More

    ನೇಪಾಳದಲ್ಲಿ ಭೂಕಂಪ; ದೆಹಲಿಯಲ್ಲೂ ಕಂಡುಬಂದ ಪರಿಣಾಮ

    ನವದೆಹಲಿ: ಇಂದು ಮಧ್ಯಾಹ್ನ ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ಉತ್ತರ ಭಾರತದಾದ್ಯಂತ ಇದರ ಪರಿಣಾಮವಾಗಿ ಕಂಪನಗಳು ಸಂಭವಿಸಿವೆ.

    ಭೂಕಂಪವು 10 ಕಿಮೀ ಆಳದಲ್ಲಿ ಆಗಿದ್ದು ನೇಪಾಳದ ಜುಮ್ಲಾ ಜಿಲ್ಲೆಯ ವಾಯುವ್ಯಕ್ಕೆ ಸುಮಾರು 63 ಕಿಮೀ ದೂರದಲ್ಲಿ ಇದರ ಕೇಂದ್ರ ಬಿಂದು ಇದೆ. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಈ ಕೇಂದ್ರ 300 ಕಿಮೀ ದೂರದಲ್ಲಿದೆ.

    ಭೂಕಂಪನ ಆಗಿದ್ದರೂ ಸಾವು ನೋವು ಅಥವಾ ಆಸ್ತಿಪಾಸ್ತಿಗಳಿಗೆ ಹೆಚ್ಚಿನ ಹಾನಿಯಾದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಮಾಹಿತಿಯ ಪ್ರಕಾರ, ಕಳೆದ ಒಂದೇ ವರ್ಷದಲ್ಲಿ ಈ ಪ್ರದೇಶದಲ್ಲಿ 4.5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಹತ್ತು ಭೂಕಂಪಗಳು ನಡೆದಿವೆ.

    ನೇಪಾಳ ಮತ್ತು ಹಿಮಾಲಯದ ಉಳಿದ ಪ್ರದೇಶಗಳು, ಪಶ್ಚಿಮದಲ್ಲಿ ಹಿಂದೂಕುಶ್ ಪರ್ವತ ಶ್ರೇಣಿಗಳಿಂದ ಪೂರ್ವಕ್ಕೆ ಅರುಣಾಚಲಪ್ರದೇಶದ ತನಕ ಇರುವ ಪ್ರದೇಶ ವಿಶ್ವದ ಅತ್ಯಂತ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. ಭಾರತೀಯ ಭೂಖಂಡದ ಪ್ಲೇಟ್​ನ ಉತ್ತರಾಭಿಮುಖ ಚಲನೆ ಮತ್ತು ಯುರೇಷಿಯನ್ ಪ್ಲೇಟ್‌ನೊಂದಿಗಿನ ಅದರ ಘರ್ಷಣೆಯು ಈ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪವನ್ನು ಉಂಟುಮಾಡುತ್ತದೆ.

    ಕಳೆದ ಏಳು ವರ್ಷಗಳಲ್ಲಿ ಹಿಮಾಲಯದಲ್ಲಿ 4.5 ಕ್ಕಿಂತ ಹೆಚ್ಚಿನ ಪ್ರಮಾಣದ 600 ಕ್ಕೂ ಹೆಚ್ಚು ಭೂಕಂಪಗಳು ದಾಖಲಾಗಿವೆ. ಈ ಪ್ರದೇಶ ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಬಲ ಭೂಕಂಪಗಳನ್ನು ಸಹ ಕಂಡಿದೆ. ವಿಜ್ಞಾನಿಗಳ ಪ್ರಕಾರ ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಒತ್ತಡದ ಶಕ್ತಿ ಹಿಮಾಲಯದ ಕೆಳಗೆ ಸಂಗ್ರಹವಾಗಿದೆ. ಇದು ಯಾವುದೇ ಸಮಯದಲ್ಲಿ ಭಾರೀ ಭೂಕಂಪಕ್ಕೆ ಕಾರಣವಾಗಬಹುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts