆ ಕಾರ್ಮಿಕರ ಹೊಣೆ ಹೊರಲಿದೆ. ಅವರ ವಿಮಾ ಸೌಕರ್ಯಗಳು, ಸಾಮಾಜಿಕ ಭದ್ರತೆ, ಮರು ಉದ್ಯೋಗ ನೆರವು, ನಿರುದ್ಯೋಗ ಭತ್ಯೆ ಬೇಡಿಕೆ ಸೇರಿ ಎಲ್ಲ ವಿಷಯಗಳನ್ನೂ ಅದು ಪರಿಶೀಲನೆ ಮಾಡಲಿದೆ. ಬೇರೆ ರಾಜ್ಯಗಳು ಕರೆಸಿಕೊಳ್ಳುವ ವಲಸೆ ಕಾರ್ಮಿಕರ ಹಕ್ಕು, ಭದ್ರತೆಗಳ ಮೇಲೆ ಕೂಡ ಅದು ನಿಗಾ ಇಡಲಿದೆ ಎಂದು ಯೋಗಿ ತಿಳಿಸಿದ್ದಾರೆ.

    ಲಾಕ್​ಡೌನ್ ಶುರುವಾದಾಗಿನಿಂದ ಇದುವರೆಗೆ 23ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಹಿಂದಿರುಗಿದ್ದಾರೆ. ಅವರಲ್ಲಿ ಮುಂಬೈ, ದೆಹಲಿಯಿಂದ ಆಗಮಿಸಿದವರೇ ಹೆಚ್ಚಾಗಿದ್ದು, ಕರೊನಾ ಪಾಸಿಟಿವ್​ ಇರುವುದು ಕೂಡ ಅಲ್ಲಿನವರಲ್ಲೇ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿ ಜತೆಗಿನ ಸಂವಾದದಲ್ಲಿ ವಲಸೆ ಕಾರ್ಮಿಕರು ಬಿಚ್ಚಿಟ್ಟ ನೋವಿನ ಸಂಗತಿ ಏನು?

    ಇನ್ನೂ ಯಾರಾದರೂ ಬರಲು ಇಚ್ಛಿಸಿದರೆ, ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts