More

    ಸರ್ಕಾರದ ವಿರುದ್ಧ ಕಾರ್ಮಿಕರ ಆಕ್ರೋಶ

    ಬಾಗಲಕೋಟೆ: ಕೇಂದ್ರ, ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಮುಷ್ಕರಕ್ಕೆ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಉತ್ತಮ ಬೆಂಬಲ ದೊರೆಯಿತು. ಬಾಗಲಕೋಟೆ ನಗರ ಸೇರಿ ನಾನಾ ತಾಲೂಕುಗಳಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಸರ್ಕಾರಗಳು ಕಾರ್ಮಿಕ ಹಿತ ಕಾಯುವಲ್ಲಿ ವಿಫಲವಾಗಿವೆ. ಕಾರ್ಪೋರೇಟ್ ನೀತಿ ಅನುಸರಿಸಿ ಕಾರ್ಮಿಕರ ಬದುಕಿಗೆ ಕೊಳ್ಳೆ ಇಡುತ್ತಿವೆ. ಕಾನೂನುಗಳನ್ನು ತಿದ್ದುಪಡಿಸಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ನಿರೋದ್ಯೋಗ ಸೃಷ್ಟಿಸುವ ಮೂಲಕ ಕಾರ್ಮಿಕರನ್ನು ಬಲಿಪಶು ಮಾಡುತ್ತಿವೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
    ಬ್ಯಾಂಕ್, ಅಂಚೆ ಇಲಾಖೆ, ಕೆಎಸ್‌ಆರ್‌ಟಿಸಿ, ಅಂಗನವಾಡಿ, ಆಶಾ, ಅಕ್ಷರ ದಾಸೋಹ ನೌಕಕರರು, ಔಷಧ ಮಾರಾಟ ಪ್ರತಿನಿಧಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಸಾರ್ವಜನಿಕರು ಪರದಾಡಿದರು.

    ಜಂಟಿ ಹೋರಾಟ
    ನವನಗರದ ಜಿಲ್ಲಾಡಳಿತ ಭವನ ಎದುರು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆ, ಔಷಧ ಮಾರಾಟ ಪ್ರತಿನಿಧಿಗಳ ಸಂಘ, ಬಾಗಲಕೋಟೆ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕ ಜಂಟಿಯಾಗಿ ಪ್ರತಿಭಟನೆ ನಡೆಸಿದವು.

    ನೂತನ ಶಿಕ್ಷಣ ನೀತಿ ಜಾರಿ ಮಾಡುವಾಗ ಬಿಸಿಯೂಟ ಯೋಜನೆ ಬಲ ಪಡಿಸಿ, ಆ ನೌಕರರಿಗೆ ಕೆಲಸದ ಭದ್ರತೆ ನೀಡಬೇಕು, ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು, ಶಿಕ್ಷಣ ಇಲಾಖೆಯಡಿ ಮೇಲ್ವಿಚಾರಣೆ ನಡೆಸಬೇಕು, ನಿವೃತ್ತಿ ವೇತನ ಮತ್ತು ಆರೋಗ್ಯ ಸೌಲಭ್ಯ ಒದಗಿಸಬೇಕು, ಆದಾಯ ತೆರೆಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ 7500 ನಗದು ನೀಡಬೇಕು, ರೈತ, ಕಾರ್ಮಿಕ ವಿರೋಧಿ ಕಾನೂನು ರದ್ದುಗೊಳಿಸಬೇಕು, ಖಾಸಗೀಕರಣ ನಿಲ್ಲಿಸಬೇಕು, ಎನ್‌ಪಿಎಸ್ ಯೋಜನೆ ರದ್ದು ಪಡಿಸಬೇಕು ಎಂದು ಅಕ್ಷರ ದಾಸೋಹ ನೌಕರರು ಒತ್ತಾಯಿಸಿದರು. ಶೈಲಜಾ ಮಿಸ್ಕಿನ್, ಶಾಂತಾ ಮೂಲಿಮನಿ, ಗೀತಾ ವಸ್ತ್ರದ, ಭಾರತಿ ಸೊಗೆ ಪ್ರತಿಭಟನೆ ನೇತೃತ್ವ ವಹಿಸಿದ್ದರು.

    ಬಾಕಿ ವೇತನ ಬಿಡುಗಡೆ ಮಾಡಿ
    ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎ.ಎಂ.ಯಡಹಳ್ಳಿ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರು ತೀವ್ರ ಸಂಕಷ್ಟದ ಸಂದರ್ಭ ಎದುರಿಸುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆ ಆಲಿಸುತ್ತಿಲ್ಲ. 2018 ರಿಂದ ಪ್ರತಿ ವರ್ಷ ನಾಲ್ಕ ತಿಂಗಳ ವೇತನ ನೀಡಿಲ್ಲ. ಕೂಡಲೇ ಕಳೆದ ಮೂರು ವರ್ಷದ 382 ಕೋಟಿ ರೂ. ಬಾಕಿ ವೇತನ ಬಿಡುಗಡೆಗೊಳಿಸಬೇಕು. ಡಿಇಒ ಗಳಿಗೆ ಬಡ್ತಿ ನೀಡುವುದು, ಪಂಪ್ ಆಪರೇಟರ್ ಕೆಲಸದ ಪುನರ್ ವಿಮರ್ಶೆ ವರದಿ ರದ್ದುಗೊಳಿಸುವುದು, ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸುವುದು, ಗ್ರಾಮ ಪಂಚಾಯಿತಿ ನೌಕರರಿಗೆ ಪಿಂಚಣಿ, 21000 ಕನಿಷ್ಠ ವೇತನ ನಿಗದಿ ಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

    ಸಂಘದ ಮುಖಂಡರಾದ ಅನೀಲ ಚವ್ಹಾಣ್, ನಾಗೇಶ ಬಿ., ಸಾಬಣ್ಣ ಮಾದರ, ಸೈಫು ಕಲಾದಗಿ, ಔಷಧ ಮಾರಾಟ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ವಿನಾಯಕ ದೇಸಾಯಿ, ಮುಖಂಡರಾದ ರಾಘವೇಂದ್ರ ಗುಮಾಸ್ತೆ, ಪ್ರಶಾಂತ ಅಬ್ದುಲಪುರ, ಆರೀಫ್ ಮುಲ್ಲಾ ಇದ್ದರು.

    ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿ ತಲ್ಲಣ ಸೃಷ್ಟಿಸಿದ್ದರಿಂದ ಕಾರ್ಮಿಕರ ಬದುಕು ಅತಂತ್ರಗೊಂಡಿದೆ. ಔಷಧ ಮಾರಾಟ ಪ್ರತಿನಿಧಿಗಳ ವೃತ್ತಿ ಶಾಶ್ವತವಾಗಿ ದುರ್ಬಲಗೊಳಿಸಲಾಗುತ್ತಿದೆ. ಇದೇ ರೀತಿ ಎಲ್ಲ ವಲಯದ ಕಾರ್ಮಿಕರಿಗೆ ಅಭದ್ರತೆ ಸೃಷ್ಟಿಸಲಾಗಿದೆ.
    ವಿನಾಯಕ ದೇಸಾಯಿ, ಔಷಧ ಮಾರಾಟ ಪ್ರತಿನಿಧಿಗಳ ಸಂಘದ ರಾಜ್ಯ ಕಾರ್ಯದರ್ಶಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts