More

    ‘ನನ್​ ಹತ್ರ ಕೇಳಿ ನನ್ನ ಮೇಲೆ ಎಫ್​ಐಆರ್​ ದಾಖಲಿಸೋದು ಪೊಲೀಸರ ಕರ್ತವ್ಯ’ ಎಂದ ಶಾಸಕಿ!

    ಪಟ್ನಾ: ಈ ಶಾಸಕಿಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದ ಕಾಲೇಜು ಆಡಳಿತ ಮಂಡಳಿ, ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿತ್ತು. ಆದರೆ ಈ ಬಗ್ಗೆ ಶಾಸಕಿಯ ಬಳಿ ಮಾಹಿತಿ ಕೇಳಿದಾಗ ಈ ಬಗ್ಗೆ ನನ್ನಲ್ಲಿ ಅವರು ಕೇಳಿಲ್ಲ. ನನ್ನ ಬಳಿ ಕೇಳಿ ಪೊಲೀಸರು ಎಫ್​ಐಆರ್​ ದಾಖಲಿಸಬೇಕು. ಅದು ಅವರ ಕರ್ತವ್ಯ ಎಂದಿದ್ದಾರೆ!

    ಬಿಜೆಪಿ ಶಾಸಕಿ ರಶ್ಮಿ ವರ್ಮಾ ವಿರುದ್ಧ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಕಳ್ಳತನದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ. ನರ್ಕಟಿಯಾ ಗಂಜ್‌ನ ಶಾಸಕಿ, ತಮ್ಮ ಬೆಂಬಲಿಗರೊಂದಿಗೆ ಕಾಲೇಜು ಆವರಣಕ್ಕೆ ನುಗ್ಗಿ ಪ್ರಮುಖ ದಾಖಲೆಗಳೊಂದಿಗೆ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲೇಜು ಪ್ರಾಂಶುಪಾಲರಾದ ಅಭಯ್ ಕಾಂತ್ ತಿವಾರಿ, ಶಾಸಕಿ ಸೇರಿದಂತೆ 25 ಜನರ ವಿರುದ್ಧ ಶಿಕಾರ್‌ಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಜನವರಿ 17 ರಂದು ಪ್ರಕರಣವೊಂದಕ್ಕಾಗಿ ವಕೀಲರನ್ನು ಭೇಟಿ ಮಾಡಲು ಪಟ್ನಾಗೆ ಹೋಗಿದ್ದೆ. ಈ ಸಂದರ್ಭ ಕಾಲೇಜಿನ ಅಧ್ಯಾಪಕರಾಗಿರುವ ವಿವೇಕ್ ಪಾಠಕ್ ಅವರಿಗೆ ಪ್ರಾಂಶುಪಾಲರ ಜವಾಬ್ದಾರಿಯನ್ನು ನೀಡಲಾಗಿತ್ತು ಎಂದು ದೂರುದಾರ ತಿವಾರಿ ಪೊಲೀಸರಿಗೆ ತಿಳಿಸಿದ್ದಾರೆ.

    ಅಸಲಿಗೆ ಆದದ್ದೇನು?
    “ನರ್ಕಟಿಯಾ ಗಂಜ್ ಶಾಸಕಿ ರಶ್ಮಿ ವರ್ಮಾ ನೇತೃತ್ವದ ಜನರ ಗುಂಪು ಕಾಲೇಜು ಆವರಣಕ್ಕೆ ಪ್ರವೇಶಿಸಿದೆ ಎಂದು ನನಗೆ ಮಾಹಿತಿ ನೀಡಲಾಗಿತ್ತು. ಅವರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ವಿವೇಕ್ ಪಾಠಕ್, ತಮ್ಮ ಜೀವ ಉಳಿಸಿಕೊಳ್ಳಲು ಕಾಲೇಜಿನಿಂದ ತಪ್ಪಿಸಿಕೊಂಡರು. ಶಾಸಕಿಯ ಬೆಂಬಲಿಗರು ಪ್ರತಿ ಕೋಣೆಗೆ ನುಗ್ಗಿ, ಬೀರುಗಳನ್ನು ಒಡೆದು ಮೌಲ್ಯಯುತ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿವಾರಿ ಶಿಕಾರ್‌ಪುರ ಪೊಲೀಸರ ದೂರಿನಲ್ಲಿ ತಿಳಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಶಾಸಕ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    “ನಾವು ದೂರು ಸ್ವೀಕರಿಸಿದ್ದೇವೆ ಮತ್ತು ಶಾಸಕ ಮತ್ತು ಇತರರ ವಿರುದ್ಧ ಎಫ್‌ಐಆರ್ (ಎಫ್‌ಐಆರ್ ಸಂಖ್ಯೆ 53/27) ದಾಖಲಿಸಿದ್ದೇವೆ” ಎಂದು ನರ್ಕಟಿಯಾ ಗಂಜ್ ಶಿಕಾರ್‌ಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಆದರೆ ಶಾಸಕಿ ರಶ್ಮಿ ವರ್ಮಾ ಆರೋಪವನ್ನು ತಳ್ಳಿಹಾಕಿದ್ದು, ತಮ್ಮ ವಿರುದ್ಧ ಯಾವುದೇ ದೂರು ದಾಖಲಾಗಿರುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ”ನನಗೆ ಯಾವುದೇ ಎಫ್‌ಐಆ‌ರ್​ ಪ್ರತಿ ಬಂದಿಲ್ಲ. ನನ್ನ ವಿರುದ್ಧ ಪೊಲೀಸ್ ದೂರು ಏಕೆ ದಾಖಲಾಗಿದೆ ಎಂಬುದೂ ನನಗೆ ತಿಳಿದಿಲ್ಲ. ಯಾರಾದರೂ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಮೊದಲು ನನ್ನನ್ನು ಕೇಳಿ ನಂತರ ಎಫ್‌ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ” ಎಂದು ರಶ್ಮಿ ವರ್ಮಾ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts