More

    ಆಧಾರ್ ಕಾರ್ಡ್‍ನಿಂದಾಗಿ ಮರಳಿ ಮನೆ ಸೇರಿದ ಮೂಕ-ಕಿವುಡ ಬಾಲಕ! ಸಾಧ್ಯವಾದದ್ದು ಹೇಗೆ?

    ನವದೆಹಲಿ: 6 ವರ್ಷಗಳ ನಂತರ, ಸತತ ಹುಡುಕಾಟದ ನಂತರ ಈ ಬಾಲಕನಿಗಾಗಿ ಆಧಾರ್‍ ಕಾರ್ಡ್‍ ಮಾಡಿಸಲು ತೆರಳಿದ್ದಾಗ, ಕುಟುಂಬದವರನ್ನು ಪತ್ತೆಹಚ್ಚಲಾಗಿದೆ. ಕಾಣೆಯಾಗಿದ್ದ ತಮ್ಮ ಅಂಗವಿಕಲ ಮಗನನ್ನು ಕುಟುಂಬವು ಸಂತೋಷದಿಂದ ಬರ ಮಾಡಿಕೊಂಡಿದ್ದು ಆನಂದ ಭಾಷ್ಪ ಸುರಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಒಡಿಶಾದ ಕಿಯೋಂಜಾರ್ ನಗರದಲ್ಲಿ ಕಂಡುಬಂದಿದೆ.

    ಕಥೆ ಶುರುವಾದದ್ದು ಎಲ್ಲಿಂದ?

    ಆರು ವರ್ಷಗಳ ಹಿಂದೆ. ಜೂನ್ 2, 2017ರಂದು, ಕಿಯೋಂಜಾರ್ ಮಾರುಕಟ್ಟೆಯಲ್ಲಿ 13 ವರ್ಷದ ವಿಕಲಚೇತನ ಕಿವುಡ ಮತ್ತು ಮೂಕ ಹುಡುಗ ಅಸಹಾಯಕನಾಗಿ ಅಳುತ್ತಿದ್ದನು. ಲಭಿಸಿದ ಮಾಹಿತಿಯ ಮೇರೆಗೆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ರಕ್ಷಿಸಿದೆ. ಆದಾಗ್ಯೂ, ಮಗು ಕಿವುಡ ಹಾಗೂ ಮೂಗನಾಗಿದ್ದರಿಂದ ಉತ್ತರಿಸಲು ಅಥವಾ ಮನೆಯ ವಿಳಾಸವನ್ನು ಹೇಳಲು ಸಾಧ್ಯವಾಗಲಿಲ್ಲ. ಅವನು ಸುಮ್ಮನೆ ಅಳುತ್ತಿದ್ದನು. ಬೇರೆ ದಾರಿ ಕಾಣದೆ, ಅಂಗವಿಕಲ ಮಗುವನ್ನು ಅಂತಿಮವಾಗಿ ಟೆಲ್ಕೊಯ್‍ನ ಅಂಗವಿಕಲರ ಸಂಸ್ಥೆಗೆ ಕಳುಹಿಸಲಾಯಿತು. ಮಗುವಿನ ಕುಟುಂಬದ ಬಗ್ಗೆ ಮಾಹಿತಿ ಪಡೆಯಲು ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರವನ್ನು ಮಾಡಲಾಯಿತು. ಆದರೂ, ಮಗುವಿನ ಕುಟುಂಬದ ವಿಳಾಸ ಮಾತ್ರ ಸಿಗಲಿಲ್ಲ.

    ಎಲ್ಲವೂ ಫಿಂಗರ್ ಪ್ರಿಂಟ್ ದಯೆ!

    ಆರು ವರ್ಷಗಳ ನಂತರ, ಅವರು ತಮ್ಮ ಆಧಾರ್ ಕಾರ್ಡ್‍ಗಾಗಿ ಫಿಂಗರ್ಪ್ರಿಂಟ್ ತೆಗೆಸಿಕೊಂಡಾಗ, ಬಾಲಕನ ಹೆಸರಲ್ಲಿ ಈಗಾಗಲೇ ಆಧಾರ್ ಕಾರ್ಡ್ ಇರುವುದು ಕಂಡುಬಂದಿದೆ. ಈ ಬಾಲಕ ಮೂಲತಃ ಬಿಹಾರದ ದರ್ಭಾಂಗ ಜಿಲ್ಲೆಯ ರಾಮ್ ಕಿಶೋರ್ ಯಾದವ್ ಅವರ ಪುತ್ರ ಎಂದು ಗುರುತಿಸಲಾಗಿದೆ.

    ತಂದೆ ಮಗನ ಪುನರ್ಮಿಲನ…

    ಈಗ ಕಾಯುವಿಕೆ ಕೊನೆಗೊಂಡಿದ್ದು ಆರು ವರ್ಷಗಳ ನಂತರ, ಬಾಲಕ ತನ್ನ ಆಧಾರ್ ಕಾರ್ಡ್‍ನಿಂದಾಗಿ ತನ್ನ ಕುಟುಂಬವನ್ನು ಸೇರಿದ್ದಾನೆ. ಒಡಿಶಾದ ಆಡಳಿತವು ಬಾಲಕನ ಕುಟುಂಬದವರನ್ನು ಸಂಪರ್ಕಿಸಿದಾಗ, ತಂದೆ ರಾಮ್ ಕಿಶೋರ್, ಕಿಯೋಂಜಾರ್ ನಗರ ತಲುಪಿ ತಮ್ಮ ಕಳೆದುಹೋದ ಮಗನನ್ನು ಕಂಡು ಸಂತೋಷಪಟ್ಟರು. ವಾಸುದೇವ ಕೃಷ್ಣನ ತಂದೆಯಾದರೂ ಯಾವ ರೀತಿ ನಂದರಾಜನು ಬೆಳೆಸಿದನೋ, ಅದೇ ರೀತಿ ನನ್ನ ಮಗನನ್ನೂ ಮಕ್ಕಳ ಕಲ್ಯಾಣ ಇಲಾಖೆ ಜೋಪಾನ ಮಾಡಿದೆ ಎಂದು ಅವರು ಹೇಳಿದರು. ಏತನ್ಮಧ್ಯೆ, ಹಲವಾರು ಪ್ರಯತ್ನಗಳ ನಂತರ, ಮಗು ತನ್ನ ಕುಟುಂಬಕ್ಕೆ ಮರಳಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts