

ನವದೆಹಲಿ: ಪ್ರಸಕ್ತ ವಿಶ್ವಕಪ್ ಟೂರ್ನಿಯ ಫೈನಲ್ ಹಣಾಹಣಿಗೆ ಇನ್ನೂ ಎರಡು ದಿನ ಮಾತ್ರ ಬಾಕಿ ಇದೆ. ಸಮಿಫೈನಲ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮಣಿಸಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಸೋಲಿಸಿ ಆಸ್ಟ್ರೇಲಿಯಾ ಫೈನಲ್ ಸುತ್ತಿಗೇರಿವೆ. ನ.19ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ. ಇದರ ನಡುವೆ 2011ರ ವಿಶ್ವಕಪ್ ಫೈನಲ್ ಬಗ್ಗೆ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಅನಿರುದ್ಧ್ ಕುಮಾರ್ ಮಿಶ್ರಾ ಅವರು ಪ್ರಸಕ್ತ ವಿಶ್ವಕಪ್ ಕುರಿತು ನುಡಿದಿರುವ ಭವಿಷ್ಯ ಹೆಚ್ಚು ಗಮನ ಸೆಳೆಯುತ್ತಿದೆ.
ನಿಜವಾಗಿತ್ತು 2011ರ ಭವಿಷ್ಯ!
ಭಾರತ ವಿಶ್ವಕಪ್ ಟ್ರೋಫಿಯನ್ನು ಗೆಲ್ಲುತ್ತೆ ಅಂತಾ 2011ರಲ್ಲಿ ಅನಿರುದ್ಧ್ ಕುಮಾರ್ ಮಿಶ್ರಾ ಅವರು ಭವಿಷ್ಯ ನುಡಿದಿದ್ದರು. ಫೈನಲ್ ಪಂದ್ಯಕ್ಕೂ 1.5 ತಿಂಗಳು ಮುಂಚಿತವಾಗಿಯೇ ಮಿಶ್ರಾ ಅವರು ಭವಿಷ್ಯ ನುಡಿದಿದ್ದರು. ಅದರಂತೆ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ 2011ರಲ್ಲಿ ಟೀಮ್ ಇಂಡಿಯಾ ತವರು ನೆಲದಲ್ಲಿ ಟ್ರೋಫಿಯನ್ನು ಜಯಿಸಿ, ಇತಿಹಾಸವನ್ನು ಬರೆಯಿತು. ಇದು ಭಾರತದ ಎರಡನೇ ವಿಶ್ವಕಪ್ ಟ್ರೋಫಿಯಾಗಿದೆ.
ಈ ಬಾರಿಯೂ ಭಾರತವೇ ವಿಜಯಶಾಲಿ ಪ್ರಸ್ತುತ ವಿಶ್ವಕಪ್ ಆರಂಭಕ್ಕೂ ಮುನ್ನವೇ ಅನಿರುದ್ಧ್ ಕುಮಾರ್ ಮಿಶ್ರಾ ಅವರು ಜನರ ಒತ್ತಾಯದ ಮೇರೆಗೆ ಯಾರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಈ ಬಗ್ಗೆ ಎಕ್ಸ್ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದ ಮಿಶ್ರಾ, ಈ ವಿಶ್ವಕಪ್ಗೆ ನಾನು ಯಾವುದೇ ಭವಿಷ್ಯವನ್ನು ನುಡಿಯಬಾರದು ಅಂದುಕೊಂಡಿದ್ದೆ. ಆದರೆ, ಜನರಿಂದ ತುಂಬಾ ಒತ್ತಾಯಗಳು ಕೇಳಿಬಂದಿದ್ದರಿಂದ ನಾನು ವಿಶ್ವಕಪ್ ವಿಜೇತರನ್ನು ಊಹಿಸಲು ನಿರ್ಧರಿಸಿದೆ. ನನ್ನ ಲೆಕ್ಕಾಚಾರಗಳ ಪ್ರಕಾರ ಭಾರತ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಲಿದೆ ಎಂದು ಮಿಶ್ರಾ ಭವಿಷ್ಯ ನುಡಿದಿದ್ದಾರೆ.
ನ.19ಕ್ಕೆ ಫೈನಲ್
ಫೈನಲ್ಗೆ ಲಗ್ಗೆ ಇಟ್ಟಿರುವ ಭಾರತ ಮತ್ತು ಆಸ್ಟ್ರೇಲಿಯಾ ನ. 19ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ. ಗೆಲ್ಲುವ ತಂಡ ವಿಶ್ವಕಪ್ ಟ್ರೋಫಿಯ ಜತೆಗೆ 4 ಮಿಲಿಯನ್ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್ ಅಪ್ ತಂಡಗಳು 2 ಮಿಲಿಯನ್ ಡಾಲರ್ ಬಹುಮಾನ ಮೊತ್ತ ಹಾಗೂ ಲೀಗ್ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್)