More

    ಪ್ರತ್ಯೇಕ ರಾಷ್ಟ್ರದ ಕುರಿತು ಹೇಳಿಕೆ; ಸಂಸದ ಡಿ.ಕೆ. ಸುರೇಶ್​ ಈ ದೇಶದಲ್ಲೇ ಇರಲು ನಾಲಾಯಕ್ಕು ಎಂದ ಬಿಜೆಪಿ

    ನವದೆಹಲಿ: 2024-25ನೇ ಸಾಲಿನ ಮಧ್ಯಂತರ ಬಜೆಟ್​​ಅನ್ನು ಟೀಕಿಸುವ ಭರದಲ್ಲಿ ಪ್ರತ್ಯೇಕ ರಾಷ್ಟ್ರದ ಬಗ್ಗೆ ಧ್ವನಿ ಎತ್ತಿ ವಿವಾದದ ಕಿಡಿ ಹೊತ್ತಿಸಿರುವ ಸಂಸದ ಡಿ.ಕೆ. ಸುರೇಶ್​ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪ್ರತ್ಯುತ್ತರವನ್ನು ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಬರೆದುಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಪಕ್ಷವು ಒಡೆದು ಆಳುವ ಇತಿಹಾಸವನ್ನು ಹೊಂದಿದೆ. ಸಂಸದ ಡಿ.ಕೆ.ಸುರೇಶ್ ಈಗ ಮತ್ತೆ ಉತ್ತರ ಮತ್ತು ದಕ್ಷಿಣವನ್ನು ವಿಭಜಿಸುವ ತಂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಒಂದೆಡೆ, ಅವರ ನಾಯಕ ರಾಹುಲ್ ಗಾಂಧಿ ಅವರು ತಮ್ಮ ‘ಜೋಡೋ’ ಯಾತ್ರೆಗಳ ಮೂಲಕ ದೇಶವನ್ನು ‘ಒಗ್ಗೂಡಿಸಲು’ ಪ್ರಯತ್ನಿಸುತ್ತಿದ್ದಾರೆ.

    ಒಂದೆಡೆ ಅವರ ಸಂಸದ ಪ್ರತ್ಯೇಕ ರಾಷ್ಟ್ರದ ಬಗ್ಗೆ ಮಾತನಾಡುವುದನ್ನು ನೋಡಿದರೆ ಒಡೆದು ಆಳುವ ಕಾಂಗ್ರೆಸ್‌ನ ಕಲ್ಪನೆಯು ವಸಾಹತುಶಾಹಿಗಳು ಅನುಸರಿಸಿದ್ದಕ್ಕಿಂತ ಕೆಟ್ಟದಾಗಿದೆ. ಇದಕ್ಕೆ ಕನ್ನಡಿಗರು ಎಂದಿಗೂ ಅವಕಾಶ ನೀಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್​ಗೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಉದ್ಘಾಟನೆಯಾದ 11 ದಿನದಲ್ಲಿ ಬಾಲರಾಮನ ದರ್ಶನ ಪಡೆದ 25 ಲಕ್ಷಕ್ಕೂ ಅಧಿಕ ಭಕ್ತರು; ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?

    ಈ ದೇಶದಲ್ಲೇ ಇರಲು ನಾಲಾಯಕ್ಕು

    ಮಾತೆತ್ತಿದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ನಾವು ಎಂದು ಬೊಗಳೆ ಬಿಡುವ ಕಾಂಗ್ರೆಸ್ ಪಕ್ಷ ಈಗ ದೇಶ ಒಡೆಯುವ ದೇಶದ್ರೋಹದ ಮಾತಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ಸಂಸದ ಡಿ.ಕೆ. ಸುರೇಶ್​ ಹೇಳಿಕೆ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.

    200 ವರ್ಷಗಳ ಕಾಲ ಅದೆಷ್ಟೋ ಹೋರಾಟಗಳು, ಲೆಕ್ಕವಿಲ್ಲದಷ್ಟು ಸ್ವಾತಂತ್ರ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ನಮ್ಮ ದೇಶಕ್ಕೆ ಬಂದ ಸ್ವಾತಂತ್ರ, ಸಾರ್ವಭೌಮತೆ, ಅಖಂಡತೆಯನ್ನು ಛಿದ್ರಮಾಡುವ ಮನಸ್ಥಿತಿ ಇರುವವರು ಕೇವಲ ರಾಜಕಾರಣದಲ್ಲಲ್ಲ ಈ ದೇಶದಲ್ಲೇ ಇರಲು ನಾಲಾಯಕ್ಕು. ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ಈ ದೇಶದ್ರೋಹಿ ಹೇಳಿಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮಾಡಿದ ಅಪಮಾನ. “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎಂದು ನಾಡಗೀತೆಯ ಮೂಲಕ ಕನ್ನಡಾಂಬೆ ಭಾರತಾಂಬೆಯ ನೆಚ್ಚಿನ ಮಗಳು ಎಂದು ಸಾರಿದ ಕುವೆಂಪು ಅವರ ಚಿಂತನೆಗೆ ಮಾಡಿದ ಅವಮಾನ.

    ಈ ನಾಡದ್ರೋಹಿ, ದೇಶದ್ರೋಹಿ ಕಾಂಗ್ರೆಸ್ ಪಕ್ಷವನ್ನ ಈ ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಭಾರತ್ ಜೊಡೋ ಎಂದು ಬಾಯಿ ಮಾತಲ್ಲಿ ಹೇಳುತ್ತಾ ಒಳಗೊಳಗೆ ಭಾರತ್ ತೋಡೋ ಮಾಡುವ ಅಜೆಂಡಾ ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷದ ಹುನ್ನಾರ ಸಫಲವಾಗಲು ಭಾರತೀಯರು ಎಂದಿಗೂ ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts