More

    ಮತದಾರರ ಮಾಹಿತಿ ಕಳವು: ಕಾಂಗ್ರೆಸ್​ ಆರೋಪಕ್ಕೆ ಸಿಎಂ ಬೊಮ್ಮಾಯಿ, ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟನೆ ಹೀಗಿದೆ…

    ಬೆಂಗಳೂರು: ಸದ್ಯ ರಾಜ್ಯದಲ್ಲಿ ಚುನಾವಣಾ ಪರ್ವ ಆರಂಭವಾದಂತಿದೆ. ಇನ್ನು ಐದಾರು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣಾ ಬರಲಿದೆ. ಅದಕ್ಕೂ ಮುನ್ನವೇ ರಾಜ್ಯ ರಾಜಧಾನಿ ಬೆಂಗಳೂರಿನ ಆಡಳಿತ ವ್ಯವಸ್ಥೆಯಾಗಿರುವ ಬಿಬಿಎಂಪಿಯ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಮೂರು ಪಕ್ಷಗಳು ಜಿದ್ದಿಗೆ ಬಿದ್ದಿವೆ. ಇದರ ನಡುವೆಯೇ ಕಾಂಗ್ರೆಸ್​ ಪಕ್ಷ ಆಡಳಿತರೂಢ ಬಿಜೆಪಿ ವಿರುದ್ಧ ಮತದಾರರ ಮಾಹಿತಿ ಕಳವು ಆರೋಪ ಮಾಡಿದ್ದು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದೇ ವಿಚಾರವಾಗಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಮಾತಿನ ಸಮರ ಏರ್ಪಟ್ಟಿದೆ.

    ಇಂದು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್​, ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈಯಿತು. ಬಿಬಿಎಂಪಿ ಚುನಾವಣೆ ಗೆಲ್ಲಲು ಸಿಎಂ ಬೊಮ್ಮಾಯಿ ಅವರು ಹೊಸ ಆಟವನ್ನೇ ಶುರು ಮಾಡಿದ್ದಾರೆ. ಖಾಸಗಿ ಸಂಸ್ಥೆ ಒಂದರ ಮೂಲಕ ಮತದಾರರ ಮಾಹಿತಿಯನ್ನು ಆಕ್ರಮವಾಗಿ ಸಂಗ್ರಹ ಮಾಡಲಾಗುತ್ತಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದರು.

    ಚಿಲುಮೆ ಎಂಬ ಖಾಸಗಿ ಸಂಸ್ಥೆ ವಿರುದ್ಧ ನೇರ ಆರೋಪ ಮಾಡಿದ ಡಿಕೆಶಿ, ಮತದಾರರ ಮಾಹಿತಿ ಸಂಗ್ರಹಿಸಲು ಈ ಸಂಸ್ಥೆಗೆ ಸರ್ಕಾರಕ ಅನುಮತಿ ನೀಡಿದೆ. ಇದು ಕಾನೂನು ಬಾಹಿರ ಎಂದು ಆರೋಪ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಮಾತ್ರ ಮತದಾರರ ಮಾಹಿತಿ ಸಂಗ್ರಹ ಮಾಡಲು ಅವಕಾಶ ಇದೆ. ಆದರೆ ಕಾನೂನನ್ನು ಗಾಳಿಗೆ ತೂರಿ ಆ. 20 ರಂದು ಯಾವುದೇ ನೋಟಿಫಿಕೇಷನ್‌ ಇಲ್ಲದೆ ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಮತದಾರರ ಮಾಹಿತಿ ಸಂಗ್ರಹಕ್ಕೆ ಅನುಮತಿ ನೀಡಿದೆ. ಇದನ್ನು ದುರುಪಯೋಗ ಮಾಡಿಕೊಳ್ಳುವ ಹುನ್ನಾರದಿಂದಲೇ ಹೀಗೆ ಮಾಡಿದ್ದಾರೆ. ಇದು ಸಿಎಂ ಬೊಮ್ಮಾಯಿಯವರ ಕುತಂತ್ರ. ಬಿಬಿಎಂಪಿ ಅಧಿಕಾರಿಗಳು ಹಾಗೂ ಸರ್ಕಾರ ಎಲ್ಲರೂ ಸೇರಿ ಮಾಡಿರುವ ಸಂಚಿದು. ಬಿಬಿಎಂಪಿ ಚುನಾವಣೆಗೆ ಗೆಲ್ಲೋದಕ್ಕೆ ಬೊಮ್ಮಾಯಿಯವರು ಮಾಡಿರುವ ಹೊಸ ಆಟ ಇದು. ಇದು ಭಾರತೀಯ ದಂಡ ಸಂಹಿತೆ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಡಿ.ಕೆ.ಶಿವಕುಮಾರ್‌ ಆಗ್ರಹಿಸಿದ್ದಾರೆ.

    ಸಿಎಂ ಬೊಮ್ಮಾಯಿ ತಿರುಗೇಟು
    ಕಾಂಗ್ರೆಸ್​ ಮಾಡಿರುವ ಮತದಾರರ ಮಾಹಿತಿ ಕಳವು ಆರೋಪಕ್ಕೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಕಾಂಗ್ರೆಸ್​ನವರು ನನ್ನನ್ನು ರಾಜೀನಾಮೆ ಕೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್​ನವರು ವಿಚಾರದಲ್ಲಿ ದಿವಾಳಿಯಾಗಿದ್ದಾರೆ. ಸಾಮಾನ್ಯವಾಗಿ ಮತದಾರರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಎನ್​ಜಿಒಗಳಿಗೆ ಅನುಮತಿಯನ್ನು ನೀಡಲಾಗುತ್ತದೆ. ಈ ಪದ್ಧತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಾಂಗ್ರೆಸ್​ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ, ಈಗ ದುರುಪಯೋಗ ಎಂದು ಕಾಂಗ್ರೆಸ್​ನವರು ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ನಾವು ಅನುಮತಿ ನೀಡಿದ ಎನ್​ಜಿಒ ಕಾನೂನು ಮೀರಿ ನಡೆದುಕೊಂಡಿದ್ದರೆ, ತನಿಖೆ ನಡೆಸಿ ಸೂಕ್ರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕಾಂಗ್ರೆಸ್​ನವರಿಗೆ ನಮ್ಮ ಮೇಲೆ ಆರೋಪ ಮಾಡುವುದನ್ನು ಬಿಟ್ಟರೆ ಬೇರೆ ಕೆಲಸ ಇಲ್ಲ. ಇಂತಹ ಸಣ್ಣ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ. ಅವರು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

    ಆರೋಪ ಸುಳ್ಳು
    ಕಾಂಗ್ರೆಸ್​ ಮಾಡಿರುವ ಮತದಾರರ ಮಾಹಿತಿ ಕಳುವು ಆರೋಪ ಸುಳ್ಳು ಎಂದು ಸಚಿವ ಅಶ್ವಥ್​ ನಾರಾಯಣ್​ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಸುದ್ಧಿಗೋಷ್ಠಿ ನಡೆಸಿದ ಸಚಿವರು, ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ. ಈ ಸಂಸ್ಥೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಕೈ ನಾಯಕರು ಏನೋ ಹೇಳಿಕೆ ಕೊಡಬೇಕಿತ್ತು ಕೊಟ್ಟಿದ್ದಾರೆ. ಯಾರು? ಏನು? ತಪ್ಪು ಮಾಡಿದ್ದಾರೋ ಗೊತ್ತಿಲ್ಲ. ಯಾರೇ ತಪ್ಪು ಮಾಡಿದ್ದರೇ, ತಪ್ಪು ತಪ್ಪೇ. ಈ ರೀತಿಯ ಮತದಾರರ ಮಾಹಿತಿ ಸಂಗ್ರಹವು ಚುನಾವಣಾ ಆಯೋಗದ ಅಡಿಯಲ್ಲಿ ನಡೆಯುತ್ತದೆ. ವೋಟರ್ ಐಡಿ ಪರಿಷ್ಕರಣೆ ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ. ರವಿಕುಮಾರ್ ಅನ್ನೋರು ನನಗೆ ಗೊತ್ತು. ರವಿ ಕುಮಾರ್ ನಮ್ಮ ಕ್ಷೇತ್ರದವರು. ಚಿಲುಮೆ ಸಂಸ್ಥೆಯವರು ಏನು ಅಕ್ರಮ ಮಾಡಿದ್ದಾರೋ ಗೊತ್ತಿಲ್ಲ. ಚಿಲುಮೆ ಸಂಸ್ಥೆಗೆ ಅವಕಾಶ ಕೊಟ್ಟಿದ್ದು ಚುನಾವಣಾ ಆಯೋಗ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.

    ದೂರು ದಾಖಲು
    ಮತದಾರ ಮಾಹಿತಿ ಸಂಗ್ರಹಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದ್ದು, ಇದನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದರ ಬೆನ್ನಲ್ಲೇ ಬಿಬಿಎಂಪಿ, ಚಿಲುಮೆ ಸಂಸ್ಥೆಯ ಸಿಬ್ಬಂದಿ ವಿರುದ್ಧ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಚಿಲುಮೆ ಸಂಸ್ಥೆ ವಿರುದ್ಧ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇವೆ. ಡೇಟಾ ಸಂಗ್ರಹಿಸಿ ಎಂದು ಹೇಳಿರಲಿಲ್ಲ. ಅವರು ಮಾಹಿತಿ ಸಂಗ್ರಹಿಸುತ್ತಿದ್ದರ ಬಗ್ಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ನಾವು ಅವರಿಗೆ ನೀಡಿದ್ದ ಅನುಮತಿಯನನ್ನು ರದ್ದು ಮಾಡಿದ್ದೇವೆ ಎಂದು ರಂಗಪ್ಪ ಹೇಳಿದ್ದಾರೆ.

    ಜಾಮೀನಿನ ಮೇಲೆ ಹೊರಬಂದು ಮತ್ತೆ ಜೈಲು ಪಾಲಾದ ದಂಪತಿ! ಹೆಸರಿಗೆ ಟ್ಯಾಟೂ ಕಲಾವಿದರು, ಮಾಡುತ್ತಿದ್ದದ್ದು ನೀಚ ಕೃತ್ಯ

    ದೇವಸ್ಥಾನ ಆಕೃತಿಯ ಕೇಕ್​ ಕಟ್ ಮಾಡಿದ ಕಾಂಗ್ರೆಸ್ ಶಾಸಕ; ಕಮಲ ನಾಥ್ ವಿರುದ್ಧ ಬಿಜೆಪಿ ಕಿಡಿ

    ಅಶ್ಲೀಲ ಮೆಸೇಜ್​ ಆರೋಪ; ರಾಣಿ ವಿರುದ್ದ ಕೇಸ್​ ಹಾಕಲು ಡಿಂಗ್ರಿ ನಾಗರಾಜ್​ ತೀರ್ಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts