More

    ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್​ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆ: ಜೀವ ಕಸಿಯಿತು ಕ್ರಿಕೆಟ್​ ಮೋಹ!

    ಕಟಕ್​: ನಿಗೂಢವಾಗಿ ನಾಪತ್ತೆಯಾಗಿದ್ದ ಒಡಿಶಾದ ಮಹಿಳಾ ಕ್ರಿಕೆಟರ್​ ರಾಜಶ್ರೀ ಸ್ವೈನ್,​ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಟಕ್​ ನಗರದಿಂದ ರಾಜಶ್ರೀ ನಾಪತ್ತೆಯಾಗಿದ್ದರು. ಆಕೆಯ ಸ್ಕೂಟರ್ ಅಥಾಗಢ ಏರಿಯಾದ ಅರಣ್ಯ ಪ್ರದೇಶದಲ್ಲಿ​ ಪತ್ತೆಯಾಗಿತ್ತು. ಇದೀಗ ಆಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

    ಪ್ರಾಥಮಿಕ ತನಿಖೆಯ ಪ್ರಕಾರ ರಾಜಶ್ರೀ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯದ ಬಳಿ ರಾಜಶ್ರೀ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಆಕೆಯ ಕೊನೆಯ ಮೊಬೈಲ್ ನೆಟ್‌ವರ್ಕ್ ಸ್ಥಳವನ್ನು ಆಧರಿಸಿ, ಪೊಲೀಸರು ಶೋಧ ಕಾರ್ಯ ಆರಂಭಿಸಿದಾಗ, ಗುರುದಿಝಾಟಿಯಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ದಟ್ಟ ಅರಣ್ಯದಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಾಜಶ್ರೀ ಮೃತದೇಹ ಪತ್ತೆಯಾಗಿದೆ.

    ಕಳೆದ ಮೂರು ದಿನಗಳಿಂದ ರಾಜಶ್ರೀ ನಾಪತ್ತೆಯಾಗಿದ್ದರು. ಈ ಸಂಬಂಧ ಆಕೆಯ ಕೋಚ್​ ಕಟಕ್​ನ ಮಂಗಳಬಾಗ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಏನೋ ಅನ್ಯಾಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ರಾಜಶ್ರೀ ಸೇರಿದಂತೆ ಸುಮಾರು 25 ಮಹಿಳಾ ಕ್ರಿಕೆಟಿಗರು ಪುದುಚೇರಿಯಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಾಗಿ ಕಟಕ್​ನ ಬಜ್ರಕಬಾಟಿಯಲ್ಲಿ ಆಯೋಜಿಸಲಾದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಎಲ್ಲರು ಹೋಟೆಲ್‌ನಲ್ಲಿ ತಂಗಿದ್ದರು.

    ಜನವರಿ 10 ರಂದು ಅಂತಿಮ ಒಡಿಶಾ ತಂಡವನ್ನು ಘೋಷಿಸಲಾಯಿತು. ಆದರೆ, ರಾಜಶ್ರೀ ಅಂತಿಮ ಪಟ್ಟಿಗೆ ಆಯ್ಕೆಯಾಗಲಿಲ್ಲ. ಮರುದಿನ ಬೆಳಗ್ಗೆ ಆಟಗಾರರು ಅಭ್ಯಾಸಕ್ಕಾಗಿ ಕ್ರಿಕೆಟ್ ಮೈದಾನಕ್ಕೆ ಹೋದರು. ಆದರೆ, ರಾಜಶ್ರೀ ತನ್ನ ತಂದೆಯನ್ನು ಭೇಟಿ ಮಾಡಲು ಪುರಿಗೆ ಹೋಗುವುದಾಗಿ ತನ್ನ ಕೋಚ್‌ಗೆ ತಿಳಿಸಿದಳು. ಆದರೆ, ಆಕೆ ಮರಳಿ ಬರಲೇ ಇಲ್ಲ. ಫೋನ್​ ಮಾಡಿದರೆ ಸ್ವಿಚ್​ ಆಫ್​ ಎಂದು ಬಂದ ಕಾರಣ, ಆಕೆಯ ಕೋಚ್​​ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.

    ರಾಜಶ್ರೀ ಅವರ ತಾಯಿ ಮಾತನಾಡಿ, ಮಗಳು ಆಯ್ಕೆ ಶಿಬಿರಕ್ಕಾಗಿ ಕಟಕ್‌ಗೆ ಬಂದಿದ್ದಳು. ಪ್ಯಾಲೇಸ್ ಹೋಟೆಲ್​ನಲ್ಲಿ ತಂಗಿದ್ದಳು. 10 ದಿನಗಳ ಆಯ್ಕೆ ಶಿಬಿರದ ನಂತರ, ಆಕೆ ಅತ್ಯುತ್ತಮ ಆಟಗಾರ್ತಿಯಾಗಿದ್ದರೂ, ಉದ್ದೇಶಪೂರ್ವಕವಾಗಿ ಅಂತಿಮ ತಂಡದಿಂದ ಕೈಬಿಡಲಾಯಿತು. ತೀವ್ರ ಒತ್ತಡದಲ್ಲಿದ್ದ ಆಕೆ ತಂಗಿಗೆ ಕರೆ ಮಾಡಿದ್ದಳು. ಆಲ್‌ರೌಂಡರ್ ಆಟಗಾರ್ತಿಯಾಗಿದ್ದರೂ ನನ್ನನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ ಎಂದು ನೋವಿನಿಂದ ಹೇಳಿಕೊಂಡಿದ್ದಳು ಎಂದು ತಿಳಿಸಿದ್ದಾರೆ.

    ನನ್ನ ಮಗಳ ಜನವರಿ 10ರಿಂದ ನಾಪತ್ತೆಯಾಗಿದ್ದರೂ ನಮಗೆ ಮಾಹಿತಿ ನೀಡಲಿಲ್ಲ. ನಾವು ಕೋಚ್​ ಅನ್ನು ಸಂಪರ್ಕಿಸಿದಾಗ ಮಗಳು ನಾಪತ್ತೆಯಾಗಿರುವ ವಿಚಾರವನ್ನು ತಿಳಿಸಿದರು. ಅಲ್ಲದೆ, ಆಕೆಯ ಸ್ಕೂಟರ್​ ಸಿಕ್ಕಿರುವುದಾಗಿ ಹೇಳಿದರು. ಆದರೆ, ನಮಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ತಂಡದಲ್ಲಿ ಸೇರಿಸಿಕೊಳ್ಳಲಿಲ್ಲ ಅಂತಾ ತುಂಬಾ ಒತ್ತಡದಲ್ಲಿದ್ದಳು ಎಂದು ರಾಜಶ್ರೀ ತಾಯಿ ಹೇಳಿದ್ದಾರೆ.

    ರಾಜಶ್ರೀ ಸಹೋದರಿ ಮಾತನಾಡಿ, ನನಗೆ ಬೆಳಗ್ಗೆ 9 ಗಂಟೆಗೆ ಕರೆ ಮಾಡಿದಳು. ನಾನು ಒಳ್ಳೆಯ ಆಟಗಾರ್ತಿಯಾಗಿದ್ದರೂ ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಲಿಲ್ಲ ಎಂದು ಅಳುತ್ತಿದ್ದಳು. ಸಮಾಧಾನಪಡಿಸಲು ಯತ್ನಿಸಿದೆ. ಆದರೆ, ನನ್ನ ಕರೆಯನ್ನು ಕಡಿತಗೊಳಿಸಿದಳು. ಬಳಿಕ ತಾಯಿಗೆ ಕರೆ ಮಾಡಿ ರಾಜಶ್ರೀ ಜೊತೆ ಮಾತನಾಡಲು ಹೇಳಿದೆ. ಆದರೆ, ಆಕೆಯ ಫೋನ್​ ಸ್ವಿಚ್​ ಆಫ್​ ಆಗಿತ್ತು ಎಂದು ಹೇಳಿದ್ದಾರೆ.

    ಇದೀಗ ರಾಜಶ್ರೀ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ರಾಜಶ್ರೀಗೆ ಸಂಬಂಧಿಸಿದ ವಸ್ತುಗಳು ಇನ್ನೂ ಹೋಟೆಲ್​ನಲ್ಲೇ ಇದೆ ಎಂದು ಆಕೆಯ ಪಾಲಕರು ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಮೊದಲ ಬಾರಿ ಬದುಕುಳಿದವಳು 2ನೇ ಬಾರಿ ದುರಂತ ಸಾವು: ಮನಕಲಕುತ್ತೆ ಈಕೆ ಅನುಭವಿಸಿದ ನರಕಯಾತನೆ

    83 ವರ್ಷದ ಅಜ್ಜಿಗೆ ಕೇರಂ ಆಟದಲ್ಲಿ ಚಿನ್ನದ ಮೆಡಲ್​..!

    ತುನಿವು ಸಿನಿಮಾ ಬಿಡುಗಡೆ ಸಂಭ್ರಮ: ಟ್ರಕ್​ನಿಂದ ಕೆಳಗೆ ಬಿದ್ದು ಅಜಿತ್​ ಅಭಿಮಾನಿ ದುರಂತ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts