More

    ಏ ಹುಡುಗ, ಸ್ವಲ್ಪ ಅಡ್ಜಸ್ಟ್ ಮಾಡ್ಕೊ…

    ಕಾರ್ಯುೕಷು ದಾಸಿ, ಕರುಣೇಷು ಮಂತ್ರಿ, ಭೋಜ್ಯೇಷು ಮಾತಾ, ಶಯನೇಷು ರಂಭಾ, ರೂಪೇಷು ಲಕ್ಷ್ಮಿ, ಕ್ಷಮಯಾ ಧರಿತ್ರಿ… ಹೆಂಡತಿ ಎಂದರೆ ಹೀಗೇ ಇರಬೇಕೆಂದು ಹೇಳುವ ಈ ಸಮಾಜವೇಕೆ ಕೆಲವು ಸಂದರ್ಭಗಳಲ್ಲಿ ಅವಳನ್ನು ಕೇವಲ ಭೋಗದ ವಸ್ತುವಾಗಿಯೋ ಅಥವಾ ದುಡಿತದ ಯಂತ್ರವನ್ನಾಗಿಯೋ ಬಳಸಿಕೊಳ್ಳುವುದು?

    ಅಗ್ನಿಸಾಕ್ಷಿಯಾಗಿ, ಸಪ್ತಪದಿ ತುಳಿದು ಮದುವೆಯಾಗುವ ಬಂಧ, ಜನ್ಮಜನ್ಮದ ಅನುಬಂಧ! ಪಾವಿತ್ರ್ಯತೆಯಿಂದ ಕಾಪಾಡಿಕೊಂಡು ಹೊಂದಾಣಿಕೆಯೇ ಪರಮಮಂತ್ರವೆನ್ನುತ್ತ ಸುಂದರವಾಗಿಸಿಕೊಳ್ಳೋದರಲ್ಲಿ ಎಂಥ ಸಂತೋಷ ನೆಮ್ಮದಿ ಗಳಿರುತ್ತವೆ. ಅದೇ ಕೊಂಚ ತೊಂದರೆಗಳು ಎದುರಾದಾಗ, ನೋವುಗಳು ಬಂದಾಗ ಒಟ್ಟಾಗಿ ಬಾಳಲಾರೆವು ಎಂಬ ನಿಲುವಿಗೆ ಬಂದರೆ ಸಂಸಾರದಲ್ಲಿ ಬಿರುಕು ಮೂಡುತ್ತದೆ, ಸಾಮರಸ್ಯ ಕಾಣದಾಗುತ್ತದೆ, ಜೀವನ ಒಡೆದ ಮಡಕೆಯಾಗುತ್ತದೆ. ವಿಚ್ಛೇದನ ಎಂಬ ಮಹಾಮಾರಿ ದಾಂಪತ್ಯದಲ್ಲಿ ಪ್ರತ್ಯಕ್ಷವಾಗಿ ಅಲ್ಲೋಲಕಲ್ಲೋಲವನ್ನುಂಟು ಮಾಡುತ್ತದೆ.

    ಇತ್ತೀಚೆಗೆ ಮುಖಂಡರೊಬ್ಬರು, ‘ಇಂದಿನ ದಿನಗಳಲ್ಲಿ ವಿಚ್ಛೇದನ ಹೆಚ್ಚಾಗಿ ವಿದ್ಯಾವಂತ ಹಾಗೂ ಹಣವಂತರ ವರ್ಗಗಳಲ್ಲಿ ಆಗುತ್ತಿವೆ, ಏಕೆಂದರೆ ಹೆಣ್ಣು ಮಕ್ಕಳಲ್ಲಿ ಅಹಂಕಾರ ಹೆಚ್ಚಾಗಿದೆ’ ಎಂದರು. ಇದಕ್ಕೆ ಪರ ವಿರೋಧಗಳೆರಡೂ ಇವೆ. ಈ ವಿಷಯದ ಬಗ್ಗೆ ನನ್ನ ಗೆಳತಿ ವಕೀಲೆ ಕೆ. ವೀಣಾ ಶ್ರೀಕೃಷ್ಣಳನ್ನು ಕೇಳಿದಾಗ ‘ಇದನ್ನು ನಾನು ಒಪ್ಪುತ್ತೇನೆ. ಉತ್ತಮ ಶಿಕ್ಷಣ, ಹಣಬಲ ಜನಬಲ ಇರುವೆಡೆ ವಿಚ್ಛೇದನ ಹೆಚ್ಚಾಗಿರುತ್ತದೆ. ಕೆಲವು ಹೆಂಗಸರು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಗಂಡಸರನ್ನು ಶೋಷಿಸುವ ಪ್ರವೃತ್ತಿಯೂ ಅಧಿಕವಾಗುತ್ತಿದೆ. ನಿಜವಾಗಿ ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರನ್ನೂ ಕೊಡುವುದಿಲ್ಲ, ವಿಚ್ಛೇದನಕ್ಕೂ ಒಪ್ಪುವುದಿಲ್ಲ. ಅಂಥವರು ಸಂಸಾರದೊಂದಿಗೆ ಹೊಂದಿಕೊಳ್ಳಲು ಜೀವನ ಪರ್ಯಂತ ಪ್ರಯತ್ನಿಸುತ್ತಲೇ ಇರುತ್ತಾರೆ’ ಎಂದರು. ಪ್ರಖ್ಯಾತ ಸಂಸ್ಕೃತ ಪಂಡಿತರೊಬ್ಬರು ‘ಹೆಂಗಸರಿಗೆ ಪ್ರತ್ಯೇಕ ಬ್ಯಾಂಕ್ ಅಕೌಂಟ್ ತೆರೆಯಬೇಡಿ. ನಿಮ್ಮ ಮುಷ್ಟಿಯಲ್ಲಿ ಅವರಿದ್ದರೆ ಡಿವೋರ್ಸ್ ಅನ್ನೋದು ಕಡಿಮೆಯಾಗುತ್ತದೆ. ಹೆಣ್ಣು ನಿಮ್ಮ ಅಧೀನದಲ್ಲಿರುತ್ತಾಳೆ’ ಎಂಬ ಒಂದು ಹೇಳಿಕೆಯನ್ನು ನೀಡಿದರು.

    ಹಾಗಾದರೆ ಒಬ್ಬ ಹೆಣ್ಣು ಮಗಳು ತನ್ನ ಬದುಕನ್ನ ತಂದೆಯ, ಗಂಡನ, ಸೋದರನ ಆಶ್ರಯದಲ್ಲಿಯೇ ಕಳೆಯಬೇಕೇ? ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ಸವಕಲು ಮರಕ್ಕೇ ನೇತುಹಾಕಿಕೊಂಡಿರಬೇಕೇ? ಅವಳಿಗೆ ಒಂದು ವೈಯಕ್ತಿಕ ನೆಲೆಯು ಬೇಡವೇ? ಪುರುಷ ಪ್ರಧಾನ ಸಮಾಜದಲ್ಲಿಯೇ ಮುಂದುವರಿಯಬೇಕೇ? ಹೀಗೇ ನಾನಾ ತೆರನಾದ ಪ್ರಶ್ನೆಗಳು ತಲೆಯೊಳಗೆ ಓಡಾಡ ಹತ್ತುತ್ತವೆ.

    ಸ್ವಾತಂತ್ರ್ಯೊಂದಿಗೆ ಧೈರ್ಯ: ಯಾವಾಗ ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗಿ ಬೆಳೆಯುತ್ತ ಬಂದಳೋ ಆಗಿನಿಂದ ಅವಳಲ್ಲಿ ಧೈರ್ಯ ಮನೆ ಮಾಡುತ್ತಾ ಬಂದಿತು. ತಾನು ನೋಡಿ ಬೆಳೆಯುತ್ತಿದ್ದ ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆಯವರ ಮನೆಯೊಳಗಣ ಚೌಕಟ್ಟಿನ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವಳಿಗರ್ಥವಾಗುತ್ತಿದ್ದುದು ಇವರ ಮೂಕ ವೇದನೆಗಳು. ಸ್ವಂತಿಕೆ ಎನ್ನುವುದು ಆಗಿನ ಕಾಲದ ಸ್ತ್ರೀಯರ ಪಾಲಿಗೆ ಒಂದು ಮರೀಚಿಕೆ. ಮನೆಯಲ್ಲಿನ ಹಿರಿಯರ ಮಾತೇ ವೇದವಾಕ್ಯವಾಗಿತ್ತು. ಅವರು ಹಾಕಿದ ಗೆರೆಯನ್ನು ದಾಟುವುದೆಂದರೆ ಕ್ರಾಂತಿಯೇ ಆಗುತ್ತಿತ್ತೇನೋ. ಆಗೆಲ್ಲ ಇದ್ದ ಕೂಡು ಕುಟುಂಬಗಳಲ್ಲಿ ಹೆಂಗಸರಿಗಿದ್ದ ಸ್ಥಾನಮಾನದ ಸ್ಥಿತಿ ಹೇಳಿಕೊಳ್ಳುವಂತೇನೂ ಇರಲಿಲ್ಲ. ನಂತರದ ದಿನಗಳಲ್ಲಿ. ಶಿಕ್ಷಣದ ಮೂಲಕ ಆರ್ಥಿಕ ಸ್ವಾತಂತ್ರ್ಯ (ತಾನಾಗೇ ಪಡೆದದ್ದು!) ದೊರೆತಾಗ ಅವಳ ಆಲೋಚನೆಗಳು, ನಿಲುವುಗಳ ಬದಲಾದವು. ಸ್ವಂತ ಕಾಲ ಮೇಲೆ ನಿಲ್ಲಬಲ್ಲೆನೆಂಬ ವಿಶ್ವಾಸ ಹೆಚ್ಚಾದಾಗ ಡಿವೋರ್ಸ್ ಕೊಡುವ ಧೈರ್ಯವೂ ಅವಳಲ್ಲಿ ಮೊಳೆತು ಕ್ರಮೇಣ ಈ ಪ್ರವೃತ್ತಿ ಹೆಚ್ಚಾಗುತ್ತಾ ಹೋಯಿತು.

    ಶ್ರೀಮಂತ ಮಧ್ಯಮ ಬಡ ವರ್ಗಗಳು ಯಾವುವೇ ಇರಲಿ ಮಾನವೀಯತೆ, ಭಾವನೆಗಳು, ಪುರುಷ ಪ್ರಧಾನ ನಡಾವಳಿಗಳು ಒಂದೇ ಮಟ್ಟದ್ದಾಗಿರುತ್ತದೆ. ದೌರ್ಜನ್ಯದ ವಿಕೃತ ಮುಖಗಳು ಹಲವಾರಿರಬಹುದು. ಅದರ ನೋವುಗಳು ವ್ಯಥೆಗಳು ಒಂದೇ. ಒಂದು ಸಮೀಕ್ಷೆಯ ಪ್ರಕಾರ ಸುಮಾರು ಮೂರು ದಶಕಗಳ ಹಿಂದೆ ಶೇ. 0.05 ಇದ್ದ ವಿಚ್ಛೇದನಗಳು ಈಗ ಶೇ. 0.3 ಆಗಿದೆ. ಆದರೂ, ನಮ್ಮ ಭಾರತದಲ್ಲಿ ಹೊರದೇಶಗಳಿಗೆ ಹೋಲಿಸಿದಾಗ ಡಿವೋರ್ಸ್ ಸಂಖ್ಯೆ ಅತಿ ಕಡಿಮೆಯೇ.

    ಶ್ರೀಮಂತ ವರ್ಗದವರಲ್ಲಿ ಓದಿದವರು ಹೆಚ್ಚಾಗಿದ್ದು ಆರ್ಥಿಕವಾಗಿ ದೃಢವಾಗಿಯೂ ಇರುತ್ತಾರೆ ಹಾಗೂ ಕುಟುಂಬದ ಬಂಧುಮಿತ್ರರ ಬೆಂಬಲವಂತೂ ಯಥೇಚ್ಛವಾಗಿರುತ್ತದೆ. ಅದೇ ಮಧ್ಯಮ ವರ್ಗದವರಲ್ಲಿ ಸಮಾಜಕ್ಕೆ, ನೆಂಟರಿಷ್ಟರಿಗೆ ಹೆದರುವ ಮನಸ್ಥಿತಿಯವರೇ ಹೆಚ್ಚಿರುವುದರಿಂದ ‘ಪ್ಲೀಸ್ ಅಡ್ಜೆಸ್ಟ್ ಮಾಡ್ಕೊಂಡು ಹೋಗು’ ಎಂದು ಕೈ ಮುಗಿಯೋ ಪೋಷಕರೇ ಹೆಚ್ಚು. ಇಲ್ಲಿ ಡಿವೋರ್ಸ್​ಗೆ ಬೆಂಬಲ ಸಿಕ್ಕುವುದು ಕಡಿಮೆ. ಹೊಂದಾಣಿಕೆ ಎಂಬ ಪರಮಮಂತ್ರದ ಮನೋಭಾವದವರು ಹೆಚ್ಚಾಗಿರುತ್ತಾರೆ. ಶಿಕ್ಷಣವಿದ್ದರೂ ವಾಸ್ತವ ಬದುಕಿಗೆ ಹತ್ತಿರದಲ್ಲಿರುತ್ತಾರೆ. ನಿನ್ನ ಅತ್ತೆ, ದೊಡ್ಡಮ್ಮ ನನ್ನನ್ನು ನೋಡು, ಕುಟುಂಬದ ಸಣ್ಣ ಪುಟ್ಟ ಅವ್ಯವಸ್ಥೆಗಳನ್ನು ಮಗಳಿಗೆ ತೋರಿಸುತ್ತಾ ಉದಾಹರಣೆಗಳನ್ನು ಕೊಡುತ್ತ ಹೊಂದಿಕೊಂಡು ಹೋಗು ಪುಟ್ಟಾ… ನಾವು ಪಟ್ಟ ಕಷ್ಟಗಳ ಮುಂದೆ ನಿನ್ನ ಕಷ್ಟ ಏನೇನೂ ಅಲ್ಲ! ಜತೆಗೆ ನೀನು ದುಡೀತಾ ಇರೋದ್ರಿಂದ ಅವರೆದುರಿಗೆ ಕೈಚಾಚೋ ಪ್ರಮೇಯವೂ ಇಲ್ಲ ಎಂದು ಸಮಾಧಾನಿಸಿ ಅಲ್ಲೇ ಬಾಳುವಂತೆ ಪ್ರೇರೇಪಿಸುತ್ತಾರೆ.

    ಇನ್ನು ಕೆಳವರ್ಗದವರು. ಒಬ್ಬಳು ಮನೆ ಕೆಲಸದವಳ ಕಥೆಯನ್ನೇ ತೊಗೊಳ್ಳಿ. ಗಂಡು ಬೆಂಗಳೂರಿನವನು ಎಂಬ ಒಂದೇ ಒಂದು ಕಾರಣಕ್ಕೆ ಈತನನ್ನ ಮದುವೆಯಾದಳು. ಮಾರನೇ ದಿನವೇ ತಿಳಿದಿದ್ದು ಇವನು ನಿನ್ನೆ ಮೊನ್ನೆಯವರೆವಿಗೂ, ಎರಡು ಮಕ್ಕಳ ತಾಯಿಯೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದನೆಂದು. ವಿಷ ತಿಳಿದ ತಕ್ಷಣವೇ ಹಳ್ಳಿಯ ಹೆಣ್ಣು ಮಗಳಾದರೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿ ಆ ಹೆಣ್ಣಿನ ಸಂಬಂಧವನ್ನು ಬಿಡಿಸಿ ತನ್ನ ಸಂಸಾರವನ್ನು ಸುಭದ್ರಗೊಳಿಸಿಕೊಂಡಿದ್ದಾಳೆ. ಮೊನ್ನೆ ಒಂದಿನ ಇವಳು ವಿಚ್ಛೇದನ ಕುರಿತು ಕೇಳಿದಳು. ಹಾಗೆಂದರೇನೆಂದು ಹೇಳಿದಾಗ ಈಕೆ ಹೇಳಿದ ಮಾತು ಎಜುಕೇಟೆಡ್ ಎನ್ನಿಸಿಕೊಂಡಿರುವ ಎಲ್ಲರೂ ಮನನ ಮಾಡುವಂತಹುದು. ಅಕ್ಕಾ! ನಮ್ಮೂರ್ನಾಗಾದರೆ ಹಿಂಗೆಲ್ಲ ಡಿವೋರ್ಸ ಗಿವೋರ್ಸ ಅಂತೆಲ್ಲ ಆಗ್ತಿರ್ಲಿಲ್ಲ. ಪಂಚಾಯ್ತಿ ಕಟ್ಟೇಗೆ ಕರ್ಸಿ ಒಂದಿಕೊಂಡು ಬಾಳಬೇಕು ಅಂತ ಬುದ್ಧಿವಾದ ಯೋಳಿ ಕಳಿಸೋರು. ನಾವು ಅದಕ್ಕೊಂಡು ಜೀವ್ನ ಮಾಡ್ತಿದ್ದೆವು. ಈ ಊರ್ನಲ್ಲೇ ಇಂಗೆ ಎಲ್ಲಿ ದೈಹಿಕವಾಗಿ ಮಾನಸಿಕವಾಗಿ ಹಿಂಸೆ ದೌರ್ಜನ್ಯಗಳಿರುತ್ತವೆಯೋ ಖಂಡಿತಾ ಅಲ್ಲಿ ಕಾನೂನಿದೆ ಎಂಬ ತಿಳಿವಳಿಕೆ ಒಬ್ಬ ಮಹಿಳೆಗೆ ಇರಬೇಕು. ಅವಳಲ್ಲಿ ಸ್ವಾವಲಂಬನೆಯಿಂದ ಬದುಕುವ ಧೈರ್ಯ ತುಂಬುವಂತಹ ಇಂದಿನ ಬಹಳಷ್ಟು ಕಾನೂನುಗಳು ಮಹಿಳೆಯ ಪರವಾಗಿವೆಯೇ ಹೊರತು ಮನೆ ಮನಗಳನ್ನು ಒಡೆಯಲು ನೆರವಾಗುವಂತಹುದಲ್ಲ. ಇನ್ನು ತೀರಾ ಕೆಳವರ್ಗದವರಿಗೆ ಈ ರೀತಿಯ ವಿಚ್ಛೇದನ ಇದೆಯೆಂಬುದೇ ತಿಳಿಯದು. ಒಂದು ರೀತಿಯಲ್ಲಿ ಅವರೇ ಅದೃಷ್ಟವಂತರೆನ್ನಬೇಕು. ಕಷ್ಟವೋ ಸುಖವೋ ಒಟ್ಟಾಗಿ ಬಾಳಿ ಬದುಕುತ್ತಾರೆ.

    ದ್ರೌಪದಿಗೆ 5 ಜನ ಗಂಡಿದರಿದ್ದ ಆಗಿನ ಕಾಲದಂತೆ ಈಗಲೂ ಈ ಪದ್ಧತಿ ಕೆಲವು ಕಡೆ ನೆಲೆಸಿರುವುದು ಶೋಚನೀಯ ಸ್ಥಿತಿ. ಬಾಲ್ಯವಿವಾಹವೂ ಇದಕ್ಕೆ ಹೊರತಲ್ಲ! ಈಚೆಗಿನ ಒಂದು ಸಮೀಕ್ಷೆ ಪ್ರಕಾರ 15 ರಿಂದ 24 ವರುಷ ವಯಸ್ಸಿನಲ್ಲಿ ಮದುವೆ ಮಾಡುವರು. ಆ ವಯೋಮಾನದವರಿಗೆ ಮೂಲ ಶಿಕ್ಷಣವೂ ಇರುವುದಿಲ್ಲ, ವಿಚ್ಛೇದನದ ಬಗ್ಗೆ ಅರಿವೇ ಇರುವುದಿಲ್ಲ. ಗಂಡಸು ಕುಡಿದು ಬಂದು ಹೆಣ್ಣಿನ ಮೇಲೆ ದೈಹಿಕವಾಗಿ ದೌರ್ಜನ್ಯವೆಸಗುವುದು ಇಲ್ಲಿ ಸರ್ವೆಸಾಮಾನ್ಯ.

    ಈ ಡಿವೋರ್ಸ್​ಗಳು ಅಷ್ಟು ಸುಲಭವಾಗಿಯೂ ಸಿಗುವಂತಹುದಲ್ಲ. ವರ್ಷಾನುಗಟ್ಟಲೆ ಹೋರಾಡಬೇಕು. ಲಾಯರ್ ಫೀಸುಗಳು, ಓಡಾಟದ ಖರ್ಚುಗಳು, ಸಾಕ್ಷಿಗಳಿಗೆ ತಿನ್ನಿಸುವ ಲಂಚಗಳು, ಇದರ ನಡುವೆ ಬಂಧು ಬಳಗ ನೆಂಟರಿಷ್ಟರಿಂದ ಬರುವ ಚುಚ್ಚು ಮಾತುಗಳು, ಮೂದಲಿಕೆಯ ನುಡಿಗಳು! ಸುಸಂಸ್ಕೃತರಾಗಿ ಬದುಕಲು ಹಾಕಿ ಕೊಟ್ಟಿರುವ ಭದ್ರ ಬುನಾದಿಯನ್ನು ಈ ಡಿವೋರ್ಸ್ ಎಂಬ ಮಹಾಮಾರಿ ಅಲುಗಾಡಿಸುತ್ತಿದೆ. ಈ ಮಹಾಮಾರಿಯನ್ನು ಸಂಹಾರ ಮಾಡಬೇಕಾದರೆ, ಚಿಕ್ಕಪುಟ್ಟ ಕಾರಣಗಳಿಗೆ, ಹೆಚ್ಚಿನ ಹಣದಾಸೆಗೆ ಬಲಿಯಾಗಿ ಡಿವೋರ್ಸ್ ಯೋಚನೆಯನ್ನು ಮಾಡದೆ ಕಷ್ಟ ಸುಖಗಳನ್ನು ಸಮನಾಗಿ ಹಂಚಿಕೊಂಡು ಸರ್ವಶ್ರೇಷ್ಠ ಬದುಕನ್ನು ಬದುಕುವುದರಲ್ಲಿ ಸಾರ್ಥಕತೆಯನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ಹೆಣ್ಣು ಸಂಬಂಧಗಳನ್ನು ಹಿಡಿದಿಡುವ ಬಾಂಧವ್ಯದ ಹೂಗುಚ್ಛವಾಗಲಿ. ಮನೆ ಬೆಳಗುವ ನಂದಾದೀಪವಾಗಲಿ. ಹೊಂದಾಣಿಕೆಯ ಪರಮಮಂತ್ರವೇ ಧ್ಯೇಯ ವಾಕ್ಯವಾಗಲಿ. ಸುಖಸಂಸಾರವು ಶಾಂತಿ ನೆಮ್ಮದಿಗಳ ನೆಲೆವೀಡಾಗಿರಲಿ!

    ಸಾಕಪ್ಪ ಸಾಕು ಸಹವಾಸ…: ಹೆಚ್ಚಿನ ಡಿವೋರ್ಸ್ ಕೇಸುಗಳು ಕಾಣಸಿಗೋದು ಅಮೆರಿಕದಂಥ ದೊಡ್ಡ ರಾಷ್ಟ್ರಗಳಲ್ಲಿ. ದಾಂಪತ್ಯವನ್ನು ಸಾಗಿಸಲಾಗದ ಮದುವೆಗಳು… ಇತ್ಯಾದಿ. ಇದೀಗ ಭಾರತಕ್ಕೂ ವ್ಯಾಪಿಸಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಈ ಪಾಶ್ಚಾತ್ಯ ಸಂಸ್ಕೃತಿ ಯಾವಾಗ ಹೆಚ್ಚಾಯಿತೋ ಆಗ ಡಿವೋರ್ಸ್ ಅನ್ನುವ ಪರಿಕಲ್ಪನೆ ತಲೆಯೆತ್ತಿತು. ವಿದ್ಯಾವಂತರಲ್ಲೇ ವಿಚ್ಛೇದನ ಹೆಚ್ಚಾಗುತ್ತಿರುವುದು ವಿಪರ್ಯಾಸವೆ. ಸೆಲೆಬ್ರೆಟಿಗಳಲ್ಲಿ ಆಗುತ್ತಿರುವ ಈ ಪ್ರಕ್ರಿಯೆಗಳು, ಅದಕ್ಕಾಗಿ ಅವರು ಕೇಳುತ್ತಿರುವ ಮಿಲಿಯನ್​ಗಟ್ಟಲೆ ಪರಿಹಾರ, ನಂತರದ ಅವರ ಬದುಕು, ಸ್ಟೆಪ್ ಮದರ್ ಸ್ಟೆಪ್ ಫಾದರ್ ಅನ್ನೋವಲ್ಲಿಗೆ ಬಂದು ನಿಲ್ಲುವ ಸಂಬಂಧಗಳು, ಆ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ಅನುಭವಿಸುವ ಬವಣೆ… ಸಾಕಪ್ಪಾ ಸಾಕು ಈ ಡಿವೋರ್ಸ್ ಕಥೆ ವ್ಯಥೆ.

    ಆಗೇನು…? ಈಗೇನು…?: ಆಗೆಲ್ಲಾ ‘ಮಗಳೇ ಅತ್ತೆ- ಮಾವಗಂಜಿಕೊಂಡು ನಡೆಯಬೇಕಮ್ಮ, ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ… ಎಂಬ ಪುರಂದರದಾಸರ ಪದವನ್ನು ಹೇಳಿ ಗಂಡನ ಮನೆಗೆ ಕಳುಹಿಸುತ್ತಿದ್ದರು. ಅಂದರೆ, ಅತ್ತೆಯ ಸೇವೆ ಮಾಡುತ್ತ, ಗಂಡನಿಗೆ, ಕಿರಿಯರಿಗೆ ಪ್ರೀತಿ ತೋರಬೇಕು ಎಂದು ಹೇಳುತ್ತಿದ್ದರು. ಕಷ್ಟಗಳನ್ನು ತವರಿನವರೆಗೂ ತರಬಾರದೆಂಬ ಸೂಚನೆ ನೀಡುತ್ತಿದ್ದರು. ಈ ವ್ಯವಸ್ಥೆಗೆ ಹೆಣ್ಣು ಮಾನಸಿಕವಾಗಿ ತಯಾರಾಗಿ ಗಂಡನ ಮನೆಗೆ ಅಡಿಯಿಡುತ್ತಿದ್ದಳು. ಆದರೆ ಈಗ, ‘ನೋಡು ಮಗಳೆ, ನಿನ್ನ ಸಾಕೋದು ನಮಗೇನು ಕಷ್ಟವಿಲ್ಲ, ನೀನು ದುಡಿಯುತ್ತಿರುವೆ. ದುಡ್ಡಿಗೇನೂ ಬರವಿಲ್ಲ. ನಿನಗೆ ತೊಂದರೆ ಆದರೆ ತಕ್ಷಣ ತಿಳಿಸು. ಮುಂದಕ್ಕೆ ನಾವು ನೋಡಿಕೋತೀವಿ’ ಎಂದಾಗ ಒಬ್ಬ ಹೆಣ್ಣು ಮಗಳಿಗೆ ಆನೆ ಬಲ ಬರುತ್ತದೆ. ತಂದೆತಾಯಿಗಿಂತ ಶಕ್ತಿ ಬೇರೆ ಬೇಕೆ? ನಾವು ನಮ್ಮ ಮಕ್ಕಳನ್ನ ಅದೆಷ್ಟು ಮುಚ್ಚಟೆಯಿಂದ ಬೆಳೆಸಿ ವಿದ್ಯಾವಂತರನ್ನಾಗಿಸಿರುತ್ತೇವೆ. ಕೆಲಸಕ್ಕೆ ಹೋಗುವ ಆ ಹೆಣ್ಣುಮಗುವಿಗೆ ಅತ್ತೆಯ ಮನೆಯಲ್ಲಿ ತೊಂದರೆಯಾದರೆ ನಮ್ಮ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವೇ? ಕಾನೂನು, ಕೋರ್ಟು ಕಚೇರಿ ಎಲ್ಲವೂ ಇವೆ. ಅದರ ಬಗೆಗಿನ ಜ್ಞಾನವೂ ಇದೆ. ಹಣವಂತೂ ಹೇರಳವಾಗಿದೆ. ಹಾಗಾಗಿ ಅದರ ಮೂಲಕ ಸ್ವತಂತ್ರವಾಗಿ ಬಾಳುವ ಇಚ್ಛೆ ಮನಸ್ಸಿನಲ್ಲಿ ಮೂಡಿ ಅವುಗಳ ಮೊರೆ ಹೋಗುತ್ತಾರೆ. ಇದು ಒಂದು ದೃಷ್ಟಿಯಲ್ಲಿ ತುಂಬಾ ಸಹಜವೆನ್ನಿಸುತ್ತದೆಯಲ್ಲವೇ?

    ಏ ಹುಡುಗ, ಸ್ವಲ್ಪ ಅಡ್ಜಸ್ಟ್ ಮಾಡ್ಕೊ...

    ಲಂಡನ್​ ಮಹಿಳೆ ಬಿಹಾರ್ ಸಿಎಂ ಅಭ್ಯರ್ಥಿ! ರಾಜಧಾನಿಯಲ್ಲಿ ತಲೆ ಎತ್ತಿತು ಪೋಸ್ಟರ್​, ಅವಳಿಷ್ಟ ಎಂದ ಅಪ್ಪ

    ಹೆಂಡತಿ ಫೋನ್​ ಕೊಡಲ್ಲ ಎಂದಳು; ಗಂಡ ಚಾಕುವಿನಿಂದ ಇರಿದು ಕೊಂದೇ ಬಿಟ್ಟ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts