More

    ರೈಲ್ವೇ ಪ್ಲ್ಯಾಟ್​ಫಾರ್ಮ್​ನಲ್ಲೇ ಬಿದ್ದಿತ್ತು 100 ಗ್ರಾಂ ಚಿನ್ನಾಭರಣವಿದ್ದ ಬಾಕ್ಸ್; ಆಮೇಲಾಗಿದ್ದೇನು?

    ಬೆಂಗಳೂರು: ಮಹಿಳೆಯೊಬ್ಬರಿಗೆ ಸೇರಿರುವ ಸುಮಾರು 4.8 ಲಕ್ಷ ರೂ. ಮೌಲ್ಯದ ನೂರು ಗ್ರಾಂ ಚಿನ್ನಾಭರಣವಿದ್ದ ಬಾಕ್ಸ್​ ರೈಲ್ವೇ ಪ್ಲ್ಯಾಟ್​ಫಾರ್ಮ್​ವೊಂದರಲ್ಲಿ ಕೈತಪ್ಪಿ ಹೋದ ಪ್ರಕರಣವೊಂದು ನಡೆದಿದೆ. ರೈಲು ಅಥವಾ ಬಸ್​ ನಿಲ್ದಾಣಗಳಲ್ಲಿ ಪಕ್ಕದಲ್ಲೇ ಚೀಲ ಇರಿಸಿಕೊಂಡಿದ್ದರೂ ಕಳವಾಗುವ ಕಾಲದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಈ ಬಾಕ್ಸ್​ ಕೊನೆಗೂ ವಾರಸುದಾರರ ಕೈಗೆ ಸೇರಿದೆ.

    ಸಂಗೀತ ಎಂಬವರು ತಮ್ಮ ಕುಟುಂಬದೊಂದಿಗೆ ಡಿ. 11ರ ಮುಂಜಾನೆ ಬೆಂಗಳೂರಿನ ಕೆಎಸ್​ಆರ್​ ರೈಲ್ವೇ ನಿಲ್ದಾಣದ ಪ್ಲ್ಯಾಟ್​ಫಾರ್ಮ್​ 10ಕ್ಕೆ ಬಂದಿಳಿದಿದ್ದರು. ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಬಂದಿದ್ದ ಅವರು ಬಂಗಾರಪೇಟೆಗೆ ಹೋಗಲು ಇನ್ನೊಂದು ರೈಲಿಗೆ ಹತ್ತಬೇಕಾಗಿತ್ತು. ಹೀಗಾಗಿ ಸುಮಾರು 2 ಗಂಟೆ ಕಾಲ ಪ್ಲ್ಯಾಟ್​​ಫಾರ್ಮ್​ 10ರಲ್ಲೇ ನಿಂತಿದ್ದರು.

    ನಂತರ ಮುಂದಿನ ರೈಲನ್ನೇರಲು ಅವರು ಪ್ಲ್ಯಾಟ್​​ಫಾರ್ಮ್ 6ಕ್ಕೆ ತಲುಪಿದರು. ಈ ವೇಳೆ ತಮ್ಮ ಚೀಲದಿಂದ ಸುಮಾರು 100 ಗ್ರಾಂ ಚಿನ್ನಾಭರಣ (ಅಂದಾಜು 4.8 ಲಕ್ಷ ರೂ.) ಇದ್ದ ಪೆಟ್ಟಿಗೆ ಕಾಣೆಯಾಗಿದ್ದುದು ಗಮನಕ್ಕೆ ಬಂದಿತ್ತು. ಕೂಡಲೇ ಅವರು ರೈಲ್ವೆ ಪೋಲಿಸರನ್ನು ಸಂಪರ್ಕಿಸಿದರು.

    ಏತನ್ಮಧ್ಯೆ ರೈಲ್ ಸಹಾಯಕ್ (ಪರವಾನಗಿ ಪಡೆದ ಪೋರ್ಟರ್- ಬ್ಯಾಡ್ಜ್ ಸಂಖ್ಯೆ 186) ಮೊಹಮ್ಮದ್ ಐಜಾಜ್ ಎಂಬಾತ ಪ್ಲ್ಯಾಟ್​​ಫಾರ್ಮ್ 10ರಲ್ಲಿ ಪೆಟ್ಟಿಗೆಯೊಂದನ್ನು ಕಂಡು ಅದನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲು ಕರ್ತವ್ಯದಲ್ಲಿದ್ದ ನಿಲ್ದಾಣದ ಉಪ ವ್ಯವಸ್ಥಾಪಕ (ವಾಣಿಜ್ಯ) ಶ್ರೀಧರ್​ಗೆ ನೀಡಿದ್ದರು. ಉಪ ವ್ಯವಸ್ಥಾಪಕರು ರೈಲ್ವೇ ರಕ್ಷಣಾ ಪಡೆಗೆ ಮಾಹಿತಿ ನೀಡಿ, ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ರೈಲ್ವೆ ಪೊಲೀಸರ ಸಮ್ಮುಖದಲ್ಲಿ ವಸ್ತುಗಳನ್ನು ಗುರುತಿಸಿ ನಿಜವಾದ ಮಾಲೀಕರಿಗೆ ಹಸ್ತಾಂತರಿಸಿದರು.

    ಪ್ಲ್ಯಾಟ್​ಫಾರ್ಮ್ ನಂ.10ರಲ್ಲಿ ತಮ್ಮ ಚೀಲದಿಂದ ಪೆಟ್ಟಿಗೆ ಬಿದ್ದಿರುವುದು ತನಗೆ ತಿಳಿದಿರಲಿಲ್ಲ ಎಂದು ತಿಳಿಸಿದ ಸಂಗೀತ ಎಲ್ಲ ವಸ್ತುಗಳು ಸರಿಯಾಗಿರುವುದಾಗಿ ಖಚಿತ ಪಡಿಸಿ ಹಿಂಪಡೆದರು. ರೈಲ್ವೇ ತಂಡದ ಅದರಲ್ಲೂ ರೈಲ್ವೇ ಸಹಾಯಕರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ಪ್ರಯಾಣಿಕರು ರೈಲ್ವೇ ಮತ್ತು ರೈಲ್ ಸಹಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

    ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ಅವರು ರೈಲ್ ಸಹಾಯಕರ ಪ್ರಾಮಾಣಿಕತೆಯನ್ನು ಶ್ಲಾಘಿಸಿ ಅವರಿಗೆ ಸೂಕ್ತ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

    ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

    ಮೇಕಪ್​ನಿಂದ ಲುಕ್ ಹಾಳಾಯ್ತು ಅಂತ ಬ್ಯೂಟಿಪಾರ್ಲರ್​ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ ವಧು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts